2ಎ ಮೀಸಲಾತಿಗೆ ಹಲವು ಕಡೆ ಬಣಜಿಗ ಸಮಾಜದಿಂದ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಲ್ಹಾರ

ಸಮುದಾಯಕ್ಕೆ ಉದ್ಯೋಗ ಮೀಸಲಾತಿಯನ್ನು 2ಎ ಅಡಿ ನೀಡಬೇಕು ಎಂದು ಆಗ್ರಹಿಸಿ ಬಣಜಿಗ ಸಮಾಜದ ಮುಖಂಡರು ತಹಶೀಲ್ದಾರ್ ಸಂತೋಷ ಮ್ಯಾಗರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮೈಸೂರು ಜಿಲ್ಲೆಯ ಶಿಕ್ಷಕಿ ಸುಮಿತ್ರಾ ಸಲ್ಲಿಸಿದ್ದ ಪ್ರಕರಣದ ಕುರಿತು 2025ರ ಏಪ್ರಿಲ್ 9ರಂದು ಹೈಕೋರ್ಟ್‌ ನೀಡಿದ ತೀರ್ಪನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತೀರ್ಪಿನಲ್ಲಿ ಬಣಜಿಗ ಸಮುದಾಯವನ್ನು ಉದ್ಯೋಗಕ್ಕಾಗಿ ಪ್ರವರ್ಗ ‘ಡಿ’ ಹಾಗೂ ಶಿಕ್ಷಣಕ್ಕಾಗಿ ಪ್ರವರ್ಗ ‘ಬಿ’ ಅಡಿಯಲ್ಲಿ ವರ್ಗೀಕರಿಸಿರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸಂವಿಧಾನದ ಪರಿಚ್ಛೇದ 16(4)ರ ಅನ್ವಯ ಉದ್ಯೋಗ ಮೀಸಲಾತಿಗೂ ಪ್ರವರ್ಗ ‘ಬಿ’ (ಪ್ರಸ್ತುತ 2ಎ) ಅಡಿಯಲ್ಲಿಯೇ ಪರಿಗಣಿಸುವಂತೆ ಮರು ವರ್ಗೀಕರಣಕ್ಕೆ ಆದೇಶ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಬಣಜಿಗ ಸಮುದಾಯ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ಉದ್ಯೋಗಗಳಲ್ಲಿ ಸಮರ್ಪಕ ಅವಕಾಶಗಳಿಂದ ವಂಚಿತವಾಗುತ್ತಿದೆ. ಹೀಗಾಗಿ ಹೈಕೋರ್ಟ್‌ ಆದೇಶವನ್ನು ಶೀಘ್ರ ಜಾರಿಗೆ ತಂದು, ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ

ಜಿಲ್ಲಾ ಬಣಜಿಗ ಸಮಾಜ ಘಟಕದ ವತಿಯಿಂದ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬಣಜಿಗ ಸಮಾಜ ಘಟಕದ ಜಿಲ್ಲಾಧ್ಯಕ್ಷ ವೀರೇಶ್ ಬಂಗಾರಶೆಟ್ರು ಮಾತನಾಡಿ ‘ಬಣಜಿಗ ಸಮುದಾಯದವರು ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ ಬಣಜಿಗ ಸಮುದಾಯವನ್ನು ಪರಿಚ್ಛೇದ16(4)ರ ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ವರ್ಗೀಕರಿಸಬೇಕು. ಈ ಮೂಲಕ ಹೈಕೋರ್ಟ್‌ ಪೀಠದ ಆದೇಶದಂತೆ ಬಣಜಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಂಬಂಧಿಸಿದ ಇಲಾಖೆಗೆ ಸೂಕ್ತ ಆದೇಶ ನೀಡಲು ವಿನಂತಿಸುತ್ತೇವೆ’ ಎಂದು ಹೇಳಿದರು.

ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ‘ಸಂಬಂಧಪಟ್ಟ ಸಚಿವಾಲಯಕ್ಕೆ ಕಳಿಸಲಾಗುವುದು’ ಎಂದು ಹೇಳಿದರು.

ಗದಗ, ನರಗುಂದ, ಗಜೇಂದ್ರಗಡ, ರೋಣ, ಮುದ್ದೇಬಿಹಾಳ, ಸಿಂದಗಿ, ಅಫಜಲಪುರ, ದೇವರಹಿಪ್ಪರಗಿ, ಹುನಗುಂದ ಮತ್ತಿತರ ಊರುಗಳಲ್ಲಿಯೂ ಮನವಿ ಸಲ್ಲಿಕೆಯಾಗಿದೆ.

ಮೌನ ಮೆರವಣಿಗೆ


ಇದೇ ವಿಷಯದ ಮೇಲೆ ಸಿಂದಗಿ ತಾಲ್ಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಈಚೆಗೆ ಮೌನ ಮೆರವಣಿಗೆ ನಡೆಯಿತು.

ನಗರದ ಸ್ವಾಮಿ ವಿವೇಕಾಂದ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ದಿವಂಗತ ಎಂ.ಸಿ.ಮನಗೂಳಿ ಮುಖ್ಯರಸ್ತೆ ಮಾರ್ಗವಾಗಿ ನೇರವಾಗಿ ತಾಲ್ಲೂಕು ಪ್ರಜಾಸೌಧ ಗೆ ತಲುಪಿತು.

ಅಲ್ಲಿ ನಡೆದ ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವು ಹತ್ತಿ ಮಾತನಾಡಿ, ಬಣಿಜಿಗ ಸಮುದಾಯ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಸಂದರ್ಭ ಬಂದಿದೆ.

ಈಗ ಶಿಕ್ಷಣ ಸೌಲಭ್ಯಕ್ಕಾಗಿ ಮಾತ್ರ ಪ್ರವರ್ಗ ಬಿ(2ಎ) ಮೀಸಲಾತಿ ಇದೆ. ಆದರೆ ಉದ್ಯೋಗಕ್ಕಾಗಿ ಮೀಸಲಾತಿ ಪ್ರವರ್ಗ 3ಎ ಇದೆ. ಹೀಗಾಗಿ ನಮಗೆ ಶಿಕ್ಷಣದ ಜೊತೆಗೆ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯೂ ಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *