ತೋಂಟದಾರ್ಯ ಮಠದಲ್ಲಿ ಪ್ರಾತಃಕಾಲ ಶಿವಾನುಭವ ನಡೆದು ಬಂದ ದಾರಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ತೋಂಟದಾರ್ಯ ಮಠದ ಪ್ರಾತಃಕಾಲ ಶಿವಾನುಭವ ಅನೇಕ ವ್ಯಕ್ತಿಗಳಿಗೆ ಲಿಂಗಾಯತ ಧರ್ಮದ ಸಂಸ್ಕಾರಗಳನ್ನು ನೀಡಿದೆ. ಶ್ರೀಮಠದ ಅನೇಕ ಭಕ್ತರು ಬೆಳಗಿನ ಜಾವ ಮಠದ ಸದರಿನಲ್ಲಿ ಒಂದೆಡೆ ಸೇರಿ ಬಸವತತ್ವಗಳನ್ನು ಚಿಂತನೆ ಮಾಡುವ ಮೂಲಕ ಶ್ರೀಮಠದ ಭಕ್ತರಲ್ಲಿ ಧರ್ಮದ ಜಾಗೃತೆಯನ್ನು ಮೂಡಿಸಿದ್ದಾರೆ.

ಪ್ರಾಥಃಕಾಲ ಶಿವಾನುಭವ ಪ್ರಾರಂಭದ ದಿನಗಳಲ್ಲಿ ಶರಣರಾದ ಸಿದ್ಧಲಿಂಗಯ್ಯ ಹೊಸಮಠ, ಗುರುಸಿದ್ದಪ್ಪ ಹುಣಸಿಮರದ, ಪಂಚಯ್ಯ ಹಿರೇಮಠ, ಸದಾಶಿವಪ್ಪ ಬಡಿಗಣ್ಣವರ, ನಾಗಮ್ಮ ಸಂಶಿಮಠ, ನೀಲಮ್ಮ ಬೇವಿನಮರದ, ಅನ್ನಪೂರ್ಣಕ್ಕ ಬಡಿಗಣ್ಣವರ, ಬಸವಣ್ಣೆಮ್ಮ ವಾಲಿ, ಸುಶೀಲಮ್ಮ ಪವಾಡಶೆಟ್ರ ಮುಂತಾದವರು ಪ್ರಾತಃಕಾಲ ಶಿವಾನುಭವವನ್ನು ಮುನ್ನಡೆಸಿಕೊಂಡು ಬಂದರು.

ನಂತರದ ದಿನಗಳಲ್ಲಿ ಶರಣರಾದ ಎಂ. ಎ. ಹಂಚಿನಾಳ, ಎಸ್.ಆರ್. ನರೇಗಲ್ಲ, ಜಿ. ಕೆ. ಹೆರಕಲ್ಲ, ಬಸವರಾಜ ವೆಂಕಟಾಪೂರ,  ಗಂಗಾಧರ ದೇವರು, ಶಿವಾನಂದ ದೇವರು, ಅಂಗಡಿ, ಬಸವಾನಂದ ಸ್ವಾಮಿಗಳು, ಅಶೋಕ ಬರಗುಂಡಿ, ವಿ. ಕೆ. ಕರೇಗೌಡ್ರ, ಎಸ್. ಎಸ್. ಕಳಸಾಪೂರಶೆಟ್ರ, ಶರಣೆಯರಾದ ರತ್ನಕ್ಕ ಪಾಟೀಲ, ರೇಣುಕಾ ಕರೇಗೌಡ್ರ, ಗೌರಕ್ಕ ಬಡಿಗಣ್ಣವರ, ಸುಜಾತಾ ವಾರದ, ಹಳ್ಳಿಕೇರಿ, ಸುವರ್ಣಾ ಗಾಳಪ್ಪನವರ ಮುಂತಾದವರು ಮುನ್ನಡೆಸುತ್ತಿದ್ದಾರೆ.

ಇಲ್ಲಿ ಬಸವಾದಿ ಶಿವಶರಣರ ವಚನ ಸಾಹಿತ್ಯ, ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರ ವಚನಗಳು, ಮೈಲಾರ ಬಸವಲಿಂಗ ಶರಣರ ತ್ರಿಪದಿಗಳನ್ನು ಚಿಂತನೆ ಮಾಡುವ ಮೂಲಕ ಲಿಂಗಾಯತ ಧರ್ಮದ ತತ್ವಗಳಾದ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲ ಮಹತ್ವವನ್ನು ಚರ್ಚಿಸುತ್ತಾ ವ್ಯಕ್ತಿಯಿಂದ ಸಮಷ್ಠಿ ಕಡೆಗೆ ಪ್ರಸಾರ ಕಾರ್ಯ ನಡೆಯುತ್ತಿದೆ.

ಇತ್ತೀಚಿಗೆ ಲಿಂಗೈಕ್ಯರಾದ ಶರಣೆ ರತ್ನಕ್ಕ ಪಾಟೀಲರು ಶ್ರೀಮಠದ ಶಿವಾನುಭವ ಹಾಗೂ ಪ್ರಾತಃಕಾಲ ಶಿವಾನುಭವದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ತಮ್ಮನ್ನು ತಾವು ಶ್ರೀಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಶ್ರೀ ತೋಂಟದ ಲಿಂಗೈಕ್ಯ ಡಾ. ಸಿದ್ಧಲಿಂಗ ಸ್ವಾಮಿಗಳವರೊಂದಿಗೆ ಗುರು-ಶಿಷ್ಯರ ಸಂಬಂಧ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬಾಳಿಬೆಳಗಿದ್ದಾರೆ. ಶ್ರೀಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಅಲ್ಲದೇ ಬಸವದಳ-ಬಸವಕೇಂದ್ರ-ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜೀವನವನ್ನು ಸಮಾಜ ಮುಖಿಗೊಳಿಸಿಕೊಂಡಿದ್ದರು.

ಅಲ್ಲದೇ ತಮ್ಮಿಂದಾದ ಆರ್ಥಿಕ ಸಹಾಯ ಸಹಕಾರವನ್ನು ಮಾಡುತ್ತಿದ್ದರು ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ  ಮಹಾಸ್ವಾಮಿಗಳು ತಮ್ಮ ಆಶೀರ್ವಾವಚನದಲ್ಲಿ ರತ್ನಕ್ಕ ಪಾಟೀಲರ ಬಗ್ಗೆ ಗುಣಗಾನ ಮಾಡಿದರು.

ಪೂಜ್ಯರು ಶ್ರೀಮಠದಲ್ಲಿ ಈಚೆಗೆ ನಡೆದ ಬಸವದಳದ ೧೭೨೧ ನೇ ಶರಣರ ಸಂಗಮದಲ್ಲಿ “ಪ್ರಾತಃಕಾಲ ಶಿವಾನುಭವ ನಡೆದು ಬಂದ ದಾರಿ” ಹಾಗೂ ಲಿಂಗೈಕ್ಯ ಶರಣೆ ರತ್ನಕ್ಕ ಪಾಟೀಲರ ನುಡಿ-ನಮನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಪೂಜ್ಯ ಬಸವರಾಜ ವೆಂಕಟಾಪೂರ ಶರಣರು ಶ್ರೀ ತೋಂಟದಾರ್ಯ ಮಠದಲ್ಲಿ ಪ್ರಾತಃಕಾಲ ಶಿವಾನುಭವ ನಡೆದು ಬಂದ ದಾರಿ ಹಾಗೂ ಲಿಂಗೈಕ್ಯ ಶರಣೆ ರತ್ನಕ್ಕ ಪಾಟೀಲ ಅವರ ಕುರಿತು ನುಡಿನಮನ ಸಲ್ಲಿಸುತ್ತಾ, ತಾವು ಪೂಜ್ಯ ಲಿಂಗೈಕ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಕೃಪೆಯಿಂದ ನನ್ನ ಬದುಕು ಶರಣ ಮಾರ್ಗಕ್ಕೆ ಪರಿವರ್ತನೆಯಾಯಿತು. ಇದರಿಂದ ನನ್ನಲ್ಲಿರುವ ಅನೇಕ ದುಶ್ಚಟ-ಅಜ್ಞಾನ ದೂರವಾಯಿತು. ನಾನು ಕೂಡಾ ಪ್ರಾತಃಕಾಲ ಶಿವಾನುಭವದಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಬಸವಾದಿ ಶಿವಶರಣರ ವಚನ ಸಾಹಿತ್ಯ ಅಧ್ಯಯನ, ಆಚರಣೆ ಮಾಡುತ್ತಾ ಬಸವತತ್ವಕ್ಕೆ ಬಂದೆನು. ಅಂದಿನ ಬೆಳಗಿನ ಶಿವಾನುಭವದ ಹಿರಿಯರು ಚಿಂತನೆ-ಮಂಥನ ಚರ್ಚಿಸುತ್ತಿರುವುದರಲ್ಲಿ ನಾನು ಪಾಲ್ಗೊಂಡಿದ್ದು ನನ್ನ ಸುದೈವವೆಂದು ತಿಳಿಸುತ್ತಾ ಆಗಿನ ಎಲ್ಲ ಹಿರಿಯರನ್ನು ಸ್ಮರಿಸಿದರು.

ಅದೇ ರೀತಿ ಲಿಂಗೈಕ್ಯ ಶರಣೆ ರತ್ನಕ್ಕ ಪಾಟೀಲ ಕುರಿತು ತಾವು ಕಂಡುಂಡ ಅನುಭವವನ್ನು ಹಂಚಿಕೊಂಡು ತಾವು ಬರೆದ ಕವನವನ್ನು ವಾಚಿಸಿ ರತ್ನಕ್ಕ ಪಾಟೀಲರಿಗೆ ನುಡಿ-ನಮನ ಸಲ್ಲಿಸಿದರು. ಈಗಿನ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನನ್ನ ಮೇಲೆ ಬಹಳ ಅಂತಃಕರಣವುಳ್ಳವರಾಗಿದ್ದಾರೆಂದು ಪ್ರಾಸ್ತಾವಿಕವಾಗಿ ವೆಂಕಟಾಪೂರ ಶರಣರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧ ಎಸ್. ಎಸ್. ಪಟ್ಟಣಶೆಟ್ಟರ, ಡಾ. ಉಮೇಶ ಪುರದ, ವಿವೇಕಾನಂದ ಪಾಟೀಲ, ಕೆ. ಎಸ್. ಚೆಟ್ಟಿ ಅವರೆಲ್ಲರೂ ಪ್ರಾತಃಕಾಲ ಶಿವಾನುಭವ, ಶ್ರೀಮಠದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಪ್ರಕಾಶ ಅಸುಂಡಿಯವರು ಪ್ರಾತಃಕಾಲ ಶಿವಾನುಭವ ಮತ್ತು ಬಸವದಳದ ಶರಣ ಸಂಗಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಪ್ರಾರಂಭದಲ್ಲಿ ಪ್ರಾತಃಕಾಲ ಶಿವಾನುಭವ ಬಳಗದ ಶರಣೆಯರಾದ ಸುಜಾತಾ ವಾರದ, ರೇಣುಕಾ ಕರೇಗೌಡ್ರ, ಸುವರ್ಣಾ ಗಾಳೆಪ್ಪನವರ, ಹಳ್ಳಿಕೇರಿ ಅವರಿಂದ ಪ್ರಾರ್ಥನೆ ಜರುಗಿತು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರನ್ನು  ವಿ. ಕೆ. ಕರೇಗೌಡ್ರ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಮಂಜುಳಾ ಹಾಸಿಲಕರ ಮಾಡಿದರೇ, ಶರಣು ಸಮರ್ಪಣೆಯನ್ನು ಶರಣ ಕಿರಣ ತಿಪ್ಪಣ್ಣವರ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ತೋಟದ ಕುಟುಂಬ ವರ್ಗದವರು ಪೂಜ್ಯರಿಗೆ ಹಾಗೂ ವೆಂಕಟಾಪೂರ ಶರಣರಿಗೆ ಗೌರವ ಸಲ್ಲಿಸಿದರು. ಪ್ರಸಾದ ಸೇವೆಯನ್ನು ಶರಣ ಬಸವರಾಜ ಹಿರೇಹಡಗಲಿ ವಹಿಸಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *