ನಮ್ಮ ಮನೆಯ ಮೂರು ಶೂನ್ಯಗಳು: ನೆನಪಿನ ಶೂನ್ಯ
ಬೆಂಗಳೂರು
ನೂರಿಪ್ಪತ್ತು ವರ್ಷಗಳ ಹಿಂದೆ, ವಿಜಯಪುರದ ಒಂದು ಮನೆ. ಇಪ್ಪತ್ತರ ಹರೆಯದ ಒಬ್ಬ ಯುವ ವಕೀಲ ಅಲ್ಲಿ ಪೂಜೆಗಿಟ್ಟಿದ್ದ ತಾಳೆಗರಿಯ ಕಟ್ಟುಗಳನ್ನು ಕಂಡ. ಬಿಡಿಸಿ ನೋಡಿದರೆ ಒಳಗೆ ಪ್ರಭುದೇವರ ವಚನಗಳು!
ಎಂಟುನೂರು ವರ್ಷಕ್ಕೂ ಹಿಂದೆ ಕಲ್ಯಾಣದಲ್ಲಿ ಮೊಳಗಿದ ಮಾತು ಪೂಜೆಯ ಹೂವಿನಡಿ ಮೌನವಾಗಿ ಮಲಗಿತ್ತು.
ಆ ವಕೀಲನ ಹೆಸರು ಫ.ಗು. ಹಳಕಟ್ಟಿ. ಅವರಿಗೆ ಅನಿಸಿದ್ದು ಒಂದೇ. ಇದು ಜಗುಲಿಯ ಮೇಲೆ ಕೂರುವ ವಸ್ತುವಲ್ಲ, ಜನರ ಕೈಗೆ ಹೋಗಬೇಕಾದ ಮಾತು.
ಆಮೇಲೆ ಅವರು ಮಾಡಿದ್ದು ಇವತ್ತು ಕೇಳಿದರೆ ಹುಚ್ಚು ಅನ್ನಿಸುತ್ತದೆ.
ಹಳ್ಳಿ ಹಳ್ಳಿ ಅಲೆದರು. ಮನೆ ಮನೆಯ ಜಗುಲಿಯಿಂದ ಕಟ್ಟು ಕಟ್ಟು ತಾಳೆಗರಿ ಕೇಳಿ ತಂದರು. ವಕೀಲಿಕೆ ಬಿಟ್ಟರು. ಮನೆ ಮಾರಿದರು.
ಹೆಂಡತಿಯ ಒಡವೆ ಅಡವಿಟ್ಟರು. ತಮ್ಮದೇ ಮುದ್ರಣಾಲಯ ಹಾಕಿದರು. ಬದುಕಿನುದ್ದಕ್ಕೂ ಬಡತನದಲ್ಲೇ ಉಳಿದರು.
ಇವತ್ತು ನಾವು ವೇದಿಕೆಯ ಮೇಲೆ ಹೆಮ್ಮೆಯಿಂದ ಓದುವ ಎಷ್ಟೋ ವಚನಗಳ ಹಿಂದೆ ಆ ಮಾರಿದ ಮನೆಯ ಗೋಡೆಗಳಿವೆ. ಅಡವಿಟ್ಟ ಒಡವೆಯ ಖಾಲಿ ಪೆಟ್ಟಿಗೆ ಇದೆ.
ಈಗ ಒಂದು ಕ್ಷಣ ಯೋಚಿಸಿ. ಹಳಕಟ್ಟಿ ಅಜ್ಜನವರು ಆವತ್ತು ಆ ಮನೆಗೆ ಹೋಗದಿದ್ದರೆ? ಆ ಕಟ್ಟುಗಳಿಗೆ ಇವತ್ತಿಗೂ ಪೂಜೆ ನಡೆಯುತ್ತಿತ್ತೋ, ಗೆದ್ದಲು ಹಿಡಿದು ಹೋಗುತ್ತಿತ್ತೋ ಯಾರಿಗೆ ಗೊತ್ತು. ಪೂಜೆ ಮಾಡಿದರೆ ನೆನಪು ಉಳಿಯುವುದಿಲ್ಲ. ಓದಿದರೆ ಮಾತ್ರ ಉಳಿಯುತ್ತದೆ.
ಇದೇ ಮೂರನೇ ಶೂನ್ಯ, ನೆನಪಿನ ಶೂನ್ಯ.
ನೂರು ವರ್ಷದ ನಂತರ ನಾವು ಮತ್ತೆ ಅದೇ ಜಗುಲಿಯ ಮುಂದೆ ನಿಂತಿದ್ದೇವೆ. ವಚನಕ್ಕೆ ಮೆರವಣಿಗೆ ಇದೆ, ಹಾರ ಇದೆ, ಡಿಜೆ ಇದೆ. ಓದು ಎಲ್ಲಿದೆ? ಇಷ್ಟಲಿಂಗ ಯಾಕೆ, ಗುಡಿ ಯಾಕೆ ಬೇಡ, ಕಾಯಕ ಅಂದರೇನು ಎಂಬ ಅರಿವು ಇವತ್ತಿಗೂ ಹೆಚ್ಚಾಗಿ ಬಾಯಿಂದ ಬಾಯಿಗೆ ಹರಿಯುವ ನೆನಪಿನಲ್ಲೇ ಉಳಿದಿದೆ.
ನಿಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳಿ. ಬೆಳಗಿನ ಜಾವ ಇಷ್ಟಲಿಂಗ ಪೂಜೆ ಮಾಡುತ್ತಾ ಅವಳು ಗುನುಗುತ್ತಿದ್ದ ವಚನ ನೆನಪಿದೆಯಾ? ಅವಳು ಹೋದ ದಿನ ಆ ರಾಗ, ಆ ಸಾಲು, ಆ ಅರ್ಥ ಎಲ್ಲವೂ ಅವಳ ಜೊತೆ ಮಣ್ಣಿಗೆ ಹೋಯಿತು. ಯಾರೂ ಬರೆದಿಟ್ಟುಕೊಳ್ಳಲಿಲ್ಲ.
ಒಬ್ಬ ಅಜ್ಜಿ ಹೋದರೆ ಊರಿನ ಒಂದು ಪುಟ್ಟ ಗ್ರಂಥಾಲಯ ಮುಚ್ಚಿದಂತೆ. ಜರ್ಮನಿಯ ವಿದ್ವಾಂಸ ಯಾನ್ ಆಸ್ಮಾನ್ ಇದಕ್ಕೊಂದು ಲೆಕ್ಕ ಕೊಡುತ್ತಾರೆ. ಮನೆಯ ಬಾಯಿಮಾತಿನಲ್ಲಿ ಉಳಿಯುವ ನೆನಪು ಹೆಚ್ಚೆಂದರೆ ಮೂರು ನಾಲ್ಕು ತಲೆಮಾರು, ಸುಮಾರು ಎಂಬತ್ತು ವರ್ಷ ಬದುಕುತ್ತದೆ.
ಅಷ್ಟರೊಳಗೆ ಅದು ಪುಸ್ತಕವಾಗಿ, ಶಾಲೆಯ ಪಾಠವಾಗಿ ಬೇರು ಬಿಡದಿದ್ದರೆ ಸದ್ದಿಲ್ಲದೆ ಸಾಯುತ್ತದೆ. ಹಳಕಟ್ಟಿ ಮುದ್ರಣಾಲಯ ಹಾಕಿ ನೂರು ವರ್ಷ ದಾಟಿತು. ಆ ಗಡುವು ಎಂದೋ ಮುಗಿದಿದೆ.
ನಾಳೆ ನಿಮ್ಮ ಮೊಮ್ಮಗ ಬಸವಣ್ಣನ ಬಗ್ಗೆ ಮೊದಲ ಪ್ರಶ್ನೆ ಕೇಳುವುದು ಅಜ್ಜಿಗಲ್ಲ, ಮೊಬೈಲಿಗೆ. ಆ ಮೊಬೈಲ್ ಜಗತ್ತಿನಲ್ಲಿ ಯಾರು ಹೆಚ್ಚು ಬರೆದಿದ್ದಾರೋ ಅವರ ಪಾಠವನ್ನೇ ಒಪ್ಪಿಸುತ್ತದೆ.
ನಮ್ಮ ವಿದ್ವಾಂಸರ ಪುಸ್ತಕಗಳು ಗ್ರಂಥಾಲಯದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಹಳಕಟ್ಟಿ ತಾಳೆಗರಿಯನ್ನು ಜಗುಲಿಯಿಂದ ಮುದ್ರಣಕ್ಕೆ ತಂದರು. ಆ ಮುದ್ರಣವನ್ನು ಕಪಾಟಿನಿಂದ ಮೊಬೈಲಿಗೆ ತರುವ ಇಂದಿನ ಹಳಕಟ್ಟಿ ಯಾರು?
ಎರಡನೇ ಭಾಗದ ಬುದ್ಧಗಯಾ ಅನುಭವ ನೆನಪಿಸಿಕೊಳ್ಳಿ. ಅದು ಒಂದೇ ಕಾಯ್ದೆಯಿಂದ ಕೈತಪ್ಪಲಿಲ್ಲ.
ನೂರಾರು ವರ್ಷದ ಮೈಮರೆವಿನಿಂದ ತಪ್ಪಿತು. ಮರೆವು ಮೊದಲು ಮಾತನ್ನು ಕದಿಯುತ್ತದೆ, ಆಮೇಲೆ ನೆಲವನ್ನು.
ಮರೆವು ಕದ್ದ ಇನ್ನೊಂದು ಸಂಪತ್ತು ನೆಂಟಸ್ತನ. ಬಸವಣ್ಣ “ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ” ಎಂದು ಘೋಷಿಸಿಕೊಂಡರು.
ಹರಳಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಎಲ್ಲರೂ ಒಂದೇ ಮನೆಯವರಾಗಿದ್ದರು.
ಇವತ್ತು ಅವರ ಸಮುದಾಯಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟಲು ಸಾಧ್ಯವಾಗುತ್ತಿದ್ದರೆ ತಪ್ಪು ನಮ್ಮದೂ ಇದೆ. ಆ ನೆಂಟಸ್ತನವನ್ನು ನಾವು ಜಯಂತಿಯ ಭಾಷಣಕ್ಕೆ ಸೀಮಿತ ಮಾಡಿದೆವು.
ಲಿಂಗಾಯತ ಒಂದು ಜಾತಿಯಾಗಿ ಉಳಿದರೆ ನುಂಗುವುದು ಸುಲಭ. ಧರ್ಮವಾಗಿ ಬದುಕಿದರೆ ಯಾರ ಗಂಟಲಿಗೂ ಇಳಿಯುವುದಿಲ್ಲ.
ಹಾಗಾದರೆ ಮಾಡಬೇಕಾದ್ದೇನು? ಹಿಂದಿನ ಭಾಗದಲ್ಲಿ ಹೇಳಿದ ೧೦೦೮ ವಚನಗಳ ಸಂಹಿತೆಯನ್ನು ಇಪ್ಪತ್ತು ಭಾಷೆಗಳಲ್ಲಿ, ವಿದ್ವತ್ ಟಿಪ್ಪಣಿ ಸಹಿತ, ಯಾರು ಬೇಕಾದರೂ ಉಚಿತವಾಗಿ ಬಳಸುವ ಹಾಗೆ ಅಂತರ್ಜಾಲದಲ್ಲಿ ಇಡೋಣ.
ಊರೂರಿನಲ್ಲಿ ಇನ್ನೂ ಎಲ್ಲಾದರೂ ಉಳಿದಿರುವ ಹಳೆಯ ಹಸ್ತಪ್ರತಿಗಳನ್ನು, ಅಜ್ಜಿಯರು ಹಾಡುವ ವಚನಗಳನ್ನು ಈಗಲೇ ಫೋಟೋ ತೆಗೆದು, ಧ್ವನಿಮುದ್ರಿಸಿ ಉಳಿಸೋಣ.
ಶರಣರ ಸಮುದಾಯಗಳಿಗೆ ವಿದ್ವಾಂಸರ ಸಭೆಯ ಕುರ್ಚಿಯಲ್ಲಿ, ನಮ್ಮ ಸಂಸ್ಥೆಗಳ ಆಡಳಿತದಲ್ಲಿ ಪಾಲು ಕೊಡೋಣ.
ಬಸವಣ್ಣನವರೇ ಹೇಳಿದ್ದಾರೆ,
“ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ…”
ತಾಳೆಗರಿಗೆ ಪೂಜೆ ಮಾಡಿದೆವು, ಓದಲಿಲ್ಲ. ಪ್ರತಿಮೆಗೆ ಹಾಲೆರೆದೆವು, ತತ್ವವನ್ನು ಉಪವಾಸ ಕೆಡವಿದೆವು. ಲಂಡನ್ನ ಥೇಮ್ಸ್ ದಂಡೆಯಲ್ಲೂ ಬಸವಣ್ಣನ ಪ್ರತಿಮೆ ನಿಂತಿದೆ. ಅದೇ ಊರಿನ ಯಾವ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಇದೆ?
ಹಳಕಟ್ಟಿ ತಮ್ಮ ಮನೆಯನ್ನೇ ಕೊಟ್ಟರು. ನಾವು ವಾರಕ್ಕೊಂದು ಸಂಜೆ ಕೊಡಲಾರೆವೇ?
ಕಲ್ಲ ನಾಗರಕ್ಕೆ ಹಾಲೆರೆದದ್ದು ಸಾಕು. ದಿಟದ ನಾಗರ ಬದುಕಲಿ. ಅನುಭವ ಮಂಟಪ ಇಲ್ಲೇ ನಡೆಯಲಿ. ನಿಮ್ಮ ಅಜ್ಜ ಅಜ್ಜಿ ಗುನುಗುತ್ತಿದ್ದ ಒಂದು ವಚನದ ಸಾಲು ನೆನಪಿದೆಯಾ? ಇಲ್ಲೇ ಬರೆದು ಉಳಿಸಿ.

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ ಹಳಕಟ್ಟಿಯವರು ಕಾರ್ಯ ಮಹತ್ತರ ಸಾಧನೆ ಮಾಡಿದ್ದಾರೆ
ಒಳ್ಳೆಯ ಆಲೋಚನೆ ಸರ್..ಎಲ್ಲರೂ ಕೈ ಜೋಡಿಸೋಣ..