ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 21
ಕಲಬುರಗಿ:
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ.
ಶರಣರಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ. ಅಸಂಖ್ಯಾತ ಶರಣಗಣ ತಿಂಥಣಿಯಿಂದ ಕಂಗೊಳಿಸುತ್ತಿದ್ದ ಕಲ್ಯಾಣಪುರ ಪ್ರವೇಶಿಸಿದ ಬಳಿಕ ಬಸವಣ್ಣನವರು ನಿರ್ಮಿಸಿದ್ದ ಮಹಾಮನೆಯ ಅಂಗಳಕ್ಕೆ ಅಲ್ಲಮ-ಸಿದ್ಧರಾಮರು ಬಂದು ನಿಂತರು.
ಬಸವಣ್ಣನವರ ಬಗ್ಗೆ ಅಲ್ಲಮರು “ಅಂಗದಲಿ ಆಚಾರ, ಆಚಾರದಲ್ಲಿ ಪ್ರಾಣ, ಪ್ರಾಣದಲ್ಲಿ ಲಿಂಗ, ಲಿಂಗದಲ್ಲಿ ಜಂಗಮ, ಜಂಗಮದಲ್ಲಿ ಪ್ರಸಾದ ಸ್ವಾಯತ ಮಾಡಿಕೊಂಡ ಬಸವಣ್ಣನ ಮಹಾಮನೆಯ ಈ ಅಂಗಳದಲ್ಲಿ ಅಷ್ಟ, ಷಷ್ಟಿ ತೀರ್ಥಂಗಳು ನೆಲೆಸಿವೆ. ಇದ ಕಂಡು ಗುಹೇಶ್ವರ ಲಿಂಗಕ್ಕೂ ತೃಪ್ತಿಯಾಗಿದೆ ಎಂದು ಸಿದ್ಧರಾಮನಿಗೆ ಹೇಳುತ್ತ ನಿಂತಿರುತ್ತಾರೆ.
ಇದನ್ನು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ನೋಡಿ ಒಳಗೆ ದಯಪಾಲಿಸಿ ಎಂದು ಆಹ್ವಾನ ನೀಡುತ್ತಾನೆ. ಬಸವಣ್ಣನ ನಿಜನಿಷ್ಠೆ ಕಂಡು ಇಲ್ಲಿಗೆ ಬಂದರೆ ಬಸವಣ್ಣನ್ನೆಲ್ಲಿ? ನಾವು ಅಡಿ ಇಡೆವು ಎಂದು ಅಲ್ಲಮ ಅಪ್ಪಣ್ಣನಿಗೆ ಪ್ರಶ್ನಿಸುತ್ತಾರೆ.
ಭಕ್ತಿಯ ಪರೀಕ್ಷಕನಾಗಿ ಬಂದ ನಿರಂಜನ ವಿಭು ಅಲ್ಲಮ ಬಂದಿರುವ ಸಂಗತಿಯನ್ನು ಬಸವಣ್ಣನವರ ಹತ್ತಿರಕ್ಕೆ ಹೋಗಿ ತಿಳಿದರು. ಆದರೆ ಸಂಪೂರ್ಣವಾಗಿ ಲಿಂಗಧ್ಯಾನದಲ್ಲಿ ಕುಳಿತಿದ್ದ ಬಸವಣ್ಣನವರಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ. ಅಪ್ಪಣ್ಣ ಈ ವಿಷಯವನ್ನು ಚನ್ನಬಸವಣ್ಣನವರಿಗೆ ತಿಳಿಸಿದಾಗ, ಬಸವಣ್ಣನವರು ಬಹಿರ್ಮುಖಿಗಳಾದರು. ‘ಶಿವ ಶಿವ ತ್ರಾಯಿ ತ್ರಾಯಿ’ ಎಂದು ಓಡೋಡಿ ಬಂದು ಅಲ್ಲಮರಿಗೆ ಸಾಷ್ಟಾಂಗ ನಮಸ್ಕರಿಸುತ್ತಾರೆ. ಇಬ್ಬರ ಆಲಿಂಗನ ಪರಸ್ಪರ ಭಕ್ತಿಯ ಸಮ್ಮಿಲನವಾಗುತ್ತದೆ.
ಒಳಪ್ರವೇಶ ಮಾಡುವಲ್ಲಿ ಸಿದ್ಧರಾಮನಿಗೆ ಕೊರಳ ಲಿಂಗ ತೋರಿಸು ಎಂದು ಗಟ್ಟಿವಾಳಯ್ಯ, ಮಡಿವಾಳ ಮಾಚಿದೇವ ಪ್ರಶ್ನಿಸುತ್ತಾರೆ. ಅದನ್ನು ಪಡೆಯುವುದಕ್ಕಾಗಿಯೇ ಅಲ್ಲಮರು ಇಲ್ಲಿಗೆ ಕರೆ ತಂದಿದ್ದಾರೆಂದು ಹೇಳಿದಾಗ ಅಲ್ಲಮರ ಇಚ್ಛೆಯಂತೆ ಬಸವಣ್ಣನವರ ಒಪ್ಪಿಗೆ ಪಡೆದು ಚನ್ನಬಸವಣ್ಣ ಸಿದ್ಧರಾಮನಿಗೆ ಲಿಂಗಧಾರಣೆ ಮಾಡುತ್ತ ಇಷ್ಟಲಿಂಗ, ಪ್ರಾಣಲಿಂಗ ಜ್ಞಾನಲಿಂಗದ ಬಗ್ಗೆ ತಿಳಿಸಿ ಹೇಳುತ್ತಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
