ಸಾಧನೆಯತ್ತ ಸಾಗಲು ಬೇಕು ಆತ್ಮವಿಶ್ವಾಸ; ಸಾಣೇಹಳ್ಳಿ ಶ್ರೀಗಳು

ಗಣೇಶ ಅಮೀನಗಡ
ಗಣೇಶ ಅಮೀನಗಡ

ಸಾಣೇಹಳ್ಳಿ :

ಸಂಕಲ್ಪ ಮಾಡಿಕೊಂಡು ಸಾಧನೆಯ ದಾರಿಯಲ್ಲಿ ಸಾಗಿದರೆ ಗುರಿ ಮುಟ್ಟಲು ಸಾಧ್ಯ. ಇದಕ್ಕಾಗಿ ತಾಳ್ಮೆ ಬೇಕು ಮತ್ತು ಸತ್ಯದ ದಾರಿ ಇರಬೇಕು ಜೊತೆಗೆ ಗೆಲ್ಲುವೆನೆಂಬ ಛಲ ಬೇಕು. ಇದುವೇ ಆತ್ಮವಿಶ್ವಾಸ ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

2026ನೇ ಸಾಲಿನ ನಾಟಕೋತ್ಸವ ಅಂಗವಾಗಿ ಇಲ್ಲಿನ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಂಬಿಕೆಯು ಕ್ರಮೇಣ ವಿಶ್ವಾಸವಾಗಿ ಬದಲಾಗಬೇಕು. ಅದು ಆತ್ಮವಿಶ್ವಾಸವಾಗುತ್ತದೆ. ಇದಕ್ಕಾಗಿ ಇಂದ್ರಿಯಗಳ ಮೇಲೆ ಹತೋಟಿ ಸಾಧಿಸಿದರೆ ಸಾಧನೆ ಪಥದಲ್ಲಿ ಹೆಜ್ಜೆ ಇಡಲು ಸಾಧ್ಯ ಎಂದು ಸಲಹೆ ನೀಡಿದರು.

ಇನ್ನೊಬ್ಬರ ಮಾತುಗಳನ್ನು ಕೇಳುವಲ್ಲಿ ನಂಬಿಕೆ ಇರಬೇಕು. ನಂಬುವ ಗುಣ ಬೆಳೆಸಿಕೊಳ್ಳಬೇಕು ಜೊತೆಗೆ ಸಮಸ್ಯೆಗಳು ಎದುರಾದಾಗ ತಾಳ್ಮೆಯಿಂದ ಎದುರಿಸುವೆ ಎನ್ನುವ ವಿಶ್ವಾಸ ಬೇಕು. ಇದಕ್ಕಾಗಿ ಸಮಾಧಾನ ಬೇಕು. ಎಲ್ಲ ದಾನಕ್ಕಿಂತ ಸಮಧಾನ ಗುಣ ಶ್ರೇಷ್ಠವಾದುದು ಎಂದು ತಿಳಿಸಿದರು.

ಅಕ್ಕಮಹಾದೇವಿ ‘ಹೆದರದಿರು ಮನವೆ ಬೆದರದಿರು ಮನವೆ’ ಎನ್ನುವ ವಚನದ ಮೂಲಕ ಸಮಾಜವನ್ನು ಎದುರಿಸಿ ಎಂದು ಧೈರ್ಯ ಹೇಳುತ್ತಾಳೆ. ಹಾಗೆಯೇ ‘ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ, ನಿಂದೆ ಬಂದರೆ ಮನದಲ್ಲಿ ಕೋಪವ ತಾಳದೆ ಇರಬೇಕು’ ಎನ್ನುವ ವಚನದ ಮೂಲಕ ಬದುಕುವ ಪರಿಯನ್ನು ತಿಳಿಸುತ್ತಾಳೆ. ಅಲ್ಲದೆ ಬಡವ, ದಡ್ಡ ಎನ್ನುವ ನಕಾರಾತ್ಮಕ ಭಾವನೆ ಬೆಳೆಸಿಕೊಳ್ಳದೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆತ್ಮವಿಶ್ವಾಸ ಕುರಿತು ಪತ್ರಕರ್ತ, ಉಪನ್ಯಾಸಕ ಎಸ್. ಸುರೇಶ ಮಾತನಾಡಿ, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟರೆ ಅದೇ ಆತ್ಮವಿಶ್ವಾಸ. ಎಂಥದ್ದೇ ಪರಿಸ್ಥಿತಿ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದರು.

ಸಾಧನೆಯನ್ನು ಸಾಕಾರಗೊಳಿಸಿಕೊಳ್ಳುವುದೇ ಆತ್ಮವಿಶ್ವಾಸ. ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬಂದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಎಚ್.ಎಸ್. ನಾಗರಾಜ ಹಾಗೂ ಕೆ. ಜ್ಯೋತಿ ಅವರು ವಚನಗಳನ್ನು ಹಾಡಿದರು. ಗುರುಪಾದೇಶ್ವರ ಪ್ರೌಢಶಾಲೆಯ ಶಿಕ್ಷಕ ಬಸನಗೌಡ ಪೊಲೀಸಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *