ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗರ ಪಂಚಮಿಯನ್ನು ವೈಚಾರಿಕ ಹಿನ್ನೆಲೆಯಲ್ಲಿ ಬಸವ ಪಂಚಮಿಯನ್ನಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಾರ್ವತಿ ಪಾಟೀಲ ಮಾತನಾಡಿ, ಈ ದಿನ ವಿಶ್ವಗುರು ಬಯಲಿನಲ್ಲಿ ಲೀನವಾಗಿದ್ದರಿಂದಲೇ ಬಸವ ಪಂಚಮಿಯನ್ನು ಆಚರಿಸಲಾಗುತ್ತಿದೆ.
ಹಾವು ಮಾಂಸಾಹಾರಿ ಪ್ರಾಣಿ. ಯಾವುದೇ ಕಾರಣಕ್ಕು ಅದು ಹಾಲನ್ನು ಕುಡಿಯುವುದಿಲ್ಲ. ಜನರು ಮೌಡ್ಯತೆಯಿಂದ ಹುತ್ತಕ್ಕೆ ಹಾಲನ್ನು ಹಾಕಿ ವ್ಯರ್ಥ ಮಾಡುವುದನ್ನು ಬಿಟ್ಟು, ಬಡ, ನಿರ್ಗತಿಕ ಮಕ್ಕಳಿಗೆ ಹಾಲನ್ನು ಉಣಿಸುವುದು ಸಾರ್ಥಕವಾಗುತ್ತದೆ.

ಇದರಿಂದ ಸಮಾಜದಲ್ಲಿ ಸರ್ವಸಮಾನತೆ ಮೂಡಿ ಬರಲು ದಾರಿಯಾಗುವುದೆಂದರು.
ಜಾ. ಲಿಂ. ಮಹಾಸಭಾ ತಾಲೂಕ ಅಧ್ಯಕ್ಷ ಜೆ. ಬಸವರಾಜ ಮಾತನಾಡಿ, ಇಂದಿನ ಸಮಾಜದಲ್ಲಿ ಮೌಢ್ಯತೆ ತುಂಬಿಕೊಂಡಿದೆ. ಇದನ್ನು ಮನಗಂಡ ಜಗಜ್ಯೋತಿ ಬಸವೇಶ್ವರರು,” ಕಲ್ಲು ನಾಗರ ಕಂಡರೆ ಹಾಲು ನೆರೆಯನೆಂಬರು, ದಿಟನಾಗರ ಕಂಡರೆ ಕೊಲ್ಲೆಂಬರು…….. ” ಎಂಬ ವಚನದ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿದರು.
ವೈಚಾರಿಕತೆಯಿಂದ ಹಬ್ಬಗಳ ಆಚರಣೆ ಮಾಡುವುದನ್ನು ತಿಳಿಸಿದ್ದನ್ನು ನೆನಪಿಸುತ್ತಾ, ಇಂತಹ ಕಾರ್ಯಕ್ರಮಗಳನ್ನು ವಿಸ್ತೃತವಾದ ರೀತಿಯಲ್ಲಿ ಆಚರಣೆ ಮಾಡುತ್ತಾ ಜನಜಾಗೃತಿ ಮೂಡಿಸುವುದು ನಮ್ಮ ಆದ್ಯ ಕರ್ತವ್ಯವೆಂದರು.
ಡಾ. ಪ್ರಿಯಾಂಕಾ ಗದ್ವಾಲ ಅವರು ಮಾತನಾಡಿ, ಜೀವಿಗಳ ಚಲನ ವಲನ, ಆಹಾರ ಪದ್ಧತಿಯನ್ನು ಅರಿಯಬೇಕು. ಹಾವು ಯಾವ ಕಾರಣಕ್ಕೂ ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ಹಾಳು ಮಾಡುವ ಬದಲಿಗೆ ಬಡ, ಅನಾಥ ಮಕ್ಕಳಿಗೆ, ನಿರ್ಗತಿಕರಿಗೆ ಕೊಡಬೇಕು. ಈ ಹಬ್ಬದ ಆಚರಣೆಯ ಮಹತ್ವವೆಂದರೆ ಹೆಣ್ಣುಮಕ್ಕಳನ್ನು ತವರಿಗೆ ಕರೆದುಕೊಂಡು ಬಂದು ಸಿಹಿ ತಿನಿಸುಗಳನ್ನು ಮಾಡಿ ಕುಟುಂಬ ಸದಸ್ಯರು, ಆಪ್ತರು ಒಟ್ಟುಗೂಡಿ ಸಂತೋಷದಿಂದ ತಿಂದು, ಜೋಕಾಲಿ, ಮುಂತಾದ ಆಟಗಳನ್ನು ಆಡುತ್ತಾ ಸಂತೋಷದಿಂದ ಕಾಲ ಕಳೆಯುವುದೆಂದರು.
ಲೇಖಕಿ ಸರ್ವಮಂಗಳ ಸಕ್ರಿ ಅವರು ಮಾತನಾಡುತ್ತಾ, ನಮ್ಮ ಪೂರ್ವಜರು ಕೂಡ ವೈಚಾರಿಕ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಯನ್ನು ಮಾಡುತ್ತಾ ಬಂದಿದ್ದಾರೆ. ಹಾವು ಇಲಿಗಳನ್ನು ತಿನ್ನುವದರಿಂದ ರೈತನ ಶೇ. 30ರಷ್ಟು ಫಸಲನ್ನು ಉಳಿಸುತ್ತವೆ. ಹಾವಿನ ಹೆಡೆಯಲ್ಲಿರುವ ವಿಷವು ಕ್ಯಾನ್ಸರ್ ರೋಗಕ್ಕೆ ಔಷಧಿಯಾಗಿದೆ.
ಗಿಡಗಳಾದ ಪತ್ರಿ, ತುಳಿಸಿಯಲ್ಲಿ ಔಷಧೀಯ ಗುಣಗಳಿರುವುದರಿಂದ ಅವುಗಳನ್ನು ನಾಶಗೊಳಿಸಬಾರದೆಂಬ ಉದ್ದೇಶದಿಂದ ಪೂಜ್ಯ ಭಾವನೆಯಿಂದ ಆರಾಧಿಸುತ್ತಾ ಬಂದಿದ್ದಾರೆ. ಆದರೆ ನಾವಿಂದು ತಪ್ಪು ಗ್ರಹಿಕೆಯಿಂದ ಮೌಡ್ಯಾಚರಣಿಯಿಂದ ಹಬ್ಬಗಳನ್ನು ಆಚರಿಸುವುದನ್ನು ನಿಲ್ಲಿಸಿ, ವೈಚಾರಿಕತೆಯಿಂದ ಹಬ್ಬಗಳನ್ನು ಆಚರಿಸೋಣವೆಂದರು.
ಅಕ್ಕನ ಬಳಗದ ಅಧ್ಯಕ್ಷರಾದ ಜಗದೇವಿ ಚನ್ನಬಸವ, ಹಾಗೂ ಶರಣೆಯರು ಮಕ್ಕಳಿಗೆ ಹಾಲು ಕುಡಿಸಿ, ಹಣ್ಣುಗಳನ್ನು ವಿತರಿಸಿದರು.
ಪಾರ್ವತಿ ಪಾಟೀಲ, ಸಂಗಡಿಗರು ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ನಿರ್ಮಲಾ ನಾಡಗೌಡ ಸ್ವಾಗತಿಸಿದರು. ಮಲ್ಲಿಕಾರ್ಜುನ ಗುಡುಮನಿ ನಿರೂಪಿಸಿದರು. ಚಿನ್ಮಯಿ ಮಾಚನೂರ ವಂದಿಸಿದರು.
ಎ. ವೀರಭದ್ರಪ್ಪ, ಹನುಮಂತಪ್ಪ ಗುತ್ತೇದಾರ, ವೆಂಕಟೇಶ ಜಾಲಿಬೆಂಚಿ, ಅಮರಗುಂಡಪ್ಪ ಹೂಗಾರ, ಶಾಲಿಕಾ ಗುತ್ತೇದಾರ, ರತ್ನಾಕರ, ಲಲಿತಾ ಗುಡಿಮನಿ ಮುಂತಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
