ಕೊಪ್ಪಳ:
ತಾಲೂಕಿನ ಅಳವಂಡಿ ಗ್ರಾಮದ ರಾಜೇಶ್ವರಿ ಮತ್ತು ಬಸವರಾಜ ಕಾತರಕಿ ಶರಣ ದಂಪತಿ, ಮುಂಡರಗಿ ಪಟ್ಟಣದಲ್ಲಿ ನಿರ್ಮಿಸಿದ ನೂತನ ಮನೆಯ “ಗುರುಪ್ರವೇಶ” ಕಾರ್ಯಕ್ರಮ ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಅಪ್ಪಗಳವರ ಸನ್ನಿಧಿ ಮತ್ತು ನೇತೃತ್ವದಲ್ಲಿ ನಡೆಯಿತು.

ಶರಣತತ್ವ ಅನುಸಾರ ಗೃಹಪ್ರವೇಶವಾಯಿತು.
ಹೊಸಮನೆ ಸಮೀಪದ ಕೂಡುರಸ್ತೆಯ ವೃತ್ತದಲ್ಲಿನ ಒಂದು ಪ್ರಶಸ್ಥ ಸ್ಥಳದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮತ್ತು ವಚನ ಸಾಹಿತ್ಯ ಗ್ರಂಥಗಳಿಗೆ ಪೂಜೆ ನೆರವೇರಿಸಲಾಯಿತು.

ಕುಟುಂಬಸ್ಥರು ಬಸವಣ್ಣನವರ ಭಾವಚಿತ್ರ ಹಿಡಿದುಕೊಂಡು ಮತ್ತು ಮನೆಯವರು ಹಾಗೂ ಬಂಧು-ಮಿತ್ರರು ವಚನ ಗ್ರಂಥಗಳನ್ನು ತಲೆಯ ಮೇಲೆ ಹೊತ್ತು ಹೊಸಮನೆಯವರೆಗೆ ವಚನಗಳನ್ನು ಘೋಷಿಸುತ್ತ ಮತ್ತು ಹಾಡುತ್ತ ಬಂದರು.

ಹೊಸಮನೆ ಮುಂಭಾಗ ವಿಶ್ವನಾಥ ಬಸವರಾಜ ಕಾತರಕಿ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ನಂತರ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮತ್ತು ವಚನಸಾಹಿತ್ಯ ಗ್ರಂಥಗಳೊಂದಿಗೆ ಮನೆಯೊಳಗೆ “ಗುರುಪ್ರವೇಶ” ಮಾಡಿ, ಮನೆಯ ತುಂಬೆಲ್ಲಾ ಸಂಚರಿಸಿ, ಬಸವಣ್ಣನವರ ಭಾವಚಿತ್ರ ಮತ್ತು ವಚನಸಾಹಿತ್ಯ ಗ್ರಂಥಗಳನ್ನು ಮನೆಯ ದೊಡ್ಡ ಹಾಲ್ ನಲ್ಲಿ ಸ್ಥಾಪಿಸಲಾಯಿತು.
ನೆರೆದ ಎಲ್ಲ ಜನರು ಹಾಲ್ ನಲ್ಲಿ ಕುಳಿತು ಬಸವಾದಿ ಶರಣರ ಐದು ವಚನಗಳ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಪೂಜ್ಯ ಮಹಾಂತಪ್ಪಗಳಿಂದ ಅನುಭಾವ ನಡೆಯಿತು. ಇದಾದ ಮೇಲೆ ಇಷ್ಟಲಿಂಗ ಯೋಗ ಜರುಗಿತು. ಪೂಜ್ಯರು ರಾಜೇಶ್ವರಿ ಮತ್ತು ಬಸವರಾಜ ಕಾತರಕಿ ದಂಪತಿಗಳ ಮೊಮ್ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ಪ್ರದಾನ ಮಾಡಿದರು.
ಮತ್ತು ಮನೆಯ ಸೊಸೆಯವರಿಗೆ ಗರ್ಭಲಿಂಗ ಸಂಸ್ಕಾರ ನೀಡಿದರು.
ಕಾರ್ಯಕ್ರಮಕ್ಕೆ ಬಂದವರೆಲ್ಲ ಕಾತರಕಿ ಕುಟುಂಬಕ್ಕೆ ಶುಭಕೋರಿದರು.

ಕೊಪ್ಪಳ ವಿಶ್ವ ಪರಮೋಚ್ಚ ಪ್ರಜ್ಞಾ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಸಂಗಮೇಶ ಕಲಹಾಳ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಹನಮೇಶ ಕಲ್ಮಂಗಿ, ಕಾರ್ಯದರ್ಶಿ ರಾಜೇಶ ಸಸಿಮಠ, ರಾಷ್ಟ್ರೀಯ ಬಸವದಳ ಟಣಕನಕಲ್ಲ ಕಾರ್ಯದರ್ಶಿ ಶಿವಬಸಯ್ಯ ವೀರಾಪೂರ, ನೀಲಮ್ಮತಾಯಿ ಮಹಿಳಾ ಪ್ರತಿಷ್ಠಾನ ಅಧ್ಯಕ್ಷರಾದ ಅರ್ಚನಮ್ಮ ಸಸಿಮಠ, ಗವೀಶ ಸಸಿಮಠ, ಗವಿಸಿದ್ದಪ್ಪ ಪಲ್ಲೇದ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷರಾದ ವೀರಭದ್ರಪ್ಪ ನಂದ್ಯಾಲ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಕುಮಾರ ಕುಕನೂರ, ಶರಣಮ್ಮ ಕಲ್ಮಂಗಿ, ಬಸಮ್ಮ ವೀರಾಪುರ, ಗದಗ ಬಸವದಳದ ವಿ.ಕೆ. ಕರೇಗೌಡ್ರ, ಪ್ರಕಾಶ ಅಸುಂಡಿ, ನಾಗಭೂಷಣ ಬಡಿಗಣ್ಣವರ, ನಾಗರತ್ನ ಅಸುಂಡಿ, ಗೌರಕ್ಕ ಬಡಿಗಣ್ಣವರ, ಕೊಪ್ಪಳ ಬಸವ ಬಳಗ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
