ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 6
ಪೊಡವಿಯಲಿ ನೆರೆಗುಪ್ತ ಭಕ್ತಿಯ
ಲಡಗಿದೈಕ್ಯ ಸ್ಥಳ ಸಮಾಧಿಯ
ನೋಡರಿಚಿದನಜ್ಜಗಣ್ಣನೆಂಬ ಮಹಾತ್ಮನಾತಂಗೆ
ಒಡನೆಗುಟ್ಟಿದಳೊಬ್ಬಳರಿಯದೆ
ಕಡು ಖತಿಯಲಿರುತಿರಲಿಕಲ್ಲಮ
ನಡೆದು ಬಂದನು ಮಾಣಿಸಲು ಮುಕ್ತಾಯ ಮನದಳು
ಅಜಗಣ್ಣ ಎಂಬ ಶರಣನಿಗೆ ಮುಕ್ತಾಯಿ ಎಂಬ ತಂಗಿ ಇದ್ದಳು. ಮುಕ್ತಾಯಿ ತುಂಬಾ ಭಕ್ತಿಭಾವದವಳು. ಆದರೆ ಒಂದು ಸಂದರ್ಭದಲ್ಲಿ ಅವಳು ದುಃಖದಲ್ಲಿದ್ದಾಗ, ಅವಳ ಮನಸ್ಸಿಗೆ ನೆಮ್ಮದಿ ಸಿಗದೆ ಕಳವಳಗೊಂಡಿದ್ದಳು. ಆಗ ಅಲ್ಲಮಪ್ರಭು ಅವಳ ಬಳಿಗೆ ಬಂದು, ಅವಳಿಗೆ ಮುಕ್ತಿಯ ನಿಜವಾದ ಮಾರ್ಗವನ್ನು ತಿಳಿಸಿಕೊಡುತ್ತಾನೆ. ಈ ಪ್ರಸಂಗ ಪ್ರಭುಲಿಂಗಲೀಲೆಯಲ್ಲಿ ಮತ್ತು ಶೂನ್ಯಸಂಪಾದನೆಯಲ್ಲಿ ಬಹಳ ಮನೋಜ್ಞವಾಗಿ ಮೂಡಿಬಂದಿದೆ.
ಅಲ್ಲಮಪ್ರಭುವಿನ ಮಹಿಮೆಯನ್ನು ವರ್ಣಿಸುವುದು ಸುಲಭದ ಮಾತಲ್ಲ. ಕಬ್ಬಿನಲ್ಲಿರುವ ಸಿಹಿಯನ್ನು ಕಣ್ಣಿಗೆ ಕಾಣಿಸಲಾಗುವುದಿಲ್ಲ, ಆದರೆ ಅದನ್ನು ಸವಿದಾಗ ಅದರ ಸಿಹಿ ಗೊತ್ತಾಗುತ್ತದೆ. ಅರಿಶಿನದೊಳಗಿನ ಹಳದಿ ಬಣ್ಣವನ್ನು ಬೇರ್ಪಡಿಸಿ ತೋರಿಸಲಾಗುವುದಿಲ್ಲ. ಬೆಂಕಿಯೊಳಗಿನ ಕರ್ಪೂರದ ಪರಿಮಳವನ್ನು ಹಿಡಿದು ತೋರಿಸಲಾಗುವುದಿಲ್ಲ. ಬಯಲಲ್ಲಿ ಹರಡುವ ಗಾಳಿಯನ್ನು ಕೈಯಲ್ಲಿ ಹಿಡಿದುಕೊಳ್ಳಲಾಗುವುದಿಲ್ಲ. ಹಾಗೆಯೇ ಶಿವಶರಣರ ಮಹಿಮೆಯನ್ನೂ ಬರೀ ಮಾತಿನಿಂದ ಸಂಪೂರ್ಣವಾಗಿ ಹೇಳಲಾಗುವುದಿಲ್ಲ. ಅದನ್ನು ಅನುಭವಿಸಿದಾಗ ಮಾತ್ರ ಅದರ ನಿಜವಾದ ಅರ್ಥ ಗೊತ್ತಾಗುತ್ತದೆ. ಈ ಭಾವವನ್ನು ಮುಕ್ತಾಯಿ ತನ್ನ ವಚನದಲ್ಲಿ ಬಹಳ ಸುಂದರವಾಗಿ ವ್ಯಕ್ತಪಡಿಸುತ್ತಾಳೆ. “ಅರಿವಡೆ ಮತಿಯಿಲ್ಲ, ನೆನಿವಡೆ ಮನವಿಲ್ಲ” ಎಂಬ ಸ್ಥಿತಿಯಲ್ಲಿ ತನ್ನ ತಂದೆಯಾದ ಅಜಗಣ್ಣನೊಳಗಿರುವ ಶಿವತತ್ತ್ವಕ್ಕೆ ನಮಸ್ಕರಿಸುತ್ತಾ, ಶಿವಶರಣರ ಮಹಿಮೆಗೆ ನಮನ ಸಲ್ಲಿಸುತ್ತಾಳೆ.
ಅಲ್ಲಮಪ್ರಭು ಅನಿಮಿಷಯೋಗಿಯಿಂದ ಇಷ್ಟಲಿಂಗದ ಅನುಗ್ರಹವನ್ನು ಪಡೆದ ನಂತರ, ತನ್ನ ಗುರು ತೋರಿಸಿದ ಮಾರ್ಗವನ್ನು ಮುಂದುವರಿಸುತ್ತಾನೆ. ಆದರೆ ಅವನು ಮೌನವಾಗಿ ಸಮಾಧಿಯಲ್ಲಿ ಮುಳುಗಿ ಲೋಕದಿಂದ ದೂರವಾಗುವುದಿಲ್ಲ. ಸಗುಣ ಮತ್ತು ನಿರ್ಗುಣ ತತ್ತ್ವಗಳ ಅನುಭವವನ್ನು ತನ್ನೊಳಗೆ ತುಂಬಿಕೊಂಡು, ಜಂಗಮಲಿಂಗದ ಅನುಭವದಲ್ಲಿ ಬದುಕುತ್ತಾ, ಶಿವಶರಣರ ಆಚರಣೆ, ವಿಚಾರ, ಗುಣ, ಸ್ವಭಾವ ಮತ್ತು ಸ್ವಧರ್ಮಗಳನ್ನು ಅರಿತುಕೊಂಡು ಶಿವಜ್ಞಾನ, ಶಿವಭಕ್ತಿ ಮತ್ತು ಶಿವಾನುಭವಗಳಲ್ಲಿ ಪರಿಪೂರ್ಣನಾಗುತ್ತಾನೆ.
ಅವನ ದೇಹ, ಕರಣ ಮತ್ತು ಇಂದ್ರಿಯಗಳಲ್ಲಿಯೂ ಶಿವಜ್ಞಾನವೇ ತುಂಬಿರುತ್ತದೆ. ಅವನ ಬದುಕಿನಲ್ಲಿ ಉಳಿದಿದ್ದ ಸೂಕ್ಷ್ಮವಾದ ಅಜ್ಞಾನ, ಭೇದಭಾವ ಮತ್ತು ಬಂಧನಗಳನ್ನೂ ಒಂದೊಂದಾಗಿ ಕಳೆದುಹಾಕುತ್ತಾನೆ. ಹೀಗೆ ಸಚ್ಚಿದಾನಂದದ ನಿತ್ಯಪೂರ್ಣವಾದ ದಿವ್ಯಸ್ಥಿತಿಯಲ್ಲಿ ಜೀವಿಸುವ ಸ್ಥಿತಿಗೆ ತಲುಪುತ್ತಾನೆ. ಈ ಹಂತದಲ್ಲಿ ಅಲ್ಲಮಪ್ರಭುವಿನ ಸಾಧನೆ ಕೇವಲ ತನ್ನ ಮುಕ್ತಿಗಷ್ಟೇ ಸೀಮಿತವಾಗುವುದಿಲ್ಲ. ತನ್ನ ಅನುಭವದಿಂದ ಇತರರಿಗೂ ಮುಕ್ತಿಯ ದಾರಿಯನ್ನು ತೋರಿಸುವ ಜಗದ್ಗುರುವಿನ ಪಾತ್ರವನ್ನು ವಹಿಸುತ್ತಾನೆ.
ಈ ಸಂದರ್ಭದಲ್ಲಿ ಗುಹೇಶ್ವರ ಲಿಂಗದ ದಿವ್ಯತತ್ತ್ವವನ್ನು ತನ್ನೊಳಗೆ ಅನುಭವಿಸಿಕೊಂಡು, ಗುಪ್ತಭಕ್ತನಾದ ಅಜಗಣ್ಣನ ಐಕ್ಯಸ್ಥಲದ ಮಹಿಮೆಯನ್ನು ಮುಕ್ತಾಯಿಗೆ ಮನಗಾಣಿಸಿಕೊಡಲು ಅಲ್ಲಮ ಬರುತ್ತಾನೆ. ಅಜಗಣ್ಣನ ಸಾಧನೆಯ ಪರಿಪಕ್ವತೆ, ಅವನ ಅಂತರಂಗದ ಭಕ್ತಿ ಮತ್ತು ಅವನ ಶಿವತತ್ತ್ವದೊಂದಿಗಿನ ಐಕ್ಯವನ್ನು ಮುಕ್ತಾಯಿಗೆ ತಿಳಿಸಿ, ಅವಳ ಮನಸ್ಸಿನಲ್ಲಿದ್ದ ದುಃಖ, ಗೊಂದಲ ಮತ್ತು ಅಜ್ಞಾನವನ್ನು ದೂರಮಾಡುತ್ತಾನೆ.
ಮುಕ್ತಾಯಿಗೆ ಅಲ್ಲಮನು ತಿಳಿಸುವ ಸಂದೇಶ ಸ್ಪಷ್ಟವಾಗಿದೆ. ಮುಕ್ತಿ ಅಂದರೆ ಎಲ್ಲವನ್ನೂ ಬಿಟ್ಟು ಓಡಿ ಹೋಗುವುದಲ್ಲ. ಹೊರಗಿನ ಆಚರಣೆಗಳನ್ನೇ ಮಾಡುತ್ತಾ ಇರುವುದೂ ಅಲ್ಲ. ತನ್ನೊಳಗಿನ ‘ನಾನು’ಎಂಬ ಭಾವವನ್ನು ಕರಗಿಸಿ, ಶಿವತತ್ತ್ವದೊಂದಿಗೆ ಒಂದಾಗುವ ಅನುಭವವನ್ನು ಪಡೆಯುವುದೇ ನಿಜವಾದ ಮುಕ್ತಿ. ಭಕ್ತಿ ಕೇವಲ ಮಾತಿನಲ್ಲಿ ಇರಬಾರದು, ಅದು ಬದುಕಿನಲ್ಲಿ ಕಾಣಬೇಕು. ಜ್ಞಾನ ಕೇವಲ ತಿಳುವಳಿಕೆಯಾಗಿರಬಾರದು, ಅದು ಅನುಭವವಾಗಬೇಕು. ಕಾಯಕ, ಭಕ್ತಿ, ಜ್ಞಾನ ಮತ್ತು ಶಿವಾನುಭವಗಳು ಒಂದಾಗಿ ಪರಿಪಕ್ವವಾದಾಗಲೇ ಜೀವನು ತನ್ನ ನಿಜಸ್ವರೂಪವನ್ನು ಅರಿಯಲು ಸಾಧ್ಯ.
ಹೀಗೆ ಅಲ್ಲಮಪ್ರಭು ಮುಕ್ತಾಯಿಗೆ ಕೇವಲ ದುಃಖದಿಂದ ಹೊರಬರುವ ಉಪಾಯವನ್ನಲ್ಲ, ಜೀವನದ ಪರಮಾರ್ಥವನ್ನು ತಿಳಿಸುವ ಮುಕ್ತಿಮಾರ್ಗದರ್ಶನವನ್ನು ನೀಡುತ್ತಾನೆ. ಅಜಗಣ್ಣನ ಗುಪ್ತಭಕ್ತಿ ಮತ್ತು ಐಕ್ಯಸ್ಥಲದ ಮಹಿಮೆಯನ್ನು ಅವಳಿಗೆ ಮನಗಾಣಿಸಿ, ಅವಳ ಮನಸ್ಸನ್ನು ಶಿವಜ್ಞಾನದ ಕಡೆಗೆ ತಿರುಗಿಸುತ್ತಾನೆ. ಮುಕ್ತಾಯಿಯ ಅಂತರಂಗದಲ್ಲಿ ಹೊಸ ಅರಿವು ಮೂಡುತ್ತದೆ. ಅವಳಿಗೆ ಮುಕ್ತಿ ಎಂಬುದು ದೂರದಲ್ಲಿರುವ ಯಾವುದೋ ಗುರಿಯಲ್ಲ, ತನ್ನೊಳಗಿನ ಶಿವತತ್ತ್ವವನ್ನು ಅರಿತು ಅದರಲ್ಲಿ ನೆಲೆಗೊಳ್ಳುವ ಅನುಭವ ಎಂಬ ಸತ್ಯ ತಿಳಿಯುತ್ತದೆ. ಹೀಗೆ ಅಲ್ಲಮಪ್ರಭುವಿನ ಲೋಕಕಲ್ಯಾಣದ ಪಯಣದಲ್ಲಿ ಮುಕ್ತಾಯಿಗೂ ಮುಕ್ತಿಯ ದಾರಿ ತೆರೆದುಕೊಳ್ಳುತ್ತದೆ.
ಅಜಗಣ್ಣನು ಲೋಕಕಲ್ಯಾಣಕ್ಕಾಗಿ ಕೈಲಾಸದಿಂದ ಮರ್ತ್ಯಲೋಕಕ್ಕೆ ಇಳಿದು ಬಂದ ಒಬ್ಬ ಪ್ರಮಥ ಗಣಾಧೀಶ್ವರ. ಆದರೆ ಅವನು ತನ್ನ ನಿಜವಾದ ಭಕ್ತಿಯನ್ನು ಲೋಕಕ್ಕೆಲ್ಲಾ ತೋರಿಸಿಕೊಳ್ಳದೆ, ಅದನ್ನು ಗುಪ್ತವಾಗಿಟ್ಟುಕೊಂಡು, ಅಂತರಂಗದ ಶಿವಾನುಭವದಲ್ಲೇ ಬದುಕುತ್ತಿದ್ದ. ತನ್ನ ಭಕ್ತಿ ಲೋಕಕ್ಕೆ ಬಹಿರಂಗವಾದ ದಿನವೇ ತನ್ನ ಜೀವನದ ಕೊನೆಯ ದಿನ ಅಂತ ಅವನು ಭಾವಿಸಿದ್ದ. ಅಜಗಣ್ಣನು ಲಿಂಗೈಕ್ಯನಾದಾಗ, ಅವನ ಅಗಲಿಕೆಯಿಂದ ಮುಕ್ತಾಯಿಗೆ ಲೋಕದ ಸಾಮಾನ್ಯ ಜನರಂತೆ ಪ್ರಲಾಪ ಮಾಡಲು ಆಗಲಿಲ್ಲ. ಅಣ್ಣ ಸತ್ತನೆಂದು ಅವಳು ಬರೀ ದೇಹದ ಅಗಲಿಕೆಗೆ ಅಳಲಿಲ್ಲ. ಯಾಕಂದ್ರೆ ಅವಳಿಗೆ ಅಜಗಣ್ಣನ ದೇಹ, ಪ್ರಾಣ, ಕರಣ, ಜೀವಭಾವ ಇವೆಲ್ಲವೂ ನಾಶವಾಗುವಂಥವು ಅಲ್ಲ ಅನ್ನೋ ಅರಿವು ಇತ್ತು.
ಆದರೆ ಅಣ್ಣನ ಮುಖದಲ್ಲಿ ಯಾವ ದುಃಖವೂ ಕಾಣದೆ, ಯಾವ ಗೊಂದಲವೂ ಇಲ್ಲದೆ, ಶಾಂತವಾಗಿ ಲಿಂಗೈಕ್ಯದ ಮಹಾಘನ ಸ್ಥಿತಿಗೆ ಸಾಗಿದ ಅವನ ದಿವ್ಯಸ್ವರೂಪವನ್ನು ಕಂಡಾಗ ಮುಕ್ತಾಯಿಯ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಕೊರತೆ ಮೂಡುತ್ತದೆ. ಅಣ್ಣನೊಳಗಿದ್ದ ಆ ಮಹಾಘನತೆಯೊಂದಿಗೆ ತಾನೂ ಒಂದಾಗಬೇಕು ಅನ್ನೋ ಹಂಬಲ ಅವಳೊಳಗೆ ಉಕ್ಕಿ ಬರುತ್ತದೆ. ಅಣ್ಣನ ರೂಪ ಕಣ್ಣಿಗೆ ಕಾಣದೆ ಹೋದರೂ, ಅವನೊಳಗೆ ಹೊಳೆಯುತ್ತಿದ್ದ ಶಿವಜ್ಯೋತಿಯನ್ನ ಮಾತ್ರ ಅವಳು ಮರೆಯಲಾಗುವುದಿಲ್ಲ. ಆ ಅಂತರ್ಜ್ಯೋತಿಯನ್ನು ತಾನೂ ಅನುಭವಿಸಬೇಕು ಅನ್ನೋ ಆಸೆ ಅವಳ ಮನಸ್ಸನ್ನು ತುಂಬಿಕೊಳ್ಳುತ್ತದೆ.
ಅಣ್ಣನಾದ ಅಜಗಣ್ಣನು ಅವಳಿಗೆ ಬರೀ ಅಣ್ಣನಲ್ಲ. ಅವನೇ ಅವಳ ಗುರು, ತಂದೆ, ಬದುಕಿನ ಜ್ಯೋತಿ ಮತ್ತು ಅಧ್ಯಾತ್ಮದ ಮಾರ್ಗದರ್ಶಿ. ಅವನ ನೆರವಿನಿಂದಲೇ ಮುಕ್ತಾಯಿ ಆತ್ಮಸಾಕ್ಷಾತ್ಕಾರದ ಸಾಧನೆಯ ದಾರಿಯಲ್ಲಿ ಇಷ್ಟು ದೂರ ಬಂದಿದ್ದಳು. ಆದರೆ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ತನ್ನನ್ನು ಬಿಟ್ಟು ಅಣ್ಣ ಲಿಂಗೈಕ್ಯನಾದಾಗ, “ಅಣ್ಣನೇ ನನ್ನ ಬದುಕಿನ ದಾರಿ ತೋರಿಸಿದವನು. ಈಗ ಅವನು ನನ್ನನ್ನು ಬಿಟ್ಟು ಹೋದರೆ ನಾನು ಹೇಗೆ ಬದುಕಲಿ? ನನಗೆ ಇನ್ನು ಗತಿಯಾರು?” ಅನ್ನೋ ಆಳವಾದ ಪ್ರಶ್ನೆ ಅವಳ ಮನಸ್ಸಿನಲ್ಲಿ ಮೂಡುತ್ತದೆ. ಅವಳ ಒಳಗಿನ ಈ ನೋವು ಸಾಮಾನ್ಯ ಅಳುವಲ್ಲ. ಅದು ತನ್ನನ್ನು ಶಿವಾನುಭವದ ದಾರಿಯಲ್ಲಿ ಇನ್ನೂ ಮುಂದೆ ಕರೆದೊಯ್ಯುವ ಗುರುವನ್ನು ಕಳೆದುಕೊಂಡ ನೋವು.
ಅಜಗಣ್ಣನು ಹೊರಗಿನಿಂದ ನೋಡಿದಾಗ ಸಾಮಾನ್ಯ ಲೋಕದ ಮನುಷ್ಯನಂತೆ ಕಾಣುತ್ತಿದ್ದರೂ, ಒಳಗಿನಿಂದ ಲಿಂಗದ ತಿರುಳನ್ನು ಅರಿತ ಶಿವಯೋಗಿ ಮತ್ತು ಶಿವಶರಣನಾಗಿದ್ದ. ಅವನ ಭಕ್ತಿ, ಪೂಜೆ, ಮಂತ್ರ, ಧ್ಯಾನ, ಯೋಗಸಾಧನೆ ಎಲ್ಲವೂ ಹೊರಗಿನ ಪ್ರದರ್ಶನವಾಗಿರಲಿಲ್ಲ. ಹಾವೊಂದು ತನ್ನ ಹೆಡೆಯೊಳಗೆ ರತ್ನವನ್ನು ಗುಪ್ತವಾಗಿ ಇಟ್ಟುಕೊಂಡಿರುವಂತೆ, ಅಜಗಣ್ಣನು ತನ್ನೊಳಗಿನ ಶಿವಾನುಭವವನ್ನು ಯಾರಿಗೂ ತೋರಿಸದೆ ಬದುಕುತ್ತಿದ್ದ. ಹೊರಗಿನಿಂದ ಅವನು ಭವಿಯಂತೆ ಕಾಣುತ್ತಿದ್ದರೂ, ಒಳಗಿನಿಂದ ಅವನು ಪರಿಪೂರ್ಣ ಭಕ್ತ. ಹೊರಗೆ ಘಟದಂತೆ ಕಾಣುತ್ತಿದ್ದರೂ, ಒಳಗೆ ಜ್ಞಾನಜ್ಯೋತಿ ತುಂಬಿಕೊಂಡಿತ್ತು. ಅವನು ಲೋಕದ ಕಣ್ಣಿಗೆ ಸಾಮಾನ್ಯನಂತೆ ಕಂಡರೂ, ಅಂತರಂಗದಲ್ಲಿ ಲಿಂಗತತ್ತ್ವದ ತಿರುಳನ್ನು ಅರಿತ ಶಿವಯೋಗಿಯಾಗಿದ್ದ.
ಅಜಗಣ್ಣನು ತನ್ನ ತಂಗಿ ಮುಕ್ತಾಯಿಗೆ ಯೋಗದ ಬಗ್ಗೆ ಪ್ರತ್ಯೇಕವಾಗಿ ಉಪದೇಶ ಮಾಡಲಿಲ್ಲ. ಮುಕ್ತಾಯಿಯೂ ಅಣ್ಣನ ಬಳಿ ಕುಳಿತು ಪ್ರಶ್ನೆ ಕೇಳಿ ಉಪದೇಶ ಪಡೆದವಳಲ್ಲ. ಅಣ್ಣನ ಮಾತು ಮೌನವಾಗಿತ್ತು, ತಂಗಿಯ ಕಿವಿಯೂ ಆ ಮೌನದ ಅರ್ಥವನ್ನು ಗ್ರಹಿಸುವಂತಿತ್ತು. ಅಣ್ಣನ ಬದುಕೇ ಅವಳಿಗೆ ಒಂದು ಮಹಾಕಾವ್ಯದಂತಿತ್ತು. ಅವನ ನಡೆ-ನುಡಿ, ಸಾಧನೆ, ಶಾಂತಸ್ವಭಾವ ಮತ್ತು ಲಿಂಗಾನುಭವಗಳನ್ನು ನೋಡುತ್ತಾ ಮುಕ್ತಾಯಿ ತನ್ನೊಳಗೆ ತಾನೇ ಯೋಗದ ಅರ್ಥವನ್ನು ಅರಿತುಕೊಂಡಳು. ಅಣ್ಣನ ಉಪದೇಶ ಬಾಯಿಂದ ಹೊರಬರಲಿಲ್ಲ, ಆದರೆ ಅವನ ಬದುಕೇ ಅವಳಿಗೆ ದೊಡ್ಡ ಉಪದೇಶವಾಯಿತು. ತಂಗಿಯ ಕಣ್ಣು ಕಂಡದ್ದೇ ಅವಳ ಅಂತರಂಗದಲ್ಲಿ ಮಹಾಧ್ವನಿಯಾಗಿ ಮೊಳಗಿತು.
ಈಗ ಅಜಗಣ್ಣನ ಲಿಂಗೈಕ್ಯದ ನಂತರ ಅವನೊಳಗಿನ ಗುಪ್ತ ಶಿವಾನುಭವವೂ ಬಹಿರಂಗವಾಗುವ ಪರಿಸ್ಥಿತಿ ಬಂತು. ಅವನ ಜೀವನದ ರಹಸ್ಯವನ್ನು ಮುಕ್ತಾಯಿ ತನ್ನ ಅನುಭವದಿಂದ ಅರಿತುಕೊಂಡಳು. ಆದರೆ ಆ ಅರಿವಿನ ಜೊತೆಗೆ ಅಣ್ಣನ ಅಗಲಿಕೆಯ ನೋವು ಅವಳನ್ನು ಕಾಡತೊಡಗಿತು. “ಇನ್ನು ನನಗೆ ಯಾರು ಗತಿ?” ಅನ್ನೋ ಪ್ರಶ್ನೆಯಲ್ಲಿ ಅವಳ ಮನಸ್ಸು ಮುಳುಗಿತು. ಅವಳಿಗೆ ಬೇಕಾಗಿದ್ದದ್ದು ಸಾಮಾನ್ಯ ಸಾಂತ್ವನವಲ್ಲ. ಅವಳೊಳಗೆ ಮೂಡಿದ್ದ ಈ ಆಳವಾದ ಆತ್ಮೀಯ ಕೊರತೆಯನ್ನು ಪರಿಹರಿಸಬಲ್ಲ ಗುರು ಬೇಕಾಗಿತ್ತು.
ದುಃಖದಿಂದ ಬಳಲಿದವರನ್ನು ಸಂತೈಸುವ ಮಹಾಕರುಣಾಮಯನಾದ ಜಂಗಮಲಿಂಗ ಪ್ರಭುದೇವನು ಮುಕ್ತಾಯಿಯ ಈ ಅಂತರಂಗದ ಸ್ಥಿತಿಯನ್ನು ಅರಿತುಕೊಳ್ಳುತ್ತಾನೆ. ಅವಳಿಗೆ ಏನು ನೋವಾಗಿದೆ, ಅವಳ ಮನಸ್ಸು ಯಾವ ದಿಕ್ಕಿನಲ್ಲಿ ಅಲೆದಾಡುತ್ತಿದೆ ಅನ್ನೋದನ್ನ ಪ್ರತ್ಯೇಕವಾಗಿ ಕೇಳಬೇಕಾದ ಅಗತ್ಯವೇ ಅವನಿಗೆ ಇರಲಿಲ್ಲ. ಅವಳ ಅಂತರಂಗವನ್ನೇ ತನ್ನೊಳಗೆ ತಾನಾಗಿ ಅರಿತುಕೊಂಡು, ಅವಳ ಚಿಂತೆಯನ್ನು ಪರಿಹರಿಸಿ, ಅವಳನ್ನು ಸನ್ಮಾರ್ಗಕ್ಕೆ ಕರೆದೊಯ್ಯಬೇಕೆಂದು ಅಲ್ಲಮಪ್ರಭು ಅವಳು ಇದ್ದಲ್ಲಿಗೆ ಬರುತ್ತಾನೆ.
“ನನ್ನ ಚಿಂತೆಯನ್ನು ಪರಿಹರಿಸೋಂಥ ಮಹಾತ್ಮ ನೀನು ನನಗೆ ಸಿಕ್ಕಿದ್ದೀಯಲ್ಲ, ಇದು ನನ್ನ ಪುಣ್ಯಕ್ಕೆ ಸಿಕ್ಕ ಫಲವೇ ಸರಿ” ಅಂತ ಮುಕ್ತಾಯಿ ಅಲ್ಲಮಪ್ರಭುವಿನ ಘನ ವ್ಯಕ್ತಿತ್ವವನ್ನು ಅರಿತು, ಭಕ್ತಿಯಿಂದ ವಂದಿಸಿ, ಗೌರವದಿಂದ ಅವನ ಕಡೆ ನೋಡುತ್ತಾಳೆ. ಅಣ್ಣ ಅಜಗಣ್ಣನ ಅಗಲಿಕೆಯ ನೋವಿನಿಂದ ಅವಳ ಮನಸ್ಸು ತುಂಬಾ ಭಾರವಾಗಿತ್ತು. ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಅವಳು ಸಾಮಾನ್ಯ ಲೋಕದವರಂತೆ ಪ್ರಲಾಪಿಸುತ್ತಿದ್ದಳು. ಆಗ ಅಲ್ಲಮಪ್ರಭು ಅವಳ ಮನಸ್ಸನ್ನು ಎಚ್ಚರಿಸಿ, ಅವಳ ದುಃಖದ ಮೂಲವೇನು ಅನ್ನೋದನ್ನು ತಿಳಿಸಿಕೊಡುತ್ತಾನೆ.
ಅಲ್ಲಮ ಅವಳಿಗೆ, “ತಾಯಿ ಮುಕ್ತಾಯಿ, ಭಕ್ತರಿಗೆ ಇಂಥ ಚಿಂತೆ, ಆಯಾಸ, ದುಃಖ ಯಾಕೆ ಬರಬೇಕು? ನೀನು ಜ್ಞಾನಿಯಾದ ಶಿವಶರಣಿ. ಅಜಗಣ್ಣನಂಥ ಜ್ಞಾನಿಯನ್ನು ಕಳೆದುಕೊಂಡೆ ಅಂತ ಲೋಕದವರಂತೆ ದುಃಖಪಡೋದು ನಿನಗೆ ತಕ್ಕದ್ದೇ? ಅವನು ಶಿವಯೋಗಿ ಅನ್ನೋದನ್ನ ಮರೆತು, ಅವನ ದೇಹವೇ ಅಜಗಣ್ಣ ಅಂತ ಭಾವಿಸಿ ಅಳೋದು ಯಾಕೆ? ದೇಹ ಹುಟ್ಟಿ ಸಾಯೋದು ಸಹಜ. ಆದರೆ ಶಿವಜ್ಞಾನ ಪಡೆದವನಿಗೆ ಹುಟ್ಟು-ಸಾವು ಅನ್ನೋ ಬಂಧನವೇ ಇಲ್ಲ” ಅಂತ ತಿಳಿಸುತ್ತಾನೆ.
ಮತ್ತೆ ಅಲ್ಲಮ, “ಅಜಗಣ್ಣ ಯಾರು, ಅವನು ನಿಜವಾಗಿ ಏನಾಗಿದ್ದ ಅನ್ನೋದನ್ನ ಅರಿಯದೆ ಈ ರೀತಿ ಹಂಬಲಿಸಿ ಅಳೋದರಿಂದ ಏನು ಪ್ರಯೋಜನ? ಅವನು ಮೊದಲು ಇರಲಿಲ್ಲ, ಈಗ ಮಾತ್ರ ಕಾಣಿಸಿಕೊಂಡು, ಈಗ ಮತ್ತೆ ಇಲ್ಲವಾದವನಲ್ಲ. ಇಂಥ ಭ್ರಮೆ ನಿನ್ನದು” ಅಂತ ಮುಕ್ತಾಯಿಯ ಮನಸ್ಸಿನಲ್ಲಿದ್ದ ದ್ವೈತಭಾವವನ್ನು ಕಿತ್ತುಹಾಕಲು ಪ್ರಯತ್ನಿಸುತ್ತಾನೆ. ಅಜಗಣ್ಣನು ಗುಹೇಶ್ವರ ಲಿಂಗಸಂಗದ ಶರಣ. ಅವನು ಗುಹೇಶ್ವರ ಲಿಂಗದಲ್ಲಿ ಬೆರೆತು ಬಯಲಾದವನು. ಆದ್ದರಿಂದ ಅವನು ಮೊದಲು ಇದ್ದು ಈಗ ಮರಣ ಹೊಂದಿದವನು ಅಲ್ಲ. ಅವನ ನಿಜಸ್ವರೂಪ ನಿತ್ಯವಾದದ್ದು.
ಅಲ್ಲಮಪ್ರಭು ಅಜಗಣ್ಣನ ನಿಜವಾದ ಸ್ಥಿತಿಯನ್ನು ಮುಕ್ತಾಯಿಯ ಮುಂದೆ ಎತ್ತಿ ತೋರಿಸುತ್ತಾನೆ. ಅವನು ಲೋಕದ ಸಾಮಾನ್ಯ ಮನುಷ್ಯನಂತೆ ಹುಟ್ಟು-ಮರಣಕ್ಕೆ ಒಳಗಾಗುವವನಲ್ಲ. ಗುಹೇಶ್ವರ ಲಿಂಗದಲ್ಲಿ ಐಕ್ಯನಾಗಿ, ಬಯಲಿನ ನಿರ್ಭಯ ಸ್ಥಿತಿಯಲ್ಲಿ ನೆಲೆಗೊಂಡವನು. ಅವನ ದೇಹ ಕಣ್ಣಿಗೆ ಕಾಣದೆ ಹೋದರೂ, ಅವನ ಶಿವಸ್ವರೂಪ ನಾಶವಾಗಿಲ್ಲ. ಆದ್ದರಿಂದ ಅಜಗಣ್ಣನ ಅಗಲಿಕೆಯನ್ನು ಬರೀ ದೇಹದ ಮರಣವೆಂದು ನೋಡುವುದು ಸರಿಯಲ್ಲ.
ಆದರೂ ಪ್ರಭುವಿನ ಈ ಮಾತುಗಳು ಮುಕ್ತಾಯಿಯ ಮನಸ್ಸಿನ ಮಬ್ಬನ್ನು ತಕ್ಷಣ ಸಂಪೂರ್ಣವಾಗಿ ದೂರಮಾಡುವುದಿಲ್ಲ. ಯಾಕಂದ್ರೆ ಅಜಗಣ್ಣನನ್ನು ತನ್ನ ಕಣ್ಣಾರೆ ಕಂಡಿದ್ದಳು, ಅವನ ಜೊತೆಯಲ್ಲೇ ಬದುಕಿದ್ದಳು. ಇಷ್ಟು ದಿನ ತನ್ನ ಅಣ್ಣನಾಗಿ ತನ್ನ ಎದುರಿಗೇ ಇದ್ದವನು ಈಗ ಕಾಣಿಸದೆ ಹೋಗಿದ್ದಾನೆ ಅನ್ನೋ ಸತ್ಯವನ್ನು ಅವಳ ಮನಸ್ಸು ಸುಲಭವಾಗಿ ಒಪ್ಪಿಕೊಳ್ಳಲಾರದು. ಅಜಗಣ್ಣ ತನ್ನ ಒಡಹುಟ್ಟಿದ ಅಣ್ಣನಾಗಿ ಇಷ್ಟು ದಿನ ದೇಹದೊಳಗೇ ಇದ್ದು, ತನ್ನ ಗುಪ್ತಭಕ್ತಿಯನ್ನು ಆಚರಿಸುತ್ತಿದ್ದ. ಆ ಗುಪ್ತಭಕ್ತಿ ಒಂದೇ ಸಲ ಹೊರಗೆ ಬರುವ ಸಂದರ್ಭ ಬಂದರೂ, ಈಗ ಅವನು ಕಣ್ಣಿಗೆ ಕಾಣದಂತಾಗಿದ್ದಾನೆ. “ಮೊದಲು ಇದ್ದವನು ಈಗ ಕಾಣೋದಿಲ್ಲ” ಅನ್ನೋ ಅನುಭವವೇ ಮುಕ್ತಾಯಿಯ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತ್ತು. ಅದರಿಂದ ಅಲ್ಲಮನ ಮಾತನ್ನು ನಂಬೋದು ಅವಳಿಗೆ ಕಷ್ಟವಾಗುತ್ತದೆ.
ಅದಕ್ಕಾಗಿ ಮುಕ್ತಾಯಿ “ಬೆಡಗನಾಡದಿರಯ್ಯ” ಅನ್ನುವ ಭಾವದಲ್ಲಿ, ಪ್ರಭುವಿನ ಮಾತುಗಳ ಬಗ್ಗೆ ಇನ್ನೂ ಅನುಮಾನ ವ್ಯಕ್ತಪಡಿಸುತ್ತಾಳೆ. ಅವಳಿಗೆ ಕೇವಲ ತತ್ತ್ವದ ಮಾತು ಕೇಳುವುದರಿಂದ ಸಮಾಧಾನವಾಗುವುದಿಲ್ಲ. ತಾನು ಕಣ್ಣಾರೆ ಕಂಡ ಅಜಗಣ್ಣನ ಸ್ಥಿತಿಗೆ ತಕ್ಕ ಅನುಭವದ ಉತ್ತರ ಬೇಕಾಗಿತ್ತು.
ಆಗ ಅಲ್ಲಮಪ್ರಭು ಅವಳಿಗೆ ಇನ್ನಷ್ಟು ಸ್ಪಷ್ಟವಾಗಿ ತಿಳಿಸುತ್ತಾನೆ. “ಮುಕ್ತಾಯಿ, ಕೇಳು. ಶರಣರಾದವರು ಯಾವುದೋ ಒಂದು ನಿಮಿತ್ತಕ್ಕಾಗಿ ಈ ಲೋಕದಲ್ಲಿ ಮಾನವ ಶರೀರವನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ. ಅವರು ನಿಜವಾಗಿಯೂ ಲೋಕದ ಸಾಮಾನ್ಯ ಮನುಷ್ಯರಲ್ಲ. ಆದ್ದರಿಂದ ಅವರನ್ನು ನಿನ್ನವರೇ ಅಂತ ದೇಹದ ಸಂಬಂಧದಿಂದ ಮಾತ್ರ ನೋಡಬೇಡ. ಅಜಗಣ್ಣನ ಮಹಿಮೆಯನ್ನು ಯೋಚಿಸಿ ನೋಡು. ಅವನು ನಿತ್ಯನಾದವನು” ಅಂತ ಹೇಳುತ್ತಾನೆ.
ಅಜಗಣ್ಣನು ಹೊರಗೆ ಲೋಕದವರಂತೆ ಬದುಕಿದಂತೆ ಕಂಡರೂ, ವಾಸ್ತವದಲ್ಲಿ ಅವನು ಲೋಕದ ಸಾಮಾನ್ಯ ಜೀವನದ ನಿಯಮಗಳಿಗೆ ಒಳಪಟ್ಟವನಾಗಿರಲಿಲ್ಲ. ಶಿವಯೋಗವನ್ನು ಸಾಧಿಸಿ ಬಯಲಿನಲ್ಲಿ ಬೆರೆತು ನಿರ್ಭಯವಾದ ನಿತ್ಯಸ್ಥಿತಿಯಲ್ಲಿ ನೆಲೆಗೊಂಡಿದ್ದ. ಅವನ ಹೊರಗಿನ ರೂಪವನ್ನು ಮಾತ್ರ ನೋಡಿದರೆ ಅವನು ಸಾಮಾನ್ಯ ಮನುಷ್ಯನಂತೆ ಕಾಣಬಹುದು. ಆದರೆ ಅವನ ಅಂತರಂಗದಲ್ಲಿ ಶಿವಜ್ಞಾನ ತುಂಬಿಕೊಂಡಿತ್ತು. ಅವನಿಗೆ ದೇಹವೇ ತನ್ನ ನಿಜಸ್ವರೂಪವಲ್ಲ ಅನ್ನೋ ಅರಿವು ಇತ್ತು.
ಮುಕ್ತಾಯಿಯ ದುಃಖದ ಮೂಲ ದ್ವೈತದ ಭ್ರಮೆ. “ಅಜಗಣ್ಣ ಬೇರೆ, ನಾನು ಬೇರೆ; ಅವನು ಇದ್ದ, ಈಗ ಇಲ್ಲ; ಅವನು ನನ್ನ ಅಣ್ಣ, ನಾನು ಅವನ ತಂಗಿ” ಅನ್ನೋ ಸಂಬಂಧದ ಭಾವದಲ್ಲಿ ಅವಳು ಸಿಕ್ಕಿಕೊಂಡಿದ್ದಳು. ಈ ಭೇದಬುದ್ಧಿಯೇ ಅವಳ ಮನಸ್ಸಿನಲ್ಲಿ ದುಃಖವನ್ನು ಹುಟ್ಟಿಸಿತ್ತು. ಅಲ್ಲಮಪ್ರಭು ಅವಳಿಗೆ, “ನೀನು ಜ್ಞಾನಿಯಾಗಿದ್ದರೂ ಇಂಥ ಭೇದಬುದ್ಧಿಯಲ್ಲಿ ಸಿಕ್ಕಿಕೊಂಡು ಅಜ್ಞಾನಿಯಂತೆ ಮಾತಾಡ್ತಿದ್ದೀಯ. ಸಂಕಲ್ಪ-ವಿಕಲ್ಪಗಳ ಸುಳಿಯಲ್ಲಿ ಸಿಕ್ಕಿಕೊಳ್ಳಬೇಡ. ಸಾಕು ಮುಕ್ತಾಯಿ, ನಿನ್ನ ಮನಸ್ಸನ್ನು ಶಾಂತ ಮಾಡಿಕೋ” ಅಂತ ತಿಳಿಸುತ್ತಾನೆ.
ಅಜಗಣ್ಣನು ಜನನ-ಮರಣಗಳ ಸಾಮಾನ್ಯ ಚಕ್ರಕ್ಕೆ ಒಳಗಾದವನು ಅಲ್ಲ. ಅವನು ಶಿವಯೋಗವನ್ನು ಸಾಧಿಸಿ, ಬಯಲಿನಲ್ಲಿ ಬೆರೆತು, ನಿರ್ಭಯವಾಗಿ ನಿತ್ಯಸ್ವರೂಪದಲ್ಲಿ ನೆಲೆಗೊಂಡವನು. ಇಂಥ ಲಿಂಗಸಂಗದ ಶರಣನಿಗಾಗಿ, ನಿನ್ನಂಥ ಜ್ಞಾನಿಯಾದ ಸಾಧಕಿಯೇ ದುಃಖಪಡುವುದು ಸರಿಯಲ್ಲ. ಅವನ ದೇಹ ಕಾಣದಾಗಿದೆ ಅನ್ನೋದನ್ನೇ ಅವನ ನಾಶವೆಂದು ಭಾವಿಸಬೇಡ. ಅವನು ಲಿಂಗದಲ್ಲಿ ಒಂದಾಗಿದ್ದಾನೆ. ಅವನ ಶಿವಸ್ವರೂಪ ನಿತ್ಯವಾದದ್ದು.
“ಭಾವನೆಯಡಿಯಲ್ಲಿರುವ ಹಾವುಗಳು ನಮಗೆ ಗೋಚರವಾಗುವುದಿಲ್ಲ; ಅಜಗಣ್ಣನ ನಿಜಸ್ವರೂಪವನ್ನು ನಿಮ್ಮಂಥ ಮಹಾಜ್ಞಾನಿಗಳು ಮಾತ್ರ ಅರಿಯಬಲ್ಲರು. ನಮ್ಮಂಥ ಸಾಮಾನ್ಯರಿಗೆ ಅದು ಹೇಗೆ ಸಾಧ್ಯ? ಲಿಂಗದ ನಿರಾಲಂಬ ಮಾರ್ಗವನ್ನು ಅರಿತು, ಅದರಲ್ಲಿ ಬೆರೆತು ತನ್ನ ತಾನೇ ಆದ ಸ್ಥಿತಿಯನ್ನು ಪಡೆದವನಾದ ಅಜಗಣ್ಣನಂಥವನಿಂದ ನನಗೆ ಮಾರ್ಗದರ್ಶನ ಸಿಗಬೇಕಿತ್ತು. ಈಗ ನನಗೆ ಗತಿಮತಿ ಯಾರು?” ಎಂದು ಮುಕ್ತಾಯಿ ಅಲ್ಲಮಪ್ರಭುವನ್ನು ಕೇಳಿಕೊಳ್ಳುತ್ತಾಳೆ. ಅಣ್ಣನ ಅಗಲಿಕೆಯಿಂದ ಅವಳ ಮನಸ್ಸಿನಲ್ಲಿ ಮೂಡಿದ್ದ ನೋವಿನ ಜೊತೆಗೆ, ಆತ್ಮಸಾಧನೆಯ ಮುಂದಿನ ದಾರಿಯ ಬಗ್ಗೆ ಇದ್ದ ಗೊಂದಲವೂ ಈ ಮಾತಿನಲ್ಲಿ ವ್ಯಕ್ತವಾಗುತ್ತದೆ.
ಮುಕ್ತಾಯಿಯ ಈ ಮಾತುಗಳನ್ನು ಕೇಳಿದ ಅಲ್ಲಮಪ್ರಭು ಅವಳ ಆಸೆಯನ್ನು ಮೆಚ್ಚುತ್ತಾನೆ. “ಅಕ್ಕಾ, ನೀನು ನಿನ್ನ ಹೆಸರಿಗೆ ತಕ್ಕಂಥ ಮುಕ್ತಿಯನ್ನೇ ಬಯಸುತ್ತಿದ್ದೀಯ. ನಿಜವಾದ ಪದದ, ಅಂದರೆ ಪರಮಾರ್ಥದ ಸ್ಥಿತಿಯನ್ನು ಪಡೆಯಬೇಕು ಅನ್ನೋ ನಿನ್ನ ಹಂಬಲ ಶ್ಲಾಘನೀಯ” ಎಂದು ಹೇಳಿ, ಅವಳಿಗೆ ಲಿಂಗಾಂಗಸಾಮರಸ್ಯದ ಶಿವಯೋಗದ ರಹಸ್ಯವನ್ನು ಬೋಧಿಸಲು ಆರಂಭಿಸುತ್ತಾನೆ.
ಅಲ್ಲಮಪ್ರಭುದೇವರು ಮುಕ್ತಾಯಕ್ಕನಿಗೆ ಬೋಧಿಸಿದ ಲಿಂಗಾಂಗಸಾಮರಸ್ಯದ ಶಿವಯೋಗ ರಹಸ್ಯದ ವಿಶೇಷತೆಗಳನ್ನು ನಾಳೆಯ ಸಂಚಿಕೆಯಲ್ಲಿ ಗಮನಿಸೋಣ!
