ಬದುಕುವ ಬಗೆ ಅರಿವ ನಾಡಹಬ್ಬ
ಸಾಣೇಹಳ್ಳಿ :
ರಾಜ್ಯೋತ್ಸವದ ಸಂಭ್ರಮಕ್ಕೆ ಇಂಬು ಕೊಡುವಂತೆ ಇಲ್ಲಿ 30ನೇ ನಾಟಕೋತ್ಸವ ಇಂದಿನಿಂದ ನವೆಂಬರ್ 6ರವರೆಗೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ಸಾಮಾನ್ಯವಾಗಿ ನವೆಂಬರ್ 2ರಿಂದ ಆರಂಭವಾಗುತ್ತಿದ್ದ ನಾಟಕೋತ್ಸವವು ಈ ಬಾರಿ ರಾಜ್ಯೋತ್ಸವ ದಿನದಂದೇ ಆರಂಭವಾಗಲಿದೆ. ರಾಜ್ಯೋತ್ಸವ ಆಚರಣೆ ಜೊತೆಗೆ ವಿಚಾರ ಮಾಲಿಕೆ, ವಿಚಾರ ಸಂಕಿರಣ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿವೆ.

‘ದಾರಿ ನೂರಾರಿವೆ ಬೆಳಕಿನರಮನೆಗೆ’ ಎನ್ನುವ ಕವಿವಾಣಿಯಂತೆ ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸಾವಿರಾರು ಪ್ರೇಕ್ಷಕರು ನಾಟಕೋತ್ಸವದಲ್ಲಿ ಭಾಗವಹಿಸಲೆಂದೇ ಬರುತ್ತಾರೆ. ನಾಟಕೋತ್ಸವ ನೋಡಲೆಂದೇ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾದಿಂದ ಯುವರೈತ ಅರವಿಂದ ಲೋಣಿ ಬಂದಿದ್ದಾರೆ. ‘ನಾಟಕೋತ್ಸವ ಅನ್ನೋ ಈ ಜಾತ್ರಿ ನೋಡಾಕ ಬಂದೀನ್ರಿ. ಪ್ರಸಾದ ಮಾಡಿ, ವಾರಗಟ್ಟಲೆ ನಾಟಕ ನೋಡಾಕ ಛಲೋ ಅನ್ನಸ್ತದರಿ’ ಎಂದು ಉತ್ಸಾಹದಿಂದ ಹೇಳಿದರು.
ಇನ್ನು ಸ್ಥಳೀಯ ಹಿರಿಯ ರೈತರಾದ ಜೆ.ಮರುಳಸಿದ್ಧಪ್ಪ ಅವರು ‘ನಾಟಕೋತ್ಸವ ನೋಡುತ್ತ ಮನಸ್ಸು ಬದಲಾಯಿತು. ಜ್ಞಾನ ಬೆಳೆಯಿತು. ಕೆಟ್ಟದ್ದನ್ನು ಬಿಡ್ತೀವಿ, ಒಳ್ಳೇದನ್ನು ತಗೊಳ್ತೀವಿ. ಬೇರೆ ಬೇರೆ ಊರಿಂದ ಅತಿಥಿಗಳು ಬರ‍್ತಾರೆ. ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಆತಿಥ್ಯ ಮಾಡುತ್ತೇವೆ’ ಎಂದು ಖುಷಿಯಿಂದ ಹೇಳಿದರು.
ಈ ಬಾರಿ ಶಿವಸಂಚಾರದ ಕಲಾವಿದರಾದ ಬೆಳಗಾವಿ ಜಿಲ್ಲೆಯ ರಾಮದುರ್ಗದ ಭಗತ್ ಸಿಂಗ್ ಹಳಗೋಡಿ ‘ಕಳೆದ ವರ್ಷ ಶಿವಕುಮಾರ ರಂಗ ಪ್ರಯೋಗಶಾಲೆಯ ವಿದ್ಯಾರ್ಥಿಯಾಗಿ ನಾಟಕೋತ್ಸವದಲ್ಲಿ ಭಾಗವಹಿಸಿದ್ದೆ. ಈ ಬಾರಿ ಶಿವಸಂಚಾರದ ಕಲಾವಿದನಾಗಿ ಭಾಗವಹಿಸುತ್ತಿರುವುದಕ್ಕೆ ಭಾಳ ಸಂತೋಷ ಆಗ್ತದ. ಸಾವಿರಾರು ಜನರ ಎದುರು ನಾಟಕ ಪ್ರದರ್ಶಿಸಾಕ ಉತ್ಸಾಹ ಅದರಿ. ಅದು ಸುಲಭವಲ್ಲ ಅಂತ ಗೊತ್ತದರಿ’ ಎನ್ನುವ ಅವರು ತಮ್ಮ ಸಂಗಾತಿಗಳೊಂದಿಗೆ ಬಿಡುವಿಲ್ಲದ ಕೆಲಸದ ನಡುವೆಯೂ ಮಾತನಾಡಿದರು.

ಇಲ್ಲಿನ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕರ್ತರ ಹಾಗೆ ಬ್ಯಾನರ್ ಕಟ್ಟುವುದರಿಂದ ಹಿಡಿದು ಅತಿಥಿಗಳನ್ನು ಸತ್ಕರಿಸುವುದು, ನೃತ್ಯರೂಪಕದಲ್ಲಿ ಭಾಗವಹಿಸುವುದು … ಹೀಗೆ ಅವರು ಗೊತ್ತಿಲ್ಲದೆ ರಂಗ ತರಬೇತಿ ಪಡೆಯುತ್ತಾರೆ. ಈ ಮೂಲಕ ಬದುಕುವ ಬಗೆಯನ್ನು ಅರಿಯುತ್ತಾರೆ.
ಇಲ್ಲಿನ ಕಲಾವಿದರಾದ ಎಚ್.ಎಸ್. ನಾಗರಾಜ, ಕೆ.ಜ್ಯೋತಿ, ಕೆ. ದಾಕ್ಷಾಯಿಣಿ, ಶರಣಕುಮಾರ, ಪುನೀತ್ ಅವರು ವಚನಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಎದೆಯೊಳಗೆ ಇಳಿಯುತ್ತಾರೆ.
ನಾಡಹಬ್ಬವಾದ ನಾಟಕೋತ್ಸವ
ಸತತ 30 ವರ್ಷಗಳ ಕಾಲ ಸಾಣೇಹಳ್ಳಿಯಲ್ಲಿ ನಾಟಕೋತ್ಸವವನ್ನು ನಾಡಹಬ್ಬದಂತೆ ನಡೆಯುತ್ತ ಬಂದಿರುವುದು ಕನ್ನಡ ರಂಗಭೂಮಿ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ.
ನಾಟಕೋತ್ಸವ ಎಂದರೆ ಕೇವಲ ನಾಟಕಗಳ ಪ್ರದರ್ಶನವಲ್ಲ. ನಾಟಕಗಳನ್ನು ನೆಪವಾಗಿಟ್ಟುಕೊಂಡು ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನಕ್ಕೆ ಬಿತ್ತುವುದು ಮುಖ್ಯ ಉದ್ದೇಶ. ಪ್ರತಿ ವರ್ಷ ನಾಟಕೋತ್ಸವದ ಒಂದು ಧ್ಯೇಯವಾಕ್ಯ ಇರುತ್ತದೆ. ಈ ವರ್ಷದ ಧ್ಯೇಯವಾಕ್ಯ ‘ಗುರುವಾದೊಡು ಕಾಯಕದಿಂದಲೇ ಜೀವನ್ಮುಕ್ತಿ’.
ಕಾಯಕಕ್ಕೆ ವಿಶೇಷ ಮಹತ್ವ ತಂದುಕೊಟ್ಟವರು 12ನೇ ಶತಮಾನದ ಶರಣರು. ಇವತ್ತು ಆ ರೀತಿಯ ಕಾಯಕಶ್ರದ್ಧೆ ವಿರಳವಾಗುತ್ತಿರುವುದರಿಂದ ಮತ್ತೆ ಜನರಲ್ಲಿ ಕಾಯಕಶ್ರದ್ಧೆ ಬಗ್ಗೆ ತಿಳಿಸಿಕೊಡುವುದೇ ಈ ವರ್ಷ ನಾಟಕೋತ್ಸವದ ಮುಖ್ಯ ಆಶಯ ಎನ್ನುತ್ತಾರೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ.

ಇಂದಿನ ಕಾರ್ಯಕ್ರಮ:
ನಾಟಕೋತ್ಸವ ಉದ್ಘಾಟನೆ: ಸಾನ್ನಿಧ್ಯ- ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು. ಉದ್ಘಾಟನೆ- ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್. ಶಿವಸಂಚಾರ ನಾಟಕಗಳ ಉದ್ಘಾಟನೆ– ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್. ರಾಜ್ಯೋತ್ಸವ ಉದ್ಘಾಟನೆ – ಹಿರಿಯ ಸಾಹಿತಿ ಹಂಪ ನಾಗರಾಜಯ್ಯ. ಅತಿಥಿಗಳು- ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ದಾವಣಗೆರೆ ಶಾಸಕ ಸಮರ್ಥ ಮಲ್ಲಿಕಾರ್ಜುನ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನಕುಮಾರ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರಾಜ್ಯ ಸಫಾಯಿ ಮತ್ತು ಕರ್ಮಚಾರಿ ಆಯೋಗ ಅಧ್ಯಕ್ಷ ಪಿ. ರಘು, ಹಿರಿಯ ಭೂವಿಜ್ಞಾನಿ ಪಿ.ಎಸ್. ನವೀನ್, ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಮತ್ತಿತರರು ಉಪಸ್ಥಿತರಿರುತ್ತಾರೆ.
