ಕಲಬುರಗಿ
ಸಚಿವ ಎಂ.ಬಿ. ಪಾಟೀಲ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕಗೊಳಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ ಲಿಂಗಾಯತ ಧರ್ಮಿಯರು ಬಹುಸಂಖ್ಯಾತರಿದ್ದಾರೆ. ಲಿಂಗಾಯತ ಧರ್ಮಿಯರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅಪಾರವಾಗಿದ್ದು, ಲಿಂಗಾಯತ ಮಠಗಳು, ಲಿಂಗಾಯತ ಧರ್ಮಿಯರ ಜೊತೆಗೆ ಅನ್ಯಧರ್ಮಿಯರನ್ನು ಕೂಡ ಬೇದ-ಭಾವ ಮಾಡದೇ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹ ಸೇವೆ ಮಾಡಿರುವುದು ಲಿಂಗಾಯತ ಧರ್ಮಿಯರಿಗೆ ಕೀರ್ತಿ ಸಲ್ಲುತ್ತದೆ. ಹೀಗಾಗಿ ಪಾಟೀಲರನ್ನು ಸಿಎಂ ಮಾಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಡುಗೆ ನೀಡಿದವರು ಲಿಂಗಾಯತ ಧರ್ಮಿಯರಾದ ಬಿ.ಡಿ. ಜತ್ತಿ, ಎಸ್. ನಿಜಲಿಂಗಪ್ಪ, ವಿರೇಂದ್ರ ಪಾಟೀಲ ಅವರು. ಆದರೆ ಕಾಂಗ್ರೆಸ್ ಪಕ್ಷ ಲಿಂಗಾಯತರಿಗೆ ಮಲತಾಯಿ ಧೋರಣೆ ತಾಳುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ವಿರೇಂದ್ರ ಪಾಟೀಲ ಮುಖ್ಯಮಂತ್ರಿ ಆಗಿರುವಾಗ ಅನಾರೋಗ್ಯದ ಕಾರಣವೊಡ್ಡಿ, ಪೂರ್ತಿ ಅವಧಿ ಪೂರೈಸಲು ಅವಕಾಶ ಕೊಡದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಲಾಯಿತು ಎಂದು ಮೆಲುಕು ಹಾಕಿದರು.
ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚಿಸುವಲ್ಲಿ ಲಿಂಗಾಯತರ ಮತಗಳು ಬೇಕು, ಆದರೆ ಅಧಿಕಾರದಿಂದ ದೂರವಿಡುವುದು ಕಾಂಗ್ರೆಸ್ ಪಕ್ಷದ ನೀತಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಿಂದ ಶಾಸಕರಾಗಿ ಆಯ್ಕೆಯಾದ 9 ಲಿಂಗಾಯತರಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಹೀಗೆ ಲಿಂಗಾಯತ ಸಮುದಾಯವರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ದೂರಿದರು.
ಪ್ರಸಕ್ತ ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಹೈಕಮಾಂಡ್ ಅಣತಿಯಂತೆ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕದಲ್ಲಿ ವಿರೇಂದ್ರ ಪಾಟೀಲ ಮುಖ್ಯಮಂತ್ರಿಯಾದ ಬಳಿಕ ಈವರೆಗೆ ಲಿಂಗಾಯತರಿಗೆ ಮುಖ್ಯಮಂತ್ರಿಪಟ್ಟ ನೀಡಿರುವುದಿಲ್ಲ. ಈಗ ಕಾಲ ಒದಗಿ ಬಂದಿದೆ. ಸಚಿವರು, ಪ್ರಗತಿಪರ ಚಿಂತಕರು, ಅಭಿವೃದ್ಧಿಯ ಹರಿಕಾರರಾದ ಎಂ.ಬಿ. ಪಾಟೀಲರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಶೋಕ ಘೂಳಿ, ಹಣಮಂತರಾವ ಪಾಟೀಲ ಕುಸನೂರ, ಶಾಂತಪ್ಪ ಪಾಟೀಲ ಸಣ್ಣೂರ, ಶಿವಶರಣಪ್ಪ ದೇಗಾಂವ, ಎಸ್.ಕೆ. ಬಿರಾದಾರ ಪತ್ರಿಕಾಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್ ಹೈಕಮಾಂಡ್ ಲಿಂಗಾಯತರಿಗೆ ಅನ್ಯಾಯ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತು ವೀರೇಂದ್ರ ಪಾಟೀಲ್ ನಂತರ ರಾಜಶೇಖರ್ ಮೂತಿ೯ ರವರಿಗೂ ಆಯಿತು, ಹಾಗೂ ಬಿಜೆಪಿ ಕೂಡ ಯಡಿಯೂರಪ್ಪ ನವರಿಗೂ ಅನ್ಯಾಯ ಮಾಡಿದೆ ಅವಧಿ ಪೂಣ೯ ಗೊಳಿಸುವುದಕ್ಕೆ ಬಿಡಲಿಲ್ಲ ಆದ್ದರಿಂದ ಲಿಂಗಾಯತ ಧರ್ಮ ದವರು ಈ ಎರಡೂ ಪಕ್ಷವನ್ನು ತಿರಸ್ಕರಿಸಿ ಬೇಕು ಹೊಸ ಪಕ್ಷದ ಕಡೆ ಮುಖಮಾಡುವುದು ಓಳ್ಳೇಯದು .
1. ಲಿಂಗಾಯತರಲ್ಲಿ ಮಾಸ್ ಲೀಡರ್ ಇಲ್ಲಾ.
2. ಲಿಂಗಾಯತ ಒಳಪಂಗಡಗಳನ್ನು ಪ್ರತಿ ಜಿಲ್ಲೆಯಲ್ಲಿ ಲಿಂಗಾಯತ ಸಚಿವರಾರಾದರೂ ಸಂಘಟಿಸಲಿ. ಆಗ ನಿಶ್ಚಿತವಾಗಿ ಅವರು ಮಾಸ್ ಲೀಡರ್ ಆಗುತ್ತಾರೆ.
3. 1998 ರಲ್ಲಿ ತಮ್ಮ ದೂರದೃಷ್ಟಿಯಿಂದ “ಅಹಿಂದ” ಸಂಘಟನೆ ಮಾಡಿ ಮಾಸ್ ಲೀಡರ್ ಆದವರು ಮಾನ್ಯ ಸಿದ್ಧರಾಮಯ್ಯನವರು.
4. ಮುಂದೆ 2006 ರಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಎರಡು ಬಾರಿ ಮುಖ್ಯ ಮಂತ್ರಿಯಾಗಿ ರಾಜಕಾರಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು.
ರಾಜಕೀಯ ಸ್ಥಿತ್ಯಂತರದಿಂದ ಹೊಸಬರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರ ಆಗಿರುವ ಸಂದರ್ಭದಲ್ಲಿ ; ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡುವುದು ಎಷ್ಟು ಸೂಕ್ತ.
ತಮ್ಮ ಕಳಕಳಿಗೆ ಶರಣು ಶರಣಾರ್ಥಿಗಳು