ಹುಟ್ಟಿ ಸತ್ತವರ ಕಾವ್ಯವಲ್ಲ, ಇದು ಸತ್ಯಶರಣರ ಕಥೆ 2

ಪ್ರಭುಲಿಂಗಲೀಲೆ: ಸಮಗ್ರ ಚಿಂತನೆ 2

ಚಾಮರಸ ಕವಿ ಕೆಲವು ವಿಚಾರಗಳು

          ಕನ್ನಡದ ಖ್ಯಾತವಿದ್ವಾಂಸರಾದ ಎಂ. ಆರ್. ಶ್ರೀನಿವಾಸಮೂರ್ತಿಗಳು ತಮ್ಮ ಪ್ರಭುಲಿಂಗಲೀಲೆ ಸಂಗ್ರಹ ಎಂಬ ಕೃತಿಯಲ್ಲಿ – “ಮಹಾತ್ಮರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ ಹೇಗೆ ಬರೆಯಬೇಕೆಂಬುದಕ್ಕೆ ಪ್ರಭುಲಿಂಗಲೀಲೆ ಉತ್ತಮ ನಿದರ್ಶನವಾಗಿದೆ”ಎಂದು ಹೇಳಿದ ಮಾತು ಅಕ್ಷರಶಃ ನಿಜ.

          ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಇಮ್ಮಡಿ ದೇವರಾಯ ಅಥವಾ ಪ್ರೌಢದೇವರಾಯನ ಆಡಳಿತದ ಯುಗ ಸುವರ್ಣಾಕ್ಷರಗಳಿಂದ ಬರೆದಿಡುವಂತಹದು. ಪ್ರೌಢದೇವರಾಯನು ಲಿಂಗಾಯತ ಧರ್ಮ ಸಾಹಿತ್ಯ ಸಂಸ್ಕೃತಿಗಳ ಪುನರುಜ್ಜೀವನಕ್ಕೆ ನಾಂದಿ ಹಾಡಿದ ಪುಣ್ಯಪುರುಷ. ಈತನ ಆಸ್ಥಾನದಲ್ಲಿ ಲಕ್ಕಣ್ಣ ದಂಡೇಶ, ಜಕ್ಕಣ್ಣಾರ್ಯ ಎಂಬ ಲಿಂಗಾಯತ ಕವಿಗಳು ಮಂತ್ರಿಗಳಾಗಿದ್ದರು. ಅಂತೆಯೆ ಅವರನ್ನು ಅಮಾತ್ಯ ಶಿರೋಮಣಿಗಳೆಂದು ಕರೆಯಲಾಗಿದೆ. ಈ ಕಾಲಘಟ್ಟದಲ್ಲಿಯೇ ೧೨ನೇ ಶತಮಾನದ ಬಸವಾದಿ ಶಿವಶರಣರ ವಚನಗಳ ಸಂಗ್ರಹ, ಸಂಕಲನ, ಸಂಪಾದನೆಯ ಕಾರ್ಯಗಳು ಅತ್ಯಂತ ವೇಗವಾಗಿ ನಡೆದವು. ವಚನ ಸಾಹಿತ್ಯವು ಮತ್ತೆ ನಮ್ಮೆಲ್ಲರ ಮನೆ-ಮನಗಳಿಗೆ ಮುಟ್ಟಿಸಿದ ಕೀರ್ತಿಯೂ ಈ ಯುಗಕ್ಕೆ ಸಲ್ಲುತ್ತದೆ.

          ಪ್ರೌಢದೇವರಾಯನ ಕಾಲದಲ್ಲಿ ಚಾಮರಸ ಕವಿ ಪ್ರಭುಲಿಂಗಲೀಲೆ ಎಂಬ ಮಹೋನ್ನತ ಕಾವ್ಯ ರಚಿಸಿದ ಎಂಬುದು ಗಮನಾರ್ಹ ಸಂಗತಿ. ಈ ಕೃತಿ ರಚನೆಯ ಕುರಿತು ಒಂದು ಸಂಭವನೀಯ ದಂತಕಥೆ ಚಾಲ್ತಿಯಲ್ಲಿದೆ. ಕುಮಾರವ್ಯಾಸ ಚಾಮರಸನ ತಂಗಿಯ ಗಂಡ. ಸಂಬಂಧದಲ್ಲಿ ಉಭಯತರೂ ಭಾವ, ಭಾವಮೈದುನರು. ಇಬ್ಬರೂ ಪ್ರೌಢದೇವರಾಯನ ಆಸ್ಥಾನದ ಕವಿಗಳು.  ರಾಜ ಇಬ್ಬರಿಗೂ ಮಹಾಕಾವ್ಯ ರಚನೆ ಮಾಡಲು ಪ್ರೋತ್ಸಾಹಿಸಿದ. ರಾಜನ ಅಪೇಕ್ಷೆಯಂತೆ ಚಾಮರಸನು ಮೊದಲು ಮಹಾಭಾರತದ ಯುದ್ಧ ಪಂಚಕ ಎಂಬ ಮಹಾಕಾವ್ಯವನ್ನು ರಚಿಸಿದ. ಚಾಮರಸನ ಈ ಕೃತಿ ತುಂಬ ಮನ್ನಣೆ ಪಡೆಯಿತು. ಹೀಗಾಗಿ ಮಹಾರಾಜನಿಂದ ರಾಜಗೌರವವನ್ನು ಚಾಮರಸ ಪಡೆದ. ಈ ಸಂಗತಿ ಕುಮಾರವ್ಯಾಸನಲ್ಲಿ ಹೊಟ್ಟೆಕಿಚ್ಚಿಗೆ ಕಾರಣವಾಯಿತು. ಆತ ತನ್ನ ಹೆಂಡತಿಯನ್ನು ಕರೆದು, ‘ನಿನ್ನ ಅಣ್ಣ ಚಾಮರಸ ಮಹಾಭಾರತ ಕುರಿತು ಒಂದು ಮಹಾಕಾವ್ಯ ರಚಿಸಿದ್ದಾನೆ. ಈ ಕೃತಿಯನ್ನು ಹೇಗಾದರೂ ಮಾಡಿ ಕದ್ದು ಬಿಡು’ಎಂದು ಹೇಳುತ್ತಾನೆ. ಗಂಡನ ಮೇಲಿನ ಪ್ರೀತಿಯಿಂದ ಸಹೋದರ ಸಂಬಂಧವನ್ನು ಕಡೆಗಣಿಸಿ ಕುಮಾರವ್ಯಾಸನ ಹೆಂಡತಿ ಅಣ್ಣ ಚಾಮರಸನ ಮನೆಗೆ ಬಂದು, ಆತನ ಮಹಾಕಾವ್ಯದ ಹಸ್ತಪ್ರತಿಯನ್ನು ಕದ್ದು ಸುಟ್ಟು ಬಿಡುತ್ತಾಳೆ.

ಈ ವಿಷಯ ತಿಳಿದು ಚಾಮರಸನ ಮನಸ್ಸಿಗೆ ತುಂಬ ನೋವಾಗುತ್ತದೆ. ಅದೇ ನೋವಿನಲ್ಲಿ ಕಾಲಕಳೆಯುತ್ತಿರುವಾಗ, ಆತನ ಕನಸಿನಲ್ಲಿ ಈಶ್ವರನು ಬಂದು ಅನ್ಯದೈವವನ್ನು ಕೀರ್ತಿಸಿದ ಫಲ ಹೀಗಾಯಿತೆಂದು ಹೇಳುತ್ತಾನೆ. ಸ್ವಪ್ನದಿಂದ ಎಚ್ಚರವಾದ ನಂತರ, ಚಾಮರಸನು ಹಂಪೆಗೆ ಬಂದು ವಾಸ ಮಾಡತೊಡಗಿದನು. 

ಇತ್ತ ಪ್ರೌಢದೇವರಾಯನ ಆಸ್ಥಾನದಲ್ಲಿ ಕುಮಾರವ್ಯಾಸನಿಗೆ ಕನಕಾಭಿಷೇಕ ನಡೆದಾಗ ಅಮಾತ್ಯರಾದ ಜಕ್ಕಣ್ಣಾದಿಗಳು ಇದು ಸತ್ತವರ ಕಥೆ. ಇದಕ್ಕೆ ಈ ಮನ್ನಣೆ ಸಲ್ಲದೆಂದು ಕನಕಾಭಿಷೇಕ ತಡೆದರು. ಆಗ ಆ ಆಸ್ಥಾನದಲ್ಲಿ ಮುಕುಂದ ಪೆದ್ದಿ ಎಂಬ ವಿದ್ವಾಂಸರಿಗೂ ಜಕ್ಕಣ್ಣಾರ್ಯರಿಗೂ ಭಯಂಕರ ವಾದ ನಡೆಯುತ್ತದೆ. ಸತ್ತರವಲ್ಲದವರ, ಸತ್ಯವಂತರ ಕಥೆಯನ್ನು ಬರೆಸಿ ತರಿಸುತ್ತೇವೆ ಎಂದು ಜಕ್ಕಣ್ಣಾರ್ಯರು ನೇರವಾಗಿ ಚಾಮರಸನ ಹತ್ತಿರ ಬರುತ್ತಾರೆ. ಜಕ್ಕಣ್ಣಾರ್ಯರ ಮಾತಿನಿಂದ ಪ್ರಭಾವಿತನಾಗಿ ಚಾಮರಸನು ಪ್ರತಿದಿನ ೧೦೧ ಪದ್ಯಗಳಂತೆ, ೧೧ ದಿನಗಳಲ್ಲಿ ೧೧೧೧ ಪದ್ಯಗಳುಳ್ಳ ಪ್ರಭುಲಿಂಗಲೀಲೆ ಎಂಬ ಮಹಾಕಾವ್ಯವನ್ನು ರಚನೆ ಮಾಡುತ್ತಾನೆ. ಈ ಕಾವ್ಯವನ್ನು ಪ್ರೌಢದೇವರಾಯನ ಆಸ್ಥಾನದಲ್ಲಿ ಓದಿ, ಅದಕ್ಕೆ ತಕ್ಕ ಎಲ್ಲ ಮನ್ನಣೆಗಳನ್ನು ಚಾಮರಸ ಪಡೆಯುತ್ತಾನೆ. ಅಷ್ಟೇ ಅಲ್ಲ, ಈ ಮಹಾಕಾವ್ಯದ ಪ್ರಭಾವದಿಂದ ಸ್ವತಃ ಪ್ರೌಢದೇವರಾಯನೇ ಲಿಂಗಾಯತ ಧರ್ಮದ ದೀಕ್ಷೆಯನ್ನು ಪಡೆದು ಕೊಳ್ಳುತ್ತಾನೆ. ಆಗ ಜಕ್ಕಣ್ಣಾರ್ಯರು ತಮಗೆ ವಯಸ್ಸಾಗಿದೆ ಎಂದು ರಾಜನಿಗೆ ತಿಳಿಸಿ, ತಮ್ಮ ಅಮಾತ್ಯ ಪಟ್ಟವನ್ನು ಚಾಮರಸನಿಗೆ ಕೊಡಿಸುತ್ತಾರೆ.

          ಈ ದಂತಕಥೆ ಏನೇ ಇರಲಿ, ಚಾಮರಸನು ಪ್ರೌಢದೇವರಾಯನ ಕಾಲದಲ್ಲಿ ಇದ್ದನೆಂದು ಕವಿಚರಿತೆಕಾರರು, ಇ.ಪಿ. ರೈಸ್ ಮೊದಲಾದ ವಿದ್ವಾಂಸರು ಒಪ್ಪುತ್ತಾರೆ.

          ಇಂತಹ ಮಹಾಕಾವ್ಯಗಳು ನೂರು ವರ್ಷಕ್ಕೊಮ್ಮೆ ಅವತರಣವಾಗುತ್ತವೆ. ರಾಷ್ಟ್ರಕವಿ ಕುವೆಂಪು ಅವರು ಪಂಪನ ಮಹಾಕಾವ್ಯ ಮತ್ತು ಮಿಲ್ಟನ್ನನ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯದ ಕುರಿತು ಹೇಳುವ ಮಾತುಗಳು ಹೀಗಿವೆ : ‘ವಿಕ್ರಮಾನರ್ಜುನ ವಿಜಯವನ್ನು ಆರು ತಿಂಗಳಲ್ಲಿಯೂ ಆದಿ ಪುರಾಣವನ್ನು ಮೂರು ತಿಂಗಳಲ್ಲಿಯೂ ರಚಿಸಿದನೆಂದು ಪಂಪ ಹೇಳಿಕೊಂಡಿದ್ದಾನೆ. ಪಂಪನ ರಚನಾ ಸಮಯದ ನಿಮಿಷಗಳನ್ನೂ ಗಂಟೆಗಳನ್ನೂ ಕೂಡಿಸಿ ಬಂದ ಹೊತ್ತಿನ ಮೊತ್ತವನ್ನು ತಿಂಗಳುಗಳಾಗಿ ಭಾಗಿಸಿರುವನೆಂದು ಕೊಂಡರೆ ನಮ್ಮ ಆಶ್ಚರ್ಯ ವಿಸ್ಮಯದ ಎಲ್ಲೆಯನ್ನು ಮುಟ್ಟದಿರಬಹುದು. ಹಾಗಲ್ಲದೆ ಸಮಗ್ರ ಕೃತಿಯನ್ನು ಅದನ್ನು ಉತ್ತು ಬಿತ್ತುವ ಮೊತ್ತ ಮೊದಲಿನಿಂದ ಹಿಡಿದು ರಸಾನ್ನ ಭೋಜನದ ಸಮಾರಾಧನೆಯ ಸಿದ್ಧಿಯ ತುತ್ತತುದಿಯವರೆಗೂ ಮೂರು ಮತ್ತು ಆರು ತಿಂಗಳಲ್ಲಿ ಮುಗಿಸಿದನೆಂದರೆ ನಂಬುಗೆಯು ತತ್ತರಿಸುತ್ತದೆ.

ಪವಾಡ ಸಂದರ್ಶನ ವಾದಂತಾಗುತ್ತದೆ! ಮಿಲ್ಟನ್ ಕವಿಗೆ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯವನ್ನು ಬರೆಯಲು ಎಂಟು ವರ್ಷಗಳೇ ಹಿಡಿಯಿತಂತೆ. ಆದರೆ ವಾಸ್ತವವಾಗಿ ಕುಳಿತು ಕೆಲಸ ಮಾಡಿದ ಕಾಲವಷ್ಟನ್ನೇ ಗಣನೆಗೆ ತೆಗೆದುಕೊಂಡಿದ್ದರೆ ಅವನು ಬಹುಶಃ ಎಂಟೇ ತಿಂಗಳಲ್ಲಿ ರಚಿಸಿದನೆಂದು ಹೇಳಿಕೊಳ್ಳಬಹುದಾಗಿತ್ತೆಂದು ತೋರುತ್ತದೆ’. ಕುವೆಂಪು ಅವರ ಮಾತಿನ ತಾತ್ಪರ್ಯದಂತೆ ಚಾಮರಸನ ಆಂತರ್ಯದಲ್ಲಿ ಪ್ರಭುವಿನ ಕಥನ ಚರಿತ್ರೆಯ ರೂಪರೇಷೆಗಳು ಅನಂತ ಕಾಲ ಜಪ್ಪಿಸಿ ಕುಳಿತಂತೆ ಭಾಸವಾಗುತ್ತದೆ.

    ಲಿಂಗಾಯತರು ರಾಮಾಯಣ ಮಹಾಭಾರತದಂತಹ ಉತ್ತರ ಭಾರತದ ಕೃತಿಗಳನ್ನು ಅಧ್ಯಯನ ಮಾಡಲಿಲ್ಲ, ಅವರಿಗೆ ಬಸವಾದಿ ಶಿವಶರಣರ ಆದರ್ಶವೇ ದೊಡ್ಡದಾಗಿತ್ತು.

          ಲಿಂಗಾಯತರು ರಾಮಾಯಣ ಮಹಾಭಾರತದಂತಹ ಉತ್ತರ ಭಾರತದ ಕೃತಿಗಳನ್ನು ಅಧ್ಯಯನ ಮಾಡಲಿಲ್ಲ, ಅವರಿಗೆ ಬಸವಾದಿ ಶಿವಶರಣರ ಆದರ್ಶವೇ ದೊಡ್ಡದಾಗಿತ್ತು. ಪಂಪ-ರನ್ನ ಮೊದಲಾದ ಕವಿಗಳು ಉತ್ತರ ಭಾರತದ ಈ ಕಥೆಗಳನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡು ಕನ್ನಡದ ಅಸ್ತಿತ್ವವನ್ನು ಉಳಿಸಿದರು, ಆದರೆ ಅಸ್ಮಿತೆಯನ್ನು ಉಳಿಸಲಿಲ್ಲ. ಬಸವಾದಿ ಶಿವಶರಣರು ದೇಶಿಯ ನೆಲೆಯ ಸತ್ವವನ್ನು ಹಿರಿಕೊಂಡು ತಮ್ಮದೇ ಆದ ದಾರಿಯನ್ನು ನಿರ್ಮಿಸಿ, ಕನ್ನಡದ ಅಸ್ತಿತ್ವವನ್ನೂ ಉಳಿಸಿದರು, ಅಸ್ಮಿತೆಯನ್ನೂ ಕಾಪಾಡಿದರು.

          ಚಾಮರಸ ಹನ್ನೊಂದು ದಿನಗಳಲ್ಲಿ ಬರೆದ ತನ್ನ ಕಾವ್ಯದ ಮುಖ್ಯ ಉದ್ದೇಶವನ್ನು ತುಂಬ ಅರ್ಥಪೂರ್ಣವಾಗಿ ದಾಖಲಿಸುತ್ತಾನೆ:

ಕಾಳಗದ ಕಥೆಯಲ್ಲ ವಿಷಯಗ

ಳೇಳಿಗೆಯ ವಿಧಿಯಲ್ಲ ಹೊಟ್ಟೆಯ

ಹೂಳಲಿಕೆ ಹಿಂಸೆಯನು ಮಾಡುವ ಹೊಲಬು ತಾನಲ್ಲ|

ಕಾಳಗವು ಕರಣದಲಿ ಸುರತದ

ಕೀಲು ಕುಂಡಲಿಯಲ್ಲಿ ತೃಪ್ತಿಯ

ದಾಳಿ ಗಗನದೊಳೆಂದು ಪೇಳುವುದೀ ಸುಬೋಧೆಯಲ್ಲಿ||

ಸತ್ತವರ ಕಥೆಯಲ್ಲ ಜನನದ

ಕುತ್ತದಲಿ ಕುದಿಕುದಿದು ಕರ್ಮದ

ಕತ್ತಲೆಗೆ ಸಿಲ್ಕುವರ ಸೀಮೆಯ ಹೊಲಬು ತಾನಲ್ಲ

ಹೊತ್ತು ಹೋಗದೆ ಪುಂಡರಾಲಿಪ

ಮತ್ತಮತಿಗಳ ಗೋಷ್ಠಿಯಲ್ಲಿದು

ಸತ್ಯಶರಣರು ತಿಳುವುದೀ ಪ್ರಭುಲಿಂಗಲೀಲೆಯನು||

          ಮಹಾಭಾರತದಂತಹ ಕಾಳಗದ ಕಥೆ ಇಲ್ಲಿ ಇಲ್ಲ. ಲೋಕದಲ್ಲಿ ಹುಟ್ಟಿ ಸತ್ತವರ ಹೊಗಳಿಕೆ ಕಾವ್ಯವೂ ಇದಲ್ಲ. ಕರ್ಮದ ಕತ್ತಲೆಗೆ ಸಿಲುಕಿ ಹೋದವರ ಕಥೆಯೂ ಅಲ್ಲ. ಇದು ಸತ್ಯಶರಣರ ಕಥೆ. ಕನ್ನಡ ನೆಲದಲ್ಲಿ ಆಗಿ ಹೋದ ಮಹಾತ್ಮರ ಕಥೆ. ಈ ಕಥೆಯೇ ಪ್ರಭುಲಿಂಗಲೀಲೆ ಎನ್ನುತ್ತಾನೆ ಚಾಮರಸ.

          ಚಾಮರಸನು ತನ್ನ ಕಾವ್ಯದಲ್ಲಿ ಪ್ರಭುದೇವರ ಚರಿತ್ರೆಯೊಂದಿಗೆ ಅಲ್ಲಲ್ಲಿ ಪ್ರಸಂಗವರಿತು ಲಿಂಗಾಯತ ಧರ್ಮದ ತಿರುಳನ್ನು ಅತಿಸುಲಭವಾಗಿ ಪಾಮರರಿಗೂ ತಿಳಿಯುವಂತೆ ಪ್ರತಿಪಾದಿಸಿರುವನು. ಇದು ಈ ಕಾವ್ಯದ ವೈಶಿಷ್ಟ್ಯವಾಗಿದೆ. ಈ ಕಾವ್ಯದ ಇನ್ನೊಂದು ವೈಶಿಷ್ಟ್ಯವೆಂದರೆ ಅಧ್ಯಾತ್ಮರಸವನ್ನೇ ಹೆಚ್ಚು ಪ್ರತಿಪಾದಿಸಿದ್ದಾನೆ. ಮಾಯಾ ಕೋಲಾಹಲದಂತಹ ಘಟನೆಯನ್ನು ಪ್ರಸ್ತಾಪಿಸುವಾಗಲೂ ಅಶ್ಲೀಲತೆಗೆ ಅವಕಾಶವಿಲ್ಲದಂತೆ ಚಾಮರಸ ತನ್ನ ಜಾಣ್ಮೆಯನ್ನು ಮೆರೆದಿದ್ದಾನೆ. ನೂರಾ ಐವತ್ತು ವರ್ಷಗಳ ಹಿಂದೆ ಸಿ.ಪಿ. ಬ್ರೌನ್ ಎಂಬ ಆಂಗ್ಲ ವಿದ್ವಾಂಸನು ಚಾಮರಸನ ಘನ ಕಾವ್ಯದ ಕುರಿತು ಹೇಳಿದ ಮಾತುಗಳು ಅತ್ಯಂತ ಮನೋಜ್ಞವಾಗಿವೆ :

          “It is an allegorical poem of considerable beauty and is perticularly attractive from the   pleasing manner in which it describes the female sex neither as Goddesses (as they are described   in  the Brahmanical poems) nor as brutes which is too often the style of the Brahmanical puranas. It is not only amusing but is written with such a delicacy that any Hindu female might read it with  gratification. “

          ಚಾಮರಸನು ಈ ಕಾವ್ಯದಲ್ಲಿ ಪ್ರಭುವನ್ನು ಚಿತ್ರಿಸಿರುವ ರೀತಿ ಮನನೀಯವಾಗಿದೆ. ಚಾಮರಸನು ಅಲ್ಲಮನನ್ನು ಒಬ್ಬ ಮಾನವನೆಂದು, ವೈರಾಗ್ಯವನ್ನು ಸಾಧಿಸಿದ ಮಹಾಪುರುಷನೆಂದು ತಿಳಿದಿಲ್ಲ. ಶಿವನ ಸನ್ನಿಧಿಯಲ್ಲಿ ಕೈಲಾಸದಲ್ಲಿದ್ದು ಶಾಪಗ್ರಸ್ತನಾಗಿಯೇ ನಿಜತತ್ವವನರಿಯಲೆಂದು ಶಿವನಿಂದ ಪ್ರೇರಿತನಾಗಿಯೇ, ಮನುಜಕಾಯವನ್ನು ಹೊಂದಿ ಉಚಿತ ಕರ್ಮಭಕ್ತಿ ಮೊದಲಾದವುಗಳಿಂದ ಆತ್ಮೋದ್ಧಾರವನ್ನು ಮಾಡಿಕೊಂಡ ಶಿವಶರಣ ನೆಂದಾಗಲಿ ಕವಿಯು ಪ್ರಭುವನ್ನು ಗ್ರಹಿಸಿಲ್ಲ. ಇಲ್ಲವೆ ಯುಗಯುಗದಲ್ಲಿ ಬೇರೆ ಬೇರೆ ರೂಪಗಳಿಂದ ಅವತಾರ ಮಾಡಿ ಭವದಲ್ಲಿ ಬಂದ ವಿಷ್ಣು ಮುಂತಾದವರಂತೆ ಅವರ ವರ್ಗಕ್ಕೆ ಸೇರಿದವನೆಂದಾಗಲಿ ಕವಿಯು ಅಲ್ಲಮನನ್ನು ತಿಳಿದಿಲ್ಲ. ಭಕ್ತ ಜನ ಹಿತಾರ್ಥಕ್ಕಾಗಿ ಶಿವನು ತಾನೇ ನಿಜಸ್ವರೂಪನಾದ ಅಲ್ಲಮನು ‘ಪ್ರಭುಲಿಂಗಲೀಲೆ’ಯನ್ನು ಮಾಡಿ ಬಸವಾದಿ ಪ್ರಮಥರನ್ನು ಉದ್ಧರಿಸಿದನೆಂದು ಚಾಮರಸ ಬರೆಯುತ್ತಾನೆ. ಚಾಮರಸನ ದೃಷ್ಟಿಯಲ್ಲಿ ಅಲ್ಲಮಪ್ರಭುದೇವರು ನಿರ್ಮೋಹಿಯಾಗಿ ಕೇವಲ ಭಕ್ತರ ಹಿತಕ್ಕಾಗಿ ‘ತನ್ನ ಕಟಾಕ್ಷ ಕಾಂತಿಯಲಿ ಹಿಂಗುವೆನೆಲ್ಲರ ಮನೋಮಯದಂಗದೊಳ ಹೊರಗಿಡಿದ ತಮದ ತರಂಗಗಳ ನೆಂದೆನುತ’ಕಾರಣ ಶರೀರವನ್ನು ಧರಿಸುತ್ತಾನೆ.

          ಉಳಿದ ಮಹಾಕಾವ್ಯಗಳಲ್ಲಿರುವ ಅಷ್ಟದಶ ವರ್ಣನೆಗಳನ್ನು ಮುಖ್ಯವಾಗಿಟ್ಟುಕೊಳ್ಳದೆ ಕಥಾಪ್ರವಾಹವನ್ನು ಮುಂದುವರಿಸಿದ್ದಾನೆ. ಇದು ಒಂದು ರೀತಿಯಲ್ಲಿ ಸಂಘರ್ಷಗಳ ಕತೆಯಂತೆ ಭಾಸವಾಗುತ್ತದೆ. ಅಲ್ಲಮ-ಮಾಯೆ, ಅಲ್ಲಮ-ಸಿದ್ಧರಾಮ, ಅಲ್ಲಮ-ಗೋರಕ್ಷ ಮೊದಲಾದವುಗಳನ್ನು ಇಲ್ಲಿ ಉದಾಹರಿಸಬಹುದು. ಸಂಘರ್ಷ ಸ್ಥಿತಿಗಳನ್ನು ಅವುಗಳ ಎಲ್ಲ ಸಂಬಂಧಗಳೊಂದಿಗೆ ಹಿಡಿದು ಕೊಡುವ ವೈಚಾರಿಕತೆ, ಇತಿಹಾಸ ಪ್ರಜ್ಞೆಗಳು ಕ್ರಿಯಾಶೀಲವಾಗಿ ಪೌರಾಣಿಕ ನೆಲಗಟ್ಟಿನ ಮೇಲೆ ವ್ಯಕ್ತಿಯ ವೈಭವೀಕರಣ ಮಾಡದ ನಿಷ್ಠುರತೆ ಇಲ್ಲಿರುವುದರಿಂದ ಕೃತಿಯು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಕುರಿಗಳೋಪಾದಿಯಲಿ ಕಬ್ಬಿನ

ಹೊರಗಣೆಲೆಯನೆ ಮೇದಕಟ ಮೆಲ

ಕಿರುವುತಲ್ಪ ಸುಖಕ್ಕೆ ಸೋಲದೆ ಕಬ್ಬಿನೊಳು ರಸವ

ನೆರೆ ಸವಿವ ಗಜದಂತೆ ಭಕ್ತಿಯ

ತೆರನ ತಿಳಿದಾಚರಿಸಬೇಕೆಂದರಿದವರು

ಲಾಲಿಸುವುದೀ ಪ್ರಭುಲಿಂಗಲೀಲೆಯನು

          ಚಾಮರಸ ತನ್ನ ಕೃತಿಯನ್ನು ಕುರಿಗಳಂತೆ ಓದದೇ, ಆನೆಗಳು ಕಬ್ಬು ತಿಂದ ರೀತಿಯಲ್ಲಿ ಓದಿ ಆಸ್ವಾದಿಸಬೇಕೆಂದು ಹೇಳುತ್ತಾನೆ. ಇಂತಹ ಅಮೂಲ್ಯ ಕೃತಿಯಲ್ಲಿ ಅಡಕವಾಗಿರುವ ಸತ್ವಯುತ ಮೌಲ್ಯ ಚಿಂತನೆಯನ್ನು ಮುಂದಿನ ಅಧ್ಯಾಯದಲ್ಲಿ ಸವಿಯೋಣ!

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *