ಅನುಭವ ಮಂಟಪ ಕನ್ನಡಿಗರ ಮೊದಲ ವಿಶ್ವವಿದ್ಯಾಲಯ: ಡಾ. ಚಿನ್ನಸ್ವಾಮಿ ಸೋಸಲೆ

ವಿಜಯನಗರ ಕಾಲೇಜುಗಳಲ್ಲಿ ಸರಣಿ ‘ಸಾಂಸ್ಕೃತಿಕ ನಾಯಕ’ ಉಪನ್ಯಾಸ

ವಿಜಯನಗರ:

 ಶರಣ ಸಾಹಿತ್ಯ ಪರಿಷತ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕಗಳು ಹಾಗೂ ಶ್ರೀಮತಿ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಪದವಿ ಕಾಲೇಜು, ಹಾಗೂ ಸ್ನಾತಕೋತರ ಕೇಂದ್ರ ಸಹಯೋಗದೊಂದಿಗೆ 893ನೇ ಬಸವ ಜಯಂತಿಯನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಗಂಗಾವತಿ ಭಾಗ್ಯಮ್ಮ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯ  ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ವಿಷಯವಾಗಿ ಸಂಸ್ಕೃತಿ ಚಿಂತಕರಾದ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡುತ್ತಾ, ಈ ನಾಡಿನಲ್ಲಿ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದ ತಳಸಮುದಾಯದವರಿಗೆ ಯಾವುದೇ ತಾರತಮ್ಯ ಇಲ್ಲದೇ ಶಿಕ್ಷಣ ನೀಡಿದ 12ನೇ ಶತಮಾನದ ಅನುಭವ ಮಂಟಪ ಈ ನಾಡಿನ ಕನ್ನಡ, ಕನ್ನಡಿಗರ ಮೊದಲ ವಿಶ್ವವಿದ್ಯಾಲಯವಾಗಿದೆ ಎಂದರು.

ಈ ವಿಶ್ವವಿದ್ಯಾಲಯದಲ್ಲಿ ಬಸವಾದಿ ಶರಣ- ಶರಣೆಯರಿಂದ ಪ್ರಥಮ ಬಾರಿಗೆ ಕನ್ನಡದಲ್ಲಿ ವಚನ ಸಾಹಿತ್ಯ ಸೃಷ್ಟಿ ಆಯಿತು. ಈ ವಚನ ಸಾಹಿತ್ಯ ಕನ್ನಡಿಗರ ಅಸ್ಮಿತೆಯಾಗಿದೆ. ಫ.ಗು. ಹಳಕಟ್ಟಿ, ಎಂ.ಎಂ. ಕಲಬುರ್ಗಿ, ಮುಂತಾದ ವಿದ್ವಾಂಸರ ಸಂಗ್ರಹದಿಂದ ಇಪ್ಪತ್ತು ಮೂರು ಸಾವಿರಕ್ಕೂ ಹೆಚ್ಚು ವಚನಗಳು ಸಂಗ್ರಹವಾಗಿವೆ.

ಈ ವಚನಗಳು ಸಾಮೂಹಿಕ ಚರ್ಚೆಗೆ ಒಳಪಟ್ಟು ರಚಿತವಾದವುಗಳು. ವಚನಗಳು ಸರ್ವಕಾಲಕ್ಕೂ ಶ್ರೇಷ್ಠವಾದವುಗಳಾಗಿದ್ದು, ಸಮಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ಈ ವಚನಗಳು ಒಳಗೊಂಡಿವೆ. ಈ ಎಲ್ಲಾ ಪ್ರಕ್ರಿಯೆ ನಡೆಯಲು ಪ್ರಮುಖ ಕಾರಣ ಬಸವಣ್ಣನವರು. ಈ ಕಾರಣಕ್ಕಾಗಿ ಬಸವಣ್ಣ ಸಾಂಸ್ಕೃತಿಕ ನಾಯಕರಾಗಿದ್ದಾರೆ.

ಭವಿಷ್ಯತ್ತಿನ ವಿದ್ಯಾರ್ಥಿಗಳಾದ ನೀವುಗಳು ಈ ವಚನಗಳನ್ನು ಹೆಚ್ಚು ಅಧ್ಯಯನ ಮಾಡಿ, ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ನೀವುಗಳು ಸಾಂಸ್ಕೃತಿಕ ನಾಯಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಪಿ. ವಿಜಯಕುಮಾರ ಅವರು, ದಾಸೋಹ ಪರಿಕಲ್ಪನೆ 12ನೇ ಶತಮಾನದ ಬಸವಾದಿ ಶರಣರ ಆಶಯವಾಗಿದೆ. ಈ ನಾಡಿನ ಸಂಪತ್ತು ಸರ್ವರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬುದು ಬಸವಾದಿ ಶರಣರ ಆಶಯವಾಗಿತ್ತು. ಜೀವನಾವಶ್ಯಕತೆಗಿಂತ ಹೆಚ್ಚಿನ ಸಂಪತ್ತು ಸಂಗ್ರಹಿಸಬಾರದು ಎನ್ನುವುದೇ ದಾಸೋಹದ ಪರಿಕಲ್ಪನೆ ಎಂದು ಅವರು ತಿಳಿಸಿದರು.

ಶ್ರೀಮತಿ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಸ್.ಎಸ್. ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಘಟಕದ ಕಾರ್ಯದರ್ಶಿಗಳಾದ ಅಕ್ಕಿ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ ಅವರು ವಂದನೆಗಳನ್ನು ಸಲ್ಲಿಸಿದರು. ಸದಸ್ಯರಾದ ರಾಜಣ್ಣ ಕಾರ್ಯಕ್ರಮ ನಿರೂಪಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಕೆ ಸತೀಶಗೌಡ, ಮುಂಡವಾಡ ಉಮೇಶ, ಕೋಡಿಹಳ್ಳಿ ಮುದುಕಪ್ಪ, ಅನಕನಹಳ್ಳಿ ಹಾಲೇಶ, ಐಗೋಳ ಸುಭಾಷ, ಎಂ ಮಲ್ಲಿಕಾರ್ಜುನ, ಅಕ್ಕಿ ರಮೇಶ, ಕರಿವೀರಪ್ಪ ಉದಾಸಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *