ಹಾವಿಗೆ ಹಾಲೆರೆಯಬೇಡಿ, ಹೂ ಮನಸ್ಸುಳ್ಳ ಮಕ್ಕಳಿಗೆ ಹಾಲುಣಿಸಿ: ಪ್ರಭುಮಹಾಂತ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಸಂಪ್ರದಾಯದಕ್ಕಿಂತ ಸತ್ಯ ಶ್ರೇಷ್ಠ, ಸತ್ಯಕ್ಕಿಂತ ಕಲ್ಯಾಣ ಶ್ರೇಷ್ಠ ಎಂಬ ಶರಣರ ವಾಣಿಯಂತೆ ನಾವು ನಿರ್ಗತಿಕ, ದು:ಖಿತ, ಮತಿಮಾಂದ್ಯ ಮಕ್ಕಳಿಗೆ ಹಾಲುಣಿಸಿ ಮೂಢನಂಬಿಕೆ ತೊಲಗಿಸಬೇಕಾಗಿದೆ ಎಂದು ಬದಾಮಿ-ಬೇಲೂರ ಶ್ರೀ ಗುರುಬಸವೇಶ್ವರ ಮಠದ ಪೂಜ್ಯ ಡಾ. ಪ್ರಭುಮಹಾಂತ ಸ್ವಾಮಿಗಳು ನುಡಿದರು.

ನಾಗರಪಂಚಮಿ ಪ್ರಯುಕ್ತ ಇಂದು ವಿದ್ಯಾನಗರ ನವಜೀವನ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ಬಸವಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಮತಿಮಾಂದ್ಯ ಮಕ್ಕಳಿಗೆ ಹಣ್ಣು-ಹಂಪಲು, ಹಾಲು ವಿತರಿಸುವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ದೇವರ ಈ ಮಕ್ಕಳನ್ನು ನೋಡಿದರೆ ತುಂಬಾ ವ್ಯಥೆಯಾಗುತ್ತಿದೆ. ಇಂದು ತಾವು ಕಲ್ಲು ಮಣ್ಣಿನ ನಾಗಪ್ಪನಿಗೆ ಹಾಲೆರೆಯದೆ ಮಕ್ಕಳಿಗೆ ಹಾಲುಣಿಸುತ್ತಿರುವ ಸಾಮಾಜಿಕ ಕಾರ್ಯ ತುಂಬಾ ಶ್ಲಾಘನೀಯ.

ಇಂದು ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರಗಳಿಂದ ಸಮಾಜ ದೂರಾಗಲು, ಬೇರುಮಟ್ಟದಿಂದ ಇದನ್ನು ಹೋಗಲಾಡಿಸಲು ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ ಯುವ ಬಸವ ಕೇಂದ್ರ ಹಾಗೂ ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಮಹಿಳೆಯರಲ್ಲಿ, ಮಕ್ಕಳಲ್ಲಿ, ವೈಜ್ಞಾನಿಕ ಹಾಗೂ ವೈಚಾರಿಕ ಭಾವನೆ ಮೂಡಿಸಬೇಕು. ನಿಜವಾಗಿಯೂ ಹಾವು ಹಾಲು ಕುಡಿಯೊದಿಲ್ಲ, ಹಾಲು ಚೆಲ್ಲಿ ಹಾಳು ಮಾಡುವುದಕ್ಕಿಂತ ಅಂಗವೈಕಲ್ಯ, ದೈಹಿಕ ದುರ್ಬಲರಾಗಿ ರೋಗದಿಂದ ಬಳಲುತ್ತಿರುವ ಇಂದಿನ ಮಕ್ಕಳಿಗೆ ನೀಡಿದರೆ ಬಹುಶಃ ಯುವಶಕ್ತಿ ಇನ್ನು ಚೇತರಿಸಿಕೊಳ್ಳಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗೌರವಾಧ್ಯಕ್ಷರಾದ ಬಾಬು ದಾನಿ ಮಾತನಾಡಿ, ವಿಷಪೂರಿತ ಹಾವಿನಿಂದ ನಾವು ಏನನ್ನು ಪಡೆಯಬಹುದು ಎಂಬುದು ಅತ್ಮಾವಲೋಕನ ಮಾಡುವ ಕಾಲ ಇದಾಗಿದೆ. ಹುತ್ತಿನಲ್ಲಿ ಹಾವು ಇರೊದಿಲ್ಲ, ವೈಜ್ಞಾನಿಕವಾಗಿ ಗಮನಿಸಿದರೆ ಇರುವೆಗಳು ಅದನ್ನು ಕಟ್ಟುತ್ತವೆ.

ನಾಗರಪಂಚಮಿ ಹಬ್ಬ ಊಟ ಮಾಡಿ ಅಕ್ಕತಂಗಿಯರನ್ನು ಮನೆಗೆ ಕರೆದು ಎಲ್ಲರೂ ಕೂಡಿ ಸಂಭ್ರಮಾಚರಣೆ ಮಾಡಿರಿ, ಆದರೆ ಸಂಪ್ರದಾಯಕ್ಕೆ ಮಾರು ಹೋಗಿ ಗೊಡ್ಡು ಆಚರಣೆ ಬೆಳೆಸಬಾರದೆಂದು ಮನವಿ ಮಾಡಿದರು.

ಆರ್.ಆರ್.ಕೆ. ಫಾರ್ಮಸಿ ಕಾಲೇಜು ಪ್ರಾಧ್ಯಾಪಕರಾದ ಡಾ. ಕರಣ ಪಾಟೀಲ, ಗೋಯಲ್ ಫಾರ್ಮಸಿ ಕಾಲೇಜು ಪ್ರಾಧ್ಯಾಪಕರಾದ ಡಾ. ರಾಜಕುಮಾರ ಧುಮನಸುರೆ, ಕ.ಸಾ.ಪ. ಕೋಶಾಧ್ಯಕ್ಷರಾದ ಡಾ. ಶಿವಶಂಕರ ಟೋಕರೆ ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಇದ್ದರು.

ಮೊದಲಿಗೆ ಆಕಾಶ ಕೋಟೆ ಸರ್ವರನ್ನು ಸ್ವಾಗತಿಸಿದರೆ, ಸಿದ್ಧಾರೂಢ ಭಾಲ್ಕೆ ನಿರೂಪಣೆ, ಕೊನೆಯಲ್ಲಿ ಬಸವರಾಜ ಬಿರಾದಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹೇಶ ಮಜಗೆ, ಸಂಗೀತಾ ಮಾಳೆ ಉಪಸ್ಥಿತರಿದ್ದರು. ಹಾಜರಿದ್ದ ನವಜೀವನ ವಿಶೇಷ ಮಕ್ಕಳ ವಸತಿಯುತ ಶಾಲಾ ಮಕ್ಕಳಿಗೆ ಸುಜಾತಾ ವಿಜಯಕುಮಾರ ವಡ್ಡೆ ದಂಪತಿಗಳು ಹಾಲು, ಬಿಸ್ಕತ್ತು, ಬಾಳೆಹಣ್ಣು, ಮೋಸಂಬಿ, ಡ್ಯ್ರಾಗನ್ ಹಣ್ಣು ವಿತರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *