ಹೊಸಪೇಟೆ ಶಿಬಿರದ ಎರಡನೇ ದಿನದ ವರದಿ
ಹೊಸಪೇಟೆ
ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಎರಡು ದಿನಗಳ ಬಸವ ಶಕ್ತಿ ಶಿಬಿರ ನಡೆಯಿತು
ಮೊದಲ ದಿನ ಸಾಂಸ್ಕೃತಿಕ ದಾಳಿ, ರಾಜಕೀಯ ಪ್ರಜ್ಞೆಯ ಅಗತ್ಯ, ಚುನಾವಣೆ ಮತ್ತು ಇತರ ಸಂದರ್ಭಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗುವುದರ ಬಗ್ಗೆ ಚರ್ಚೆಯಾಯಿತು.
ಎರಡನೇ ದಿನದ ಜನಸಾಮಾನ್ಯ, ಮಾಧ್ಯಮ, ರಾಜಕಾರಣಿಗಳಲ್ಲಿ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಿ ಜಾಗೃತಿ ಮೂಡಿಸುವ ಬಗ್ಗೆ ಮೊದಲ ಗೋಷ್ಠಿ ನಡೆಯಿತು.
ಕಲ್ಯಾಣ ಫೈಲ್ಸ್

ಈ ವಿಷಯದ ಕುರಿತು ಮಾತನಾಡಿದ ಡಾ. ಅಕ್ಕಿ ಬಸವೇಶ ವೈಚಾರಿಕ, ಸಾಂಸ್ಕೃತಿಕ, ಇತಿಹಾಸ ಪ್ರಜ್ಞೆ ಮೂಡಿಸುವ ಮೂಲಕ ಲಿಂಗಾಯತ ಧರ್ಮದ ಮಹತ್ವವನ್ನು ಜನರಿಗೆ ತಿಳಿಸಬೇಕೆಂದು ಹೇಳಿದರು.
ಲಿಂಗಾಯತ ಧರ್ಮ ಬೆಳೆಯಲು ಜನರಲ್ಲಿ ಕಾಯಕ, ದಾಸೋಹ ತತ್ವಗಳ ಜೊತೆಗೆ ಮೂಢನಂಬಿಕೆಗಳನ್ನು ಪ್ರತಿರೋಧಿಸುವಂತಹ ವೈಚಾರಿಕ ಪ್ರಜ್ಞೆ ಮೂಡಿಸಬೇಕು.
ಲಿಂಗಾಯತರ ವಿರುದ್ಧ ನಡೆಯುತ್ತಿರುವ ಸಾಂಸ್ಕೃತಿಕ ಹುನ್ನಾರಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ 100 ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದು ಅರಿವು ಮೂಡಿಸಬೇಕು.
ಭಾರತದಲ್ಲಿ ಇತಿಹಾಸ ಬರೆದವರು ಬಿಚ್ಚಿಟ್ಟದಿಕ್ಕಿಂತಲೂ ಮುಚ್ಚಿಟ್ಟಿದ್ದೇ ಜಾಸ್ತಿ. ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡುವವರು ಕಲ್ಯಾಣ ಫೈಲ್ಸ್, ನಂಜನಗೂಡು ಫೈಲ್ಸ್ ಬಗ್ಗೆಯೂ ಮಾತನಾಡಬೇಕು ಎಂದು ಹೇಳಿದರು.
24/7 ಲಿಂಗಾಯತರಾದರೇ ಮಾತ್ರ ಧರ್ಮ ಬೆಳೆಸಲು ಸಾಧ್ಯ, ಲಿಂಗಾಯತೇತರ ಬಸವಾದಿಗಳ ಜೊತೆಗೂ ಕೆಲಸ ಮಾಡಬೇಕು ಎಂದು ಹೇಳಿದರು.
ಭಕ್ತಿ, ವೈಚಾರಿಕತೆ ಎರಡೂ ಬೇಕು

ನಂತರ ಮಾತನಾಡಿದ ಪಿ ರುದ್ರಪ್ಪ ಲಿಂಗಾಯತ ಧರ್ಮ ಪ್ರಚಾರ ಮಾಡುವಾಗ ಜನಸಾಮಾನ್ಯರ ಜೊತೆ ಹಾಗೂ ಸಂಘಟಕರ ಜೊತೆ ಬೇರೆ ಬೇರೆ ರೀತಿಗಳಲ್ಲಿ ಮಾತನಾಡಬೇಕು ಎಂದು ಹೇಳಿದರು.
ಜನಸಾಮಾನ್ಯರಲ್ಲಿ ದೇವರ ಬಗ್ಗೆ ಇರುವ ಭಯ ತೆಗೆದು ದೇವರು ಅವರಲ್ಲಿರುವ ಬೆಳಕು ಎಂದು ತಿಳಿಸಬೇಕು. ಲಿಂಗಾಯತ ಸ್ವತಂತ್ರ ಧರ್ಮವಾದರೆ ಜನಸಾಮಾನ್ಯರಿಗೆ ಅದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಹೇಳಬೇಕು.
ಜನರಲ್ಲಿ ಜಾಗೃತಿ ಮೂಡಿಸಲು ನಂಜನಗೂಡಿನಲ್ಲಿ ನಡೆದ ಶರಣರ ಕಗ್ಗೋಲೆಯನ್ನು ‘ಲಿಂಗಾಯತ ಮಠಾಧೀಶರ ಹುತಾತ್ಮ ದಿನ’ ಎಂದು ಆಚರಿಸಬೇಕು.
ಭಕ್ತಿ, ವೈಚಾರಿಕತೆ ಎರಡರ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಭಕ್ತಿಯಿಲ್ಲದ ವೈಚಾರಿಕತೆ ಸ್ವೇಚ್ಚಾಚಾರವಾದರೆ, ವೈಚಾರಿಕತೆಯಿಲ್ಲದ ಭಕ್ತಿ ಮೌಢ್ಯವಾಗುತ್ತದೆ ಎಂದರು.
2028ರ ಚುನಾವಣೆಯ ಮೊದಲು ರಾಜಕಾರಣಿಗಳು ಲಿಂಗಾಯತ ಧರ್ಮವನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂದು ಕೇಳಿ ಮತ ಹಾಕಬೇಕು ಎಂದರು.
ನಂತರ ಡಾ ನಂದೀಶ್ವರ ದಂಡೆ ಹಾಗು ಎಸ್ ವೈ ಗುರುಶಾಂತ ಅವರು ನಾಡುನುಡಿಯ ವಿಷಯಗಳಿಗೆ ಬಸವ ಸಂಘಟನೆಗಳು ಸ್ಪಂದಿಸುವ ಬಗ್ಗೆ ಮಾತನಾಡಿದರು.
ಕನ್ನಡ ಲಿಂಗಾಯತರ ಧರ್ಮ ಭಾಷೆ

ಐತಿಹಾಸಿಕವಾಗಿ ಲಿಂಗಾಯತ ಸಮುದಾಯ ಕಳೆದ ಶತಮಾನದ ಮಹಾಯುದ್ಧ, ಸ್ವಾತಂತ್ರ್ಯ, ಎಕೀಕರಣ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆದರೆ ಇಂದು ಬಸವ ಸಂಘಟನೆಗಳು ಬಹುತೇಕವಾಗಿ ಸಮುದಾಯದ ವಿಷಯಗಳಿಗೆ ಸೀಮಿತವಾಗಿವೆ, ಎಂದು ದಂಡೆ ಹೇಳಿದರು.
ಕನ್ನಡ ಲಿಂಗಾಯತರ ಧರ್ಮ ಭಾಷೆ. ತ್ರಿಭಾಷಾ ನೀತಿಗಳಂತಹ ಸಮಸ್ಯೆಯಿಂದ ಕನ್ನಡಕ್ಕೆ ಪೆಟ್ಟುಬಿದ್ದರೆ ವಚನ ಸಾಹಿತ್ಯಕ್ಕೂ ಪೆಟ್ಟು ಬೀಳುತ್ತದೆ. ಎಷ್ಟು ಜನ ಬಸವ ಸಂಘಟನೆಯವರು ಕನ್ನಡಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಅನುಭವ ಮಂಟಪ ಪ್ರಪಂಚದ ಮೊದಲ ಸಂಸತ್ತು ಎಂದು ಘಂಟಾಘೋಷವಾಗಿ ಹೇಳುತ್ತೇವೆ. ಆದರೆ ಪ್ರಜಾಪಭುತ್ವಕ್ಕೆ ಗಂಡಾಂತರ ಬಂದಾಗ ನಾವು ಸ್ಪಂದಿಸಿದ್ದೇವಾ ಎಂದು ಕೇಳಿದರು.
ಎಸ್ಐಆರ್ ನಿಂದ ಜನ ಮತ ಹಾಕುವ ಹಕ್ಕು ಕಳೆದುಕೊಳ್ಳುತ್ತಾರೆ, ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಬಲಹೀನವಾಗುತ್ತವೆ. ಇವುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಎಂದು ಹೇಳಿದರು.
MSPL, ತುಂಗಭದ್ರಾ ಹೂಳು ಎತ್ತುವ ಸಮಸ್ಯೆ, ಮಾಲಿನ್ಯ ಮುಂತಾದ ವಿಷಯಗಳಿಗೂ ಬಸವ ಸಂಘಟನೆಗಳು ಸ್ಪಂದಿಸಬೇಕೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿ ರುದ್ರಪ್ಪ ಬಡಜನರಿಗೆ ಎಸ್ಐಆರ್ ಗಂಭೀರ ಸಮಸ್ಯೆಯಾಗುತ್ತಿದೆ. ಸಿಂಧನೂರಿನಲ್ಲಿ ಗುಳೆ ಹೋಗಿರುವ ಸಾವಿರಾರು ಜನರಿಗೆ ಮತ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.
ಜನರ ಸಮಸ್ಯೆಗಳಿಗೆ ಬಸವ ಸಂಘಟನೆಗಳು ಸ್ಪಂದಿಸಬೇಕು

ನಂತರ ಮಾತನಾಡಿದ ಎಸ್ ವೈ ಗುರುಶಾಂತ ಲಿಂಗಾಯತ ಕನ್ನಡನಾಡಿನ ಏಕೈಕ ನೆಲಮೂಲದ ಧರ್ಮ ಎಂದು ಹೇಳಿದರು.
ಯಾವುದೇ ವೇದ ಪಾಠಶಾಲೆಯಲ್ಲಿ ರೂಪುಗೊಳ್ಳದೆ ಕಾಯಕ ಜೀವಿಗಳ ಹೋರಾಟದ ಬದುಕನ್ನು ಬಿಂಬಿಸಿದ ಶರಣರು ಇಂದಿಗೂ ಕೆಲವರು ನಡುಗುವಂತಹ ಚಿಂತನೆ ನೀಡಿದ್ದಾರೆ, ಎಂದು ಹೇಳಿದರು.
ಅವರ ತತ್ವ ಸ್ಥಗಿತವಾಗಲು ಬಿಡದೆ ಚಲನಶೀಲತೆಯಿಂದ ಇಂದಿನ ಸಮಸ್ಯೆಗಳಿಗೆ ಸ್ಪಂದಿಸುವಂತೆ ರೂಪಿಸಬೇಕು ಎಂದು ಹೇಳಿದರು.
ಕೃಷಿ, ಶಿಕ್ಷಣ ಕ್ಷೇತ್ರಗಳ ಸಮಸ್ಯೆಗಳು, ಮಾಲಿನ್ಯ, ಜಾತಿ ದೌರ್ಜನ್ಯ ಮುಂತಾದ ವಿಷಯಗಳಿಗೆ ಬಸವ ಸಂಘಟನೆಗಳು ಸ್ಪಂದಿಸಬೇಕು. ಹಳ್ಳಿ ಹಳ್ಳಿಗಳಲ್ಲಿ ಬಸವ ಶಕ್ತಿ ಶಿಬಿರ ನಡೆಯಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದ ನಂತರ ಹಲವಾರು ಬಸವ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವ ಕಲ್ಯಾಣದಲ್ಲಿ ಸಂಘ ಪರಿವಾರ ಆಯೋಜಿಸುತ್ತಿರುವ ಬಸವ ಭಾರತ ಉತ್ಸವವನ್ನು ವಿರೋಧಿಸಲು ಅನೇಕರು ಕರೆ ನೀಡಿದರು. ಜಿಲ್ಲೆ ತಾಲೂಕುಗಳಲ್ಲಿ ಬಸವ ಶಕ್ತಿ ಶಿಬಿರ ನಡೆಸಿದ ಮೇಲೆ ರಾಜ್ಯ ಮಟ್ಟದ ಸಮಾವೇಶ ನಡೆಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಗೋಷ್ಠಿಗಳ ನಂತರ ಮೊದಲ ಅನುಭವ ಮಂಟಪ ಜಾಗೃತಿ ಶಿಬಿರವೂ ನಡೆಯಿತು.
