ಬಸವ ಜಯಂತಿ: ಅರಸೀಕೆರೆಯಲ್ಲಿ ಬೃಹತ್ ಬಸವ ಪುತ್ಥಳಿ ಲೋಕಾರ್ಪಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಣ್ಣನವರ ವಚನಗಳು ನನ್ನ ರಾಜಕೀಯ ಜೀವನಕ್ಕೆ ದಾರಿದೀಪ: ಶಿವಲಿಂಗೇಗೌಡ

ಅರಸೀಕೆರೆ

ಬಸವ ಜಯಂತಿಯ ಅಂಗವಾಗಿ ಜಗಜ್ಯೋತಿ ಬಸವೇಶ್ವರರ 1480 ಕೆ.ಜಿ ತೂಕದ ಅಶ್ವಾರೂಢ ಬೃಹತ್ ಕಂಚಿನ ಪ್ರತಿಮೆಯನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.

ನಗರದ ಬಸ್ ರೈಲು ನಿಲ್ದಾಣ ಸಂಪರ್ಕಿಸುವ ನಗರಸಭೆ ಸ್ಥಳದಲ್ಲಿ ಈ ಪ್ರತಿಮೆಯನ್ನು ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಬಸವಣ್ಣ ಕಲಿಯುಗದ ದೈವಾಂಶ ಸಂಭೂತರು. ಅವರ ವಚನಗಳು ನನ್ನ ರಾಜಕೀಯ ಜೀವನಕ್ಕೆ ದಾರಿದೀಪ. ಅವರ ತತ್ವಗಳನ್ನು ಅಳವಡಿಸಿಕೊಂಡು ಜನಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಸಮಾನತೆ ಆಧಾರದಲ್ಲಿ ಆಡಳಿತ ನಡೆಸುತ್ತಿದ್ದೇನೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಸುಕ್ಷೇತ್ರ ಕೆರೆಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಸ್ವಾಮಿಗಳು ಮಾತನಾಡಿ, ‘ವಿಶ್ವಕ್ಕೆ ಶಾಂತಿ
ಸಂದೇಶ ಸಾರಿದ ಬಸವೇಶ್ವರರ ಪ್ರತಿಮೆ ಈ ಭಾಗದಲ್ಲಿ ಪ್ರತಿಷ್ಠಾಪನೆಯಾಗಿರುವುದು ಜನರ ಪುಣ್ಯ. ಪ್ರತಿಮೆಯಿರುವ ಸ್ಥಳದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಶಾಸಕ ಶಿವಲಿಂಗೇಗೌಡ ಅವರು ಅಭಿವೃದ್ಧಿ ಜತೆಗೆ ಧಾರ್ಮಿಕ ಸಂರಕ್ಷಣೆಯಲ್ಲೂ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ,” ಎಂದರು.

ಕಾರ್ಯಕ್ರಮದಲ್ಲಿ ಕಡೂರು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮಿಗಳು, ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ, ಕೋಡಿಮಠದ ಚೇತನ್ ಮರಿದೇವರು, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮಿಜಿ ಸೇರಿದಂತೆ ಅನೇಕ ಮಠಾಧೀಶರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ವೇಳೆ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ನಗರ ಯೋಜನಾ ಪಾಧಿಕಾರ ಅಧ್ಯಕ್ಷ ಅರುಣಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಸೇರಿದಂತೆ ಹಲವರು ಮಾತನಾಡಿದರು. ವಿವಿಧ ಜನಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *