ವಚನ ನಿರ್ವಚನ: ನಿರರ್ಥಕವಾದ ಕೋಪ ತನುಮನದ ಕೇಡು

ಬಸವ ಮೀಡಿಯಾ
ಬಸವ ಮೀಡಿಯಾ

ಮನೆಯಲ್ಲಿ ಮಹಾಮನೆ ಕಾರ್ಯಕ್ರಮ

ಗುಳೇದಗುಡ್ಡ:

ಇಲ್ಲಿನ ಉಮಾದೇವಿ ಸೀರಿ ಅವರ ಮನೆಯಲ್ಲಿ ಶನಿವಾರ ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು.

ಅಂದು ಚಿಂತನೆಗೆ ಆಯ್ದುಕೊಂಡ ವಚನ ಬಸವ ತಂದೆಗಳವರದು…

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ?ತನಗಾದ ಆಗೇನು? ಅವರಿಗಾದ ಚೇಗೇನು?

ತನುವಿನ ಕೋಪˌ ತನ್ನ ಹಿರಿತನದ ಕೇಡು.

ಮನದ ಕೋಪ ತನ್ನ ಅರಿವಿನ ಕೇಡು.

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆˌ

ನೆರಮನೆಯ ಸುಡದು ಕೂಡಲಸಂಗಮದೇವ.

ವಚನವನ್ನು ಚಿಂತನೆಗೆ ಒಳಪಡಿಸಿದ ಪ್ರೊ. ಶ್ರೀಕಾಂತ ಗಡೇದ ಅವರು, “ಈ ವಚನ ಸಮಾಜದಲ್ಲಿನ ಬಹುತೇಕ ಕೆಡಕುಗಳಿಗೆ ಆತನ ಕೋಪವೇ ಕಾರಣ. ತನ್ನ ಕೋಪಕ್ಕೆ ತನ್ನ ಮೂಗನ್ನೇ ಕೊಯ್ದುಕೊಳ್ಳುವ ಮೂರ್ಖಮಾನವˌ ಮುಂದೆ ಆಗುವುದನ್ನು ಅರಿಯಲಾರ. ಆದರೆ ಅನರ್ಥ ಆಗಲೇ ಘಟಿಸಿ ಆಗಿರುತ್ತದೆ. ಯಾರಿಗೂ ಲಾಭವಿಲ್ಲದ, ಈ ಕೋಪವೆಂಬುದು ಮಾನವನನ್ನು ಅಧಮನನ್ನಾಗಿಸಿ ಜೊತೆಗೆ ಆತನೊಂದಿಗಿರುವ ಸಮಾಜವನ್ನು ನಾಶ ಮಾಡುತ್ತದೆ. ಹೀಗಾಗಿ ಕೋಪದ ನಿರರ್ಥಕತೆಯನ್ನು ಅಪ್ಪ ಬಸವಣ್ಣನವರು ತಿಳಿಸುತ್ತಾ, ಜನರು ಇದರಿಂದ ಆಗುವ ಅನಾಹುತವನ್ನು ಸಂಯಮದಿಂದ ಸಾಧಿಸಬಹುದೆಂದು ತಿಳಿಸಿ ಹೇಳಿದ್ದಾರೆ “ಎಂದು ಅಭಿಪ್ರಾಯಪಟ್ಟರು.

ಮಹಾಲಿಂಗಪ್ಪ ಕರನಂದಿ ಅವರು ಮಾತನಾಡುತ್ತಾ, “ಈ ವಚನದ ಬರಿ ಓದಿನಿಂದ ನಮ್ಮಲ್ಲಿರುವ ಅವಗುಣ ಕಡಿಮೆಯಾಗುತ್ತದೆ. ಅಳವಡಿಸಿಕೊಂಡರೆ ಈ ನೆಲವೇ ಶಾಂತಿಯ ತೋಟ ಆಗುತ್ತದೆ. ಇಂದಿನ ಸಾರ್ವತ್ರಿಕ ಸಮಸ್ಯೆಗಳಾದ ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳಿಗೆ ಈ ವಚನದ ಮಥಿತಾರ್ಥ ದಿವ್ಯ ಔಷಧವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಕೋಪದ ಕಾರಣದಿಂದಾಗಿ ಮನುಷ್ಯನ ಶರೀರ ಮತ್ತು ಮನಸ್ಸು ಹಾಳಾಗುತ್ತದೆˌ ವ್ಯಕ್ತಿತ್ವ ನಾಶವಾಗುತ್ತದೆ. ಇಷ್ಟಕ್ಕೂ ಈ ಕೋಪದಿಂದ ಲಾಭವಾದರೂ ಯಾರಿಗಿದೆ? ಕಾರಣ ಸಿಟ್ಟು ಮಾಡಿಕೊಳ್ಳುವುದು ತರವಲ್ಲ” ಎಂದು ತಿಳಿಸಿದರು.

ಡಾ. ಗಿರೀಶ ನೀಲಕಂಠಮಠ ಅವರು ಈ ವಚನವನ್ನು ವಿಶ್ಲೇಷಿಸುತ್ತ, ಕೋಪ ಮತ್ತು ಅದರ ಪರಿಣಾಮಗಳನ್ನು ಎಳೆ ಎಳೆಯಾಗಿ ಬಿಡಿಸಿ “ಸಿಟ್ಟು ಎನ್ನುವುದು ಯಾವುದೇ ಪ್ರಯೋಜನವಿಲ್ಲದˌ ಮನುಷ್ಯನ ವ್ಯಕ್ತಿತ್ವವನ್ನೇ ನಾಶ ಮಾಡುವ, ಅರಿಷಡ್ವರ್ಗದಲ್ಲಿನ ಒಂದು ವರ್ಗವಾಗಿದೆ. ಅದು ಹೊರಗಿನಿಂದ ಬಂದುದಲ್ಲ, ತನ್ನಲ್ಲಿಯೇ ಉಂಟಾಗಿ ತನ್ನನ್ನುˌ ಮತ್ತು ತನ್ನನ್ನು ನಂಬಿದವರನ್ನುˌ ತನ್ನ ಸುತ್ತಲಿನ ಸರ್ವಸ್ವವನ್ನು ನಾಶ ಮಾಡುವುದು. ಕಾರಣ ಬಸವಣ್ಣನವರು ಇದನ್ನು ಎತ್ತಿತೋರಿಸಿˌ ಇದರಿಂದ ಯಾರಿಗೆ ಲಾಭ ಎಂದು ಪ್ರಶ್ನಿಸುತ್ತಲೇ ನಿರುತ್ತರಗೊಳಿಸುತ್ತಾರೆ.

ಈ ಕೋಪ ನನಗೂ, ಅದನ್ನು ಉಂಟು ಮಾಡಿದ ಆತನಿಗೂˌ ಲಾಭವಿಲ್ಲ. ಹೀಗಾಗಿ ನಿರರ್ಥಕವಾದ ಕೋಪ ತನುಮನದ ಕೇಡಾಗಿದೆ. ಕೋಪದ ಪರಿಣಾಮದಿಂದ ಬಾಹ್ಯ ಹಿರಿತನವನ್ನು ಕಳೆಯುವಂತೆ, ಪ್ರಪಂಚವೆಲ್ಲ ಪರಶಿವ ಲಿಂಗವೆಂಬುವ ಅರಿವನ್ನು ಮರೆಯುವ ಮೂಲಕ ಅರಿವಿನ ಕೇಡಾಗುತ್ತದೆ. ಇದಕ್ಕೆ ಅನೇಕ ದೃಷ್ಠಾಂತಗಳನ್ನು ಈ ಕಾಲದವರೆಗೂ ಉದಾಹರಿಸುತ್ತ ಹೋಗಬಹುದು.

ಕೋಪ ಪ್ರತಿ ಕೋಪದಿಂದ ಶಾಂತಿ ಸಮಾಧಾನ ಸಾಧ್ಯವಿಲ್ಲ, ಜ್ವಾಲೆಗೆ ತುಪ್ಪವನ್ನು ಸುರಿದಂತೆ. ಇದನ್ನೇ ತನಗಾದ ಆಗೇನು ಅವರಿಗಾದ ಚೇಗೆ ಏನು? ಎಂದು ಪ್ರಶ್ನಿಸಿ ಅಕ್ಕನಂತೆ ಮನದಲ್ಲಿ ಕೋಪ ತಾಳದೆ ಸಮಾಧಾನಿಯಾಗಿರಬೇಕು.” ಎಂದು ಪ್ರತಿಪಾದಿಸಿದರು.

ಹಿರಿಯ ಅನುಭವಿಗಳಾದ ಮಹದೇವಯ್ಯ ನೀಲಕಂಠಮಠ ಅವರು, ಸಮಾರೋಪಗೈಯುತ್ತ “ಕೋಪ ಎನ್ನುವುದು ಸರ್ವ ಸಂಪತ್ತಿನ ಹಾನಿಗೂ ಮೂಲ. ಈ ಸಿಟ್ಟು ಅಥವಾ ಕೋಪ ಎನ್ನುವುದು ತನಗೆˌ ತಾನು ತಿಳಿಯದಂತೆಯೇ ಹುಟ್ಟಿ ಮೊದಲು ತನ್ನನ್ನು ನಾಶ ಮಾಡುತ್ತದೆ. ತಾನು ಶತ್ರುವನ್ನು ಭಂಗಪಡಿಸಿದೆ ಎಂಬ ಅಹಂಗೆ ಒಳಗಾಗುವುದರ ಅಂತಿಮ ಪ್ರಭಾವ, ತನ್ನ ನಾಶಕ್ಕೆ ಕಾರಣವಾಗಿರುತ್ತದೆ.

ಬಸವಣ್ಣನವರು ಇದನ್ನು ಸೂಕ್ಷ್ಮವಾಗಿ ಗ್ರಹಿಸಿಯೆ, ಮನೆಯೊಳಗಣ ಕಿಚ್ಚು ಮೊದಲು ತನ್ನ ಮನೆಯನ್ನು ಸುಟ್ಟು, ನಂತರ ನೆರೆಮನೆಯನ್ನು ಸುಡುತ್ತದೆ. ಇತರರ ಮುಖಕ್ಕೆ ಬಳಿಯುವ ಮಸಿ ಮೊದಲು ತನ್ನ ಕೈಗೆ ಅಂಟಿಕೊಂಡಿರುತ್ತದೆ ಎಂಬುದನ್ನೇ ಮನುಷ್ಯ ಮರುತಿದ್ದಾನೆ. ಇದರಿಂದಲೇ ಇಂದು ಜಗತ್ತಿನಲ್ಲಿ ಕ್ಲೇಶ ಘರ್ಷಣೆಗಳು.

ಕಾರಣˌ ಈ ಕೋಪ ಬರುವುದು ಜನ ನಮ್ಮನ್ನು ತೆಗಳಿದಾಗ ತಾನೆ! ನಾವೇ ಒಂದು ಕ್ಷಣ ಸಮಾಧಾನ ತಾಳಬೇಕು. ಇದು ನನಗಾಗಲಿˌ ಎದುರಿನವನಿಗಾಗಲಿ ಲಾಭದ ವಿಷಯವಲ್ಲ. ನೆಮ್ಮದಿ ವಿಷಯ ಎಂಬುದನ್ನು ಬಸವಣ್ಣನವರು ಹೇಳಿದ್ದಾರೆ” ಎಂದರು.

ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾˌ ಗಾಯತ್ರಿ ಕಲ್ಯಾಣಿ ಅವರ ವಚನ ಪ್ರಾರ್ಥನೆ, ಮುರುಗೇಶ ಶೇಖಾ ಅವರಿಂದ ಸ್ವಾಗತ ನಡೆಯಿತು. ಪ್ರೊ. ಸುರೇಶ ರಾಜನಾಳ ಅವರು ಶರಣು ಸಮರ್ಪಣೆ ಸಲ್ಲಿಸಿದರು.

ಕೊನೆಯಲ್ಲಿ ವಚನ ಮಂಗಳವಾಯಿತು.

ಕಾರ್ಯಕ್ರಮದಲ್ಲಿ ರಾಚಪ್ಪ ಎಂಡಿಗೇರಿˌ ರಾಜಣ್ಣ ಕೆರೂರ, ದಾನಪ್ಪ ಬಂಡಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಬಸಲಿಂಗಯ್ಯ ಕಂಬಾಳಿಮಠ, ದಾಕ್ಷಾಯಿಣಿ ತೆಗ್ಗಿ ಕೃಷ್ಣಾಜಿ ಮಹೇಂದ್ರಕರ, ಮಹಾಂತೇಶ ಸಿಂದಗಿ ಮೊದಲಾದವರು, ನೆರೆಮನೆಯವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment
  • ಒಳ್ಳೆಯ ಸಂದೇಶ ರವಾನೆ ಮಾಡಿದ್ದಾರೆ

Leave a Reply

Your email address will not be published. Required fields are marked *