ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವ
ಹೊಳಲ್ಕೆರೆ:
ಒಂಟಿಕಂಬದ ಶ್ರೀ ಮುರುಘಾಮಠದ ಆವರಣದಲ್ಲಿ ಶ್ರೀ ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳ ೩೨ ನೆಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಮಾತನಾಡಿ, ವಿದ್ಯಾಸಂಸ್ಥೆ ಪ್ರಾರಂಭವಾಗಿ ೬೦ ವರ್ಷಗಳಾಗಿವೆ. ಅಂದು ಸ್ಥಾಪಿಸಿದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಶ್ರೀಮಠದಲ್ಲಿ ವಿದ್ಯಾಭ್ಯಾಸ ಪಡೆದು ಬೆಳೆದವರು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ವಿವಿಧ ಮಠಗಳ ಮಠಾಧೀಶರುಗಳಾಗಿದ್ದಾರೆ. ಸರ್ಕಾರ ಮಾಡುವಷ್ಟು ಕೆಲಸವನ್ನು ಶ್ರೀಮಠ ಹಾಗೂ ವಿದ್ಯಾಸಂಸ್ಥೆಯ ಮುಖಾಂತರ ಮಾಡಿದ್ದು ಮಲ್ಲಿಕಾರ್ಜುನ ಶ್ರೀಗಳು.
ಇಂದಿನ ಸ್ಮರಣೋತ್ಸವ ಕೇವಲ ಸ್ಮರಣೋತ್ಸವವಾಗದೆ ಅವರ ಗುಣೋತ್ಸವವಾಗಬೇಕಿದೆ. ಶ್ರೀಗಳ ವಿಶ್ರಾಂತಿ ಸ್ಥಳ ಉತ್ತಮ ವಾತಾವರಣವನ್ನು ಸೃಷ್ಟಿಸಿದೆ. ಆಗಸ್ಟ್ ೮ ಸ್ಮರಣೀಯ ದಿನ. ೧೯೪೨ರಲ್ಲಿ ಮಹಾತ್ಮ ಗಾಂಧೀಜಿ ಆಂಗ್ಲರನ್ನು ದೇಶಬಿಟ್ಟು ತೊಲಗಿ ಎಂದು ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ್ದು ಇದೇ ದಿನ. ಇದು ಅವಿಸ್ಮರಣೀಯ ದಿನ ಎಂದು ತಿಳಿಸಿದರು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಶ್ವಾಸವಿರುವ ತನಕ ವಿಶ್ವಾಸ ಬಿಡಬೇಡ ಎಂಬುದನ್ನು ಅಳವಡಿಸಿಕೊಂಡು ಬದುಕಿದವರು ಮಲ್ಲಿಕಾರ್ಜುನ ಸ್ವಾಮಿಗಳು. ಅವರು ಮಾತನಾಡುವಾಗ ಅವರ ಪ್ರತಿ ಮಾತು ಭಾಷಣದ ರೀತಿ ಇರುತ್ತಿತ್ತು. ಶ್ರೀಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರೆ ಸಭೆ ಗಾಂಭೀರ್ಯದಿಂದ ಕೂಡಿರುತ್ತಿತ್ತು. ಜಯದೇವ ಶ್ರೀ ಅನ್ನದಾಸೋಹ ಹಾಗೂ ವಸತಿಗೆ ಪ್ರಾಮುಖ್ಯತೆ ನೀಡಿದ್ದರು. ಮಲ್ಲಿಕಾರ್ಜುನ ಶ್ರೀಗಳು ವಿದ್ಯಾಸಂಸ್ಥೆ ಸ್ಥಾಪಿಸಿ ಜ್ಞಾನ ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದರು ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿಗಳು ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಬಾಲ್ಯದಲ್ಲಿ ಅಥಣಿ ಶಿವಯೋಗಿಗಳ ಆಶೀರ್ವಾದ ಪಡೆದವರು. ಅಂದು ಶಿವಯೋಗಿಗಳ ಹೇಳಿಕೆಯಂತೆ ಮಲ್ಲಿಕಾರ್ಜುನ ಶ್ರೀಗಳು ಸಮಾಜಕ್ಕೆ ದೊರಕಿದರು. ಜಯದೇವ ಗುರುಗಳು ಮಲ್ಲಿಕಾರ್ಜುನ ಶ್ರೀಗಳನ್ನು ಗುರುತಿಸಿ ಕಾಶಿಗೆ ಕಳುಹಿಸಿ ವಿದ್ಯಾಭ್ಯಾಸ ಮಾಡಿಸಿದರು. ಶ್ರೀಗಳು ನಾಲ್ಕು ಐದು ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು.

ಪೀಠಾಧಿಕಾರದ ನಂತರ ಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶ್ರೀಗಳ ಆಶೀರ್ವಾದ ಪಡೆದವರು ಸಮಾಜದಲ್ಲಿ ಉತ್ತಮ ಹುದ್ದೆ ಉತ್ತಮ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ. ಶ್ರೀಗಳದ್ದು ಕಂಚಿನ ಕಂಠ, ಅವರ ಮಾತುಗಳು ಮಾತೆಂಬುದು ಜ್ಯೋತಿರ್ಲಿಂಗವಾಗಿತ್ತು ಎಂದು ನುಡಿದರು.
ಶ್ರೀ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಇಡೀ ಜಗತ್ತಿನಲ್ಲಿ ರಾಮಕೃಷ್ಣ ಮಿಷನ್ ಶಾಖೆಗಳಿವೆ. ಜಗತ್ತಿನ ಪ್ರತಿ ಮೂಲೆಯಲ್ಲೂ ಇವೆ. ರಾಮಕೃಷ್ಣ ಪರಮಹಂಸರು ತಮ್ಮ ಕೊಲ್ಕತ್ತಾದ ಆಶ್ರಮ ಬಿಟ್ಟರೆ ಎಲ್ಲೂ ಹೋಗಿಲ್ಲ. ಆದರೆ ಅವರ ಹೆಸರು ಜಗತ್ತಿನ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ್ದು ವಿವೇಕಾನಂದರಂತಹ ಉತ್ತಮ ಶಿಷ್ಯರಿಂದ ಮಾತ್ರ ಸಾಧ್ಯವಾಯಿತು.
ಒಬ್ಬ ಗುರುವಿನ ವಿಚಾರಧಾರೆಗಳು ಜಗತ್ತಿಗೆ ಹರಡುವುದು ಉತ್ತಮ ಶಿಷ್ಯರಿಂದ ಮಾತ್ರ. ಅದರಂತೆ ಮಲ್ಲಿಕಾರ್ಜುನ ಶ್ರೀಗಳು ಶಿಕ್ಷಣ ಸಂಸ್ಥೆಯ ಮುಖಾಂತರ ಹೆಸರು ಮಾಡಿದರು. ಶ್ರೀಗಳ ಮುಂದಾಲೋಚನೆ ಮಾಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮಧ್ಯ ಕರ್ನಾಟಕದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದ್ದಾರೆ ಎಂದು ನುಡಿದರು.
ರಾವಂದೂರಿನ ಶ್ರೀ ಮೋಕ್ಷಪತಿ ಮಹಾಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಪೀಠಕ್ಕೆ ಬರುವಾಗ ಅದು ಸಂಕಷ್ಟದ ಸಮಯವಾಗಿತ್ತು ವಿದ್ಯಾಪೀಠದ ಸ್ಥಾಪನೆಯ ಮುಖಾಂತರ ಜ್ಞಾನ ಜ್ಯೋತಿಯನ್ನು ನೀಡಿದವರು ಶ್ರೀಗಳು. ಅವರು ಕಾಯಕ ಮಾಡುವವರನ್ನು ಗುರುತಿಸುತ್ತಿದ್ದರು. ಶ್ರೀಗಳು ತ್ರಿಕಾಲ ಪೂಜೆಗೆ ಒತ್ತು ನೀಡಿದ್ದರು. ತಮ್ಮ ಕಷ್ಟಗಳು ಬೇರೆಯವರಿಗೆ ಬರಬಾರದೆಂದು ಅವಿರತವಾಗಿ ಶ್ರಮಿಸುತ್ತಿದ್ದರು.
ಶ್ರೀಗಳಿಗೆ ಕತೃ ಮುರುಘೇಶ್ವರ ಮೇಲೆ ಅಪಾರಭಕ್ತಿ. ಶ್ರೀಗಳು ಹೊರಡುವ ಮುನ್ನ ಕತೃಮುರುಘೇಶನಿಗೆ ನಮಿಸದೆ ಹೊರಡುತ್ತಿರಲಿಲ್ಲ. ಮುತ್ತು ಕಳೆದರೆ ಸಿಕ್ಕಿತು ಹೊತ್ತು ಕಳೆದರೆ ಸಿಕ್ಕಿತೆ ಎಂಬುದನ್ನು ಮನಗಂಡಿದ್ದ ಶ್ರೀಗಳು ಸಮಯಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡುತ್ತಿದ್ದರು ಎಂದು ತಿಳಿಸಿದರು.
ಮಾಜಿ ಶಾಸಕ ಪಿ. ರಮೇಶ ಮಾತನಾಡಿ, ೧೨ನೇ ಶತಮಾನದ ಪ್ರಮಥರ ವಚನಗಳನ್ನು ಮಲ್ಲಿಕಾರ್ಜುನ ಶ್ರೀಗಳು ಪಸರಿಸಿದರು. ಶ್ರೀಗಳು ವಿವಿಧ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ, ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಿಗೆ ತಮ್ಮದೇ ಸೇವೆ ಸಲ್ಲಿಸಿದವರಾಗಿದ್ದಾರೆ. ಶ್ರೀಗಳು ತಮ್ಮ ಅಂತಿಮ ಸಂಸ್ಕಾರ ಹೊಳಲ್ಕೆರೆಯಲ್ಲಿ ಆಗಬೇಕೆಂಬುದು ಅವರ ಇಚ್ಛೆಯಾಗಿತ್ತು.
ಶ್ರೀಗಳ ವಾಕ್ಷಾತುರ್ಯ ಅಪ್ರತಿಮವಾಗಿತ್ತು. ಶ್ರೀಗಳು ವಿದ್ಯುತ್ತಿನ ಜ್ಞಾನ ಭಂಡಾರವನ್ನು ತಮ್ಮೊಳಗೆ ಇರಿಸಿಕೊಂಡವರು. ೧೨ನೇ ಶತಮಾನದ ಬಸವಾದಿ ಶರಣರ ಆಚರಣೆಯನ್ನು ೧೯ನೇ ಶತಮಾನದಲ್ಲಿ ಪ್ರಸ್ತುತಪಡಿಸಿ ವಚನಗಳ ಪ್ರಚಾರ ಮಾಡಿದರು. ಶರಣರು ತತ್ವಗಳನ್ನು ಸಾರ್ವಜನಿಕರು ಅನುಸರಿಸುವಂತೆ ಮಾಡಿದವರು ಶ್ರೀಗಳು ಎಂದು ತಿಳಿಸಿದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ.ಬಿ. ಗುಡಸಿ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ವಿದ್ಯಾಪೀಠ ಸ್ಥಾಪಿಸಿ ಹಲವರಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಅನ್ನದಾಸೋಹ ಧಾರ್ಮಿಕ ವಿಚಾರಧಾರೆಗಳ ಜೊತೆ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿ ಮಧ್ಯ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಜ್ಞಾನದಾಸೋಹಕ್ಕೆ ನಾಂದಿ ಹಾಡಿದರು. ಶ್ರೀಗಳು ಸ್ಥಾಪಿಸಿದ ವಿದ್ಯಾಪೀಠ ಇಂದು ವಿಶ್ವವಿದ್ಯಾಲಯ ಮಟ್ಟದಲ್ಲಿ ಬೆಳೆಯುತ್ತಿದೆ. ವಿಶ್ವವಿದ್ಯಾಲಯವು ಪೇಪರ್ ರಹಿತ ಆಡಳಿತಕ್ಕೆ ಒತ್ತು ನೀಡುತ್ತಿದೆ. ಆಧುನಿಕ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಿ ಉತ್ಪೃಷ್ಣ ಶಿಕ್ಷಣ ನೀಡಲು ವಿಶ್ವವಿದ್ಯಾನಿಲಯ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು ಮಾತನಾಡಿ ಇವನಾರವ, ಇವನಾರವ ಇವನಾರವಂದೆನಿಸಿದರಯ್ಯಾ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬ ಬಸವಣ್ಣನವರ ವಚನಗಳನ್ನು ಸಮಾಜದ ಜನರು ಅಳವಡಿಸಿಕೊಂಡಿದ್ದರೆ ಸಮಾಜವು ಇನ್ನೂ ಹೆಚ್ಚು ಸಾಮರಸ್ಯದಿಂದ ಕೂಡಿರುತ್ತಿತ್ತು. ಶ್ರೀ ಮಠವು ಎಲ್ಲಾ ಸಮಾಜದವರಿಗೆ ಮಠ ಕಟ್ಟಿಕೊಟ್ಟು, ಎಲ್ಲಾ ಸಮುದಾಯದ ಏಳಿಗೆಗೆ ಕಾರಣವಾಗಿದೆ.
ಕರ್ನಾಟಕದಲ್ಲಿನ ಮಠಮಾನ್ಯಗಳು ಭೇದಭಾವ ಮಾಡದೆ ಎಲ್ಲರಿಗೂ ಶಿಕ್ಷಣ ನೀಡುತ್ತಾ ಬರುತ್ತಿವೆ. ಇದರಿಂದ ಸುಶಿಕ್ಷಕರ ಸಂಖ್ಯೆ ಹೆಚ್ಚಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ನಾಡಿನ ಮಠಮಾನ್ಯಗಳು ಎಂದು ತಿಳಿಸಿದರು.
ಕಾರ್ಯಕ್ರಮದ ಮುನ್ನ ಧ್ವಜಾರೋಹಣವನ್ನು ಹೊಳಲ್ಕೆರೆ ಶಾಸಕರಾದ ಚಂದ್ರಪ್ಪ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗುರುಮಿಠಕಲ್ ಶ್ರೀ ಶಾಂತವೀರ ಸ್ವಾಮಿಗಳು, ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಸೇವಾಲಾಲ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶರಣೆ ಶ್ರೀ ಸತ್ಯಕ್ಕ, ಅಕ್ಕ ಜಯಶ್ರೀ, ಮಾಜಿ ಶಾಸಕ ತಿಪ್ಪೇರುದ್ರಪ್ಪ, ಪಟೇಲ ಶಿವಕುಮಾರ, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರ ಜನ್ಮಶತಮಾನೋತ್ಸವ ಅಂಗವಾಗಿ ಸತ್ಯಶುದ್ಧ ಕಾಯಕ ತ್ರೈಮಾಸಿಕ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಮೇಶ ಪತ್ತಾರ ಪ್ರಾರ್ಥಿಸಿ ಮುರುಗೇಶ ಸ್ವಾಗತಿಸಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿರೂಪಿಸಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
