‘ಮಹಾಮನೆ ಕಟ್ಟಿದವರು ಬಸವಾದಿ ಶರಣರು’

ರಾಯಚೂರು :

171 ನೇ ಮಹಾಮನೆ ಕಾರ್ಯಕ್ರಮ ಎಲ್ಬಿಎಸ್ ನಗರದ ಸಿದ್ದಲಿಂಗಮ್ಮ ಶೇಖರಪ್ಪ ಅವರ ಮನೆಯಲ್ಲಿ ನಡೆಯಿತು.

ಉಪನ್ಯಾಸಕರಾಗಿ ಆಗಮಿಸಿದ ಮಾನ್ವಿಯ ಅನುಭಾವಿ ರಂಗಪ್ಪ ಮ್ಯಾದಾರ ಅವರು ಮಾತನಾಡುತ್ತಾ, ಮನೆ – ಮಹಾಮನೆ ಎಂದರೇನು? ಎಂಬುದನ್ನು ಅರ್ಥೈಸುತ್ತಾ, ಇತಿಹಾಸದಲ್ಲಿ ಮಹಾಮನೆ ಕಟ್ಟಿದವರು ಶರಣರು. ಮಹಿಳೆಯರಿಗಾಗಿ ಬಸವಣ್ಣನವರು ಮನೆ ಬಿಟ್ಟರು. ಬಸವಪೂರ್ವದಲ್ಲಿ ಮನುಸ್ಮೃತಿ ಕುರಿತು ಅವಲೋಕಿಸಿದರೆ ಹೆಣ್ಣು ಮಕ್ಕಳಿಗೆ, ಹಿಂದುಳಿದ ವರ್ಗದವರಿಗೆ, ಆಸ್ಪಶ್ಯರಿಗೆ, ನಿರ್ಗತಿಕರಿಗೆ ಸಮಾನತೆಯ ಹಕ್ಕುಗಳಾಗಲಿ, ಆಸ್ತಿ ಹಕ್ಕುಗಳಾಗಲಿ ಇರಲಿಲ್ಲ. ಅವರನ್ನು ಶೋಷಿತರನ್ನಾಗಿ ನೋಡುತ್ತಿದ್ದರಲ್ಲದೆ, ವರ್ಣಾಶ್ರಮ ಪದ್ಧತಿಯಲ್ಲಿ ಶೂದ್ರರು ಕಷ್ಟಪಟ್ಟು ದುಡಿಯಬೇಕು. ಮೇಲ್ವರ್ಗದವರು ಕುಳಿತು ತಿನ್ನಬೇಕು. ಕಾಯಕ ವರ್ಗದವರನ್ನು ಆಯಗಾರರೆಂದು ಪರಿಗಣಿಸಿ ಕ್ಲಿಷ್ಟಕರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು ಎಂದರು.

ಇದನ್ನು ಮನಗಂಡ ಅಣ್ಣ ಬಸವಣ್ಣನವರು ಕಲ್ಯಾಣದ ಪುಣ್ಯಭೂಮಿಯಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲ ಕಾಯಕ ಜೀವಿಗಳಿಗೆ ಅನುಭವ ಮಂಟಪದಲ್ಲಿ ಮುಕ್ತ ಪ್ರವೇಶ ನೀಡಿದರು. ಮಹಾಮನೆಗೆ ಬರುವ ಭಕ್ತರು ಲಿಂಗ ಧರಿಸಿ ಬಂದರೆ ಅವರ ಕುಲ-ಕಸಬುಗಳನ್ನು ನಾನು ಕೇಳುವುದಿಲ್ಲ, ಕೇಳಬಾರದು ಎಂಬುದು ಬಸವಣ್ಣನವರ ಸ್ಪಷ್ಟ ನಿಲುವಾಗಿತ್ತು. ಲಿಂಗ ಧರಿಸಿದವರೆಲ್ಲ ಸಂಗಮನಾಥನಿಗೆ ಸಮಾನರಾಗಿ ಪರಿವರ್ತನೆ ಹೊಂದುವುದರಿಂದ ಇಂಥವರಲ್ಲಿ ಕುಲವ ಅರಸಬಾರದು ಎಂಬುದು ಬಸವಣ್ಣನವರ ಆಲೋಚನೆಯಾಗಿತ್ತು.

ಸ್ತ್ರೀಯರನ್ನು ಮಾಯೆ, ಮೈಲಿಗೆ, ಅಬಲೆ, ಪರಾದೀನೆ ಎಂದೇ ಬಿಂಬಿಸಿಕೊಂಡು ಬರುತ್ತಿದ್ದ ಹೊತ್ತಿನಲ್ಲಿ ಬಸವಣ್ಣನವರು ಅನುಭವ ಮಂಟಪ ಎಂಬುದೊಂದು ಮುಕ್ತ ವೇದಿಕೆಯನ್ನು ನಿರ್ಮಿಸಿ, ಅಲ್ಲಿ ಸ್ತ್ರೀಯರಿಗೆ ಪುರುಷ ಸಮಾನ ಅವಕಾಶವನ್ನು ನೀಡಿ ಲಿಂಗ ತಾರತಮ್ಯವು ಪ್ರಭುತ್ವದ ವಂಚನೆ ಮತ್ತು ಮಾನವ ಸಮಾಜದ ಮಹಾಪತನ ಎಂಬುದನ್ನು ಸಮಾಜಕ್ಕೆ ಎತ್ತಿ ತೋರಿಸಿದ್ದನ್ನು ನೋಡಿ ಜಗತ್ತೇ ಬೆರಗಾಗಿತ್ತು.

ಈ ರೀತಿ ಮಹಾ ಮನೆಯಲ್ಲಿ ಬಸವಣ್ಣನವರು ಸರ್ವ ಸಮಾನತೆಯ ಹಕ್ಕನ್ನು ಎಲ್ಲರಿಗೂ ನೀಡಿದ್ದರಿಂದ ಅದರಲ್ಲೂ ಮಹಿಳೆಯರಿಗೆ ನೀಡಿದ್ದರಿಂದ ಅಕ್ಕನಾಗಮ್ಮ, ಮುಕ್ತಾಯಕ್ಕ, ಸತ್ಯಕ್ಕ, ಸಂಕವ್ವೆ ಮುಂತಾದ ಮಹಾನ್ ಶರಣೆಯರು ತಮ್ಮ ವಿದ್ವತ್ಪೂರ್ಣ ವಚನಗಳನ್ನು ರಚಿಸಿದ್ದನ್ನು ಈ ಸಂದರ್ಭದಲ್ಲಿ ರಂಗಪ್ಪ ಹೇಳಿದರು.

ಇದೇ ಸಂದರ್ಭದಲ್ಲಿ ಶರಣೆ ಸಿದ್ದಲಿಂಗಮ್ಮ ಶೇಖರಪ್ಪ ಅವರನ್ನು ಗೌರವಿಸಲಾಯಿತು. ವಚನ ಗಾಯನ ಮತ್ತು ಬಸವ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ, ಮುಕ್ತಾ ನರಕಲದಿನ್ನಿ, ಜಗದೇವಿ ಚನ್ನಬಸವ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಗುಡಿಮನಿ ಸ್ವಾಗತಿಸಿದರು‌. ಚನ್ನಬಸವ ಇಂಜಿನಿಯರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಾಗೇಶ್ವರಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ಹರವಿ ಶಂಕರಗೌಡರು, ವೆಂಕಟೇಶ ಕಮಲಾಪುರ, ನಾಗರಾಜ ಪಾಟೀಲ, ಜಯಶ್ರೀ ಮಹಾಜನಶೆಟ್ಟಿ, ವೆಂಕಣ್ಣ ಆಶಾಪುರ ಮುಂತಾದವರು ಉಪಸ್ಥಿತರಿದ್ದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *