ಯುವಕರು ಅಂಬಿಗರ ಚೌಡಯ್ಯನವರ ತತ್ವ ಪಾಲಿಸಲಿ: ಪ್ರಿಯಾಂಕ್ ಖರ್ಗೆ
ಕಲಬುರಗಿ
ಅಂಬಿಗರ ಚೌಡಯ್ಯನವರ 273 ವಚನಗಳು ಈವರೆಗೆ ಲಭ್ಯವಾಗಿವೆ. ಯುವಜನರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ತತ್ವಗಳನ್ನು ಪಾಲಿಸಬೇಕು, ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರವಿವಾರ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಜಿಲ್ಲಾ ಕೋಲಿ/ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋಲಿ, ಕಬ್ಬಲಿಗ, ಬೆಸ್ತ ಸೇರಿದಂತೆ 38 ಪರ್ಯಾಯ ಹೆಸರುಗಳನ್ನು ಹೊಂದಿರುವ ಸಮುದಾಯವನ್ನು ಒಗ್ಗೂಡಿಸುವಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಕೊಡುಗೆ ಮಹತ್ವದ್ದಾಗಿದೆ.
ತಾವು ಬಸವಣ್ಣನವರ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಅನುಯಾಯಿಯಾಗಿದ್ದು, ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬದ್ಧರಾಗಿದ್ದೇವೆ. ಮುಂದಿನ ಪೀಳಿಗೆಗಳೂ ಸಹ ಅವರ ವಿಚಾರಗಳನ್ನು ಅಳವಡಿಸಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕೇವಲ ಮೂರ್ತಿಗಳನ್ನು ಸ್ಥಾಪಿಸುವುದರಿಂದ ಮಹನೀಯರ ಆಶಯಗಳು ಈಡೇರುವುದಿಲ್ಲ. ಅವರ ಗುಣ, ಆದರ್ಶ ಹಾಗೂ ವಿಚಾರಧಾರೆಗಳು ಸಮಾಜದಲ್ಲಿ ನೆಲೆಗೊಳ್ಳಬೇಕು. ಜಯಂತಿ ಮತ್ತು ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಅವರನ್ನು ಸ್ಮರಿಸದೆ, ಪ್ರತಿನಿತ್ಯ ಅವರ ವಚನಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬಿಗರ ಚೌಡಯ್ಯನವರ ಇತಿಹಾಸ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೋರಾಟಗಳನ್ನು ಯುವಜನರು ತಿಳಿದುಕೊಳ್ಳಬೇಕು. ಯಾವುದೇ ಸಮುದಾಯವನ್ನು ಕಡೆಗಣಿಸದೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಲು ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಹಾಗೂ ಅಂಬಿಗರ ಚೌಡಯ್ಯನವರು ವ್ಯಕ್ತಿಪೂಜೆಯನ್ನು ವಿರೋಧಿಸಿದ್ದರು. ಭಕ್ತಿ ಮತ್ತು ಗೌರವ ಇರಬೇಕಾದದ್ದು ತತ್ವ ಹಾಗೂ ಆದರ್ಶಗಳ ಮೇಲೆಯೇ ಹೊರತು ವ್ಯಕ್ತಿಗಳ ಮೇಲಲ್ಲ. ಸಾರ್ವಜನಿಕ ಜೀವನದಲ್ಲಿ ಮಹನೀಯರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ. ಸಮಾಜದ ಪ್ರಗತಿಗಾಗಿ ಹಿರಿಯರು ತೋರಿದ ಮಾರ್ಗದಲ್ಲಿ ನಡೆದು, ಅವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸಬೇಕು ಎಂದು ಕರೆ ನೀಡಿದರು.
ಹಾವೇರಿ ಜಿಲ್ಲೆಯ ನರಸೀಪುರದ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮಾತನಾಡಿ, ಕೋಲಿ ಸಮುದಾಯದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಕೊಡುಗೆ ಅಪಾರವಾಗಿದೆ. ತುಳಿತಕ್ಕೊಳಗಾದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಖರ್ಗೆ ಕುಟುಂಬದ ಶ್ರಮ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ, ಮಾತಾ ಮಣಿಕೇಶ್ವರಿ ಹಾಗೂ ಹೋರಾಟಗಾರ ದಿವಂಗತ ವಿಠ್ಠಲ ಹೇರೂರ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡು, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಗುರುತಿನ ಚೀಟಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಮಾಲಾ ಬಿ. ನಾರಾಯಣರಾವ್, ಎಂ. ಶ್ರೀನಿವಾಸ, ಮಲ್ಲಿಕಾರ್ಜುನ ಮುಕ್ಕಾ, ಆನಂದ ರಟಕಲ್, ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ್, ಸಿದ್ದು ಬಾನರ್, ನಾಮದೇವ ಕಡಕೋಳ, ಧರ್ಮರಾಜ ಜವಳಿ, ಅನಿಲ್ ಜಮಾದಾರ್, ಸಿದ್ದಣ್ಣ ಮುಕರಂಬಿ, ರಾಜೇಂದ್ರ ಝಳಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ