ಹೊಸಮಠ: ಬಸವತತ್ವದ ಗಟ್ಟಿ ಧ್ವನಿ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಇಂದು ಮಧ್ಯಾಹ್ನ 1 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಧಾರ್ಮಿಕ ಕಾರ್ಯ

ಮೈಸೂರು

ಹೊಸಮಠದ 19ನೇ ಸ್ವಾಮೀಜಿ ಶ್ರೀ ಚಿದಾನಂದ ಸ್ವಾಮೀಜಿ (79) ಗುರುವಾರ ಲಿಂಗೈಕ್ಯರಾಗಿದ್ದಾರೆ. ಜೆಎಸ್​ಎಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 10:30ಕ್ಕೆ ಹೃದಯಾಘಾತದಿಂದ ನಿಧನರಾದರು.

ಚಿದಾನಂದ ಸ್ವಾಮೀಜಿ ಅವರ ನಿಧನದ ಸುದ್ದಿ ತಿಳಿದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹೊಸಮಠಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಮಠದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹೊಸಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

1982ರಲ್ಲಿ ಪೀಠಾಧ್ಯಕ್ಷರಾದರು

ಚಿದಾನಂದ ಸ್ವಾಮೀಜಿ ಅವರು ತಮ್ಮ ಗುರುಗಳಾದ ಗುರುಶಾಂತ ಸ್ವಾಮೀಜಿ ಅವರ ನಂತರ 1982ರಲ್ಲಿ ಹೊಸಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಚಿದಾನಂದ ಸ್ವಾಮೀಜಿ ಚಿಕ್ಕಂದಿನಿಂದಲೂ ಕ್ರಿಯಾಶೀಲರು ಹಾಗೂ ಸದಾ ಸಕ್ರಿಯವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಅವರ ಪಾದರಸದಂತಹ ಉತ್ಸಾಹವನ್ನು ಗಮನಿಸಿದ ಗುರುಶಾಂತ ಸ್ವಾಮಿಗಳು ಅವರಿಗೆ ಪಟ್ಟಾಧಿಕಾರ ನೆರವೇರಿಸಿದ ದಿನದಿಂದಲೇ ಮಠದ ಸಮಸ್ತ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿ ಅಧ್ಯಯನ, ಅಧ್ಯಾಪನ ಹಾಗೂ ಆಧ್ಯಾತ್ಮ ಚಿಂತನೆಗಳಲ್ಲಿ ತೊಡಗಿಸಿಕೊಂಡರು.

ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ‘ಚಿದಾನಂದ ಸ್ವಾಮೀಜಿ ಶ್ರೀ ನಟರಾಜ ಪ್ರತಿಷ್ಠಾನ’ದ ಮೂಲಕ ಹಲವು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಶ್ರಮಿಸಿದ್ದರು.

ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ವಿಶೇಷವಾಗಿ ಮಹಿಳೆಯರಿಗೆ ಉಚಿತ ವಸತಿ ಮತ್ತು ಶಿಕ್ಷಣ ಒದಗಿಸುವ ಕಾರ್ಯಕ್ಕೂ ಆದ್ಯತೆ ನೀಡಿದ್ದರು.

ಚಿದಾನಂದ ಸ್ವಾಮೀಜಿ ಅವರು, ಮಹಿಳಾ ವಿದ್ಯಾಭ್ಯಾಸಕ್ಕೆ ನೀಡಿರುವ ಕೊಡುಗೆ ಅಪಾರ. ಈವರೆಗೆ ಮಹಿಳಾ ಸಮುದಾಯವನ್ನು ಅಷ್ಟಾಗಿ ಪರಿಗಣಿಸದ ಸಮಾಜವನ್ನು ಒಪ್ಪದ ಅವರು ಈ ನಿಟ್ಟಿನಲ್ಲಿ ನಗರದ ಗ್ರಾಮಾಂತರ ಪ್ರದೇಶದ ಬಡ-ಮಧ್ಯಮ ವರ್ಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯ ಗಮನವಹಿಸಿ ಈ ಶಿಕ್ಷಣ ಸಂಸ್ಥೆಗಳನ್ನು ತೆರೆದಿರುವುದು ವೈಶಿಷ್ಟ್ಯವಾಗಿದೆ.

ಸಾಹಿತ್ಯಕವಾಗಿ ನಟರಾಜ ಪ್ರಕಾಶನದ ಮುಖೇನ ಹಲವು ಮೌಲ್ವಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ತಮ್ಮ ಅವಧಿಯಲ್ಲಿ ಎಲ್ಲರೂ ಗುರುತಿಸುವ ಮಟ್ಟಿಗೆ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾದರಿಯಾದರು.

ಬಸವತತ್ವದ ಗಟ್ಟಿ ಧ್ವನಿ

12ನೇ ಶತಮಾನದ ಶರಣರ ಸಿದ್ಧಾಂತಗಳ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಅವರು ಬಸವಣ್ಣನವರ ಇತಿಹಾಸ ಹಾಗೂ ಬಸವತತ್ವದ ವಿಚಾರಗಳ ಪರವಾಗಿ ಧ್ವನಿ ಎತ್ತಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಗೂ ಮಠದ ವತಿಯಿಂದ ಬೆಂಬಲ ನೀಡಿದ್ದರು.

ಮೈಸೂರಿನ ಹೊಸಮಠವು ಸುಮಾರು 500 ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾಗಿದೆ. ಬಸವತತ್ವದ ಪ್ರಸಾರ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಠವು ಮಹತ್ವದ ಕೊಡುಗೆ ನೀಡಿದೆ.

ಆ ಪರಂಪರೆಯನ್ನು ಮುಂದುವರೆಸಿದ ಹೆಗ್ಗಳಿಕೆ ಅವರದು.

ಸುದೀರ್ಘ ಸೇವೆ

ಟಿ. ನರಸೀಪುರ ತಾಲೂಕು ಮುಡುಕನಪುರ ಸಿದ್ಧಬಸವದೇವರು ಮತ್ತು ಮರಿಲಿಂಗಮ್ಮ ದಂಪತಿಯ ಮಗನಾಗಿ 1950 ಫೆಬ್ರುವರಿ 1 ರಂದು ಜನಿಸಿದ್ದ ಇವರ ಪೂರ್ವಾಶ್ರಮದ ಹೆಸರು ಎಸ್. ಚಂದ್ರಶೇಖರಸ್ವಾಮಿ.
ತಂದೆ ಸಿದ್ದಬಸವದೇವರು, ಗುರುಶಾಂತಸ್ವಾಮಿಗಳ ಪೂರ್ವಾಶ್ರಮದ ಅಣ್ಣ.

ಚಿದಾನಂದ ಸ್ವಾಮಿಗಳು ಪ್ರಾಥಮಿಕ ವಿದ್ಯಾಭ್ಯಾಸವನ್ನು ದಳವಾಯಿ ವಿದ್ಯಾಸಂಸ್ಥೆಯಲ್ಲಿ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸವನ್ನು ಶಾರದಾವಿಲಾಸ ಮಾಧ್ಯಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಜೆ.ಎಸ್.ಎಸ್ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಮಹಾರಾಜ ಕಾಲೇಜಿನಲ್ಲಿ ಪಿಯುಸಿಯಿಂದ ಬಿ.ಎ.ವರೆಗೆ ವ್ಯಾಸಂಗ ಮಾಡಿದರು.

ಮನ್ಮಹಾರಾಜರವರ ಸಂಸ್ಕೃತ ಕಾಲೇಜಿನಲ್ಲಿ ಮೂರು ವರ್ಷಗಳ ಸಾಹಿತ್ಯ ಪರೀಕ್ಷೆ ಓದಿ ಮುಗಿಸಿದರು. ಮುಂದೆ ತಮ್ಮ ಹಿರಿಯ ಗುರುಗಳ ಆಶಯದಂತೆ ಜೆ.ಎಸ್.ಎಸ್. ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಮಾರ್ಗದರ್ಶನ ವಿದ್ಯಾರ್ಥಿ ನಿಲಯಗಳ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತ ಸ್ವಾಮೀಜಿ ಅವರನ್ನು ಸ್ಮರಿಸುತ್ತಿದ್ದರು.

ಮಠದ ಅಧಿಕಾರವನ್ನು ವಹಿಸಿಕೊಂಡ ಚಿದಾನಂದ ಸ್ವಾಮೀಜಿ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಪಂಚಗವಿಮಠದ ಕಾರ್ಯಗಳಲ್ಲೂ ಕೆಲವು ವರ್ಷಗಳ ಕಾಲ ತೊಡಗಿಸಿಕೊಂಡರು. ಗೌರಿಶಂಕರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಕೆಲ ಕಾಲ ಅದರ ಆರಂಭಿಕ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದರು.

ಶುಕ್ರವಾರ ಬೆಳಗ್ಗೆ ಅಂತಿಮ‌ ದರ್ಶನ:

ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 9ಗಂಟೆವರೆಗೆ ಇಡಲಾಗುವುದು.

ನಂತರ ಬಸವೇಶ್ವರ ಪುತ್ಥಳಿಯಿಂದ ಮೆರವಣಿಗೆ ಹೊರಟು, ಅಗ್ರಹಾರ, ಬಸವೇಶ್ವರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು.

ನಂತರ ಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಧಾರ್ಮಿಕ ಕಾರ್ಯ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ನೂತನ ಪೀಠಾಧಿಕಾರಿ

2025ರಲ್ಲಿ ಹೊಸಮಠದಲ್ಲಿ ಚಿದಾನಂದ ಮಹಾಸ್ವಾಮೀಜಿಗಳವರ ಅಮೃತ ಮಹೋತ್ಸವ ಕಾರ್ಯಕ್ರಮ ನಡೆದಿತ್ತು.

ಆಗ ಚಿದಾನಂದ ಸ್ವಾಮೀಜಿ ತಿ.ನರಸೀಪುರ ತಾಲ್ಲೂಕಿನ ಮುಡುಕನಪುರದ ವಟು ಎಂ.ಬಿ.ರಾಕೇಶ್‌ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದರು.

ನೂತನ ಸ್ವಾಮೀಜಿ ಅವರಿಗೆ ಸಿದ್ಧಬಸವ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ಅವರಿಗೆ ಭಕ್ತರ ಸಮ್ಮುಖದಲ್ಲಿ ದಿವ್ಯಸ್ನಾನ, ಭಸ್ಮರುದ್ರಾಕ್ಷ ಧಾರಣೆ, ಲಿಂಗಾಂಗಾನುಸಂಧಾನ, ಮಂತ್ರೋಪದೇಶ, ಪಂಚಮುದ್ರಾದಾನ, ವಿರಕ್ತಾಶ್ರಮಾಧಿಕಾರ, ಷಟ್ಸ್ಥಲ ಬ್ರಹ್ಮೋಪದೇಶ ಸೇರಿದಂತೆ‌ ವಿಧಿವಿಧಾನಗಳು ನಡೆದಿದ್ದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *