ರಾಣೆಬೆನ್ನೂರು:
ಬಸವಾದಿ ಶರಣರ ವಚನಗಳು ಬದುಕನ್ನು ರೂಪಿಸುವ ದಿಕ್ಸೂಚಿಗಳು. ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ಹಂತವನ್ನು ಸರಿದಾರಿಗೆ ತರಲು ಶರಣರ ವಚನಗಳು ದಾರಿದೀಪವಾಗಿವೆ ಎಂದು ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು.
ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಾಸಪ್ಪ ಕುಸಗೂರ ಅವರ 85ನೇ ಜನ್ಮ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ 35ಕ್ಕೂ ಹೆಚ್ಚು ವಚನಕಾರ್ತಿಯರು ವಚನಗಳನ್ನು ರಚನೆ ಮಾಡುವ ಮೂಲಕ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಆಚಾರ ವಿಚಾರ ನಡೆ-ನುಡಿ ಒಂದಾಗಿಸಿಕೊಂಡು ಬದುಕನ್ನು ಕಟ್ಟಿಕೊಂಡಾಗ ಮಾನವ ಜನ್ಮ ಶ್ರೇಷ್ಠವಾಗುತ್ತದೆ ಎಂಬ ಶರಣರ ನುಡಿಗಳು ಇಂದಿಗೂ ಕೂಡ ಜೀವನಕ್ಕೆ ದಾರಿದೀಪವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉನ್ನತಿ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಬಸವರಾಜ ಪಾಟೀಲ ಮಾತನಾಡಿ, ವಾಸಣ್ಣ ಕುಸಗೂರ ತಾಲೂಕಿನ ಎಲ್ಲರ ಸಹಕಾರ ಪಡೆದು ನಗರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣ ಮಾಡುವಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ. ಹೀಗಾಗಿ ಭವನವು ಇಂದು ಸಾಹಿತ್ಯ ಚಟುವಟಿಕೆಗಳಿಗೆ ದಾರಿದೀಪವಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಇಂತಹ ಇಳಿವಯಸ್ಸಿನಲ್ಲಿಯೂ ವಾಸಣ್ಣನವರು ಸಾಹಿತ್ಯದ ಅಭಿಮಾನವನ್ನು ಇಟ್ಟುಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡುತ್ತ, ಶರಣರ ಚಿಂತನೆಗಳು ಇಂದಿಗೂ ಜೀವಂತವಾಗಿರುವುದಕ್ಕೆ ವಾಸಣ್ಣ ಕುಸಗೂರ ಅವರಂತಹ ಶರಣರು ಮಾಡಿದ ಕೆಲಸಗಳಿಂದ ಎಂದರು. ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಕಸ್ತೂರಮ್ಮ ಪಾಟೀಲ, ಗದಿಗೆಪ್ಪ ಹೊಟ್ಟಿಗೌಡ್ರ, ಗಾಯತ್ರಮ್ಮ ಕುರುವತ್ತಿ, ಎಸ್.ಎಚ್. ಪಾಟೀಲ, ಜಗದೀಶ ಮಳಿಮಠ ಉಪಸ್ಥಿತರಿದ್ದರು.
