‘ಸ್ವರ ವಚನಗಳು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಇಲ್ಲಿನ ಅನುಭವ ಮಂಟಪದಲ್ಲಿ ನಡೆದ ತಿಂಗಳ ಅನುಭವಮಂಟಪ -೨೨ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಬಸವಾದಿ ಶರಣರು ವಚನಗಳ ಜೊತೆಗೆ ಅನೇಕ ರೀತಿಯ ವಚನೇತರ ಸಾಹಿತ್ಯವನ್ನು ರಚಿಸಿದ್ದಾರೆ. ಅದರಲ್ಲಿ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯಾಗಿರುವುದು ಸ್ವರವಚನಗಳು.

೧೨ನೇ ಶತಮಾನದಿಂದ ಸ್ವರವಚನಗಳ ಪರಂಪರೆ ಕಾಣಬರುತ್ತದೆ. ರಾಗ, ತಾಳ ಜೋಡಿಸಿ ಸ್ವರವಚನಗಳು ಹಾಡುವಂತೆ ರಚನೆಕೊಂಡಿವೆ. ಇದರ ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ ಎಂಬ ಉದ್ದೇಶದಿಂದ ಪ್ರತಿತಿಂಗಳು ಶರಣರ ಸ್ವರವಚನಗಳ ಕುರಿತು ಉಪನ್ಯಾಸ ಮಾಲಿಕೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಗ್ರಂಥ ರೂಪದಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಆಶೀರ್ವಚನ ನೀಡಿದರು.

ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಸುಗುಣಾತಾಯಿ ಅವರು ಸಮ್ಮುಖ ವಹಿಸಿದ್ದರು.

ಶರಣ ಜೇಡರ ದಾಸಿಮಯ್ಯನವರ ಸ್ವರವಚನಗಳ ಕುರಿತು ಡಾ. ಸಂಗೀತಾ ಮಂಠಾಳೆ ಅವರು, ಶರಣರು ಸಂಗೀತ ತಜ್ಞರಾಗಿದ್ದರು. ಸ್ವರವಚನಗಳ ರಚನೆಯ ಮೂಲಕ ಅವರ ಸಂಗೀತ ಜ್ಞಾನವು ಕಂಡುಬರುತ್ತದೆ.

ಜೇಡರ ದಾಸಿಮಯ್ಯನವರ ಸ್ವರವಚನಗಳಲ್ಲಿ ನಡೆ-ನುಡಿ, ತತ್ವಚಿಂತನೆ, ಶುದ್ಧಿ, ಆಚಾರ-ವಿಚಾರ, ನೀತಿಬೋಧನೆ, ಲಿಂಗಾರ್ಚನೆ, ಲಿಂಗಯೋಗ ಮುಂತಾದ ಮೌಲ್ಯಗಳನ್ನು ಕಾಣುತ್ತವೆ.

ಜೇಡರ ದಾಸಿಮಯ್ಯನವರು ಸ್ವರವಚನಗಳ ಮೂಲಕ ಮನಸ್ಸಿನ ಭಾವನೆಗಳನ್ನು ಸೂಕ್ಷ್ಮ ರೀತಿಯಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಮನಸ್ಸಿನಲ್ಲಿ ಉಂಟಾಗುವ ತಳಮಳ ಚಿತ್ರಿಸಿದ್ದಾರೆ. ಮನಸ್ಸು ಏಕಾಗ್ರತೆಯಾಗುವವರೆಗೆ ಯಾವುದೇ ಸಾಧನೆ ಮಾಡಲು ಬರುವುದಿಲ್ಲ. ಮನಸ್ಸಿನ ಏಕಾಗ್ರತೆಗೆ ಶರಣರು ಲಿಂಗಯೋಗವೆಂಬ ದಿವ್ಯ ಔಷಧಿ ನೀಡಿದರು. ಅದನ್ನು ದಾಸಿಮಯ್ಯನವರು ಅರ್ಥಪೂರ್ಣವಾಗಿ ಸ್ವರವಚನಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ ಎಂದು ಅನುಭಾವ ನೀಡಿದರು.

ಲಿಂಗೈಕ್ಯ ಸಾವಿತ್ರಿ ಸೋಮನಾಥ ನುಚ್ಚಾ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ನಡೆಯಿತು. ಗೌರವ ಉಪಸ್ಥಿತಿಯಾಗಿ ಡಾ. ಸೋಮನಾಥ ನುಚ್ಚಾ, ಬಸವರಾಜ ಬೇಲೂರೆ, ಶಿವಕುಮಾರ ಸಿದ್ಧೇಶ್ವರ ಇದ್ದರು. ಬಸವರಾಜ ಒಟಗೆ ಅವರು ಸ್ವಾಗತಿಸಿದರು. ಶಿವಶಂಕರ ಪತಂಗೆ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *