(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)
ಧಾರವಾಡ
12ನೇ ಶತಮಾನದ ಮೊದಲು ಮತಾಂತರವಾಗಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಲಿಂಗಾಯತ ಧರ್ಮ ಸ್ಥಾಪಿಸಿದ ಬಸವಣ್ಣನವರು ಎಲ್ಲರನ್ನೂ ಸಮಾನಾಗಿ ಒಳಮಾಡಿಕೊಂಡರು.
ಇದರಿಂದ ಲಿಂಗಾಯತ ಧರ್ಮ ಪ್ರವಾಹದಂತೆ ಬೆಳೆಯಲು ಸಾಧ್ಯವಾಯಿತು.
ಬಸವಪೂರ್ವ ಧರ್ಮಗಳಲ್ಲಿ ಮತಾಂತರ

ಲಿಂಗಾಯತ ಧರ್ಮ ತನಗಿಂತ ಹಳೆಯದಾದ ಜೈನ , ಶೈವ , ವೈಷ್ಣವ ಧರ್ಮಗಳಿಗಿಂತ ಜನಪ್ರಿಯವಾಯಿತು. ಎಲ್ಲರನ್ನೂ ಸಮಾನವಾಗಿ ಒಳಮಾಡಿಕೊಂಡ ಶರಣರ ಧೋರಣೆಯೇ ಇದಕ್ಕೆ ಕಾರಣ.
ಬಸವ ಪೂರ್ವ ಧರ್ಮಗಳಲ್ಲಿ ಮತಾಂತರವಾಗಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಬ್ರಾಹ್ಮಣರು ಮಾತ್ರ ಆ ಧರ್ಮಗಳ ದೀಕ್ಷೆ ಸ್ವೀಕರಿಸಿ, ಒಳ ಸೇರಿ, ರಕ್ತ ಸಂಬಂಧ ಬೆಳೆಸ ಬಹುದಾಗಿತ್ತು.
ಅಬ್ರಾಹ್ಮಣರು ಆ ಧರ್ಮಗಳ ‘ಮಂತ್ರದೀಕ್ಷೆ’ ಮಾತ್ರ ಪಡೆದು ಹೊರಗಿನಿಂದ ‘ಒಕ್ಕಲು’ ಅಥವಾ ಅನುಯಾಯಿಗಳಾಗಬಹುದಿತ್ತು. ಒಳ ಸೇರಿ ರಕ್ತ ಸಂಬಂಧಿಗಳಾಗಲು ಸಾಧ್ಯವಿರಲಿಲ್ಲ.
ಶ್ರೀವೈಷ್ಣವ ಧರ್ಮದಲ್ಲಿ ಒಕ್ಕಲಾಗುವವರಿಗೆ ಗಾಯತ್ರಿ ಮಂತ್ರ ಭೋದಿಸಿ, ನಾಮ, ಮುದ್ರೆ ನೀಡಲಾಗುತ್ತಿತ್ತು. ಶೈವ ಧರ್ಮಗಳಲ್ಲಿ ವಿಭೂತಿ ನೀಡಿ, ಮಂತ್ರ ಭೋದಿಸಿದರೂ, ಲಿಂಗ ನೀಡಲಾಗುತ್ತಿರಲಿಲ್ಲ.
ಈ ಧರ್ಮಗಳಲ್ಲಿ ಒಕ್ಕಲಾಗುವ ಕೆಲವು ಅಬ್ರಾಹ್ಮಣರಿಗೆ ಆಚಾರ್ಯರಾಗುವ ಅವಕಾಶವೂ ಇತ್ತು, ಆದರೆ ಅದ್ವೈತ ಧರ್ಮದಲ್ಲಿ ಅಬ್ರಾಹ್ಮಣರಿಗೆ ಮಂತ್ರದೀಕ್ಷೆ ನೀಡಲು ಯಾವುದೇ ಅವಕಾಶವಿರಲಿಲ್ಲ.
ಒಕ್ಕಲಾಗಲು ಅವಕಾಶ ನೀಡಿದ ಧರ್ಮಗಳು ಸಂಖ್ಯೆಯಲ್ಲಿ ಬೆಳೆದವು. ಒಳ ಸೇರಿಸದಿದ್ದರೂ ಹುಸಿ ಪ್ರತಿಷ್ಠೆಗಾಗಿ ಅನೇಕ ಸಮುದಾಯಗಳು ಮತ್ತು ಅರಸರೂ ಕೂಡ ಅವುಗಳ ಅನುಯಾಯಿಗಳಾದರು.
(‘ಶರಣ ಧರ್ಮ: ಜಾತಿ ನಾಶ-ಜಾತಿ ನಿರ್ಮಾಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
ಎಲ್ಲರಿಗೂ ಇಷ್ಟಲಿಂಗ ಕೊಟ್ಟ ಬಸವಣ್ಣ

ಮತಾಂತರದಲ್ಲಿ ಜಾತಿ ಭೇದ ಮಾಡುತ್ತಿದ್ದ ಧರ್ಮಗಳನ್ನು ಶರಣರು ಖಂಡಿಸಿದರು. ಅಬ್ರಾಹ್ಮಣರಿಗೆ ಲಿಂಗದ ಬದಲು ಬರಿ ವಿಭೂತಿ, ಮಂತ್ರ ನೀಡುತ್ತಿದ್ದ ಶೈವರನ್ನು ಅರಿವಿನ ಮಾರಿತಂದೆ ನಿಂದಿಸುತ್ತಾರೆ.
ಬಸವಣ್ಣನವರ ನಾಯಕತ್ವದಲ್ಲಿ ಶರಣರು ಎಲ್ಲರನ್ನು ಮುಕ್ತವಾಗಿ ಒಳ ಬರಮಾಡಿಕೊಂಡರು. ವರ್ಣ, ಜಾತಿ, ವರ್ಗ, ಲಿಂಗ, ಸೂತಕ ನೋಡದೆ ಎಲ್ಲರಿಗೂ ಸಮಾನವಾಗಿ ಇಷ್ಟಲಿಂಗ ನೀಡಿದರು.
ಕೆರೆಯ ಪದ್ಮರಸರಂತಹ ಶರಣ ಸಾಹಿತಿಗಳು ವಿವರಿಸುವ ದೀಕ್ಷಾಭೋದೆಯಲ್ಲಿ ಸಾಮಾಜಿಕ ಕಾಳಜಿಯಿದೆ. ದೀಕ್ಷೆಯ ಮೂಲಕ ವ್ಯಕ್ತಿಯ ಜನನ, ಜಾತಿ, ಸಂಪತ್ತಿನ ಗರ್ವಗಳನ್ನು ನಿವಾರಿಸುವ ಪ್ರಯತ್ನವಿದೆ.
ಬಸವಣ್ಣನವರ ಮುಕ್ತ ಧೋರಣೆಯಿಂದ ಬೇರೆ ಧರ್ಮಗಳಿಗೆ ಒಕ್ಕಲಾಗಿದ್ದವರೆಲ್ಲರೂ ಪ್ರವಾಹದಂತೆ ಒಳಬಂದರು. ಅನೇಕ ಶೈವ ಧರ್ಮಗಳು ಕ್ಷೀಣಿಸಿ ಲಿಂಗಾಯತ ಧರ್ಮದಲ್ಲಿ ಲೀನವಾದವು.
ಒಳ ಬಂದ ಎಲ್ಲ ಶ್ರೇಣಿಯ ಜನರನ್ನು ಶರಣರು ಯಾವುದೇ ಭೇದವಿಲ್ಲದೆ ಸಮಾನರಾಗಿ ಕಂಡರು. ದಲಿತ ಮೂಲದ ಶರಣರನ್ನು ‘ಪಿರಿಯ ಮಾಹೇಶ್ವರರು’ ಎಂದು ಗೌರವದಿಂದ ಕರೆದರು.
ಶರಣರು ವೈದಿಕ ವ್ಯವಸ್ಥೆ, ಸಿದ್ದಾಂತಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಸಹ ಭೋಜನದಿಂದ ಹಿಡಿದು ಜಾತಿಗಳ ನಡುವೆ ರಕ್ತ ಸಂಬಂಧ ಕಲ್ಪಿಸುವಷ್ಟು ಅವರ ಚಟುವಟಿಕೆಗಳು ಬೆಳೆದವು.
(‘ಶರಣ ಧರ್ಮ: ಜಾತಿ ನಾಶ-ಜಾತಿ ನಿರ್ಮಾಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸುವ ಭಾಗ – ಮಾರ್ಗ ೪)
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
