ವಚನ ಅನುಸಂಧಾನ ನಮ್ಮ ಬದುಕಿನ ಭಾಗವಾಗಬೇಕು: ಸಿದ್ಧರಾಮ ಸ್ವಾಮೀಜಿ

ಬಸವರಾಜಪ್ಪ ಶರಣರ ‘ಶೂನ್ಯಲಿಂಗ ವಿವೇಚನೆ’ ವ್ಯಾಖ್ಯಾನ ಗ್ರಂಥದ ಲೋಕಾರ್ಪಣೆ

ಬೆಳಗಾವಿ:

ವಚನಗಳು ಕೇವಲ ಧಾರ್ಮಿಕ ಹಾಗೂ ತಾತ್ತ್ವಿಕ ಸಾಹಿತ್ಯ ಸಂಪತ್ತಲ್ಲ; ಅವು ವ್ಯಕ್ತಿಯ ಅಂತರಂಗವನ್ನು ಪರಿವರ್ತಿಸಿ, ಬದುಕಿನ ಮೌಲ್ಯಗಳನ್ನು ರೂಪಿಸುವ ಜೀವನ ದರ್ಶನಗಳಾಗಿವೆ.

ವಚನಗಳ ಅನುಸಂಧಾನ, ಅಧ್ಯಯನ ಮತ್ತು ಮನನದಿಂದ ವ್ಯಕ್ತಿತ್ವದಲ್ಲಿ ಘನತೆ ಮೂಡುವುದರ ಜೊತೆಗೆ ಸಮಾಜದಲ್ಲಿ ಸಮತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳು ಗಟ್ಟಿಯಾಗುತ್ತವೆ ಎಂದು ಗದಗ ಶ್ರೀ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ರವಿವಾರ ನಡೆದ ಡಾ. ಫ.ಗು. ಹಳಕಟ್ಟಿಯವರು ಸಂಕಲಿಸಿದ ‘ವಚನಶಾಸ್ತ್ರಸಾರ’ ಗ್ರಂಥ ರಚನೆಯ ಶತಮಾನೋತ್ಸವದ ಅಂಗವಾಗಿ ವೆಕಟಾಪುರ ಬಸವರಾಜಪ್ಪ ಶರಣರು ರಚಿಸಿದ ‘ಶೂನ್ಯಲಿಂಗ ವಿವೇಚನೆ’ ವ್ಯಾಖ್ಯಾನ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಬಸವಾದಿ ಶಿವಶರಣರು ತಮ್ಮ ಅನುಭವದ ನೆಲೆಯಲ್ಲಿ ರಚಿಸಿದ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ನಿಧಿಯಾಗಿವೆ. ಸರಳವಾದ ಪದಗಳಲ್ಲಿ ಆಳವಾದ ತಾತ್ತ್ವಿಕ ವಿಚಾರಗಳನ್ನು ಕಟ್ಟಿಕೊಟ್ಟಿರುವ ವಚನಗಳು ಓದುಗರನ್ನು ಆತ್ಮಾವಲೋಕನದತ್ತ ಕರೆದೊಯ್ಯುತ್ತವೆ. ವಚನಗಳನ್ನು ಓದುವುದು ಸರಳವೆನಿಸಿದರೂ ಅವುಗಳ ಒಳಾರ್ಥವನ್ನು ಸಂಪೂರ್ಣವಾಗಿ ಗ್ರಹಿಸುವುದು ಅಷ್ಟು ಸುಲಭವಲ್ಲ. ವಚನಗಳಲ್ಲಿರುವ ಸಂಕೇತ, ರೂಪಕ, ತಾತ್ತ್ವಿಕ ನಿಲುವು ಮತ್ತು ಅನುಭಾವದ ಆಳವನ್ನು ಅರಿಯಲು ನಿರಂತರ ಅಧ್ಯಯನ ಹಾಗೂ ಅನುಸಂಧಾನದ ಅಗತ್ಯವಿದೆ ಎಂದು ಅವರು ಹೇಳಿದರು.

“ವಚನಾನುಸಂಧಾನ ನಮ್ಮ ಬದುಕಿನ ಭಾಗವಾಗಬೇಕು” ಎಂಬ ಆಶಯವನ್ನು ಪ್ರತಿಪಾದಿಸಿದ ಅವರು, ಡಾ. ಫ.ಗು. ಹಳಕಟ್ಟಿಯವರ ವಚನಸಾಹಿತ್ಯದ ಸೇವೆಯನ್ನು ಸ್ಮರಿಸಿದರು. ಹಳಕಟ್ಟಿಯವರು ತಮ್ಮ ಜೀವನವನ್ನೇ ವಚನಗಳ ಸಂರಕ್ಷಣೆ, ಸಂಗ್ರಹ, ಸಂಶೋಧನೆ ಮತ್ತು ಸಂಪಾದನೆಗೆ ಮುಡಿಪಾಗಿಟ್ಟ ಪರಿಣಾಮವಾಗಿ ಇಂದು ಅಪಾರ ಪ್ರಮಾಣದ ವಚನಸಾಹಿತ್ಯ ನಮ್ಮ ಕೈಗೆಟುಕಿದೆ. ಹಳೆಯ ಹಸ್ತಪ್ರತಿಗಳು, ಚದುರಿಹೋಗಿದ್ದ ವಚನಗಳು ಮತ್ತು ಅಲಭ್ಯವಾಗಿದ್ದ ಸಾಹಿತ್ಯವನ್ನು ಹುಡುಕಿ ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸುವ ಮೂಲಕ ಹಳಕಟ್ಟಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದರು.

ವಚನಗಳ ಅಧ್ಯಯನ ಕೇವಲ ಪಂಡಿತರ ವಲಯಕ್ಕೆ ಸೀಮಿತವಾಗಬಾರದು. ಸಾಮಾನ್ಯ ಓದುಗರಿಗೂ ವಚನಗಳ ಅಂತರಂಗ ಅರ್ಥವಾಗುವಂತೆ ಅವುಗಳ ಕುರಿತು ಸರಳವಾದ ವ್ಯಾಖ್ಯಾನ, ಟೀಕೆ, ಭಾಷ್ಯ ಮತ್ತು ಸಹಚಿಂತನೆಯ ಕೃತಿಗಳು ಹೆಚ್ಚು ಹೆಚ್ಚು ಪ್ರಕಟವಾಗಬೇಕು. ಆಗ ವಚನಗಳಲ್ಲಿರುವ ಜೀವನಮೌಲ್ಯಗಳು ಸಮಾಜದ ಎಲ್ಲ ವರ್ಗಗಳಿಗೂ ತಲುಪಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಬಸವರಾಜ ವೆಂಕಟಾಪುರ ಶರಣರು ರಚಿಸಿರುವ ‘ಶೂನ್ಯಲಿಂಗ ವಿವೇಚನೆ’ ಕೃತಿ ಮಹತ್ವ ಪಡೆದಿದೆ ಎಂದು ಶ್ರೀಗಳು ಹೇಳಿದರು.

‘ಶೂನ್ಯಲಿಂಗ ವಿವೇಚನೆ’ ಕೃತಿಯ ಲೋಕಾಪರ್ಣೆ ನೆರವೇರಿಸಿ ಮಾತನಾಡಿದ ಡಾ. ಪ್ರದೀಪಕುಮಾರ ಹೆಬ್ರಿ ಅವರು, ಅನುಭವ ಮೂಲದ ವಚನಗಳಲ್ಲಿರುವ ಗಹನವಾದ ತಾತ್ತ್ವಿಕ ವಿಚಾರಗಳನ್ನು ಆಧುನಿಕ ಪರಿಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ, ಸುಲಭ ಮತ್ತು ಸುಸ್ಪಷ್ಟ ಶೈಲಿಯಲ್ಲಿ ನಿರೂಪಿಸಿರುವುದು ಈ ಕೃತಿಯ ವಿಶೇಷತೆ ಎಂದು ಹೇಳಿದರು.

ವಚನಗಳ ಭಾಷೆ ಸರಳವಾಗಿದ್ದರೂ ಅವುಗಳ ಅಂತರಂಗದಲ್ಲಿ ಅಡಗಿರುವ ತತ್ತ್ವದ ಆಳ ಅಪಾರವಾಗಿದೆ. ಶರಣರ ಅನುಭವದ ಹಿನ್ನೆಲೆಯಲ್ಲಿ ರೂಪುಗೊಂಡ ಈ ವಚನಗಳನ್ನು ಕೇವಲ ಮೇಲ್ನೋಟದ ಅರ್ಥದಲ್ಲಿ ಓದುವುದರಿಂದ ಅವುಗಳ ಸಂಪೂರ್ಣ ಆಶಯವನ್ನು ಗ್ರಹಿಸಲು ಸಾಧ್ಯವಿಲ್ಲ. ಅವುಗಳ ತಾತ್ತ್ವಿಕ ಹಿನ್ನೆಲೆ, ಅನುಭಾವದ ನೆಲೆ ಮತ್ತು ಶರಣರ ಬದುಕಿನ ದೃಷ್ಟಿಕೋನವನ್ನು ಅರಿತುಕೊಂಡಾಗ ಮಾತ್ರ ವಚನಗಳ ನಿಜವಾದ ಅರ್ಥ ತೆರೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ‘ಶೂನ್ಯಲಿಂಗ ವಿವೇಚನೆ’ ಮುಂದಿನ ಪೀಳಿಗೆಗೆ ಮಾರ್ಗದರ್ಶಕ ಕೃತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶರಣರ ವಚನಗಳು ಮನುಷ್ಯನನ್ನು ಹೊರಗಿನ ಆಡಂಬರದಿಂದ ಅಂತರಂಗದ ಶುದ್ಧತೆಯ ಕಡೆಗೆ ಕರೆದೊಯ್ಯುತ್ತವೆ. ಕಾಯಕ, ದಾಸೋಹ, ಸಮತೆ, ಕರುಣೆ, ಸತ್ಯ, ಪ್ರಾಮಾಣಿಕತೆ ಮತ್ತು ಆತ್ಮಾನುಸಂಧಾನದಂತಹ ಮೌಲ್ಯಗಳನ್ನು ಬದುಕಿನ ಭಾಗವಾಗಿಸಿಕೊಳ್ಳುವಂತೆ ಅವು ಪ್ರೇರೇಪಿಸುತ್ತವೆ. ಹೀಗಾಗಿ ವಚನಗಳ ಅಧ್ಯಯನವು ಕೇವಲ ಸಾಹಿತ್ಯದ ಅಧ್ಯಯನವಲ್ಲ; ಅದು ಬದುಕಿನ ಅಧ್ಯಯನವೂ ಹೌದು. ವಚನಾನುಸಂಧಾನದಿಂದ ವ್ಯಕ್ತಿಯ ಚಿಂತನಾ ಸಾಮರ್ಥ್ಯ ವಿಸ್ತಾರಗೊಳ್ಳುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಅರಿವೂ ಬೆಳೆಯುತ್ತದೆ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಕಾರ್ಯಕ್ರಮದ ನೇತೃತ್ವವನ್ನು ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ವಹಿಸಿದ್ದರು. ಬೈಲೂರಿನ ಬಸವ ಮಹಾಂತ ಸ್ವಾಮೀಜಿ, ಬಸವಕಲ್ಯಾಣದ ಶಿವಾನಂದ ಸ್ವಾಮೀಜಿ, ಬಸವದೇವರು, ಶಿರಗುಪ್ಪದ ಬಸವಭೂಷಣ ಸ್ವಾಮೀಜಿ, ಅನುಭಾವಿ ಐ.ಆರ್. ಮಠಪತಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ವಚನಸಾಹಿತ್ಯದ ಮಹತ್ವ ಮತ್ತು ಅದರ ಅಧ್ಯಯನದ ಅಗತ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಗಿರಿಮಲ್ಲನವರು ಕೃತಿಯ ಪರಿಚಯ ಮಾಡಿಕೊಟ್ಟರು. ಕೃತಿಯ ಲೇಖಕರಾದ ಬಸವರಾಜಪ್ಪ ಶರಣರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರಂತಹ ಗುರುಗಳ ಕೃಪೆಯಿಂದ ತಮ್ಮ ಬದುಕು ದಿವ್ಯಪಥದತ್ತ ಸಾಗಿತು. ವಚನಸಾಹಿತ್ಯದ ಅಧ್ಯಯನ, ಶರಣರ ಚಿಂತನೆಗಳು ತಮ್ಮ ಬದುಕನ್ನು ರೂಪಿಸಿದ ಬಗೆಯನ್ನು ವಿವರಿಸಿದರು.

ಸಮಾರಂಭದಲ್ಲಿ ಶಿರಗುಪ್ಪ, ಹೆಬ್ಬಾಳ, ಬೆಳಕೂಡ, ಸಿಂಧನೂರು, ಬೆಳಗಾವಿ, ನೇಗಿನಹಾಳ, ಬೈಲಹೊಂಗಲ, ಗದಗ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಗ್ರಂಥದಾಸೋಹಿಗಳನ್ನು ಪೂಜ್ಯರುಗಳು ಸನ್ಮಾನಿಸಿದರು.

ಮಾತೆ ವಾಗ್ದೇವಿತಾಯಿ, ಸಿದ್ಧರಾಮಪ್ಪ ನಡಕಟ್ಟಿ, ಅವಿನಾಶ ಕವಿ, ಲಿಂಗಾಯತ ಕ್ರಾಂತಿ ಸಂಪಾದಕರಾದ ಶಿವಾನಂದ ಮೆಟ್ಯಾಲ, ಶಂಕರ ಗುಡಸ, ವಿರೇಶ ಹಲಕಿ, ಖ್ಯಾತ ಸಂಗೀತಗಾರ್ತಿ ಪಾವನಿ ಭಾರಧ್ವಾಜ, ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರೇಮಕ್ಕ ಅಂಗಡಿ ಅವರು ಸ್ವಾಗತಿಸಿದರು. ರಾಜಶೇಖರ ಪಾಟೀಲ ಅವರು ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *