ಪ್ರವಚನ: ಮನೆ ಬಿಟ್ಟು ಹೊರಟ ಬಾಲಕ ಬಸವರಸ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 16

ಕಲಬುರಗಿ:

ಬಾಲಕ ಬಸವಣ್ಣ ಮತ್ತೊಮ್ಮೆ ಮನೆಗೆ ಬಂದು ಕುಡಿಯಲು ನೀರು ಕೇಳಿದಾಗ, ತಾಯಿ ಮಾದಲಾಂಬಿಕೆ ನಿಮ್ಮ ತಂದೆ ಪೂಜೆ ಮಾಡುತ್ತಿದ್ದಾರೆ. ಅದು ಮುಗಿದ ನಂತರ ಕೊಡುವೆ ಎನ್ನುತ್ತಾಳೆ. ಬಾಲಕ ಬಸವ ಮನೆಯ ಹಿಂಬದಿಯಲ್ಲಿ ಚೂಪಾದ ಕಲ್ಲಿನಿಂದ ನಾಲ್ಕಾರು ತಗ್ಗು ತೆಗೆಯಲು ಪ್ರಯತ್ನಿಸುತ್ತಿರುತ್ತಾನೆ.

ಇದನ್ನು ಕಂಡ ಮಾದರಸರು ಇದೇನು ಮಾಡುತ್ತಿರುವೆ ಬಸವರಸ? ಎಂದು ಕೇಳುತ್ತಾರೆ. ನೀವು ಪೂಜೆ ಮಾಡುವುದು ತಡವಾಯ್ತು. ನಾನೇ ನೆಲದಲ್ಲಿ ನೀರು ತೆಗೆದು ಕುಡಿದರಾಯ್ತು ಎಂದುಕೊಂಡು ತಗ್ಗು ತೋಡುತ್ತಿದ್ದೇನೆ ಎಂದುತ್ತರಿಸಿದ.

ಹೀಗೆ ನಾಲ್ಕರು ಕಡೆ ತಗ್ಗು ತೆಗೆದರೆ ನೀರು ಬರುತ್ತದೆಯೇ? ಒಂದೇ ಕಡೆ ತಗ್ಗು ತೋಡಿದರೆ ನೀರು ತೋಡಬೇಕು ಎಂದಾಗ, ನೀವು ಕೂಡ ಒಂದೇ ದೇವರಿಗೆ ಪೂಜೆ ಮಾಡಬೇಕಲ್ಲವೇ? ಹೀಗೆ ಹತ್ತಾರು ದೇವರಿಗೆ ಪೂಜೆ ಮಾಡಿದರೆ ದೇವರು ಅದ್ಹೇಗೆ ಒಲಿಯುತ್ತಾನೆ ಎಂದು ಪ್ರಶ್ನಿಸಿದ.

ದೇವನೊಬ್ಬ ನಾಮ ಹಲವು

ಪರಮ ಪತಿವ್ರತೆಗೆ ಗಂಡನೊಬ್ಬ

ಹಲವು ದೈವದೆಂಜಲ ತಿಂಬುವರನು ನಾನೇನೆಂಬೆ

ಕೂಡಲಸಂಗಮದೇವ.

ಬಹುಶಃ ಇದೇ ಹಿನ್ನೆಲೆಯಲ್ಲಿ ಬಸವಣ್ಣನವರು ಈ ವಚನ ಬರೆದಿರಬೇಕು ಎಂದೆನಿಸುತ್ತದೆ. ಮೇಲಾಗಿ ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ.  ಒಬ್ಬನೇ ಕಾಣಿರೋ ಇಬ್ಬರೆಂಬುದು ಹುಸಿ ನೋಡಾ ಎಂದಿದ್ದಾರೆ.

ಎಂಟನೆ ವಯಸ್ಸಿಗೆ ಸಂಪ್ರದಾಯದಂತೆ ಉಪನಯನ ಕಾರ್ಯಕ್ರಮ ಜರುಗುತ್ತಿರಲು ಒಡಹುಟ್ಟಿದ ಅಕ್ಕನಿಗೇಕಿಲ್ಲ? ಜನಿವಾರ ಧಾರಣೆ ಎಂದು ಬಸವರಸ ಪ್ರಶ್ನಿಸಿದರು. ಪುರೋಹಿತರು ಮಾದರಸರಿಗೆ ಇದೇನಿದು? ನಿಮ್ಮ ಮಗನ ಈ ಪ್ರಶ್ನೆ ಎಂದು ಕುಪಿತರಾಗುತ್ತಾರೆ. ಸಿಟ್ಟಿಗೆದ್ದ ಮಾದರಸ ನೀನು ನನ್ನ ಮಗನಲ್ಲ. ನಾನು ನಿನಗೆ ತಂದೆಯಲ್ಲ ಎಂದು ನುಡಿಯುತ್ತಾರೆ.  ಹುಟ್ಟಿದ ಮನೆ, ಹಡೆದ ತಂದೆ-ತಾಯಿಗೆ ಕೈಮುಗಿದು ಬಸವರಸ ಮನೆ ಬಿಟ್ಟು ಹೊರಟು ನಿಂತರು.

ತಂದೆ ನೀನು ತಾಯಿ ನೀನು

ಬಂಧು ನೀನು ಬಳಗ ನೀನು

ಎನಗೆ ನೀನಲ್ಲದೆ ಮತ್ತಾರು ಇಲ್ಲವಯ್ಯ ಕೂಡಲಸಂಗಮದೇವ

ಅಕ್ಕ ನಾಗಾಯಿ ಮತ್ತು ಮಾವ ಶಿವಸ್ವಾಮಿ ಬಾಲಕ ಬಸವರಸನ ಕೈ ಹಿಡಿದು ಕಪ್ಪಡಿಯೆಡೆಗೆ ನಡೆಯುತ್ತಾರೆ. ಇದನ್ನೇ ಬಲ್ಲವರು ‘ಬಸವರಸನ ಅವತಾರ ಮನುಕುಲ ಜಾತರ ಉದ್ಧಾರ.‌ ಜಗದ ಕಲ್ಯಾಣಕ್ಕಾಗಿ, ಮಹಿಳಾ ಕುಲದ ಮಹಾ ಬೆಳಕಾಗಿ ಹೊರಟು ನಿಂತರು ಎಂದು ಹೇಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *