ಕನ್ನೇರಿ ಸ್ವಾಮಿ ನಿರ್ಬಂಧಿಸದಿದ್ದರೆ ಜೂನ್ 28 ಲಕ್ಷ ಬಸವಭಕ್ತರ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವಶಕ್ತಿ’ ತೋರಿಸಲು ಪೂರ್ವಭಾವಿ ಸಭೆಯಲ್ಲಿ ಪೂಜ್ಯ ಬಸವಲಿಂಗ ಪಟ್ಟದ್ದೇವರ ಕರೆ

ಬಸವಕಲ್ಯಾಣ

ಬಸವಾದಿ ಶರಣರ ಹಾಗೂ ಲಿಂಗಾಯತ ಧರ್ಮ, ಮಠಾಧೀಶರ ಕುರಿತು ಹಗುರವಾಗಿ ಮಾತನಾಡಿರುವ ಕನ್ನೇರಿ ಸ್ವಾಮಿಯ ಜಿಲ್ಲಾ ಪ್ರವೇಶವನ್ನು ಸರ್ಕಾರ ತಕ್ಷಣವೇ ನಿರ್ಬಂಧಿಸಬೇಕು, ಎಂದು ಬಸವಪರ ಸಂಘಟನೆಗಳು ರವಿವಾರ ಒಕ್ಕೊರಲಿನಿಂದ ಆಗ್ರಹಿಸಿವೆ.

ಶರಣರ ಹೆಸರಿನಲ್ಲಿ ಆರೆಸ್ಸೆಸ್ ಹಮ್ಮಿಕೊಂಡಿರುವ ‘ಹಿಂದೂ ಸಮಾವೇಶ’ಕ್ಕೆ ತಾಲೂಕು ಆಡಳಿತವು ಅನುಮತಿ ನಿರಾಕರಿಸಿರುವುದನ್ನು ಸ್ವಾಗತಿಸಿರುವ ಸಂಘಟನೆಗಳು, ಒಂದು ವೇಳೆ ನಿಯಮ ಮೀರಿ ಸಮಾವೇಶ ನಡೆಸಲು ಮುಂದಾದರೆ ನಾಲ್ಕು ರಾಜ್ಯಗಳ ಲಕ್ಷಾಂತರ ಬಸವ ಭಕ್ತರು ಒಗ್ಗೂಡಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ನಗರದ ಬಸವ ಮಹಾಮನೆಯಲ್ಲಿ ಆಯೋಜಿಸಲಾಗಿದ್ದ ಬಸವಪರ ಸಂಘಟನೆಗಳ ಪ್ರತಿಭಟನೆಯ ಪೂರ್ವಸಿದ್ಧತಾ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಬಸವ ವಿರೋಧಿ ಕನ್ನೇರಿ ಸ್ವಾಮಿಯನ್ನು ಯಾವುದೇ ಕಾರಣಕ್ಕೂ ಬಸವಕಲ್ಯಾಣ ಪ್ರವೇಶಿಸಲು ಬಿಡುವುದಿಲ್ಲ. ಒಂದು ವೇಳೆ ಅವರ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ, ಜೂನ್ 28ಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಸವ ಭಕ್ತರನ್ನು ಸೇರಿಸಿ ಬೃಹತ್‌ ಪ್ರತಿಭಟನೆ ನಡೆಸಿ ಬಸವಶಕ್ತಿಯನ್ನು ತೋರಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

“ವಚನಗಳನ್ನು ತಪ್ಪಾಗಿ ಆರ್ಥೈಸುವ ಹಾಗೂ ಸುಳ್ಳಿನ ಸರದಾರ, ಮಹಿಳೆಯರ ಬಗ್ಗೆ ಇಲ್ಲಸಲ್ಲದನ್ನು ಮಾತನಾಡುವ ಲಜ್ಜೆಗೆಟ್ಟಿರುವ ಕನ್ನೇರಿ ಸ್ವಾಮಿಯ ಕುತಂತ್ರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ,” ಎಂದರು.

“ಧರ್ಮ ಮತ್ತು ಸಂಸ್ಕೃತಿ ಉಳಿದರೆ ನಾವೂ ಬದುಕುತ್ತೇವೆ. ಈಗ ಬಸವತತ್ವಕ್ಕೆ ಆಪತ್ತು ಬಂದಿದ್ದರಿಂದ ಮದುವೆ ಇತ್ಯಾದಿ ಸಮಾರಂಭ ಇದ್ದರೂ ಕುಟುಂಬ ಸಮೇತರಾಗಿ ಪಾಲ್ಗೊಳ್ಳಬೇಕು,” ಎಂದು ಕರೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರಾದ ಬಸವರಾಜ ಧನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಯಾವುದೇ ಹಿಂದೂ ಅಥವಾ ಧರ್ಮದ ವಿರೋಧಿಗಳಲ್ಲ. ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ನಾವು ಕೇವಲ ಬಸವ ತತ್ವದ ಪ್ರಚಾರಕರು, ಜೈನ, ಸಿಖ್, ಬೌದ್ಧ ಧರ್ಮಗಳಂತೆ ಲಿಂಗಾಯತವೂ ಒಂದು ಸ್ವತಂತ್ರ ಧರ್ಮವಾಗಿದೆ ಎಂದು ಹೇಳಿದರು.

ಬಸವತತ್ವವನ್ನು ಜಗತ್ತಿಗೆ ಸಾರುತ್ತಿರುವ ಮಠಾಧೀಶರ ವಿರುದ್ಧ ಹಾಗೂ ಶರಣರ ವಿರುದ್ಧ ಕನ್ನೇರಿ ಸ್ವಾಮಿ ಸತತವಾಗಿ ಹಗುರವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಬಸವಾದಿ ಹೆಸರನ್ನು ಬಳಸಿ ಹಿಂದೂ ಸಮಾವೇಶ ಮಾಡಲು ಅವರಿಗೆ ಬಿಡುವುದಿಲ್ಲ, ಎಂದು ಹೇಳಿದರು.

ಅನುಮತಿ ನಿರಾಕರಣೆಯನ್ನೂ ಮೀರಿ ಕಾರ್ಯಕ್ರಮ ಮಾಡಲು ಯತ್ನಿಸಿದರೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಲಕ್ಷಾಂತರ ಬಸವ ಭಕ್ತರು ಧಾವಿಸಿ ಬಂದು ಕನ್ನೇರಿ ಸ್ವಾಮಿ ವಿರುದ್ದ ಬೃಹತ್‌ ಪ್ರತಿಭಟನೆ ನಡೆಸಲಿದ್ದಾರೆ ಎಂದು ಖಾರವಾಗಿ ಎಚ್ಚರಿಸಿದರು.

ಸಭೆಯಲ್ಲಿ ಮಾತನಾಡಿದ ಬಸವಪ್ರಭು ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಡಾ. ಗಂಗಾಂಬಿಕಾ ಅಕ್ಕ, ಅಂಬಿಗರ ಮಠದ ಸ್ವಾಮೀಜಿ ಹಾಗೂ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪೂರ, ಬಸವರಾಜ ಬುಳ್ಳಾ, ಬಸವರಾಜ ತೊಂಡಾರೆ, ಆಕಾಶ ಖಂಡಾಳೆ ಮುಂತಾದ ಮುಖಂಡರು ಮಾತನಾಡಿ, ಕನ್ನೇರಿ ಸ್ವಾಮಿಯ ಬಸವ ತತ್ವ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನವೇ ಸರ್ಕಾರ ಅವರ ಜಿಲ್ಲಾ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಈ ಮಹತ್ವದ ಸಭೆಯಲ್ಲಿ ಗುರುಬಸವ ಪಟ್ಟದ್ದೇವರು, ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಬೇಲೂರಿನ ಶಿವಕುಮಾರ ದೇವರು, ಸತ್ಯಕ್ಕ ತಾಯಿ, ಗಾಯತ್ರಿ ತಾಯಿ, ಬಸವರಾಜ ಬಾಲಕಿಲೆ ಸೇರಿದಂತೆ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
2 Comments
  • ಇದು ಸತ್ಯದ ಹೋರಾಟ 👍🏻👏🏻ಶರಣು 👏🏻👏🏻

  • ಒಂದು ಬಾರಿ ಬಸವ ಸಂಸ್ಕೃತಿ ಅಭಿಯಾನ ಮಾಡಿದ್ದಕ್ಕೆ ಕನ್ಹೆರಿ ಸ್ವಾಮಿ ಇಷ್ಟು ಕೆಟ್ಟ ಭಾಶೆ ಬಳಸಿ ನಮ್ಮನ್ನು ಕುಗ್ಗಿಸುವ ಹೆದರಿಸುವ ಪ್ರಯತ್ನ ಮಾಡಿದಾನೆ, ನಾವು ಪ್ರತಿ ವರ್ಷ ಪ್ರತಿ ತಿಂಗಳು ಬಸವ ಅಭಿಯಾನ ನಡೆಸೋಣ, ಬಸವ ತತ್ವ ಪ್ರಚಾರ ವಿರೋಧಿಸುವ ಧೈರ್ಯ ಅದೆಷ್ಟಿದಿಯೋ ನೋಡೋಣ, ಇಂತಹ ಸಾವಿರ ಸಾವಿರ ಕನ್ಹೆರಿಯನ್ನು ಎದುರಿಸುವ ಶಕ್ತಿ ನಮಗಿದೆ.

Leave a Reply

Your email address will not be published. Required fields are marked *