ಪಂಡಿತಾರಾಧ್ಯ ಸ್ವಾಮೀಜಿ ಪರ ಬೀದಿಗಿಳಿಯಲು ಸಿದ್ಧ: ಮಾದಾರ ಚೆನ್ನಯ್ಯ ಸ್ವಾಮೀಜಿ
ಸಾಣೇಹಳ್ಳಿ
ಈ ದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ ಇದೆ. ಇದನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿದರು. ಆದರೆ ಅದು ಮೂಲಕೃತಿಯಲ್ಲ. ಬೇರೆ ಕೃತಿಯೆಂದು ಹೇಳುವುದು ಸರಿಯಲ್ಲ. ಹಾಗೆಯೇ ಸುಳ್ಳನ್ನು ಯಾರೇ ಹೇಳಿದರೂ ಖಂಡಿಸುತ್ತೇವೆ ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಾಟಕೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು.
ಅನ್ಯಾಯ, ವಂಚನೆ ಇರುವುದನ್ನು ಕಂಡಾಗ ಪ್ರತಿಭಟಿಸುವ ಎದೆಗಾರಿಕೆ ಇದ್ದಾಗ ಪರಮಾನಂದ ಸಾಧ್ಯ. ನಾಟಕೋತ್ಸವ ಮೂಲಕ ಜಾಗೃತಿ, ಒಳ್ಳೆಯತನ ಮೂಡಿಸುವುದು ಮುಖ್ಯ ಉದ್ದೇಶ. ಶರಣ ಪರಂಪರೆಯಲ್ಲಿ ಗಣಾಚಾರ ಎಂದಿದೆ. ಅದರಲ್ಲಿ ಪ್ರತಿಭಟನೆ ಮಾಡಬೇಕು ಎಂದಿದೆ. ಆದರೆ ಪ್ರತಿಭಟನೆಯ ಗುಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿಯೂ ಮನುಸ್ಮೃತಿಯಿಲ್ಲ

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿಯೂ ಮನುಸ್ಮೃತಿ ಅಂಶಗಳಿವೆ ಎಂದು ಕನ್ನೇರಿ ಸ್ವಾಮಿ ಹೇಳಿದ್ದಾರೆ. ಆದರೆ ಅಚ್ಚಳಿಯದೆ ಅಂಬೇಡ್ಕರ್ ಅವರು ಬಸವಮಾರ್ಗದಲ್ಲಿ ಉಳಿದಿದ್ದಾರೆ, ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಹೇಳಿದರು.
ಅಂಬೇಡ್ಕರ್ ಹೋರಾಡಿದ ಪರಿಣಾಮ ಶೋಷಿತ, ಅಸ್ಪೃಶ್ಯ ಸಮಾಜದವರು ಇಂದು ತಲೆಯೆತ್ತಿ ನಿಲ್ಲಲು ಸಾಧ್ಯವಾಯಿತು ಎಂದು ಹೇಳಿದರು.
ನಾಟಕೋತ್ಸವ ಅಂಗವಾಗಿ ಗುರುವಾರ ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಪಂಡಿತಾರಾಧ್ಯ ಸ್ವಾಮೀಜಿ ಪರವಾಗಿ ನಾವೆಲ್ಲ ಮಠಾಧೀಶರು ಇದ್ದೇವೆ. ಅವರನ್ನು ವ್ಯಕ್ತಿಗತವಾಗಿ ಟೀಕಿಸಿದರೆ ಪ್ರತಿಕ್ರಿಯೆ ನೀಡುತ್ತೇವೆ. ಅವರ ಪರವಾಗಿ ಬೀದಿಗಿಳಿಯಲು ಸಿದ್ಧ ಎಂದರು.
ಹತ್ತು ವರ್ಷಗಳ ಹಿಂದೆ ಕನ್ನಡಪ್ರಭದಲ್ಲಿ ಪಂಡಿತಾರಾಧ್ಯ ಎನ್ನುವ ಬದಲು ಪಡಿತರ ಎಂದು ಪ್ರಕಟವಾಗಿತ್ತು. ಈ ಕುರಿತು ಅದರ ವರದಿರಾಗರಾಗಿದ್ದ ಷಣ್ಮುಖಪ್ಪ ಅವರನ್ನು ಕೇಳಿದಾಗ ಈ ಸಮಾಜಕ್ಕೆ ಔಷಧ ರೂಪದಲ್ಲಿ ಪಡಿತರ ನೀಡುವವರು ಪಂಡಿತಾರಾಧ್ಯ ಶ್ರೀಗಳು ಎಂದಿದ್ದನ್ನು ಮರೆಯಲಾಗದು ಎಂದರು.
ಕೊನೆಗೆ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ನಿರ್ಮಾಣದ ಶ್ರೀಗುರು ಹೊಳೆಹುಚ್ಚೇಶ್ವರ ನಾಟ್ಯ ಸಂಘ, ಕಮತಿ ಇವರಿಂದ ಸಂಪತ್ತಿಗೆ ಸವಾಲು ನಾಟಕ ಪ್ರದರ್ಶನಗೊಂಡಿತು. ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಮಕ್ಕಳು ಮತ್ತು ಶ್ರೀ ಶಂಕರೇಶ್ವರ ಗ್ರಾಮಾಂತರ ಪ್ರೌಢಶಾಲೆ, ಜಾನಕಲ್ ಮಕ್ಕಳ ನೃತ್ಯ ರೂಪಕಗಳು ನಡೆದವು.

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ