ವಚನ ಆಷಾಢ: ಅನುಭಾವಿಕ ಪ್ರವಚನ ಸಮಾರೋಪ
ಕಲಬುರಗಿ:
ನಾಡಿನ ನಾಡಿಮಿಡಿತ ಅರಿತಿರುವ ಮುದಗಲ್ಲ ಕಲ್ಯಾಣಾಶ್ರಮದ ಪೂಜ್ಯ ಮಹಾಂತಸ್ವಾಮಿಗಳು 30 ದಿನಗಳ ಕಾಲ ಹೇಳಿದ ವಚನ ಆಷಾಢ ಪ್ರವಚನ ಆನುಭಾವಿಕ ನೆಲೆಯಲ್ಲಿ ನಡೆಯಿತು ಎಂದು ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ ಅಭಿಪ್ರಾಯಪಟ್ಟರು.
ಇಲ್ಲಿನ ಜಯನಗರದ ಬಸವ ಸಮಿತಿಯಲ್ಲಿ ಜರುಗಿದ ವಚನ ಆಷಾಢ ಪ್ರವಚನ ಪ್ರಭುಲಿಂಗಲೀಲೆ: ಆನುಭಾವಿಕ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
28 ಪುರಾಣಗಳು, 9 ಚರಿತಾಮೃತಗಳ ಓದಿನ ಅನುಭವದಿಂದಾಗಿ ಬಸವಾದಿ ಶರಣರ ಕುರಿತಾದ ಜ್ಞಾನದ ಬುತ್ತಿಯನ್ನು ಉಣಬಡಿಸಿದರು ಎಂದರು.

ಪ್ರತಿಕ್ರಿಯೆ ನೀಡಿದ ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ, ಅಯೋಮಯ ಬದುಕಿನ ಗೊಂದಲಗಳಿಗೆ ಸಮಾಧಾನದ ಉತ್ತರ ನೀಡಿದಂತಿದ್ದ ಈ ಪ್ರವಚನ ಲೋಕ ನೆಮ್ಮದಿಗೆ ಅಗತ್ಯವಾದ ಶರಣರ ವಿಚಾರಗಳಿಂದ ಮತ್ತು ಪ್ರಮುಖ ಚಿಂತನೆಗಳಿಂದ ಕೂಡಿತ್ತು ಎಂದು ಅವರು ತಿಳಿಸಿದರು.
ಮುದಗಲ್ಲ ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಸಂಗೀತಗಾರ ಶಂಕ್ರಯ್ಯ ಆರ್. ಗುರುಮಠ, ತಬಲಾವಾದಕ ಬಸವರಾಜ ಹೊನ್ನಿಗನೂರ ವೇದಿಕೆಯಲ್ಲಿದ್ದರು.
ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕಲಬುರಗಿ ಬಸವ ಸಮಿತಿ ವತಿಯಿಂದ 2016ರಿಂದ ಇಲ್ಲಿಯವರೆಗೆ ಪ್ರತಿವರ್ಷ ಶ್ರಾವಣ ಹಾಗೂ ಆಷಾಢ ಮಾಸದಲ್ಲಿ ಪ್ರವಚನ ಕಾರ್ಯಕ್ರಮ, ಮಹಾದೇವಿಯಕ್ಕಗಳ ಸಮ್ಮೇಳನ, ಅರಿವಿನ ಮನೆ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
