ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 9
ಕಲಬುರಗಿ:
‘ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ’
ನಾನೊಂದ ನೆನೆದೊಡೆ ತಾನೊಂದ ನೆನೆವುದು,
ನಾನಿತ್ತಲೆಳೆದೊಡೆ ತಾನತ್ತಲೆಳೆವುದು.
ತಾ ಬೇರೆ ಎನ್ನನಳಲಿಸಿ ಕಾಡಿತ್ತು,
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು.
ಕೂಡಲಸಂಗನ ಕೂಡಿಹೆನೆಂದೊಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ!
ಬಸವಣ್ಣನವರ ಈ ವಚನ ಪ್ರತಿಯೊಬ್ಬರ ಮನದ ವಿಚಿತ್ರ ವ್ಯವಸ್ಥೆ ಹಾಗೂ ಹೊಯ್ದಾಟವನ್ನು ಚಿತ್ರಿಸುತ್ತದೆ. ಅಕ್ಕ ಮಹಾದೇವಿ ‘ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ’ ಎಂದು ಮನೋವಿಕಾರತೆಯ ಬಗ್ಗೆ ವಿವರಿಸುತ್ತಾರೆ. ಮನಷ್ಯನ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುತ್ತದೆ. ನಾ, ನೀ ಅನ್ನುವವರನ್ನು ಎಡಮುರಿಗಟ್ಟಿದೆ ಈ ಮಾಯೆ. ಎಂಥೆಂಥವರೂ ಈ ಮಾಯೆಯ ದವಡೆಗೆ ಸಿಕ್ಕಿದ್ದಾರೆ. ಈ ಮಾಯೆಯನ್ನು ಗೆದ್ದವರು ಮಹಾನುಭಾವರು, ಸಂತರು, ಶಿವಯೋಗಿಗಳು ಎನಿಸಿಕೊಳ್ಳುತ್ತಾರೆ.
ಶರಣರ ವಚನಗಳು ಒಂದು ಚರಿತ್ರೆಯ ಜೊತೆಗೆ ಅಧ್ಯಾತ್ಮದೆಡೆಗೆ ಕರೆದುಕೊಂಡು ಹೋಗುತ್ತವೆ. ಬದುಕನ್ನು ಜಾಗೃತಗೊಳಿಸುವ ಶರಣರು ಈ ದಿಸೆಯಲ್ಲಿ ಬಹಳ ದೊಡ್ಡ ಪ್ರಯತ್ನ ಮಾಡಿದ್ದಾರೆ. ‘ಬ್ರಹ್ಮ ಘನವೆಂಬೆನೆ ಬ್ರಹ್ಮನ ನುಂಗಿತ್ತು’ ಹೀಗೆ ವಿಷ್ಣು, ರುದ್ರ, ತಾ ಸೇರಿದಂತೆ ಎಲ್ಲರೂ ಮಯಾ ಕೋಲಾಹಲಕ್ಕೀಡಾದವರೇ ಎಂಬುದನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ತಿಳಿಸಿದ್ದಾರೆ.
ಚಾಮರಸ ವಿರಚಿತ ಪ್ರಭುಲಿಂಗಲೀಲೆಯ ಮೂರನೆ ಗತಿಯಲ್ಲಿ ಮಾಯೆ ಹುಟ್ಟಿದ ಪ್ರಸಂಗವನ್ನು ಬಹಳ ವಿಸ್ತಾರವಾಗಿ ಷಟ್ಪದಿ ಕಾವ್ಯದಲ್ಲಿ ಆ ವಿಚಾರಗಳನ್ನು ಹೇಳುತ್ತ ಹೋಗುತ್ತಾರೆ. ಈ ಮಾಯೆ ಕುರಿತಾದ ಗತಿ ಒಂದು ಕಡೆಯಾದರೆ, ಮನುಷ್ಯನ ಬದುಕಿನಲ್ಲಿ ಯಾವ್ಯಾವುದೋ ಸಂದರ್ಭದಲ್ಲಿ ಗತಿಕೆಡಿಸುವ ಪ್ರಸಂಗಗಳು ಎದುರಾಗುತ್ತವೆ.
ಭೂಕಾಂತೆಗೆ ಒಪ್ಪುವ ಮುಖವಲ್ಲಿ ಶೃಂಗಾರದ ತಿರುಳಿನ ಮನೆಯಲ್ಲಿ ಸೌಂದರ್ಯದ ಸುಖದ ಆವಾಸ ಸ್ಥಾನವೂ ಚೆಲುವಾದ ರತ್ನಗಳು ಹೊರ ಚೆಲ್ಲುವ ಮನೋಹರವಾದ ಸಮುದ್ರ… ಹೀಗೆ ಅಲ್ಲಮಪ್ರಭುಗಳಿಗೆ ಕೋಲಾಹಲವುಂಟು ಮಾಡಿದ ಮಾಯೆಯ ಹುಟ್ಟು, ಆ ಪ್ರದೇಶ ಸಿರಿವಂತಿಕೆ, ಅಲ್ಲಿನ ವಿಶೇಷತೆ ಇತ್ಯಾದಿಗಳ ಕುರಿತಾಗಿ ಬಹಳ ಶೃಂಗಾರಮಯವಾಗಿ, ಬಹಳ ರಸವತ್ತಾಗಿ ಚಾಮರಸ ಕವಿ ಚಿತ್ರಿಸುತ್ತಾರೆ.
