‘ಕನ್ನೇರಿ ಸ್ವಾಮಿ ಪ್ರವೇಶ ನಿಷೇಧಿಸದಿದ್ದರೆ ಬಸವಕಲ್ಯಾಣ ಬಂದ್’

ಹಿಂದೂ ಸಮಾವೇಶಕ್ಕೆ ಬಸವಾದಿ ಶರಣರ ಹೆಸರು ಬೇಡ: ಚನ್ನಬಸವಾನಂದ ಶ್ರೀಗಳು

ಬಸವಕಲ್ಯಾಣ

ಜೂನ್ ೨೮ ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಕನ್ನೇರಿ ಸ್ವಾಮಿಯ ಕಲ್ಯಾಣ ಪ್ರವೇಶ ನಿಷೇಧಿಸಕೆಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಇಂದು ನಡೆದ ಸಭೆಯಲ್ಲಿ ತಿಳಿಸಿದರು.

ಬಸವಕಲ್ಯಾಣ ಪಟ್ಟಣದ ಬಿಕೆಡಿಬಿ ಸಭಾಂಗಣದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಆಯೋಜಿಸಿದ ಮಹತ್ವದ ಸಭೆಯಲ್ಲಿ ತಿಳಿಸಿದರು.

ಕನ್ನೇರಿ ಸ್ವಾಮಿ ಕೆಲವು ದಿನಗಳಿಂದ ಕರ್ನಾಟಕದ ವಿವಿಧ ಕಡೆಗಳಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತ ವಿಶ್ವಗುರು ಬಸವಣ್ಣನವರು ಮತ್ತು ಶರಣರ ಕುರಿತು ತಪ್ಪುತಪ್ಪಾಗಿ ಅರ್ಥೈಸುತ್ತ ಎಲ್ಲೆಡೆ ಅಶಾಂತಿ ಹರಡಿಸುತ್ತಿದ್ದಾರೆ. ಕರ್ನಾಟಕದ ಉಚ್ಛ ನ್ಯಾಯಾಲಯ ಹಾಗೂ ಭಾರತದ ಸರ್ವೋಚ್ಛ ನ್ಯಾಯಾಲಯವು ಕೂಡ ಈ ಸ್ವಾಮಿಗಳಿಗೆ ಛೀಮಾರಿ ಹಾಕಿವೆ ಎಂದರು.

ಇವರು ಮಾತನಾಡುವಾಗ ಬಸವ ತತ್ವದ ಪ್ರಚಾರ ಮಾಡುವ ಲಿಂಗಾಯತ ಮಠಾಧೀಶರನ್ನು ಬಸವ ತಾಲಿಬಾನಿಗಳು ಎಂದು ತೀವ್ರವಾಗಿ ಟೀಕಿಸುತ್ತ ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದ್ದಾರೆ. ಎಲ್ಲೆಡೆಯೂ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ. ಆದ ಕಾರಣ ಬೀದರ ಜಿಲ್ಲೆಗೆ ಬರದಂತೆ ಕನ್ನೇರಿ ಸ್ವಾಮಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿದ್ದೇವೆ.

ಅವರು ಕೇವಲ ಹಿಂದೂ ಸಮಾವೇಶ ಮಾಡಿಕೊಳ್ಳಲಿ ಅಥವಾ ಕೇವಲ ಬಸವಾದಿ ಶರಣರ ಸಮಾವೇಶ ಮಾಡಲಿ ನಮಗೆ ಯಾವುದೇ ತಕರಾರಿಲ್ಲ. ಆದರೆ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಖಂಡನೀಯ ಎಂದು ಪೂಜ್ಯ ಸ್ವಾಮೀಜಿ ಪ್ರತಿಪಾದಿಸಿದರು.

ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷರಾದ ಬಸವರಾಜ ಪಾಟೀಲ ಶಿವಪುರ ಮಾತನಾಡಿ, ಸಮಾವೇಶದ ಹೆಸರು ಬದಲಾವಣೆ ಮಾಡಬೇಕು. ಕೇವಲ ಹಿಂದೂ ಸಮಾವೇಶ ನಡೆಸಬೇಕು. ಅದನ್ನು ಬದಲಾಯಿಸದೆ ಬಸವಾದಿ ಶರಣರನ್ನು ಚಾತುರ್ವರ್ಣ ಪದ್ಧತಿಯ ಹಿಂದೂ ಧರ್ಮಕ್ಕೆ ತಳಕುಹಾಕಿ ಸಮಾವೇಶ ನಡೆಸಿದರೆ, ಲಿಂಗಾಯತ ಮಠಾಧೀಶರಿಗೆ ಹಾಗೂ ಬಸವ ತತ್ವದ ಕುರಿತು ಅವಹೇಳನಕಾರಿ ಮಾತನಾಡುವ ಕನ್ನೇರಿ ಸ್ವಾಮಿ ಕಲ್ಯಾಣ ಪ್ರವೇಶ ನಿಷೇಧಿಸದಿದ್ದರೆ ಬಸವಕಲ್ಯಾಣ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಲಿಂಗಾಯತ ಧರ್ಮ ಮಹಾಸಭಾದ ವತಿಯಿಂದ ತಹಶೀಲ್ದಾರರ ಮುಖಾಂತರ ಗೃಹಸಚಿವರಿಗೆ ಹಾಗೂ ಜಿಲ್ಲೆಯವರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಈಶ್ವರ ಖಂಡ್ರೆಯವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಪೂಜ್ಯ ಮಾತೆ ಸತ್ಯಾದೇವಿ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವರಾಜ ಪಾಟೀಲ ಅತಿವಾಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ರಾಜ್ಯಾಧ್ಯಕ್ಷೆ ಜಗದೇವಿ ಚಟ್ಟಿ, ಕಲಬುರಗಿ ಮಾತನಾಡುತ್ತ, ಒಂದು ವಾರದಲ್ಲಿ ಕಾರ್ಯಕ್ರಮವನ್ನು ನಿಷೇಧ ಮಾಡಲಾಗಿದೆ ಎಂದು ಆದೇಶ ಬರದಿದ್ದರೆ, ಬಸವಕಲ್ಯಾಣ ಬಂದ್ ಮಾಡಿ ತಹಶೀಲ್ದಾರರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಾವು ಹಿಂದೂ ಅಥವಾ ಹಿಂದೂ ಸಮಾವೇಶದ ವಿರೋಧಿಗಳಲ್ಲ. ಆದರೆ ಬಸವಾದಿ ಶರಣರ ಹೆಸರನ್ನು ದುರುಪಯೋಗ ಮಾಡಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ. ದಯವಿಟ್ಟು ಕೋಮು ಗಲಭೆ, ದಂಗೆ ಆಗದಂತೆ ತಾವು ನೋಡಿಕೊಳ್ಳಬೇಕು. ಕನ್ನೇರಿ ಸ್ವಾಮಿ ನಡೆಸುತ್ತಿರುವ ಈ ಹಿಂದೂ ಸಮಾವೇಶವನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಸಭೆಯಲ್ಲಿ ಪ್ರಮುಖರಾದ ಜಗದೀಶ್ವರ ಬಿರಾದಾರ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮನ್ಮಥಯ್ಯ ಸ್ವಾಮಿ, ವಿಶ್ವನಾಥ ಪಾಟೀಲ, ಗುರುನಾಥ ನಿಡಗುಂದಿ, ಗಣಪತಿ ದೇಶಮುಖ, ಮಲ್ಲಿಕಾರ್ಜುನ ಬುಕ್ಕಾ, ಬಸವಶ್ರೀ ಕಟಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ