ಕೆರೆಯ ಅಭಿವೃದ್ಧಿಗೆ ಯುವಕರು ಶ್ರಮದಾನಕ್ಕೆ ಮುಂದಾಗಬೇಕು : ಪಂಡಿತಾರಾಧ್ಯ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೆರೆ ಹೂಳೆತ್ತುವ ಕಾರ್ಯ ವಾರದಲ್ಲಿ ಮುಕ್ತಾಯ

ಸಾಣೇಹಳ್ಳಿ :

ಇಲ್ಲಿನ ಐತಿಹಾಸಿಕ ಸಾಣೇಹಳ್ಳಿ ಕೆರೆಯ ಹೂಳೆತ್ತುವ ಕಾರ್ಯವು ಭರದಿಂದ ಸಾಗುತ್ತಿದ್ದು, ಈಗಾಗಲೇ ಶೇಕಡಾ 90 ರಷ್ಟು ಕೆಲಸ ಪೂರ್ಣಗೊಂಡಿದೆ. ಇನ್ನು ಒಂದು ವಾರದಲ್ಲಿ ಇಡೀ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದರು.

ಬುಧವಾರ ಕೆರೆಗೆ ಭೇಟಿ ನೀಡಿ, ಹೂಳೆತ್ತುವ ಕಾಮಗಾರಿಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಶ್ರೀಗಳು ಪ್ರಗತಿಯ ಕುರಿತು ತೀವ್ರ ಸಂತಸ ವ್ಯಕ್ತಪಡಿಸಿದರು. ಕೆರೆಯ ಒಡಲು ಸ್ವಚ್ಛವಾಗುತ್ತಿರುವುದನ್ನು ಕಂಡು ಹರ್ಷಿಸಿದ ಶ್ರೀಗಳು, “ಮಳೆರಾಯನು ಕೃಪೆ ತೋರಿ ಆದಷ್ಟು ಬೇಗ ಕೆರೆ ತುಂಬುವಂತಾಗಲಿ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಸಿ, ಈ ಭಾಗದ ರೈತರ ಬಾಳು ಹಸನಾಗಲಿ” ಎಂದು ಹರಸಿದರು.

ಕೆರೆಯ ಮಧ್ಯ ಭಾಗದಲ್ಲಿರುವ ಐತಿಹಾಸಿಕ ‘ದೇವ ಕನ್ಯೆಕಿಯರ ಭಾವಿ’ಯು ಸದ್ಯ ಶಿಥಿಲಾವಸ್ಥೆಯಲ್ಲಿದೆ. ಇದನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಪಂಡಿತಾರಾಧ್ಯ ಸ್ವಾಮೀಜಿಯವರು, ಈ ಪುರಾತನ ಭಾವಿಗೆ ಸೂಕ್ತ ಸಂಪರ್ಕ ಕಲ್ಪಿಸಲು ಹಾಗೂ ಅದನ್ನು ನವೀಕರಿಸಲು ತಕ್ಷಣವೇ ಮಾರ್ಗ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಅಲ್ಲದೆ, “ದೇವ ಕನ್ಯೆಕಿಯರ ಬಾವಿಯ ಮಾರ್ಗ ಕಲ್ಪಿಸಲು ಆರ್ಥಿಕ ನೆರವನ್ನು ಸಾಣೇಹಳ್ಳಿ ಮಠದಿಂದಲೇ ಭರಿಸಲಾಗುವುದು,” ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಹೇಳಿದರು.

ಈ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕೆ ಕೇವಲ ಸರ್ಕಾರ ಅಥವಾ ಮಠ ಮಾತ್ರವಲ್ಲದೆ, ಸ್ಥಳೀಯ ಯುವಶಕ್ತಿಯೂ ಕೈಜೋಡಿಸಬೇಕಿದೆ. ಸಾಣೇಹಳ್ಳಿಯ ಯುವಕರು ಸ್ವಯಂಪ್ರೇರಿತರಾಗಿ ಬಂದು ಈ ಭಾವಿಯ ಮತ್ತು ಕೆರೆಯ ಅಭಿವೃದ್ಧಿ ಕೆಲಸಗಳಲ್ಲಿ ಶ್ರಮದಾನ ಮಾಡುವ ಮೂಲಕ ಭಾಗಿಯಾಗಬೇಕು ಎಂದು ಶ್ರೀಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹೂಳೆತ್ತುವ ಕಾರ್ಯದ ಉಸ್ತುವಾರಿ ವಹಿಸಿಕೊಂಡಿರುವ ಇಂಜಿನಿಯರ್ ಉಮೇಶ, ಸಾಣೇಹಳ್ಳಿ ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *