ಗರ್ಭಿಣಿ, ಮಕ್ಕಳ ಪಾಲನೆ ಬಗ್ಗೆ ಬಸವದಳದಲ್ಲಿ ಉಪನ್ಯಾಸ

ಗದಗ:

ತಾಯ್ತನ ಎನ್ನುವುದು ಹೆಣ್ಣುಮಕ್ಕಳಲ್ಲಿ ಬರುವ ಒಂದು ಮಹತ್ವದ ಘಟ್ಟ. ಆಗ ಆಕೆಯಲ್ಲಿ ಹೇಳತೀರದ ಭಾವನೆ ತುಂಬಿರುತ್ತವೆ. ಇಂದಿನ ದಿನಮಾನಗಳಲ್ಲಿ ತಾಯ್ತನದ ವಯಸ್ಸು ಸರಾಸರಿ ೨೮ ವರ್ಷಗಳಾಗಿರುತ್ತವೆ. ಹೆಣ್ಣುಮಕ್ಕಳು ಯಾವಾಗ ತಾಯಿಯಾಗಲಿದ್ದಾರೆಂದು ತಿಳಿಯುವುದೋ ಆಗಲೇ ಅವರನ್ನು ನುರಿತ ವೈದ್ಯರಲ್ಲಿ ತೋರಿಸಬೇಕು.

ವೈದ್ಯರು ಹೇಳುವ ಸರ್ವವನ್ನೂ ಆಕೆ ಯತಾವತ್ತಾಗಿ ಪಾಲಿಸಬೇಕು. ಅವರು ಹೇಳುವ ಮಾತ್ರೆ, ಔಷಧಿ, ಆಹಾರ ಪಥ್ಯ ಕ್ರಮಗಳನ್ನು ಪಾಲಿಸಬೇಕು. ಇದರಿಂದ ಗರ್ಭೀಣಿ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ.

ಯಾವಾಗ ಮಗು ಆಕೆಯ ಗರ್ಭದಲ್ಲಿ ಅಂಕುರವಾಗುತ್ತದೆಯೋ ಆಗಲೇ ಆ ಹೆಣ್ಣುಮಗಳಲ್ಲಿ ಆ ಮಗುವಿನ ಬಗ್ಗೆ ನವಿರಾದ ಭಾವನೆಗಳು, ಪ್ರೀತಿ, ವಾತ್ಸಲ್ಯಗಳು ಆರಂಭವಾಗಿರುತ್ತವೆಂದು ಡಾ. ಅಕ್ಷತಾ ಕವಳಿಕಾಯಿ ಅವರು ಹೇಳಿದರು.

ಈಚೆಗೆ ನಡೆದ ಬಸವದಳದ ೧೭೦೦ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ತಾಯಿ ಮಗುವಿನ ಲಾಲನೆ-ಪಾಲನೆಯಲ್ಲಿ ಪೋಷಕರ ಪಾತ್ರ” ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಹಲವರು ತಿಳಿವಳಿಕೆಯ ಕೊರತೆಯಿಂದ ಆರಂಭದಲ್ಲಿ ವೈದ್ಯರ ಹತ್ತಿರ ತೋರಿಸಿ ನಂತರ ಹಲವಾರು ತಿಂಗಳು ಬಿಟ್ಟು ಮಗುವಿನ ಪ್ರಸೂತಿ ಸಮಯದಲ್ಲಿ ತೆರಳುವುದು ಕಂಡು ಬರುತ್ತದೆ. ಇದು ತುಂಬ ಅಪಾಯಕಾರಿಯಾದುದು. ಗರ್ಭೀಣಿಯಾದವಳು ತಿಂಗಳು ತಿಂಗಳು ನಿರಂತರ ಚೆಕಪ್, ಚಿಕಿತ್ಸೆ ಪಡೆಯುತ್ತಿರಬೇಕು. ಇದರಿಂದ ಗರ್ಭಾವಸ್ಥೆಯಲ್ಲೇ ಮಗುವಿನಲ್ಲಿ ನ್ಯೂನ್ಯತೆಗಳಿದ್ದರೆ ತಿಳಿಯುವದು. ಬಸುರಿಯಲ್ಲಿ ಹಲವು ಸಂದರ್ಭಗಳಲ್ಲಿ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ ಸೇರಿದಂತೆ ಬಿ.ಪಿ.ಯಂತಹ ರೋಗಗಳು ಬಂದರೆ ಕೂಡಲೇ ಸೂಕ್ತ ಚಿಕಿತ್ಸೆಯಿಂದ ಸರಿ ಪಡಿಸಬಹುದು.

ಈ ಸಂದರ್ಭದಲ್ಲಿ ಗರ್ಭಿಣಿಯರಲ್ಲಿ ಮೊದಲ ೩ ತಿಂಗಳ ಚೆಕಪ್ ಬಹಳ ಮುಖ್ಯವಾಗಿರುತ್ತದೆ. ನಂತರವೂ ತೋರಿಸಬೇಕು. ಒಟ್ಟಾರೆ ವೈದ್ಯರ ನೀಡುವ ಸರ್ವ ಸಲಹೆಗಳನ್ನು ಚಾಚೂ ತಪ್ಪದೇ ಅನುಸರಿಸಬೇಕು.

ನಂತರ ಗರ್ಭಿಣಿಗೆ ಒಳ್ಳೆಯ ಪೌಷ್ಠಿಕ, ಸತ್ವಭರಿತ ಆಹಾರ ಬೇಕೆಬೇಕು. ಹಾಲು, ತುಪ್ಪ, ಶುದ್ಧ ಬೆಲ್ಲ, ಹಣ್ಣು, ಮೊಳಕೆಕಾಳು, ತೊಪ್ಪಲು, ಹಸಿ ಕಾಯಿಪಲ್ಲೆಗಳಂತಹವನ್ನು ಉಪಯೋಗಿಸುತ್ತಿರಬೇಕು.

ಅಲ್ಲದೇ ಆಕೆ ಮನೆಗೆಲಸದ ಜೊತೆಗೆ ವಾಯುವಿಹಾರ, ಸರಳ ವ್ಯಾಯಾಮಗಳನ್ನು ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಗರ್ಭೀಣಿ ಹೆಣ್ಣುಮಗಳಿಗೆ ಮನೆಯಲ್ಲಿ ಆಹ್ಲಾದಕರ, ಸಂತಸದ ವಾತಾವರಣ ತುಂಬಿರಬೇಕು.

ಮುಂದೆ ಮಗುವಾದ ನಂತರ ಆರಂಭದಲ್ಲೇ ಆಕೆ ಮಗುವಿಗೆ ಹಾಲುಣ್ಣಿಸಬೇಕು. ಈ ಸಂದರ್ಭದಲ್ಲಿ ಅನುಭವಸ್ಥ ಹಿರಿಯರಿಂದ ಸಲಹೆ ಪಡೆಯಬೇಕು.

ಬಾಣಂತಿತನದ ಸಂದರ್ಭದಲ್ಲಿ ಶುಚಿತ್ವ ಬಹುಮುಖ್ಯ. ಹಲವರು ಮಕ್ಕಳು ಜನಿಸುತ್ತಲೇ ಜೇನುತುಪ್ಪ, ಸಕ್ಕರೆ ನೀರು ಮುಂತಾದವನ್ನು ಮಗುವಿಗೆ ನೀಡುವುದು ವಾಡಿಕೆ. ಇದು ಹಲವೊಮ್ಮೆ ಅಪಾಯಕಾರಿಯೂ ಆಗಬಹುದು. ಆದ್ದರಿಂದ ಮಗುವಿಗೆ ತಾಯಿಯ ಎದೆ ಹಾಲು ಶ್ರೇಷ್ಠವಾದುದು. ಮಗುವಿನ ಸ್ನಾನದ ಸಂದರ್ಭದಲ್ಲಿ ಹಲವರು ಮಗುವಿಗೆ ಬಹಳಷ್ಟು ಕೊಬ್ಬರಿ ಎಣ್ಣೆ ಬಳಸುವರು. ಎಷ್ಟು ಬೇಕೋ ಅಷ್ಟೇ ಬಳಸಬೇಕು. ಅತಿಯಾದ ಬಿಸಿನೀರು ಬಳಸಬಾರದು. ಹಲವರು ಮಗುವಿನ ಕೈಕಾಲು ಎಳೆವರು, ಇದು ತಪ್ಪು.

ಹಿರಿಯರು ಈ ಸಂದರ್ಭದಲ್ಲಿ ಆಕೆಗೆ ಕೊಬ್ಬರಿ ಬೆಲ್ಲ. ಕರದಂಟಿನಂತಹ ಪೌಷ್ಠಿಕ ಆಹಾರ ನೀಡುವ ವಾಡಿಕೆ ಒಳ್ಳೆಯದು. ಒಟ್ಟಾರೆ ವೈದ್ಯರು ಹೇಳುವ ಸರ್ವ ಚಿಕಿತ್ಸೆ, ಸಲಹೆಗಳನ್ನು ಪಾಲಿಸಬೇಕೆಂದು ಡಾ. ಅಕ್ಷತಾ ಹೇಳಿದರು.

ಆರಂಭದಲ್ಲಿ ಮಾತನಾಡಿದ ಮತ್ತೋರ್ವ ಅತಿಥಿ, ಶರಣತತ್ವ ಚಿಂತಕಿ ಗಿರಿಜಕ್ಕ ಧರ್ಮರಡ್ಡಿ ಅವರು ಮಾತನಾಡುತ್ತಾ, ಯಾವಾಗ ಹೆಣ್ಣುಮಕ್ಕಳಿಗೆ ತಾವು ಗರ್ಭಿಣಿಯೆಂದು ತಿಳಿಯುವದೋ ಆಗಲೇ ಆಕೆಯಲ್ಲಿ ಒಂದು ಬಗೆಯ ಸಂತಸ ಮನೆ ಮಾಡುವುದು. ಆಕೆಯಲ್ಲಿ ತನ್ನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಸಹಜವಾದ ವಾತ್ಸಲ್ಯ, ಕಾಳಜಿ ತುಂಬಿರುತ್ತದೆ. ಆಗಲೇ ಆಕೆ ಗರ್ಭದಲ್ಲಿರುವ ಮಗುವಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಳು.

ಆಕೆಯ ಆಹಾರ ವಿಹಾರಗಳೆಲ್ಲವೂ ಬದಲಾಗುವವು, ಹೇಳತೀರದ ಭಾವನೆಗಳವು. ಹಾಗೆಯೇ ಮಗುವಾದ ನಂತರ ಹಿರಿಯರು, ಅನುಭವಸ್ಥರಿಂದ ಸಲಹೆ ಪಡೆಯಬೇಕು. ತಾಯಿಯ ಬೆಚ್ಚನೆ ಮಡಿಲು ಶ್ರೇಷ್ಠವಾದುದು. ಒಟ್ಟಾರೆ ಮಗುವನ್ನು ಜತನದಿಂದ ಜೋಪಾನ ಮಾಡಬೇಕೆಂದರು.

ಇದೇ ಸಂದರ್ಭದಲ್ಲಿ ೩ ಜನ ಗರ್ಭೀಣಿಯರ ಸೀಮಂತ ಕಾರಣ ಜರುಗಿತು. ಶಿಲ್ಪಾ ಈರಣ್ಣ ಬಡಿಗಣ್ಣವರ, ರಾಜೇಶ್ವರಿ ಶ್ರವಣಕುಮಾರ ಶೀಗಣ್ಣವರ, ಅಶ್ವಿನಿ ವಿನಯ ಚಳ್ಳಕೇರಿ ಈ ಮೂರು ಜೋಡಿ ದಂಪತಿಗಳಿಗೆ ಶರಣ ತತ್ವದಂತೆ ಕಾರ್ಯಕ್ರಮ ನೆರವೇರಿಸಲಾಯಿತು.

ವಚನ ಕ್ರಿಯಾಮೂರ್ತಿಗಳಾಗಿ ವಾಣಿ ಗೋಧಿ, ಸುಶ್ಮಾ ಬರಗುಂಡಿ ಕಾರ್ಯ ನಿರ್ವಹಿಸಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ಬಸವದಳದ ಶರಣೆಯರಿಂದ ಜರುಗಿತು. ವಾಣಿ ಗೋಧಿ, ಸಹನಾ ಆಲತಗಿಯವರು ಪ್ರಾರ್ಥಿಸಿದರು. ಸಹನಾ ಆಲತಗಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ಎಂ.ಬಿ. ಲಿಂಗದಾಳ ಮಾಡಿದರು. ಶರಣು ಸಮರ್ಪಣೆಯನ್ನು ಗೌರಕ್ಕ ಬಡಿಗಣ್ಣವರ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *