ಅಲ್ಲಮರು ಮುಕ್ತಾಯಕ್ಕನಿಗೆ ಬೋಧಿಸಿದ ಶಿವಯೋಗ ರಹಸ್ಯ 7

ಮುಕ್ತಾಯಕ್ಕನಿಗೆ ಮುಕ್ತಿಯ ನಿಲುವು ತೋರಿದ ಪ್ರಭುಲಿಂಗ-7

ಅಲ್ಲಮಪ್ರಭು ಮುಕ್ತಾಯಕ್ಕನಿಗೆ ಶಿವಭಕ್ತಿಯ ಅಂತರಂಗವನ್ನು ವಿವರಿಸುತ್ತಾ, ಹೊರಗಿನ ಕ್ರಿಯೆಗಳನ್ನು ಮಾತ್ರ ಮಾಡುವುದು ಭಕ್ತಿ ಅಲ್ಲ ಎಂದು ತಿಳಿಸುತ್ತಾನೆ. “ಹರಗೋಲನ್ನು ಸಿದ್ಧಪಡಿಸಿಕೊಂಡು ಅದರ ಸಹಾಯದಿಂದ ಹೊಳೆಯನ್ನ ದಾಟುವಂತೆ, ಲಿಂಗದ ನಿಜಸ್ವರೂಪವನ್ನು ಅರಿತ ಸಾಧಕನು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳ ಹೊರಮುಖ ಚಟುವಟಿಕೆಗಳನ್ನು ನಿಧಾನವಾಗಿ ಒಳಮುಖವಾಗಿಸಿಕೊಳ್ಳಬೇಕು. ಬಾಹ್ಯಾಚರಣೆಯಲ್ಲೇ ಸಿಲುಕಿಕೊಳ್ಳದೆ, ಮನಸ್ಸನ್ನು ಅಂತರಂಗದ ಕಡೆಗೆ ತಿರುಗಿಸಿಕೊಂಡು ಭವಸಾಗರವನ್ನು ದಾಟಲು ಪ್ರಯತ್ನಿಸಬೇಕು. ಇದೇ ನಿಜವಾದ ಶಿವಭಕ್ತಿ”ಎಂದು ಪ್ರಭು ಬೋಧಿಸುತ್ತಾನೆ.

ಈ ಬೋಧನೆಯನ್ನು ಕೇಳಿದ ಮುಕ್ತಾಯಿಯ ಮನಸ್ಸಿನಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ. “ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳ ಚಟುವಟಿಕೆಯೇ ದೇಹದ ಕ್ರಿಯೆ. ಈ ದೇಹವನ್ನೇ ಜೀವನು ಆಶ್ರಯಿಸಿಕೊಂಡು ಬದುಕುತ್ತಾನೆ. ಹಾಗಾದರೆ ಇಂದ್ರಿಯಗಳ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಜೀವನು ಯಾವ ಆಶ್ರಯದಲ್ಲಿ ಇರುತ್ತಾನೆ? ಮನಸ್ಸು ಹೊರಗಿನ ವಿಷಯಗಳನ್ನು ಮೆಚ್ಚಿ ಅವುಗಳ ಹಿಂದೆ ಓಡುವುದನ್ನು ಹೇಗೆ ನಿಲ್ಲಿಸಬೇಕು? ಮನಸ್ಸು ನಿರಾಲಂಬವಾಗಿ ಬಯಲಿನಲ್ಲಿ ನೆಲೆಗೊಳ್ಳುವ ವಿಧಾನ ಯಾವುದು? ಇವೆಲ್ಲವನ್ನೂ ನನಗೆ ಸ್ಪಷ್ಟವಾಗಿ ತಿಳಿಸಬೇಕು”ಎಂದು ಮುಕ್ತಾಯಿ ಪ್ರಭುವನ್ನು ಕೇಳುತ್ತಾಳೆ.

ಆಗ ಅಲ್ಲಮಪ್ರಭು ಬಹಳ ಸರಳವಾದ ಉದಾಹರಣೆಯ ಮೂಲಕ ಆಳವಾದ ತತ್ತ್ವವನ್ನು ತಿಳಿಸುತ್ತಾನೆ. “ಮಕ್ಕಳಿಗೆ ತಾಯಿಯ ಮೊಲೆಹಾಲೇ ಜೀವನ. ಆದರೆ ತಾಯಿಯು ಯಾವಾಗಲೂ ಅದೇ ಹಾಲನ್ನೇ ಕೊಡುತ್ತಾ ಇರಲ್ಲ. ಒಂದು ಹಂತದಲ್ಲಿ ಮಕ್ಕಳನ್ನು ನಿಧಾನವಾಗಿ ಹಾಲಿನಿಂದ ದೂರಮಾಡಿ, ಬೇರೆ ಆಹಾರವನ್ನು ಕೊಡುತ್ತಾ ಅವರನ್ನು ಬೆಳೆಸುತ್ತಾಳೆ. ಹಾಗೆಯೇ ಸಾಧಕನು ಕೂಡ ಹೊರಗಿನ ವಿಷಯಗಳಲ್ಲಿ ಅತಿಯಾಗಿ ತೊಡಗಿರುವ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳನ್ನು ನಿಧಾನವಾಗಿ ಒಳಮುಖವಾಗಿಸಬೇಕು. ಹೊರಗೆ ಓಡಾಡುವ ಮನಸ್ಸನ್ನು ಅಂತರಂಗದ ನಿರಾಳ ಸ್ಥಿತಿಯಲ್ಲಿ ನೆಲೆಗೊಳಿಸಲು ಸಾಧನೆ ಮಾಡಬೇಕು”ಎಂದು ಹೇಳುತ್ತಾನೆ.

ಅಂದರೆ ಇಂದ್ರಿಯಗಳನ್ನು ಬಲವಂತವಾಗಿ ನಾಶಮಾಡುವುದು ಅಲ್ಲ, ಅವುಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡುವುದು ಶಿವಯೋಗದ ಮಾರ್ಗ. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಮತ್ತು ಕರ್ಮೇಂದ್ರಿಯಗಳು ಹೊರಗಿನ ವಿಷಯಗಳ ಕಡೆಗೆ ಓಡುವ ಸ್ವಭಾವ ಹೊಂದಿವೆ. ಸಾಧಕನು ಅವುಗಳನ್ನು ವಿವೇಕದಿಂದ ನಿಯಂತ್ರಿಸಿಕೊಂಡು, ಮನಸ್ಸನ್ನು ನಿಧಾನವಾಗಿ ಲಿಂಗಚಿಂತನೆಯ ಕಡೆಗೆ ತಿರುಗಿಸಬೇಕು. ಹೀಗೆ ಹೊರಮುಖವಾಗಿರುವ ಚಿತ್ತ ಕ್ರಮೇಣ ಒಳಮುಖವಾಗಿ, ಲಿಂಗತತ್ತ್ವದಲ್ಲಿ ನೆಲೆಗೊಳ್ಳುತ್ತದೆ.

ಈ ಶಿವಯೋಗಸಾಧನೆಯ ಅಗ್ನಿಕುಂಡದಿಂದ ಹೊರಬರುವ ದೇಹಗುಣಗಳು ಕ್ರಮೇಣ ಶಿವಗುಣಗಳಾಗಿ ಪರಿವರ್ತನೆಯಾಗುತ್ತವೆ. ಸಾಧಕನ ಜೀವನದಲ್ಲಿ ಜ್ಞಾನ, ಭಕ್ತಿ, ಸಮತೆ, ಶಾಂತಿ ಮತ್ತು ಅನುಭವ ಗಾಢವಾಗುತ್ತವೆ. ಆಗ ಜೀವನು ಶಿವಭಾವವನ್ನು ಪಡೆಯುತ್ತಾನೆ. ಜೀವ ಮತ್ತು ಶಿವ ಒಂದೇ ಎಂಬ ಅನುಭವ ಸ್ಥಿರವಾದಾಗ, ಆ ಶಿವಜೀವೈಕ್ಯದ ಸ್ಥಿತಿಯೇ ನಿರಾಲಂಬ ಲಿಂಗದಲ್ಲಿ ಬೆರೆತು ಬಯಲಾಗುವ ಪರಮಸ್ಥಿತಿ ಎಂದು ಅಲ್ಲಮಪ್ರಭು ತಿಳಿಸುತ್ತಾನೆ.

ಆದರೆ ಮುಕ್ತಾಯಿಗೆ ಇನ್ನೂ ಒಂದು ಅನುಮಾನ ಉಳಿಯುತ್ತದೆ. “ಪರಮತತ್ತ್ವವನ್ನು ಇಷ್ಟು ಸುಂದರವಾಗಿ ವಿವರಿಸುವ ಗುರುವಾಗಿದ್ದರೂ, ನಿಮಗೂ ಇನ್ನೂ ಮನೋವಾಕ್ಕಾಯದ ಕರ್ಮಗಳಿವೆ. ನಿಮ್ಮಲ್ಲಿಯೂ ಮಾತು, ದೇಹದ ಚಲನೆ ಮತ್ತು ಮನಸ್ಸಿನ ಚಟುವಟಿಕೆಗಳು ಕಾಣಿಸುತ್ತಿವೆ. ಹಾಗಿದ್ದಾಗ ನಿಮ್ಮ ಉಪದೇಶವನ್ನು ನಾನು ಹೇಗೆ ಸಂಪೂರ್ಣವಾಗಿ ನಂಬಬೇಕು? ಇದು ಕೇವಲ ಮಾತಿನ ಚಾತುರ್ಯವಲ್ಲ ಅನ್ನೋದಕ್ಕೆ ನನಗೆ ಹೇಗೆ ನಂಬಿಕೆ ಬರಬೇಕು?” ಎಂದು ಅವಳು ಮತ್ತೆ ಪ್ರಶ್ನಿಸುತ್ತಾಳೆ.

ಮುಕ್ತಾಯಿಯ ಈ ಪ್ರಶ್ನೆ ಬಹಳ ಗಂಭೀರವಾದದ್ದು. ಅವಳು ಅಲ್ಲಮನ ಮಾತನ್ನು ಅಂಧವಾಗಿ ನಂಬಲು ಸಿದ್ಧಳಿಲ್ಲ. ಅನುಭವದಿಂದ ದೃಢಪಡಿಸಿಕೊಳ್ಳಬೇಕೆಂಬ ಹಂಬಲ ಅವಳದು. ಅದಕ್ಕೇ ಅಲ್ಲಮಪ್ರಭು ಅವಳ ಪ್ರಶ್ನೆಯನ್ನು ತಪ್ಪಿಸಿಕೊಳ್ಳದೆ, ತನ್ನ ನಿಜವಾದ ಸ್ಥಿತಿಯನ್ನು ಮತ್ತಷ್ಟು ಸ್ಪಷ್ಟವಾಗಿ ವಿವರಿಸುತ್ತಾನೆ.

ಅಲ್ಲಮನು ಹೇಳುವ ತತ್ತ್ವವೇನೆಂದರೆ, ಮಹಾಘನವಾದ ಶಿವಸ್ವರೂಪದಲ್ಲಿ ಬೆರೆತವನಿಗೆ ಹೊರಗೆ ಕಾಣುವ ಮನೋವಾಕ್ಕಾಯದ ಕರ್ಮಗಳು ಅವನ ಮೂಲಸ್ವರೂಪವನ್ನು ಬದಲಿಸುವುದಿಲ್ಲ. ಬೆಂಕಿಯಲ್ಲಿ ಕಬ್ಬಿಣವನ್ನು ಕಾಯಿಸಿದಾಗ ಅದು ಬೆಂಕಿಯ ಗುಣವನ್ನು ಪಡೆದು ಕೆಂಪಾಗಿ ಹೊಳೆಯುತ್ತದೆ. ಹೊರಗೆ ನೋಡಿದಾಗ ಕಬ್ಬಿಣದ ರೂಪ ಇನ್ನೂ ಕಾಣಬಹುದು. ಆದರೆ ಅದು ಹಿಂದಿನ ತಣ್ಣನೆಯ ಕಬ್ಬಿಣವಾಗಿರುವುದಿಲ್ಲ. ಅದೇ ರೀತಿ ಲಿಂಗಾಗ್ನಿಯಲ್ಲಿ ಬೆಂದ ಸಾಧಕನು ತನ್ನ ಮೊದಲಿನ ಸ್ವರೂಪವನ್ನು ಕಳೆದುಕೊಂಡು ಲಿಂಗಸ್ವರೂಪದಲ್ಲಿ ಒಂದಾಗುತ್ತಾನೆ.

ಹೀಗಾಗಿ ಲಿಂಗದಲ್ಲಿ ಬೆರೆತವನ ದೇಹ, ಮನಸ್ಸು ಮತ್ತು ಮಾತಿನ ಕ್ರಿಯೆಗಳು ಸಾಮಾನ್ಯ ದೇಹದ ಮನೋವಾಕ್ಕಾಯದ ಕರ್ಮಗಳಂತೆ ಪರಿಗಣಿಸಲಾಗುವುದಿಲ್ಲ. ಅವುಗಳ ಮೂಲಸ್ವರೂಪವೇ ಪರಿವರ್ತಿತವಾಗಿದೆ. ಹೇಗೆ ಬೆಂಕಿಯಲ್ಲಿ ಕರಗಿದ ವಸ್ತುವನ್ನು ಹಿಂದಿನ ಸ್ಥಿತಿಯಲ್ಲೇ ಗುರುತಿಸಲು ಸಾಧ್ಯವಿಲ್ಲವೋ, ಹಾಗೆಯೇ ಲಿಂಗಾನುಭವದಲ್ಲಿ ಸಂಪೂರ್ಣವಾಗಿ ಒಂದಾದ ಶರಣನ ಕ್ರಿಯೆಗಳನ್ನು ಸಾಮಾನ್ಯ ಲೋಕದ ಕ್ರಿಯೆಗಳ ಅಳತೆಯಲ್ಲಿ ಅಳೆಯಲು ಸಾಧ್ಯವಿಲ್ಲ.

ಈ ಮೂಲಕ ಅಲ್ಲಮಪ್ರಭು ಮುಕ್ತಾಯಿಗೆ ತನ್ನ ನಿರ್ದೇಹಸ್ಥಳದ ತತ್ತ್ವವನ್ನು ತಿಳಿಸುತ್ತಾನೆ. ಶಿವಯೋಗದ ಪರಿಪೂರ್ಣ ಸ್ಥಿತಿಯಲ್ಲಿ ದೇಹವಿದ್ದರೂ ದೇಹಾಭಿಮಾನವಿಲ್ಲ; ಕ್ರಿಯೆಗಳಿದ್ದರೂ ಕರ್ತೃತ್ವಭಾವವಿಲ್ಲ; ಮಾತಿದ್ದರೂ ಅಹಂಕಾರದ ಮಾತಲ್ಲ; ಮನಸ್ಸಿದ್ದರೂ ಭೇದಭಾವದ ಮನಸ್ಸಲ್ಲ. ಸಾಧಕನು ಲಿಂಗಾಂಗಸಾಮರಸ್ಯದಲ್ಲಿ ಪರಿಪೂರ್ಣವಾಗಿ ಬೆರೆತಾಗ, ಅವನ ಬದುಕಿನ ಪ್ರತಿಯೊಂದು ಕ್ರಿಯೆಯೂ ಶಿವತತ್ತ್ವದ ಅಭಿವ್ಯಕ್ತಿಯಾಗುತ್ತದೆ.

ಅಲ್ಲಮಪ್ರಭು ನಿರ್ದೇಹಿ ಸ್ಥಿತಿಯ ಮಹತ್ವವನ್ನು ಮುಕ್ತಾಯಕ್ಕನಿಗೆ ತಿಳಿಸುತ್ತಿದ್ದಾಗ, ಅವಳ ಮನಸ್ಸಿನಲ್ಲಿ ಮತ್ತೊಂದು ಸಂಶಯ ಎದ್ದಿತು. “ಪ್ರಭುದೇವಾ, ನೀನು ನಿಜವಾಗಿಯೂ ನಿರ್ದೇಹಿಯಾಗಿದ್ದರೆ, ನಮ್ಮಂಥ ದೇಹಧಾರಿಗಳ ಜೊತೆ ವಿವೇಕದ ಮಾತು, ವಿಚಾರದ ಮಾತು, ಜ್ಞಾನದ ಮಾತು ಹೇಗೆ ಆಡ್ತೀಯ? ನಿನ್ನ ಈ ಅಗಮ್ಯವಾದ ಬೆಡಗನ್ನ ನಮಗೆ ಅರ್ಥವಾಗೋ ಹಾಗೆ ಬಿಡಿಸಿ ಹೇಳು” ಎಂದು ಕೇಳಿದಳು. ಅದಕ್ಕೆ ಅಲ್ಲಮಪ್ರಭು, “ಯಾರು ನನ್ನನ್ನು ಯಾವ ಭಾವದಿಂದ ಕಾಣ್ತಾರೋ, ಅವರವರ ಮನಸ್ಸಿಗೆ ತಕ್ಕ ರೂಪದಲ್ಲೇ ನಾನು ಅವರಿಗೆ ಕಾಣಿಸಿಕೊಳ್ಳುತ್ತೇನೆ. ಭಕ್ತನು ನನ್ನನ್ನು ಯಾವ ರೀತಿಯಾಗಿ ಭಾವಿಸುತ್ತಾನೋ, ಆ ಭಾವಕ್ಕನುಗುಣವಾಗಿ ಅವನಿಗೆ ನಾನು ಗೋಚರಿಸುತ್ತೇನೆ. ಆದರೆ ಅದಕ್ಕಂತ ನನ್ನನ್ನ ಸಂಶಯಪಟ್ಟು ನೋಡುವದು ಸರಿಯಲ್ಲ” ಎಂದು ತಿಳಿಸಿದನು.

ಅಲ್ಲಮಪ್ರಭುವಿನ ಮಾತು ಕೇಳಿ ಮುಕ್ತಾಯಕ್ಕನಿಗೆ ಮತ್ತೊಂದು ಆಶ್ಚರ್ಯ. “ಪಿಂಡಮಯವಾದ ಈ ದೇಹ ನಿನ್ನದಲ್ಲ ಅಂದಮೇಲೆ, ತಾಳೆ, ಓಲೆ, ಅಕ್ಷರ, ಪದ, ವಾಕ್ಯ ಇವುಗಳೆಲ್ಲ ನಿನ್ನ ದೇಹದೊಳಗೆ ಹೇಗೆ ಹುಟ್ಟಿದವು? ನೀನು ದೇಹಾತೀತನಾಗಿದ್ದರೆ ಇಂಥ ಮಾತುಗಳು ನಿನ್ನಿಂದ ಹೇಗೆ ಹೊರಬರುತ್ತವೆ?” ಎಂದು ತನ್ನ ಅನುಮಾನವನ್ನು ಬಿಚ್ಚಿಟ್ಟಳು.

ಆಗ ಅಲ್ಲಮಪ್ರಭು ಅವಳಿಗೆ ಬಹಳ ಸರಳವಾದ ಒಂದು ದೃಷ್ಟಾಂತ ಕೊಟ್ಟನು. “ಮಗಳೇ, ಇಡೀ ಲೋಕಕ್ಕೆ ಗೊತ್ತಿರುವ ಸಂಗತಿಯೇ ಇದು. ಭೂಮಿಯ ದೇಹ ಆಕಾಶಕ್ಕೆ ತಾಗಿಕೊಂಡಿಲ್ಲ. ಆದರೂ ಆಕಾಶದಲ್ಲಿ ಗುಡುಗು ಮೊಳಗಿದಾಗ ಅದರ ಶಬ್ದ ಲೋಕದ ಕಿವಿಗೆ ಕೇಳಿಸುತ್ತಲ್ಲಾ? ಅದರಲ್ಲಿ ಆಶ್ಚರ್ಯವೇನಿದೆ? ಹಾಗೆಯೇ ಅಜ್ಞಾನಿಗಳಿಗೆ ವಿಚಿತ್ರವಾಗಿ ಕಾಣುವ ಸಂಗತಿಗಳು ಜ್ಞಾನಿಗೆ ಸಹಜ. ನಿನ್ನ ಅಣ್ಣ ಅಜಗಣ್ಣ ಮೌನವಾಗಿ ಸಾಧನೆ ಮಾಡಿ, ಹೊರಗೆ ಯಾವ ಆಡಂಬರವೂ ತೋರಿಸದೆ, ಮಹಾಜ್ಞಾನಿಯಾದ ಗುಪ್ತಶರಣನಾಗಿ ಉಳಿದಿದ್ದಾನೆ. ನಾನು ಕೂಡ ಅಪ್ರಮೇಯ, ಸಗುಣ-ನಿರ್ಗುಣ ಎರಡನ್ನೂ ಒಳಗೊಂಡ ಪರಮತತ್ತ್ವ. ನನ್ನ ಅಗಮ್ಯವಾದ ಚರಿತ್ರೆಗೆ ಈ ಮಾತುಗಳೆಲ್ಲ ದೊಡ್ಡದಲ್ಲ” ಎಂದು ತನ್ನ ಜಂಗಮಸ್ಥಿತಿಯ ಆಳವನ್ನು ತೋರಿಸಿದನು.

ಇದನ್ನು ಕೇಳಿದ ಮುಕ್ತಾಯಕ್ಕನ ಮನಸ್ಸಿನಲ್ಲಿದ್ದ ಸಂಶಯ ಇನ್ನೂ ಕರಗತೊಡಗಿತು. “ಶರಣರು ನಡೆದರೆ ಏನು, ನಡೆಯದಿದ್ದರೆ ಏನು? ಮಾತನಾಡಿದರೆ ಏನು, ಮೌನವಾಗಿದ್ದರೆ ಏನು? ಅವರು ಲೋಕದ ಕಣ್ಣಿಗೆ ಕಾಣಿಸಿಕೊಂಡರೆ ಏನು, ಕಾಣಿಸದಿದ್ದರೆ ಏನು? ಶರಣನ ನಿಜವಾದ ಸ್ಥಿತಿಯನ್ನು ಹೊರಗಿನ ನಡೆ-ನುಡಿ, ಮಾತು-ಮೌನಗಳಿಂದ ಅಳೆಯಲು ಆಗುತ್ತದೆಯೇ?” ಎಂಬ ಅರಿವು ಅವಳೊಳಗೆ ಮೂಡಿತು. ಹೊರಗಿನ ಕ್ರಿಯೆಗಿಂತ ಒಳಗಿನ ಜ್ಞಾನವೇ ಮುಖ್ಯ, ದೇಹದ ಚಲನೆಗಿಂತ ಆತ್ಮಾನುಭವವೇ ದೊಡ್ಡದು ಎಂಬ ಸತ್ಯ ಅವಳಿಗೆ ನಿಧಾನವಾಗಿ ತಿಳಿಯತೊಡಗಿತು.

ಅಜಗಣ್ಣನೂ ಹೀಗೆಯೇ ಲೋಕದ ಕಣ್ಣಿಗೆ ಸಾಮಾನ್ಯನಂತೆ ಕಂಡರೂ, ಒಳಗಿಂದ ಮಹಾಜ್ಞಾನಿಯಾದ ಗುಪ್ತಶರಣನಾಗಿದ್ದನು. ಅವನ ಸಾಧನೆ, ಭಕ್ತಿ, ಜ್ಞಾನ ಯಾವುದೂ ಹೊರಗಿನ ಪ್ರದರ್ಶನವಾಗಿರಲಿಲ್ಲ. ಹಾವು ತನ್ನ ಹೆಡೆಯೊಳಗೆ ರತ್ನವನ್ನು ಬಚ್ಚಿಟ್ಟುಕೊಂಡಿರುವಂತೆ, ಅಜಗಣ್ಣ ತನ್ನೊಳಗಿನ ಶಿವಾನುಭವವನ್ನು ಗುಪ್ತವಾಗಿ ಕಾಪಾಡಿಕೊಂಡಿದ್ದನು. ಹೊರಗಿನಿಂದ ಅವನು ಲೋಕದ ಮರಳಿನಂತೆ ಕಾಣಿಸಿದರೂ, ಒಳಗಿಂದ ಲಿಂಗದ ತಿರುಳನ್ನು ಅರಿತ ಶಿವಯೋಗಿಯಾಗಿದ್ದನು. ಈ ಸತ್ಯವನ್ನು ಅಲ್ಲಮಪ್ರಭು ಮುಕ್ತಾಯಕ್ಕನಿಗೆ ಮನಗಾಣಿಸಿದನು.

ಅಲ್ಲಮಪ್ರಭುವಿನ ಈ ಮಾತುಗಳಿಂದ ಮುಕ್ತಾಯಕ್ಕನ ಮನಸ್ಸಿನಲ್ಲಿದ್ದ ದ್ವೈತದ ಭಾವನೆ ನಿಧಾನವಾಗಿ ಕರಗಿತು. “ಶರಣನು ಯಾವ ರೂಪದಲ್ಲಿ ಕಾಣಿಸಿಕೊಂಡರೂ ಅವನೊಳಗಿನ ಶಿವತತ್ತ್ವವನ್ನು ಗುರುತಿಸಬೇಕು. ಹೊರಗಿನ ದೇಹ, ನಡೆ, ಮಾತು, ಮೌನ ಇವುಗಳನ್ನೇ ಹಿಡಿದು ಅವನ ಮಹಿಮೆಯನ್ನು ಅಳೆಯಬಾರದು” ಎಂಬ ಅರಿವು ಅವಳಿಗೆ ಬಂತು. ಅಲ್ಲಮಪ್ರಭುವಿನ ಮಾತು ಅವಳಿಗೆ ಕೇವಲ ಉಪದೇಶವಾಗಿ ಉಳಿಯಲಿಲ್ಲ. ಅದು ಅವಳ ಮನಸ್ಸಿನ ಕತ್ತಲಲ್ಲಿ ಬೆಳಗಿದ ಜ್ಯೋತಿಯಾಗಿ ಪರಿಣಮಿಸಿತು. ಅವಳು ತನ್ನೊಳಗೆ ಎದ್ದಿದ್ದ ಎಲ್ಲ ಸಂಶಯಗಳನ್ನು ಒಂದೊಂದಾಗಿ ಬಿಟ್ಟು, ಶರಣರ ನಿಜಸ್ವರೂಪವನ್ನು ಅರಿಯುವ ದಾರಿಯಲ್ಲಿ ಮುಂದುವರಿದಳು.

ಶೂನ್ಯಸಂಪಾದನೆಯಲ್ಲಿ ಮುಕ್ತಾಯಕ್ಕ ಅಲ್ಲಮಪ್ರಭುವಿಗೆ ಪ್ರಶ್ನೆಗಳನ್ನು ಕೇಳುವ ಈ ಪ್ರಸಂಗ ಬಹಳ ಅರ್ಥಪೂರ್ಣವಾಗಿದೆ. ಜ್ಞಾನಿಯಾದ ಮುಕ್ತಾಯಕ್ಕ ಸಾಮಾನ್ಯ ಭಕ್ತೆಯಂತೆ ಪ್ರಶ್ನೆ ಕೇಳುವುದಿಲ್ಲ. ಅಲ್ಲಮಪ್ರಭುವಿನ ಅನುಭವದ ಆಳವನ್ನು ಪರೀಕ್ಷಿಸುವ ಹಾಗೆ ಪ್ರಶ್ನೆ ಮಾಡುತ್ತಾಳೆ. “ಅದ್ವೈತದ ಸ್ಥಿತಿಯನ್ನು ಸಾಧಿಸಿ ಎರಡಾಗಿ ಕಾಣುವುದನ್ನೆಲ್ಲ ಬಿಟ್ಟೆನೆಂದು ಹೇಳ್ತೀರಲ್ಲ, ಹಾಗಿದ್ದ ಮೇಲೆ ಶಿಶುವನ್ನು ಕಂಡಾಗ ಅದು ಕನಸಿನಂತೆ ಆಗಬೇಕಲ್ಲವೇ? ನೀವು ಮಾತಾಡಿ ತಿಳಿಸುವ ಮಾತು ಬೇರೆ, ಮೌನದ ಅನುಭವ ಬೇರೆ ಅಂತ ಹೇಗೆ ಹೇಳ್ತೀರಿ? ಜ್ಞಾನ ಸಂಪೂರ್ಣವಾಗಿ ನಾಶವಾಗಿ ಗುರು ತೋರಿದನೆಂದು ಹೇಳಿದ ಮೇಲೆ, ಅದನ್ನ ಮತ್ತೊಬ್ಬರಿಗೆ ಹೇಗೆ ತಿಳಿಸಬಹುದು? ಮನಸ್ಸಿನ ಕೊನೆಯ ಮೂಲೆಗೂ ಜ್ಞಾನದ ಕಣ್ಣು ತೆರೆದು ಸ್ವಯಂಪ್ರಕಾಶ ಕಾಣಿಸುತ್ತಿರುವಾಗ, ಅದನ್ನು ತಾನೇ ತಾನಾಗಿ ಅರಿಯಲು ಆಗೋದಿಲ್ಲವೇ? ನನ್ನ ಅಣ್ಣ ಅಜಗಣ್ಣನಂತೆ ಶಬ್ದಮುಗ್ಧನಾಗಿ, ಶಬ್ದದ ಆಚೆಯ ಸ್ಥಿತಿಯಲ್ಲಿ ಇರಬೇಕಲ್ಲವೇ?” ಎಂದು ಮುಕ್ತಾಯಕ್ಕ ತನ್ನ ಪ್ರಶ್ನೆಗಳನ್ನ ಮುಂದಿಡುತ್ತಾಳೆ.

ಅವಳ ಪ್ರಶ್ನೆಯ ತಿರುಳು ಒಂದೇ. ಪರಬ್ರಹ್ಮವೇ ಸತ್ಯ ಅಂದಮೇಲೆ ಮಾತು, ಶಬ್ದ, ನಾದ, ವಾಣಿ ಇವೆಲ್ಲ ಹೇಗೆ ಸಾಧ್ಯ? ಶಬ್ದದ ಮೂಲಕ ಹೇಳುವ ಜ್ಞಾನವೂ ಕೊನೆಗೆ ಶಬ್ದದ ಮಿತಿಯೊಳಗೇ ಸಿಲುಕಿಬಿಡುತ್ತದೆಯಲ್ಲವೇ ಎಂಬುದು ಅವಳ ಸಂದೇಹ. ಈ ಪ್ರಶ್ನೆಗೆ ಅಲ್ಲಮಪ್ರಭು ಕೊಡುವ ಉತ್ತರ ಬಹಳ ಸೂಕ್ಷ್ಮವಾದದ್ದು. “ಮಾತು ಅನ್ನೋದು ಜ್ಯೋತಿರ್ಲಿಂಗ. ಸ್ವರ ಅನ್ನೋದು ಪರತತ್ತ್ವ. ತಾಳೆಓಲೆ, ಅಕ್ಷರ, ಪದಗಳ ಮಿತಿಯನ್ನು ಮೀರಿರುವುದು ನಾದಬಿಂದು. ಆದ್ದರಿಂದ ನನ್ನ ಮಾತನ್ನು ಕೇವಲ ಸಾಮಾನ್ಯ ಮಾತೆಂದು ತಿಳಿದುಕೊಳ್ಳಬೇಡ. ಮಾತಿನೊಳಗೂ ಜ್ಞಾನದ ಬೆಳಕು ಇದೆ. ನುಡಿಯ ತಿರುಳನ್ನು ಅರಿತುಕೋ” ಎಂದು ಹೇಳುತ್ತಾನೆ.

ಈ ಉತ್ತರ ಕೇಳಿದ ಮುಕ್ತಾಯಕ್ಕನ ಮನಸ್ಸಿನಲ್ಲಿದ್ದ ದುಗುಡ, ಆಯಾಸ, ಸಂಶಯ ಒಂದೊಂದಾಗಿ ದೂರವಾಗುತ್ತವೆ. ಅವಳೊಳಗಿನ ಅಜ್ಞಾನ ಮತ್ತು ಅಹಂಕಾರದ ಕತ್ತಲೆ ಕರಗಿ, ಸುಜ್ಞಾನವೆಂಬ ಬೆಳಕು ಮೂಡುತ್ತದೆ. ಅವಳು ನಿರ್ವಿಕಲ್ಪ ಸಮಾಧಿಯ ಸಮೀಪಕ್ಕೆ ಬಂದಿರುವುದನ್ನು ಅರಿತ ಅಲ್ಲಮಪ್ರಭು, ಅವಳಿಗೆ ಇನ್ನೊಂದು ಗಹನವಾದ ಸತ್ಯವನ್ನು ತಿಳಿಸುತ್ತಾನೆ. “ತಾಯೀ, ಹೊರಗೆಲ್ಲ ಹುಡುಕಬೇಡ. ನಿನ್ನೊಳಗೇ ಇಳಿದು ನೋಡು. ನೀನು ಹುಡುಕುತ್ತಿರುವ ನಿಜವಾದ ನಿರಾಳ ಸ್ಥಿತಿ ನಿನ್ನೊಳಗೇ ಇದೆ. ನಿನ್ನ ಬರುವಿಕೆಗೆ ಅದು ಮೊದಲಿನಿಂದಲೂ ಸಿದ್ಧವಾಗಿ ನಿಂತಿದೆ. ನೀನು ಅದನ್ನು ಅರಿತುಕೊಳ್ಳಬೇಕು ಅಷ್ಟೇ” ಎಂದು ಅವಳಿಗೆ ಮನವರಿಕೆ ಮಾಡುತ್ತಾನೆ.

ಇಲ್ಲಿ ಅಲ್ಲಮಪ್ರಭು ಮುಕ್ತಾಯಕ್ಕನಿಗೆ ಮಹಾಲಿಂಗೈಕ್ಯದ ರಹಸ್ಯವನ್ನು ಬೋಧಿಸುತ್ತಾನೆ. ಮುಕ್ತಿ ಎಲ್ಲೋ ದೂರದಲ್ಲಿರುವ ಯಾವುದೋ ಲೋಕದಲ್ಲಿ ಸಿಗುವ ವಸ್ತುವಲ್ಲ. ಜೀವನು ತನ್ನೊಳಗಿನ ದ್ವೈತಭಾವವನ್ನು ಕಳೆದುಕೊಂಡು, ತನ್ನ ನಿಜಸ್ವರೂಪವನ್ನು ಅರಿತು, ಲಿಂಗದೊಂದಿಗೆ ಐಕ್ಯವಾಗುವುದೇ ಮುಕ್ತಿಯ ನಿಜವಾದ ದಾರಿ ಎಂದು ಅವಳಿಗೆ ತಿಳಿಸುತ್ತಾನೆ. ಈ ಜ್ಞಾನವನ್ನು ಕೇವಲ ಕೇಳುವುದರಿಂದ ಸಾಲದು. ಅದನ್ನು ಬದುಕಿನಲ್ಲಿ ಆಚರಿಸಬೇಕು. ಗುರು ನೀಡಿದ ವಚನಾಜ್ಞೆಯನ್ನು ಹಿಡಿದು ಸಾಧನೆ ಮಾಡಬೇಕು.

ಚಾಮರಸನು ಮುಕ್ತಾಯಕ್ಕನ ಈ ಸಾಧನೆಯನ್ನು ಬಹಳ ಸುಂದರವಾದ ರೂಪಕದ ಮೂಲಕ ವಿವರಿಸುತ್ತಾನೆ. ಬೆಟ್ಟದ ನೆತ್ತಿಯನ್ನು ಮುಟ್ಟಬೇಕಾದರೆ ಹಗ್ಗವನ್ನು ಹಿಡಿದು ನಿಧಾನವಾಗಿ ಮೇಲಕ್ಕೆ ಏರಬೇಕಾಗುತ್ತದೆ. ಹಾಗೆಯೇ ಮುಕ್ತಾಯಕ್ಕ ಭಕ್ತಿಯೆಂಬ ಹಗ್ಗವನ್ನು ಹಿಡಿದು, ಗುರು ನೀಡಿದ ಉಪದೇಶವೆಂಬ ಕೀಲಿಯನ್ನು ಆಧಾರ ಮಾಡಿಕೊಂಡು, ತನ್ನ ಸಾಧನೆಯ ಮೂಲಕ ಬ್ರಹ್ಮರಂಧ್ರದ ಒಳಗಿನ ಪರಶಿವನನ್ನು ಅರಿಯುತ್ತಾಳೆ. ಅಲ್ಲಿ ದೊರೆಯುವ ಅಮೃತಾನುಭವವನ್ನು ಮನಸ್ಸಿನ ಆಳದಲ್ಲಿ ಆಸ್ವಾದಿಸಿ, ‘ನಾನು’ ಎಂಬ ಪ್ರತ್ಯೇಕ ಭಾವವನ್ನು ಮರೆತು, ತನ್ನ ನಿಜವಾದ ನಿರಾಳ ಸ್ವರೂಪದಲ್ಲಿ ಲೀನವಾಗಲು ಸಿದ್ಧಳಾಗುತ್ತಾಳೆ.

ಇಲ್ಲಿಗೆ ಮುಕ್ತಾಯಕ್ಕನ ಸಾಧನೆಯು ಕೇವಲ ವೈಯಕ್ತಿಕ ಮುಕ್ತಿಗೆ ಸೀಮಿತವಾಗುವುದಿಲ್ಲ. ಅವಳು ಅಲ್ಲಮಪ್ರಭುವಿನೊಂದಿಗೆ ನಡೆದ ಲೋಕಕಲ್ಯಾಣ ಯಾತ್ರೆಯಲ್ಲಿ ತನ್ನ ಮನಸ್ಸಿನ ಮಲಿನತೆಯನ್ನು ಕಳೆದುಕೊಂಡು, ಲಿಂಗಾಂಗಸಾಮರಸ್ಯದ ಶಿವಯೋಗವನ್ನು ಸಾಧಿಸುತ್ತಾಳೆ. ಹೊರಗಿನ ಜಗತ್ತಿನ ಆಸೆ, ದ್ವಂದ್ವ, ಸಂಶಯ, ಅಹಂಕಾರಗಳನ್ನೆಲ್ಲ ಬಿಟ್ಟು ಒಳಗಿನ ಶಿವಜ್ಯೋತಿಯಲ್ಲಿ ನೆಲೆಸುತ್ತಾಳೆ. ಅಂತಿಮವಾಗಿ ಅವಳ ಭಕ್ತಿ ಜ್ಞಾನವಾಗಿ, ಜ್ಞಾನ ಅನುಭವವಾಗಿ, ಅನುಭವ ಶಿವೈಕ್ಯವಾಗಿ ಪರಿಪೂರ್ಣಗೊಳ್ಳುತ್ತದೆ. ಹೀಗೆ ಮುಕ್ತಾಯಕ್ಕ ಪರಮಾನಂದದ ಅನುಭವದಿಂದ ತುಂಬಿ ಮಹಾಲಿಂಗೈಕ್ಯವನ್ನು ಹೊಂದಿದ ಶಿವಶರಣೆಯಾಗಿ ಪ್ರಸಂಗ ಮುಕ್ತಾಯವಾಗುತ್ತದೆ

ಶೂನ್ಯಸಂಪಾದನೆಯಲ್ಲಿ ಮುಕ್ತಾಯಕ್ಕ ಶರಣರ ಸಂಗದಿಂದ ತಾನು ಮುಕ್ತಿಯನ್ನ ಪಡೆದ ಪರಿಯನ್ನ ಬಹಳ ಗಹನವಾಗಿ ಹೇಳಿಕೊಳ್ಳುತ್ತಾಳೆ. “ಘನಮಹಿಮೆಯುಳ್ಳ ಶರಣರ ಸಂಗ ಸಿಕ್ಕ ಮೇಲೆ, ಘನವಾದ ಆ ಪರತತ್ತ್ವವೇ ನನಗೆ ವೇದ್ಯವಾಗಿ ಅರಿವಾಯಿತು. ಆ ಅನುಭವ ಬಂದ ಮೇಲೆ ಅದನ್ನ ಮರೆಯಲೂ ಆಗಲಿಲ್ಲ, ಅರಿಯದೇ ಇರಲೂ ಆಗಲಿಲ್ಲ. ಅದರಿಂದ ದೂರ ಹೋಗಲೂ ಆಗಲಿಲ್ಲ, ಅದರಿಂದ ಬೇರ್ಪಡಲೂ ಆಗಲಿಲ್ಲ. ಮನಸ್ಸು ತನ್ನ ಮಿತಿಯನ್ನ ಮೀರಿ ನಿರಾಳವಾದಾಗ ಸಿಕ್ಕ ಸುಖವನ್ನ ‘ಶೂನ್ಯ, ನಿಶ್ಶೂನ್ಯ’ ಅಂತ ಮಾತಿನಲ್ಲಿ ಹೇಳೋಕೆ ಆಗುತ್ತದೆಯೇ?” ಎಂದು ಮುಕ್ತಾಯಕ್ಕ ತನ್ನ ಅನುಭವವನ್ನ ಹೇಳಿಕೊಳ್ಳುತ್ತಾಳೆ.

ಅವಳಿಗೆ ಈ ಅನುಭವ ಯಾವಾಗ ಬಂತು ಅಂದರೆ, ಶಬ್ದಮುಗ್ಧನಾಗಿ ಮೌನದೊಳಗೇ ಮಹಾಜ್ಞಾನವನ್ನ ಹೊತ್ತಿದ್ದ ತನ್ನ ಅಣ್ಣ ಅಜಗಣ್ಣನ ತಂದೆಯಂತಿರುವ ಶರಣಸಂಗದ ಅನುಭವದಿಂದ ಅವಳೊಳಗಿನ ಅಜ್ಞಾನ ಕಳೆದುಹೋಯಿತು. ಅವಳಿಗೆ ದೊರೆತ ಜ್ಞಾನ ಕೇವಲ ಕೇಳಿದ ಮಾತಲ್ಲ, ಅನುಭವದಿಂದ ಬಂದದ್ದು. ಅದಕ್ಕೇ ಆ ಅನುಭವವನ್ನ ಸಾಮಾನ್ಯ ಮಾತುಗಳಲ್ಲಿ ಹಿಡಿದು ಹೇಳೋಕೆ ಅವಳಿಗೂ ಸಾಧ್ಯವಾಗುವುದಿಲ್ಲ. ಉರಿಯುತ್ತಿರುವ ಬೆಂಕಿಯೊಳಗೆ ಹಾಕಿದ ಕರ್ಪೂರ ಹೇಗೆ ತನ್ನ ಪ್ರತ್ಯೇಕ ರೂಪವನ್ನ ಉಳಿಸಿಕೊಳ್ಳದೆ ಅದೇ ಬೆಂಕಿಯಲ್ಲಿ ಒಂದಾಗಿ ಹೋಗುತ್ತದೋ, ಹಾಗೆಯೇ ಮುಕ್ತಾಯಕ್ಕನ ‘ನಾನು’ ಎಂಬ ಪ್ರತ್ಯೇಕ ಭಾವ ಶಿವಾನುಭವದಲ್ಲಿ ಕರಗಿ ಹೋಯಿತು.

ಶರಣರ ಸಂಗದಿಂದ ಅವಳ ಮನಸ್ಸಿನ ದ್ವಂದ್ವ ದೂರವಾಯಿತು. ‘ನಾನು-ನೀನು’, ‘ಕೂಡಿದೆ-ಬೇರೆಯಾಯಿತು’, ‘ಇದೆ-ಇಲ್ಲ’ ಎಂಬ ಭೇದಗಳೆಲ್ಲ ಕರಗಿ, ನಿರಾಳವಾದ ಆನಂದದ ಸ್ಥಿತಿ ಅವಳೊಳಗೆ ನೆಲೆಗೊಂಡಿತು. ಆ ಸ್ಥಿತಿಯನ್ನ ಶೂನ್ಯವೆಂದರೂ, ನಿಶ್ಶೂನ್ಯವೆಂದರೂ, ಮಾತಿನಿಂದ ಸಂಪೂರ್ಣವಾಗಿ ವಿವರಿಸಲಾಗದು. ಅದು ಅನುಭವಿಸಬೇಕಾದ ಸ್ಥಿತಿ. ಹೀಗಾಗಿ ಮುಕ್ತಾಯಕ್ಕನ ಮುಕ್ತಿ ಹೊರಗಿನ ಯಾವುದೋ ಲೋಕಕ್ಕೆ ಹೋಗುವುದರಿಂದ ಬಂದದ್ದಲ್ಲ; ಶರಣರ ಸಂಗ, ಗುರುಬೋಧೆ, ಭಕ್ತಿ, ಆತ್ಮಾನುಭವ ಮತ್ತು ಶಿವೈಕ್ಯದಿಂದ ಅವಳೊಳಗೇ ಅರಳಿದ ಮುಕ್ತಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *