ಈಡಿಗ ಬಂದುಗಳ ಜೊತೆ ಹೆಂಡದ ಮಾರಯ್ಯ, ಈಡಿಗರ ಅಕ್ಕಮ್ಮ ಜಯಂತಿ ಆಚರಣೆ
ನಂಜನಗೂಡು :
ವಿ.ಜಿ.ಬಿ. ಎಂಟರಪ್ರೈಸಸ್ ಆವರಣದಲ್ಲಿ ಈಚೆಗೆ ಬಸವಾದಿ ಶರಣ ಹೆಂಡದ ಮಾರಯ್ಯ ಮತ್ತು ಶರಣೆ ಈಡಿಗರ ಅಕ್ಕಮ್ಮ ಅವರ ಜಯಂತಿಯನ್ನು ಪ್ರಥಮ ಬಾರಿಗೆ ಆಚರಿಸಲಾಯಿತು.
ಜಯಂತಿಯನ್ನು ಬಸವಣ್ಣನವರ ಅರವಿನಮನೆಯ ಬಸವಯೋಗೇಶ ಗುರುಗಳು ಆಯೋಜನೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ಈಡಿಗರ ಸಮುದಾಯದ ಮುಖ್ಯಸ್ಥರು ಹಾಗು ಶರಣರ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ನಂಜನಗೂಡಿನ ಉದ್ಯಮಿ, ಈಡಿಗ ಸಮುದಾಯದ ಅಧ್ಯಕ್ಷರಾದ ಮಂಜಣ್ಣ ಅವರು ಮಾತನಾಡಿ, ನಮ್ಮ ಸಮುದಾಯವೂ ಇಲ್ಲಿಯ ತನಕ ನಾರಾಯಣಗುರುಗಳ ಜಯಂತಿಯನ್ನು ಮಾಡುತ್ತಿದ್ದೆವು. ಆದರೆ 12ನೇ ಶತಮಾನದಲ್ಲಿ ಬಸವಣ್ಣನವರಿಂದ ಪ್ರೇರಣೆಗೊಂಡು ಶರಣ ಪದವಿಯನ್ನು ಪಡೆದಿದ್ದ ಶರಣ ಹೆಂಡದ ಮಾರಯ್ಯ ಅವರು ಹಾಗು ಶರಣೆ ಈಡಿಗರ ಅಕ್ಕಮ್ಮ ಬಗ್ಗೆ ನಮಗೆ ತಿಳಿದಿರಲಿಲ್ಲ, ಆದರೆ ಬಸವಯೋಗೇಶ ಗುರುಗಳು ಈ ವಿಚಾರವನ್ನು ನಮ್ಮಲ್ಲಿ ಚರ್ಚೆ ಮಾಡಿ ಆಚರಿಸಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದು ಮಾತನಾಡಿದರು.
ನಂತರ ಮಾತನಾಡಿದ ಶ್ರೀನಿವಾಸ ಅವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಹೆಂಡದ ಮಾರಯ್ಯನವರು, ಅಕ್ಕಮ್ಮನವರು ಶರಣ ತತ್ವ ಪಡೆದು, ಶರಣರಾಗಿರಲು ಅವಕಾಶ ಮಾಡಿಕೊಟ್ಟಂತಹ ಬಸವಣ್ಣನವರ ಕಾರ್ಯವನ್ನು ಜಗತ್ತು ಮೆಚ್ಚುವಂತಾಗಿದೆ ಎಂದರು.
ಕಾಯಕ ಯಾವುದಾದರೂ ಏನು ಅದನ್ನು ಶ್ರದ್ಧೆಯಿಂದ ಮಾಡಬೇಕೆಂದು ಬಸವಾದಿ ಶರಣರ ಸಿದ್ದಾಂತವು ಜಗತ್ಪ್ರಸಿದ್ಧಿ ಆಗಬೇಕಿದೆ. ಜಾತಿಯ ಕೂಪದಲ್ಲಿ ಬೇಯುತ್ತಿದ್ದ 12ನೇ ಶತಮಾನದಲ್ಲಿನ ಕಾಲಘಟ್ಟದಲ್ಲಿ ಎಲ್ಲಾ ಸಮುದಾಯದವರನ್ನು ಜೊತೆಗೂಡಿಸಿಕೊಂಡ ಅನುಭವ ಮಂಟಪದಲ್ಲಿ ಚಿಂತನೆ ಮಾಡಿರುವುದು ಬಹಳ ಆಶ್ಚರ್ಯಕರವಾದ ಸಂಗತಿಯಾಗಿದೆ.
ಇನ್ನು ಮುಂದೆ ನಾರಾಯಣ ಗುರುಗಳ ಜಯಂತೋತ್ಸವ ಜೊತೆಗೆ ಶರಣ ಹೆಂಡದ ಮಾರಯ್ಯನವರು ಹಾಗು ಶರಣೆ ಅಕ್ಕಮ್ಮನವರು ಜಯಂತಿಯನ್ನು ಮಾಡಲು ನಮ್ಮ ಸಮುದಾಯದ ಎಲ್ಲ ಸಂಘ ಸಂಸ್ಥೆಗಳು ಮತ್ತು ಮುಖಂಡರ ಜೊತೆ ನಾವು ಚರ್ಚಿಸುತ್ತೇವೆಂದರು.
ನಂತರ ಮಾತನಾಡಿದ ಬಸವಯೋಗೇಶ ಗುರುಗಳು ಹಲವು ಸಮುದಾಯದ ಕಾಯಕದ ಶರಣರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ನಡೆಸಲಾಗುತ್ತಿದೆ. ಆದರೆ ಹೆಂಡದ ಮಾರಯ್ಯನವರನ್ನ ಹಾಗೂ ಶರಣೆ ಈಡಿಗರ ಅಕ್ಕಮ್ಮನವರನು ಗುರುತಿಸಿಲ್ಲ. ಆದ್ದರಿಂದ ಇವರುಗಳ ಜಯಂತಿಯನ್ನು ಸರ್ಕಾರಮಟ್ಟದಲ್ಲಿ ಯಾವುದೇ ರಜೆಯನ್ನು ಘೋಷಿಸದೆ ಜಯಂತಿಯನ್ನು ಮಾಡಬೇಕೆಂದು ನಾವು ಕೇಳಬೇಕೆಂದು ನುಡಿದರು.

ಇಲ್ಲಿ ನಾವು ಪ್ರಥಮ ಬಾರಿಗೆ ಈ ಶರಣರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಈಡಿಗ ಸಮುದಾಯದ ಮುಖಂಡರಾದ ಬಿಜೆಪಿ ನಗರ ಕಾರ್ಯದರ್ಶಿ ರಾಘವೇಂದ್ರ, ರಘು, ಲೋಕೇಶ, ಗಗನ್ ಆರ್ಯ, ಮತ್ತು ಶರಣರ ಸಂಘಗಳ ಒಕ್ಕೂಟ ಸಂಘಟನೆಯ ಕೆರೆಹುಂಡಿ ನಂಜುಂಡಸ್ವಾಮಿ, ಮುದ್ದಹಳ್ಳಿ ಅಶೋಕಕುಮಾರ, ಗೆಜ್ಜಗಾರ ಘಟ್ಟಿವಾಳಯ್ಯ ಸಮುದಾಯದ ಮುಖಂಡ ಗೋಳೂರು ಸ್ನೇಕ್ ಬಸವರಾಜು ಹಾಗೂ ಭೋವಿ ಸಮುದಾಯದ ಮುಖಂಡರಾದ ಪಾಳ್ಯ ಪಾಪಣ್ಣನವರು, ನಗರಸಭೆ ಸದಸ್ಯ ಕಾಂಗ್ರೆಸ್ ಮುಖಂಡ ಬಸವರಾಜು ಮತ್ತಿತರರು ಭಾಗವಹಿಸಿದ್ದರು.
