ಆರ್ಯರು, ವೈದಿಕತೆ ಮತ್ತು ಲಿಂಗಾಯತ ಧರ್ಮ
(ಕಲಬುರ್ಗಿ ಕಲಿಸಿದ್ದು ಅಂಕಣಗಳ ಸಂಗ್ರಹ)
1) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
2) ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
3) ವೈದಿಕರು ನಮ್ಮ ಇತಿಹಾಸ ಅಳಿಸಿದರು
4) ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
5) ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
6) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ಪ್ರಾಚೀನ ಕರ್ನಾಟಕದಲ್ಲಿ ವ್ಯವಸ್ಥಿತ ಧರ್ಮವಿರಲಿಲ್ಲ ಕೇವಲ ವೃತ್ತಿಯಾಧಾರಿತ ಗುಂಪುಗಳಿದ್ದವು. ಉತ್ತರ ಭಾರತದಿಂದ ಬೌದ್ಧ, ಜೈನ, ಆಗಮಿಕ ಶೈವ, ವೈದಿಕ ಧರ್ಮಗಳು ಇಲ್ಲಿಗೆ ವಲಸೆ ಬಂದವು.
ಇಲ್ಲಿ ಪ್ರಾಬಲ್ಯ ಸಾಧಿಸಲು ಅವುಗಳ ನಡುವೆ ನಡೆದ ಸಂಘರ್ಷದಲ್ಲಿ ವೈದಿಕ ಧರ್ಮ ಜಯಗೊಳಿಸಿತು. ಬೌದ್ಧ ನಾಶವಾದರೆ, ಜೈನ ದುರ್ಬಲವಾಯಿತು, ಆಗಮಿಕ ಶೈವ ವೈದಿಕಕ್ಕೆ ಶರಣಾಯಿತು.
ನಮ್ಮ ರಾಜರು ಉತ್ತರ ಭಾರತವನ್ನು ರಾಜಕೀಯವಾಗಿ ವಿರೋಧಿಸಿದರೂ ಅದರ ಧರ್ಮ, ಸಂಸ್ಕೃತಿ, ಭಾಷೆಗಳನ್ನು ಒಪ್ಪಿಕೊಂಡು ಪೋಷಿಸಿದರು. ಇದರಿಂದ ಕನ್ನಡಿಗರು ಅವುಗಳ ಹಿಡಿತಕ್ಕೆ ಬಂದರು.
ವಲಸೆ ಧರ್ಮಗಳ ಬಸದಿ, ದೇವಸ್ಥಾನಗಳು ಇಲ್ಲಿ ಹಬ್ಬಿದವು. ಅವುಗಳ ತತ್ವ ಪ್ರಸಾರ ಮಾಡುವ ತೀರ್ಥಂಕರ ಪುರಾಣ, ರಾಮಾಯಣ, ಮಹಾಭಾರತ ಶಿಲ್ಪಗಳು ಈ ದೇವಾಲಯಗಳಲ್ಲಿ ಎದ್ದು ನಿಂತವು.
ವೈದಿಕದ ಪ್ರಭಾವದಿಂದ ಒಂದು ಪುರೋಹಿತ ವರ್ಗ ಸೃಷ್ಟಿಯಾಯಿತು. ತೆರಿಗೆ ಹಣದಲ್ಲಿ ಒಂದು ಪಾಲನ್ನು ದಾನವಾಗಿ ಪಡೆದು ಪ್ರಜೆಗಳನ್ನು ಶೋಷಿಸಲು ಅದು ರಾಜರ ಜೊತೆ ಕೈಜೋಡಿಸಿತು.
ವಲಸೆ ಧರ್ಮಗಳ ಜೊತೆ ವರ್ಣ ಜಾತಿ ವ್ಯವಸ್ಥೆಗಳೂ ಕೂಡ ಒಳ ಬಂದವು. 9ನೇ ಶತಮಾನದ ಹೊತ್ತಿಗೆಲ್ಲಾ ಇವು ಸಮಸ್ಯೆಯಾಗಿ ಬೆಳೆದು ನಿಂತಿದ್ದು ಜೈನ ಕೃತಿ ವಡ್ಡಾರಾಧನೆಯಲ್ಲಿ ಕಾಣುತ್ತದೆ.
(‘ವಚನ ಸಾಹಿತ್ಯ: ವೈದಿಕ ವಿರೋಧ ಮತ್ತು ಜಾತಿ ನಿರಸನ’ ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧.)