ಬೆಳಗಾವಿ
ನಮ್ಮ ದಿನಮಾನದ ಅಪರೂಪದ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದ ಶಿವಾನಂದ ಕೌಜಲಗಿ (87) ಬೈಲಹೊಂಗಲದ ತಮ್ಮ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಶುಕ್ರವಾರ ಲಿಂಗೈಕ್ಯರಾದರು.
1996ರಲ್ಲಿ ಲೋಕಸಭಾ ಚುನಾವಣೆ ನಡೆದವು. ಆಗ ಬೆಳಗಾವಿ ಕ್ಷೇತ್ರದಿಂದ ಶಿವಾನಂದ ಕೌಜಲಗಿ ಅವರನ್ನು ಮೊದಲು ಮಾಡಿಕೊಂಡು 450 ಜನ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇಡೀ ರಾಜಕೀಯ ಇತಿಹಾಸದಲ್ಲಿ ಇದೊಂದು ವಿಸ್ಮಯಕಾರಿ ದಾಖಲೆಯಾಗಿತ್ತು.
ಈ 450 ಜನ ಸ್ಪರ್ಧಿಗಳಲ್ಲಿ ಶಿವಾನಂದ ಕೌಜಲಗಿ ಅವರು ಅತ್ಯಧಿಕ ಮತಗಳನ್ನು ಪಡೆದು ಗೆದ್ದಿದ್ದರು, ಇವರೊಂದಿಗೆ ಸ್ಪರ್ಧೆ ಮಾಡಿದ ಪ್ರಮುಖರಲ್ಲಿ ಪ್ರಭಾಕರ ಕೋರೆ ಹೀನಾಯವಾಗಿ ಸೋತಿದ್ದರು. ಆಗ ಇನ್ನೂ ಒಂದು ವಿಶೇಷವೆಂದರೆ ದೇವೇಗೌಡ ಪ್ರಧಾನಮಂತ್ರಿ ಆದರು.

ನಾನು ಅವರನ್ನು ಕಳೆದ ಮೂರು ದಶಕಗಳಿಂದ ಕಂಡವನು. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರ ಪರಮಾಪ್ತ ಶಿಷ್ಯರಲ್ಲಿ ಶಿವಾನಂದ ಅವರು ಪ್ರಮುಖರು. ಡಾ. ಶಿವಬಸವ ಸ್ವಾಮೀಜಿ ಅವರ ಮೇಲೆ ತುಂಬ ಪ್ರೀತಿಯುಳ್ಳವರಾಗಿದ್ದರು.
ಒಮ್ಮೆ ವೀರೇಂದ್ರ ಪಾಟೀಲರು ಭೇಟಿಗೆ ಬಂದಾಗ ಶ್ರೀಗಳು ನಮ್ಮ ಶಿವಣ್ಣನ ಮಂತ್ರಿ ಮಾಡಿ ಎಂದು ಹೇಳಿದ್ದರು.
ವೀರೇಂದ್ರ ಪಾಟೀಲರು ಆಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು, ಜನತಾ ಪರಿವಾರದ ದೇವೇಗೌಡರ ಮಂತ್ರಿ ಮಂಡಲ ರಚನೆಯಾಯಿತು. ಆಗ ವೀರೇಂದ್ರ ಪಾಟೀಲರು ಜನತಾ ಪರಿವಾರದ ಮುಖಂಡರಿಗೆ ಪಕ್ಷಾತೀತ ಮನೋಭಾವದಿಂದ ಶಿವಾನಂದ ಕೌಜಲಗಿ ಅವರನ್ನು ಮಂತ್ರಿ ಮಾಡಿ ಎಂದು ಹೇಳಿದ್ದರು. ಶಿವಾನಂದ ಅವರು ತಮ್ಮ ನಡೆ ನುಡಿಗಳ ಸಚ್ಚಾರಿತ್ರ್ಯದಿಂದ ಜನಾನುರಾಗಿ ನಾಯಕರೆನಿಸಿಕೊಂಡಿದ್ದರು.
2015ರಲ್ಲಿ ನಾನು ಅವರನ್ನು ಕುರಿತು ಒಂದು ಲೇಖನ ಬರೆದು ಲಿಂಗಾಯತ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ. ಆ ಲೇಖನ ಓದಿ ಶಿವಾನಂದ ಕೌಜಲಗಿ ಅವರು ನನ್ನನ್ನು ಹುಡುಕಿಕೊಂಡು ಬಂದು, ಕೆಎಲ್ ಇ ಸಂಸ್ಥೆ ಶತಮಾನೋತ್ಸವ ಸಂದರ್ಭದಲ್ಲಿ ನೂರು ಪುಸ್ತಕ ಲೋಕಾರ್ಪಣೆ ಆಗುವವು, ಅವುಗಳಲ್ಲಿ ನನ್ನ ಜೀವನ ಚರಿತ್ರೆ ನೀನು ಬರೆಯಬೇಕೆಂಬ ಆಶಯ ವ್ಯಕ್ತಪಡಿಸಿದರು. ನನಗೆ ತಮ್ಮ ಜೀವನದ ಅನೇಕ ಮಹತ್ವದ ಘಟನೆಗಳನ್ನು ತಿಳಿಸಿದರು. ಡಾ. ಶಿವಬಸವ ಮಹಾಸ್ವಾಮಿಗಳವರ ಮೇಲೆ ತಾವು ಇಟ್ಟಿರುವ ಭಕ್ತಿ ಶ್ರದ್ಧೆ ವಿಶ್ವಾಸಗಳ ಕುರಿತು ತಾಸಾನುಗಟ್ಟಲೆ ಹೇಳಿದ್ದರು.

ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾನಗಲ್ಲ ಕುಮಾರೇಶ್ವರ ಸಮಗ್ರ ಸಾಹಿತ್ಯ ಪ್ರಕಟನೆ ಯೋಜನೆ ರೂಪಿಸಿದಾಗ, ಶಿವಾನಂದ ಅವರು ತುಂಬ ಮುತುವರ್ಜಿಯಿಂದ ತಮ್ಮ ಮಗ ಮಹಾಂತೇಶ ಅವರ ಮೂಲಕ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ್ದರು. ಡಾ ಶಿವಬಸವ ಮಹಾಸ್ವಾಮಿಗಳವರ ಗುರುಗಳೆಂಬ ಕಾರಣಕ್ಕಾಗಿ ಪ್ರತಿವರ್ಷ ಸೆಪ್ಟೆಂಬರ್ 11ರಂದು ಬೈಲಹೊಂಗಲದಲ್ಲಿ ಹಾನಗಲ್ಲ ಕುಮಾರೇಶ್ವರ ಜಯಂತಿ ಆಚರಿಸುವ ಪರಂಪರೆಗೆ ನಾಂದಿ ಹಾಡಿದರು.
ಧರ್ಮ, ಸಮಾಜ, ಸಂಸ್ಕೃತಿಗಳ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಶಿವಾನಂದರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ರಾಜಕಾರಣ ಮಾಡಿದವರು, ಅವರು ಜನರ ಮನಸ್ಸಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಿದರು. ಸೊಗಲ ಕ್ಷೇತ್ರ ಅಭಿವೃದ್ಧಿ ಮಾಡಿದರು, ಕೆ ಎಲ್ ಇ ಸಂಸ್ಥೆ ಅಧ್ಯಕ್ಷರಾಗಿ ಮೌಲಿಕ ಮಾರ್ಗದರ್ಶನ ಮಾಡಿದರು. ಇಂತಹ ಹಿರಿಯ ರಾಜಕಾರಣಿ ಇಂದು ಅಸ್ತಂಗತರಾದರು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಒಳ್ಳೆಯ ರಾಜಕೀಯ ವ್ಯಕ್ತಿ ಅವರು ಕುಟುಂಬದ ಸದಸ್ಯರಿಗೆ ಒಳ್ಳೆಯದಾಗಲಿ