ಬಸವ ಸಂಘಟನೆಗಳು ಒತ್ತಡ ಗುಂಪುಗಳಾಗಿ ರಾಜಕೀಯ ಪ್ರವೇಶಿಸಲಿ
ಗದಗ
ಇಂದು ಜಿಲ್ಲಾ, ತಾಲೂಕು, ಗ್ರಾಮ ಮಟ್ಟಗಳಲ್ಲಿ ನೂರಾರು ಬಸವ ಸಂಘಟನೆಗಳು, ಸಾವಿರಾರು ಬಸವ ಕಾರ್ಯಕರ್ತರಿದ್ದಾರೆ.
ಬಹುತೇಕವಾಗಿ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಸೀಮಿತವಾಗಿರುವ ಇವರು ರಾಜಕೀಯ ಪ್ರಜ್ಞೆ ಮೂಡಿಸಿಕೊಂಡರೆ ಮಾತ್ರ ಲಿಂಗಾಯತ ಧರ್ಮದ ಮೇಲೆ ನಡೆಯುತ್ತಿರುವ ರಾಜಕೀಯ ಆಕ್ರಮಣವನ್ನು ತಡೆಯಬಹುದೆಂದು ಬಸವಶಕ್ತಿ ಶಿಬಿರಾರ್ಥಿಗಳು ಒಮ್ಮತದಿಂದ ಹೇಳಿದರು.
ಆದರೆ ರಾಜಕೀಯವಾಗಿ ಸಕ್ರಿಯವಾಗುವ ಮಾರ್ಗದ ಬಗ್ಗೆ ಮಾತ್ರ ವಿವಿಧ ಅಭಿಪ್ರಾಯಗಳು ಕೇಳಿ ಬಂದವು.
ಬಸವ ಸಂಘಟನೆಗಳು ಪ್ರಾದೇಶಿಕ ಪಕ್ಷ ಕಟ್ಟಬೇಕು ಅಥವಾ ಕನಿಷ್ಠ ಅಲ್ಲಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಕೆಲವರು ಹೇಳಿದರು.
ಅದಕ್ಕೆ ಪ್ರತಿಯಾಗಿ ಕೆಲವರು ಚುನಾವಣೆಯಲ್ಲಿ ಸ್ಪರ್ದಿಸುವುದಕ್ಕಿಂತಲೂ ಪಕ್ಷಗಳ, ರಾಜಕಾರಣಿಗಳ, ಸರಕಾರಗಳ ಮೇಲೆ ಪ್ರಭಾವ ಬೀರುವ ಒತ್ತಡ ಗುಂಪುಗಳಾಗಿ ಬಸವ ಸಂಘಟನೆಗಳು ಕೆಲಸ ಮಾಡಬೇಕೆಂದು ಕರೆಕೊಟ್ಟರು.
ಮುಂಡರಗಿ ಜಾಗತಿಕ ಲಿಂಗಾಯತ ಮಹಾಸಭಾದ ಎ.ವೈ. ನವಲಗುಂದ ಅವರು ಬಸವ ಸಂಘಟನೆಗಳು ರಾಜಕೀಯವಾಗಿ ಸಕ್ರಿಯವಾಗಬೇಕೇ ಎಂಬ ಪ್ರಶ್ನೆಗೆ ಅನೇಕರಲ್ಲಿ ಗೊಂದಲವಿದೆ.
ಬಸವ ಸಂಘಟನೆಗಳನ್ನು ರಾಜಕೀಯಕ್ಕೆ ದುಮುಕಿಸಿದರೆ ಅವರನ್ನು ಮುಗಿಸುತ್ತೀರಿ ಅನ್ನುವ ಪ್ರತಿಕ್ರಿಯೆಯೂ ಬಂದಿದೆ. ಆದರೆ ರಾಜಕೀಯ ಅನಿವಾರ್ಯ, ಮಡಿವಂತಿಕೆ ಬೇಡ, ಎಂದು ಹೇಳಿದರು.
ಬಸವಣ್ಣ ಕೂಡ ರಾಜಕೀಯ ಶಕ್ತಿಯ ಮೇಲೆಯೇ ಕಲ್ಯಾಣ ಕ್ರಾಂತಿ ನಡೆಸಿದರು. ಇಂದು ಮೌಲ್ಯಾಧಾರಿತ, ಬಸವತತ್ವದ ರಾಜಕೀಯದ ಅಗತ್ಯವಿದೆ.
ಬಸವ ಸಂಘಟನೆಗಳು ಪಕ್ಷ ರಾಜಕೀಯದಿಂದ ದೂರಾಗಿರಬೇಕು ಆದರೆ ಒತ್ತಡ ಗುಂಪಾಗಿ ಕೆಲಸ ಮಾಡಬೇಕು.
ಒತ್ತಡ ಗುಂಪುಗಳು ತಮಗೆ ಬೇಕಾದ ನೀತಿ ನಿಯಮಗಳನ್ನು ರೂಪಿಸುವಂತೆ ಸರಕಾರದ ಮೇಲೆ ಒತ್ತಡ ತರುತ್ತವೆ, ಆದರೆ ಸರಕಾರದ ಭಾಗವಾಗಿರುವುದಿಲ್ಲ, ಎಂದು ವಿವರಿಸಿದರು.
ಬೂತ್ ಮಟ್ಟದಲ್ಲಿ ರಾಜಕೀಯವಾಗಿ ಸಕ್ರಿಯವಾಗುವ ಅಗತ್ಯವಿದೆ. ಕ್ಷೇತ್ರಗಳಲ್ಲಿ ಒಂದು ಸಾವಿರ, ಎರಡು ಸಾವಿರ ಮತಗಳನ್ನು ಒಗ್ಗೂಡಿಸಿದರೂ ನಮ್ಮ ಮಾತಿಗೆ ಬೆಲೆ ಬರುತ್ತದೆ. ಬೂತ್ ಮಟ್ಟದಲ್ಲಿ ನಮ್ಮ ಪ್ರಭಾವ ಬೆಳೆಸಿಕೊಂಡರೆ ಮಾತ್ರ ನಾವು ಪಕ್ಷಗಳ ಮೇಲೆ, ರಾಜಕಾರಣಿಗಳ ಮೇಲೆ ಹಿಡಿತ ಸಾಧಿಸಬಹುದು.
ಇದಕ್ಕೆ ಬೇಕಾದ ಕೌಶಲ್ಯವನ್ನು ಬಸವ ಸಂಘಟನೆಗಳು ಕಲಿಯಬೇಕು, ಎಂದು ಹೇಳಿದರು.

ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಟಿ ಎಚ್ ಬಸವರಾಜ್ ಒತ್ತಡ ಗುಂಪುಗಳಾಗಿ ಬಸವ ಸಂಘಟನೆಗಳು ಕೆಲಸ ಮಾಡುವ ಬಗ್ಗೆ ತಮ್ಮ ಹೊಸಪೇಟೆ ಜಿಲ್ಲೆಯ ಅನುಭವ ಹಂಚಿಕೊಂಡರು.
ಒಟ್ಟಾರೆ ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ಐದು ಮಾರ್ಗಗಳನ್ನು ಸೂಚಿಸಿದರು.
1) ಜನರ ಸಮಸ್ಯೆಗಳಿಗೆ ಸ್ಪಂದಿಸಿ
ಮೊದಲು ಬಸವ ಸಂಘಟನೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಣ್ಣ ಪುಟ್ಟ ಸರಕಾರಿ ಕೆಲಸಗಳಲ್ಲಿ ನೆರವಾಗಬೇಕು, ಯಾವುದೋ ಕಾರಣಕ್ಕೆ ಪೊಲೀಸ್ ಠಾಣೆಯಿಂದ ಕರೆ ಬಂದರೆ, ಆಸ್ಪತ್ರೆಗೆ ಹೋಗುವ ಸನ್ನಿವೇಶ ಬಂದರೆ ಜನರ ಜೊತೆಗೆ ನಿಲ್ಲಬೇಕು. ನಾವು ನೆರವಾದರೆ, ಅವರು ಸ್ಪಂದಿಸುತ್ತಾರೆ, ಎಂದು ಹೇಳಿದರು.
2) ಗೌಡಿಕೆ ಬೇಡ, ಸಂಪರ್ಕ ಬೇಕು
ಎಂಎಲ್ಎ, ಎಂಪಿಗಳ ಜೊತೆ ಕೆಲಸವಿರಲಿ, ಇಲ್ಲದಿರಲಿ ತಂಡವಾಗಿ ಹೋಗಿ ಕಾಣಿಸಿಕೊಳ್ಳಬೇಕು. ಅವರು ಬರಲಿ, ಬಾರದಿರಲಿ ನಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಯಬೇಕು. ನಾವು ಸಕ್ರಿಯವಾಗಿದ್ದೇವೆ ಎಂಬ ಸಂದೇಶ ಅವರಿಗೆ ತಲುಪುವಂತೆ ಮಾಡಬೇಕು. ಗೌಡಿಕೆ, ಮಡಿವಂತಿಕೆ ಬಿಟ್ಟು ಅವರ ಸಂಪರ್ಕದಲ್ಲಿರಬೇಕು.
ಪಂಚಾಯತಿ, ಇತರ ಜಿಲ್ಲಾ ರಾಜಕಾರಣಿಗಳ ಜೊತೆಗೂ ಸಂಬಂಧ ಬೆಳೆಸಿಕೊಳ್ಳಬೇಕು. MLCಗಳಲ್ಲಿ ಹೆಚ್ಚಿನವರು ಲಿಂಗಾಯತರೇ ಇದ್ದಾರೆ. ಅವರ ಜೊತೆಯೂ ಒಡನಾಟ ಬೆಳೆಸಿಕೊಳ್ಳಬೇಕು.
3) ಖಾಸಗಿ ಸಂಬಂಧ ಮುಖ್ಯ
ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಖಾಸಗಿಯಾಗಿ ಹೋಗಿ ಭೇಟಿ ಮಾಡಿ ಸಂಬಂಧ ಬೆಳೆಸಿಕೊಳ್ಳಬೇಕು. ಲಿಂಗಾಯತ ಧರ್ಮದ ವಿರುದ್ಧ ಮಾತಾಡಿರುವ ಜಗದೀಶ ಶೆಟ್ಟರ್ ಅಂತವರನ್ನು ಸಾರ್ವಜನಿಕವಾಗಿ ಖಂಡಿಸುವುದಕ್ಕಿಂತಲೂ ಖಾಸಗಿಯಾಗಿ ಹೋಗಿ ಚರ್ಚಿಸಿದರೆ, ಅವರು ಸ್ಪಂದಿಸುತ್ತಾರೆ.
4) ಲಿಂಗಾಯತದ ಪ್ರಜ್ಞೆ ಮೂಡಿಸಿ
ಸಮುದಾಯದಲ್ಲಿ ಲಿಂಗಾಯತದ ಪ್ರಜ್ಞೆ ಮೂಡಿಸಬೇಕು. ನಮ್ಮ ಸಮುದಾಯದ ಕೊಡುಗೆಗಳ ಬಗ್ಗೆ ಅಭಿಮಾನ ಮೂಡಿಸಬೇಕು.
5) ಗಮನ ಸೆಳೆಯಿರಿ
ಬಸವ ಸಂಘಟನೆಗಳು ತಾವು ಮಾಡುವ ಕೆಲಸ ಎಲ್ಲರಿಗೂ ತಿಳಿಯುವಂತೆ ನೋಡಿಕೊಳ್ಳಬೇಕು, ಜನರ ಗಮನ ಸೆಳೆಯಬೇಕು.

ಮೊದಲು ಭಿನ್ನಾಭಿಪ್ರಾಯ ಇಲ್ಲದೆ ಲಿಂಗಾಯತರು ಸಂಘಟಿತರ ಆಗಬೇಕು.ಸ್ವಾರ್ಥತನ ಬಿಡಬೇಕು.. ಯಾವುದೇ ಕಾರಣಕ್ಕೂ ಸಂಘಟನೆ ಬಿಡಬಾರದು. ಆಗ ಮಾತ್ರ ನಮ್ಮ ವಿಕ್ಕಿ ರಾಜಕಾರಣಿಗೆ ಗೊತ್ತಾಗುತ್ತೆ