ರಾಜ್ಯೋತ್ಸವ ನಿಮಿತ್ತ ಭೈರನಹಟ್ಟಿ ಮಠದ ಕನ್ನಡ ರಥ ಎಳೆದ ಗ್ರಾಮಸ್ಥರು

ನರಗುಂದ :

ಕನ್ನಡವು ಕೇವಲ ಒಂದು ಭಾಷೆಯಲ್ಲ; ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ, ಸ್ವಾಭಿಮಾನ ಮತ್ತು ಅಸ್ಮಿತೆಯ ಪ್ರತೀಕವಾಗಿದೆ.

ಕನ್ನಡ ಭಾಷೆಯು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಗೂ ಮಿಗಿಲಾದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದ ದೇವ ಭಾಷೆಯಾಗಿದೆ ಎಂದು ಇಟಗಿಯ ಮಲ್ಲಸರ್ಜ ದೇಸಾಯಿಯವರು ಬಣ್ಣಿಸಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಯಿ ಭುವನೇಶ್ವರಿಯ ಕನ್ನಡ ರಥೋತ್ಸವದಲ್ಲಿ ದ್ವಜಾರೋಹಣ ಮಾಡಿ ಮಾತನಾಡಿದರು.

ಕನ್ನಡ ಉಳಿದರೆ ಕನ್ನಡಿಗರು ಉಳಿಯಲು ಸಾದ್ಯ, ಮನೆಯ ಭಾಷೆ ಕನ್ನಡವಾಗಲಿ, ಮನದ ಭಾಷೆ ಕನ್ನಡವಾಗಲಿ. ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ.

ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸುವ ಮೂಲಕ ಕನ್ನಡ ಭಾಷೆಯ ವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿರುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದರು.

ಆ ಹಿನ್ನೆಲೆಯಲ್ಲಿ ಶ್ರೀ ಭೈರನಹಟ್ಟಿ ಶ್ರೀಮಠ,  ಆಧ್ಯಾತ್ಮಿಕ ಸೇವೆಯೊಂದಿಗೆ  ಕನ್ನಡ ಸಾಹಿತ್ಯ, ವಚನ ಪರಂಪರೆ, ಶರಣರ ವಿಚಾರಧಾರೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಿತ್ತಲಿಯ ಶ್ರೀ ಸಿದ್ಧರಾಮೇಶ್ವರ ಮಠದ ಪೂಜ್ಯ ಅಭಿನವ ಸಿದ್ದರಾಮ ಮಹಾಸ್ವಾಮಿಗಳು ಕನ್ನಡ ರಥೋತ್ಸವಕ್ಕೆ ಚಾಲನೆ ನೀಡಿ. ಕನ್ನಡ ಮಾತೆಗೆ ಪ್ರತ್ಯೇಕವಾಗಿ ಮೀಸಲಾಗಿರುವ ಭೖರನಹಟ್ಟಿಯ ಕನ್ಶಡ ತೇರು ರಾಜ್ಯದಲ್ಲಿಯೆ ಮೊಟ್ಟಮೊದಲು ಮತ್ತು ಆದರ್ಶವಾಗಿದೆ ಎಂದು ಬಣ್ಣಿಸಿದರು.

ಸಾನಿಧ್ಯ ವಹಿಸಿದ್ದ ಭೈರನಹಟ್ಟಿ – ಶಿರೋಳದ ಪೂಜ್ಯರಾದ ಶಾಂತಲಿಂಗ ಶ್ರೀಗಳು ಮಾತನಾಡುತ್ತ, ಕಬ್ಬಿನ ಸಿಹಿ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಆದರೆ ಆ ಸಿಹಿಯನ್ನು ಉತ್ಪಾದಿಸಿದ ರೈತನ ಬದುಕು ಕಹಿಯಾಗಬಾರದು.

ರೈತನ ಬೆವರಿಗೆ ನ್ಯಾಯಯುತ ಬೆಲೆ ಸಿಗಬೇಕು. ರೈತನ ಶ್ರಮಕ್ಕೆ ಗೌರವ ಸಿಗಬೇಕು. ರೈತನ ಕುಟುಂಬಕ್ಕೆ ನೆಮ್ಮದಿಯ ಬದುಕು ದೊರೆಯಬೇಕು, ಆ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಘನ ಸರಕಾರ ಹಾಗೂ ಕೇಂದ್ರ ಸರಕಾರ ರೈತರ ಶ್ರಮಕ್ಕೆ ನ್ಯಾಯ ಕಲ್ಪಿಸಬೇಕು ಎಂದರು.

ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು ನಾಡದ್ವಜವನ್ನು ಅಧಿಕೃತ ಮಾಡುವ ವಿಷಯವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಕೂಡಲೇ ಈ ವಿಷಯವಾಗಿ ಪಕ್ಷಾತೀತವಾಗಿ 224 ಜನ ಸಚಿವರು 28 ಲೋಕಸಭಾ ಸದಸ್ಯರು ಸೇರಿದಂತೆ ರಾಜ್ಯಸಭಾ ಸದಸ್ಯರು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಬೇಕೆಂದು ಶಾಂತಲಿಂಗ ಶ್ರೀಗಳು  ಒತ್ತಾಯಿಸಿದರು.

ವೇದಿಕೆ  ಮೇಲೆ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿ ಸಾವಿತ್ರಿ ಗಾಯಕವಾಡ, ಪ್ರಕಾಶಗೌಡ ತಿರಕನಗೌಡ್ರ, ಬಿ. ಬಿ. ಐನಾಪೂರ, ಹನಮಂತ ಸಂಗಟಿ, ವ್ಹಿ. ಜಿ. ಐನಾಪೂರ, ಎಮ್. ಡಿ. ಸಕ್ಕರಿ ಸೇರಿದಂತೆ ಕನ್ನಡ ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *