ಪೂಜ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ೧೧೧ನೇ ಜಯಂತಿ ಕಾರ್ಯಕ್ರಮ
ಗುಂಡ್ಲುಪೇಟೆ :
ಸಮಾಜದಲ್ಲಿ ಸೌಹಾರ್ದ ಮತ್ತು ಸದ್ಭಾವನೆಯ ಜೀವನ ನಡೆಸಲು ಪ್ರೇರಣೆ ನೀಡಿದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಜೀವನ ಮತ್ತು ಆದರ್ಶದ ಬಗ್ಗೆ ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಜೆಎಸ್ಎಸ್ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಯುವ ಘಟಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ವತಿಯಿಂದ ಹಮ್ಮಿಕೊಂಡಿದ್ದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ೧೧೧ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ತಾನು ಗಳಿಸಿದ ಎಲ್ಲವೂ ಸಮಾಜದ ಎಲ್ಲರಿಗೂ ಸಿಗಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ವಿದ್ಯಾರ್ಥಿ ನಿಲಯಗಳನ್ನು ಸಂಕಷ್ಟದ ನಡುವೆ ಕಟ್ಟಿ ಬೆಳೆಸಿದ ಶ್ರೀಗಳು ಸಮಾಜಕ್ಕಾಗಿ ತ್ಯಾಗದ ಜೀವನ ನಡೆಸಿದರು. ಲೌಕಿಕವಾಗಿ ಸಂಸ್ಥೆ ಕಟ್ಟಿದ ರೀತಿಯಲ್ಲೇ ಆಧ್ಯಾತ್ಮಿಕವಾಗಿ ಅತ್ಯಂತ ಶಿಸ್ತಿನಿಂದ ಪೂಜಾನುಷ್ಠಾನ ಮಾಡುವ ಮೂಲಕ ಸಮಾಜಕ್ಕೆ ಪ್ರೇರಣೆಯಾದರು. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಂತೆ, ಅಮೆರಿಕಾದ ಸಂತ ಸ್ವಾಮಿರಾಮ ಅವರು ಕೂಡ ಶ್ರೀಗಳಿಂದ ಪ್ರಭಾವಿತರಾಗಿದ್ದರು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಂ. ಗಣೇಶಪ್ರಸಾದ ಮಾತನಾಡಿ, ಸಮಾಜಕ್ಕೆ ವೈದ್ಯರು, ವಕೀಲರು, ಇಂಜಿನಿಯರ್ಗಳು ಸೇರಿ ಉನ್ನತ ಹುದ್ದೆಯಲ್ಲಿರುವ ಹಲವು ಮಹಾನ್ ವ್ಯಕ್ತಿಗಳನ್ನು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ರಾಜೇಂದ್ರ ಶ್ರೀಗಳ ದೂರದೃಷ್ಟಿ ಕಾರಣ ಎಂದು ಬಣ್ಣಿಸಿದರು.
ನಮ್ಮನ್ನಗಲಿ ಇಷ್ಟು ವರ್ಷಗಳಾದರೂ ೧೧೧ ನೇ ಜಯಂತಿ ಆಚರಿಸುವ ಮೂಲಕ ಸಮಾಜ ಶ್ರೀಗಳನ್ನು ಸ್ಮರಿಸುತ್ತದೆ ಎಂಬುದು ನಾವು ನೀವೆಲ್ಲರೂ ಹೆಮ್ಮೆ ಪಡುವ ಸಂಗತಿ. ಆದ್ದರಿಂದ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಅಂಕಣಕಾರ ಪೃಥ್ವಿರಾಜ ಹಾಲಹಳ್ಳಿ ಮಾತನಾಡಿ, ಆಧ್ಯಾತ್ಮಿಕ ರಾಯಭಾರಿಗಳು ರಾಜೇಂದ್ರ ಶ್ರೀಗಳಾಗಿದ್ದರು. ಭಾರತ ಒಂದು ಆಧ್ಯಾತ್ಮದ ರಾಷ್ಟ್ರ. ಇಲ್ಲಿ ಅನೇಕ ಸಂತರು ಮುನಿಗಳು ಬಂದಿದ್ದಾರೆ ಮತ್ತು ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಈ ಭಾಗದಲ್ಲಿ ರಾಜೇಂದ್ರ ಶ್ರೀಗಳ ಕೊಡುಗೆ ಬಹಳ ಮುಖ್ಯವಾದದ್ದು. ಹಾಗಾಗಿ ಅವರು ಆಧ್ಯಾತ್ಮದ ರಾಯಭಾರಿಗಳಾಗಿದ್ದಾರೆ.

ಭಾರತದ ಸತ್ವವೇ ಅಧ್ಯಾತ್ಮ. ಈ ಆಧ್ಯಾತ್ಮದ ಹೊಲವನ್ನು ಉಳುಮೆ ಮಾಡಿದವರಲ್ಲಿ ರಾಜೇಂದ್ರ ಶ್ರೀಗಳು ಒಬ್ಬರು. ಅವರು ನೆಟ್ಟ ಸಸಿ ಇವತ್ತು ಮರವಾಗಿದೆ. ಆ ಮರದ ನೆರಳಲ್ಲಿ ನಾವೆಲ್ಲ ಸಂತೋಷದಿಂದಿದ್ದೇವೆ. ತ್ರಿವಿಧ ದಾಸೋಹವನ್ನು ಪಾಲಿಸಿಕೊಂಡು ಬಂದರು. ಹಾಗೆಯೇ ಬಡ ಮಕ್ಕಳ ಕಣ್ಣೀರನ್ನು ನೋಡಿ, ಅವರ ಸ್ಥಿತಿಗತಿಗಳನ್ನು ಕಣ್ಣಾರೆ ನೋಡಿ, ಭಿಕ್ಷಾಟನೆಯನ್ನು ಮಾಡಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ, ಸಮಾಜಕ್ಕೆ ದಾಸೋಹದ ಪರಿಕಲ್ಪನೆ ಕೊಟ್ಟರು. ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನವನ್ನು ನೀಡಿದರು ಎಂದು ನುಡಿನಮನ ಸಲ್ಲಿಸಿದರು.
ಇಂದು ಜೆಎಸ್ಎಸ್ ಸಂಸ್ಥೆಯಲ್ಲಿ ಬೆಳೆದ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಇದ್ದಾರೆ. ಅವರೆಲ್ಲರ ಮೂಲಕ ರಾಜೇಂದ್ರ ಶ್ರೀಗಳು ನಮ್ಮ ನಡುವೆ ಇದ್ದಾರೆ. ನಮಗೆ ಆನಂದವನ್ನು ನೀಡಬಹುದು ಸಂತೋಷವನ್ನು ಕಾಣಬಹುದು ಇಂತಹ ಆಧ್ಯಾತ್ಮಿಕ ಸಮಾವೇಶದಲ್ಲಿ ಭಾಗವಹಿಸುವುದೇ ನಮ್ಮೆಲ್ಲರ ಪುಣ್ಯ ಎಂದರು.

ಇದೇ ಸಂದರ್ಭದಲ್ಲಿ ದತ್ತಿ ಪುರಸ್ಕಾರ ಮತ್ತು ಕ್ರೀಡಾ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ರಾಜೇಂದ್ರ ಶ್ರೀಗಳ ಪುತ್ಥಳಿಯನ್ನು ಅಲಂಕೃತ ವಾಹನದಲ್ಲಿ ಇರಿಸಿ, ಮಂಗಳವಾದ್ಯ, ವೀರಗಾಸೆ, ಬ್ಯಾಂಡ್ ಇತರೆ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೊಡಸೋಗೆ ಶಿವಪ್ರಸಾದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಪದಾಧಿಕಾರಿಗಳು, ಸಮಾಜದ ಮುಖಂಡರು, ಶ್ರೀಮಠದ ಭಕ್ತರು, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಬೋಧಕರು ಬೋಧಕೇತರರು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
