ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ವಿಶ್ವರಾಜ
ಭಾಲ್ಕಿ:
ಹಿಂದುಳಿದ ಹಣೆಪಟ್ಟಿ ಹೊತ್ತಿದ್ದ ಗಡಿಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ವತಿಯಿಂದ ಸೋಮವಾರ ಆಯೋಜಿಸಿದ್ದ 2027ನೇ ಸಾಲಿನ ಜೆಇಇ ಮೇನ್ಸ್ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಡಾ. ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿದ ಶೈಕ್ಷಣಿಕ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಸಂಸ್ಕಾರಕ್ಕೆ ಒತ್ತು ನೀಡಲಾಗುತ್ತಿದೆ. ಹಾಗಾಗಿ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅದ್ಭುತ ಸಾಧನೆಗೈಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚನ್ನಬಸವೇಶ್ವರ ಗುರುಕುಲ ಜೆಇಇ ಮತ್ತು ನೀಟ್ ಸಾಧಕರ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಒಂದು ಕಾಲದಲ್ಲಿ ಜಿಲ್ಲೆಯಿಂದ ವರ್ಷಕ್ಕೆ ಕೇವಲ 15-20 ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಕ್ಷೇತ್ರ ಪ್ರವೇಶ ಪಡೆಯುತ್ತಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈ ಭಾಗದ ಮಕ್ಕಳು ಬೆಂಗಳೂರು, ಮೈಸೂರು ಸೇರಿ ಮುಂತಾದ ಕಡೆಗಳಿಗೆ ತೆರಳುತ್ತಿದ್ದರು.
ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಎಲ್ಲರೂ ಪೂಜ್ಯರು ಸ್ಥಾಪಿಸಿದ ವಿದ್ಯಾ ಸಂಸ್ಥೆಯ ಕಡೆಗೆ ಮುಖ ಮಾಡಿದ್ದಾರೆ. ಪೂಜ್ಯರ ಸಂಸ್ಥೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ಹಾಗಾಗಿ ಪ್ರತಿವರ್ಷ ಈ ಸಂಸ್ಥೆಯ ಒಂದರಿಂದಲೇ ಸುಮಾರು 200ಕ್ಕೂ ಅಧಿಕ ಮಕ್ಕಳು ವೈದ್ಯಕೀಯ ಕ್ಷೇತ್ರ ಪ್ರವೇಶ ಪಡೆಯುತ್ತಿದ್ದಾರೆ. ನೂರಾರು ಮಕ್ಕಳು ಜೆಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಐಐಟಿ, ಎನ್ ಐಟಿ, ಐಐಐಟಿಯಲ್ಲಿ ಪ್ರವೇಶ ಪಡೆದು ಈ ಭಾಗದ ಕೀರ್ತಿ ಹೆಚ್ಚಿಸುತ್ತಿದ್ದಾರೆ.

ಗ್ರಾಮೀಣ ಭಾಗದ ಬಡ ಮಕ್ಕಳು ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ಗಡಿ ಜಿಲ್ಲೆ ಬೀದರ ಕೀರ್ತಿ ರಾಜ್ಯ ಮತ್ತು ರಾಷ್ಟ್ರದಾದ್ಯಂತ ಪಸರಿಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಜೆಇಇಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಬಲಿಯಾಗದೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಕಲಿತ ವಿದ್ಯಾ ಸಂಸ್ಥೆ ಮತ್ತು ಹೆತ್ತವರಿಗೆ ಗೌರವ ತಂದು ಕೊಡಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಮಾತನಾಡಿ, ಜೆಇಇ ಮೇನ್ಸ್ ಪರೀಕ್ಷೆಗೆ ದೇಶದಾದ್ಯಂತ ಸುಮಾರು 11 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ನಮ್ಮ ಸಂಸ್ಥೆಯಿಂದ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ವಿದ್ಯಾರ್ಥಿ ವಿಶ್ವರಾಜ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಉತ್ತಮ ಆಚಾರ, ವಿಚಾರ, ನಯ, ವಿನಯತೆ ಮೈಗೂಡಿಸಿಕೊಂಡು ನಾಡಿನ ಉತ್ತಮ ನಾಗರಿಕರಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಉದ್ಯಮಿ ಜಯರಾಜ ಖಂಡ್ರೆ, ಬೀದರ್ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ಪುಣೆಯ ಆದಾಯ ತೆರಿಗೆ ಆಯುಕ್ತ ಮಲ್ಲಿಕಾರ್ಜುನ ಉತ್ತುರೆ, ಬೆಂಗಳೂರಿನ ಟೆಕ್ನಿಕಲ್ ಸೇಲ್ಸ್ ಡಿಪಾರ್ಟ್ಮೆಂಟ್ ನ ಜಿಎಂ ಸಂತೋಷ ವಿ ಸೇರಿದಂತೆ ಹಲವರು ಇದ್ದರು. ಮಧುಕರ ಗಾಂವಕರ್ ನಿರೂಪಿಸಿ, ವಂದಿಸಿದರು.
