‘ವಚನ ಶ್ರಾವಣ-೨೦೨೬’ ಪ್ರಾರಂಭೋತ್ಸವ
ಗದಗ:
ಲೋಕಕಲ್ಯಾಣಕ್ಕಾಗಿ ಶರಣರು ವಚನಗಳನ್ನು ನೀಡಿದ್ದಾರೆ. ಆದರೆ ಸಿಕ್ಕ ವಚನಗಳಲ್ಲಿ ಹಲವು ವಚನಗಳನ್ನು ಪ್ರಕ್ಷಿಪ್ತಗೊಳಿಸಲಾಗಿದೆ.
ಇಂದಿಗೂ ವಚನ ಸಾಹಿತ್ಯದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಮಾಧ್ಯಮಗಳಲ್ಲಂತೂ ಹಲವರು ಅಪಪ್ರಚಾರಕ್ಕಾಗಿಯೇ ನಿಂತು ಬಿಟ್ಟಿದ್ದಾರೆ.

ವೈದಿಕರು ವಚನ ಸಾಹಿತ್ಯ ಹರಡುವಿಕೆಯ ಅಪಾಯ ಮನಗಂಡಿದ್ದರು. ಅವರು ಕಾಲ್ಪನಿಕ ಕಥೆಗಳ ಪುರಾಣಗಳಲ್ಲಿ ಜನರನ್ನು ಮುಳುಗುವಂತೆ ಮಾಡಿದರು. ಆ ಕಾರಣ ವಚನ ಸಾಹಿತ್ಯದ ಅರಿವು, ಜ್ಞಾನ ನಮಗೆ ಬರಲೇ ಇಲ್ಲ.
12ನೇ ಶತಮಾನದಲ್ಲಿಯೇ ಶರಣರು ಮನುಜರನ್ನು ದೇವರನ್ನಾಗಿಸಿದವರು. ಆದರೆ ಹಲವರು ದೇವರನ್ನು ಹೊರಗೆ ಹುಡುಕಾಡಲು ಹಚ್ಚಿ ದಾರಿತಪ್ಪಿಸಿದರೆಂದು ಶರಣತತ್ವ ಚಿಂತಕ, ಅನುಭಾವಿ ಅಶೋಕ ಬರಗುಂಡಿ ಅವರು ನುಡಿದರು.

ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದಾದ್ಯಂತ ನಡೆಯುವ ‘ಮನೆ ಮನೆಗಳಲ್ಲಿ ವಚನ ಶ್ರಾವಣ’ ಕಾರ್ಯಕ್ರಮದ ಅಂಗವಾಗಿ ಸುರೇಶ ಹಾಗೂ ಸಿದ್ಧಲಿಂಗೇಶ ಅಂಗಡಿ ಸಹೋದರರ ಮನೆಯಲ್ಲಿ ನಡೆದ ಮೊದಲ ದಿನದ ‘ವಚನ ನಿರ್ವಚನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣೆ ಅಕ್ಕಮಹಾದೇವಿ ತಾಯಿಯವರ ವಚನ, “ದೇವಲೋಕದವರಿಗೂ ಬಸವಣ್ಣನೆ ದೇವರು, ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು, ನಾಗಲೋಕದವರಿಗೂ ಬಸವಣ್ಣನೆ ದೇವರು, ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು, ಚನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು” ಈ ವಚನ ನಿರ್ವಚನ ಗೈಯುತ್ತಾ ಮುಂದುವರೆದು ಅವರು, ಶರಣರು ನಮಗೆ ನೀಡಿದ್ದು ಮೂಲಜ್ಞಾನವನ್ನು ಈ ಮೊದಲು ಇದ್ದ ನೂರೆಂಟು ದೇವರು, ವೃತ, ಉಪವಾಸ, ಧಾರ್ಮಿಕ ವಿಧಿ ವಿಧಾನಗಳನ್ನು ಬದಿಗೆ ಸರಿಸಿ ಕೊಟ್ಟಿದ್ದು ಅದ್ಭುತವಾದ ಸರಳ ಧರ್ಮವನ್ನು ಇದರ ನೇತೃತ್ವ ವಹಿಸಿದವರು ಬಸವಣ್ಣನವರು. ಅವರ ಕುರಿತು ಅನೇಕ ಶರಣರು ಬಹಳಷ್ಟು ವಚನಗಳನ್ನು ಬರೆದಿದ್ದಾರೆ. ಅದೇ ತೆರನಾಗಿ ಅಕ್ಕಮಹಾದೇವಿಯವರು ಬಸವಣ್ಣನವರ ಬಗ್ಗೆ ಬರೆದ ವಚನವನ್ನೇ ಇಂದು ಬಿಡಿಸುತ್ತಿದ್ದೇವೆ.
ಅಕ್ಕ ಮಹಾದೇವಿಯನ್ನು ಬಸವಾದಿ ಶರಣರು ಅಕ್ಕ ಎಂದೇ ಒಪ್ಪಿಕೊಂಡಿದ್ದರು. ಈ ಮೊದಲು ಆಕೆ ತನ್ನ ದೇವರಾದ ಚೆನ್ನಮಲ್ಲಿಕಾರ್ಜುನನ ಹುಡುಕುತ್ತಾ ಕಾಡುಮೇಡು ಸುತ್ತಿದಳು. ಆಕೆಯು ತನ್ನ ವಚನಗಳಲ್ಲಿ ತನ್ನ ದೇವನನ್ನು ‘ನೀವು ಕಂಡಿರೇ’ ಎಂದು ಕೇಳುವಳು. ಆದರೆ ಆಕೆ ಶರಣರ ಕಲ್ಯಾಣದ ಅನುಭವ ಮಂಟಪದಲ್ಲಿ ನೆಲೆನಿಂತಾಗ ಅಲ್ಲಿ ಆಕೆಗೆ ಅರ್ಥವಾಗಿದ್ದು ತನ್ನ ಚೆನ್ನಮಲ್ಲಿಕಾರ್ಜುನ ಬೇರೆಲ್ಲೂ ಇಲ್ಲ ತನ್ನಲ್ಲೇ ಇದ್ದಾನೆಂದು, ಈಗ ಆಕೆಗೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ.
ಆ ಕಾರಣ ಆಕೆ ಅಲ್ಲಿದ್ದ ಶರಣರು ಹಾಗೂ ಶರಣ ಸಂಕುಲದ ನೇತಾರ, ಜ್ಞಾನದ ಬೆಳಕು, ಅನುಭಾವ ನೇತಾರರೂ ಆದ ಬಸವಣ್ಣನವರಿಗೆ ಕೃತಜ್ಞಳಾಗಿರುವಳು.
ಆ ಮಹಾತಾಯಿ ಬಸವಣ್ಣನವರ ಬಗ್ಗೆ ಬರೆದ ಮೇಲಿನ ವಚನದ ಸಾರವು ತಾನು ಬದಲಾಗಲು ಬಸವಣ್ಣನೇ ಕಾರಣನೆಂದು ವಚನದಲ್ಲಿ ಹೇಳಿದ್ದಾಳೆ. ದೇವಲೋಕದವರಿಗೂ, ಮರ್ತ್ಯಲೋಕ, ನಾಗಲೋಕ, ಮಂದರಗಿರಿಯವರಿಗೆ ಬಸವಣ್ಣನೇ ದೇವರು. ಇಲ್ಲಿ ಲೋಕಗಳು ಸಾಂಕೇತಿಕವಾಗಿವೆ. ಈ ಜಗದ ಶೋಷಣೆ ನಿವಾರಿಸಲು ಬಸವಣ್ಣ ಬಂದಿದ್ದಾನೆ.
ಈ ಹಿಂದಿದ್ದ ವೈಧಿಕಶಾಹಿತ್ವ ಜನರನ್ನು ಶೋಷಣೆಗೆ ಒಳಪಡಿಸಿತ್ತು. ಸ್ತ್ರೀಗೆ ಕೂಡಾ ಶೂದ್ರರ ಸ್ಥಾನ ನೀಡಲಾಗಿತ್ತು. ಕಾರಣ ಆಕೆ ಅಡುಗೆ ಮನೆಗೆ ಸೀಮಿತಳಾಗಿದ್ದಳು. ಆಕೆಗೆ ವಿದ್ಯೆ ಕಲಿಯಲು ಅವಕಾಶವಿರಲೇ ಇಲ್ಲ. ಹಾಗೆಯೇ ಕೆಳವರ್ಗದ ದಲಿತರನ್ನು ಶೋಷಣೆಗೆ ಒಳಪಡಿಸಲಾಗಿತ್ತು. ಆಗ ಧರ್ಮವೆಂದರೆ ಅತಿರೇಕ ಮಾರ್ಗದಿಂದ, ವೃತಾಚರಣೆ, ಉಪವಾಸ, ಕಠಿಣ ವೃತಾಚರಣೆ, ತಪಸ್ಸು ಮುಂತಾದವುಗಳಿಂದ ದೇವರನ್ನು ಕಾಣಲು ಸಾಧ್ಯವೆಂದು ಬಿಂಬಿಸಲಾಗಿತ್ತು.
ಆದರೆ ಬಸವಣ್ಣ ಇವೆಲ್ಲವುಗಳನ್ನು ತಿರಸ್ಕರಿಸಿ ಸರಳತೆಯ, ಸರ್ವಸಮಾನತೆಯ, ಶೋಷಣೆರಹಿತ ಧಾರ್ಮಿಕ ಬದಕನ್ನು ನೀಡಿದನು. ಮಹಿಳೆಯರೂ ಕೂಡಾ ಪುರುಷರ ಸಮಾನರಾಗಿ ಅನುಭವ ಮಂಟಪದಲ್ಲಿಯ ಚರ್ಚೆಯಲ್ಲಿ ಭಾಗಿಗಳಾಗುತ್ತಿದ್ದರು.

ನಾವು ದೇವರ ಹುಡುಕಲು ಉಪವಾಸ, ವೃತಾಚರಣೆಯಂತಹುಗಳ ಮೊರೆ ಹೋಗಬಾರದು, ಭ್ರಮಾತ್ಮಕ ಕಲ್ಪನೆ ಬಿಟ್ಟು ಶರಣರು ನೀಡಿದ ಸರಳ ತತ್ವ ಅನುಸರಿಸಬೇಕು. ಇಂಥ ಮಹಾನ್ ಧರ್ಮ ನೀಡಿದ ಬಸವಣ್ಣನವರ ಬಗ್ಗೆ ಅಕ್ಕಮಹಾದೇವಿ ತಾಯಿ ಅವರನ್ನು ನೆನೆದಿದ್ದಾಳೆ. ಈ ಸಂದರ್ಭದಲ್ಲಿ ಬರಗುಂಡಿಯವರು ಅನೇಕ ವಚನಗಳ ಉದಾಹರಣೆ ನೀಡಿದರು.
ಆರಂಭದಲ್ಲಿ ಲಿಂಗಾಯತ ಧರ್ಮದ ಷಟಸ್ಥಲ ಧ್ವಜಾರೋಹಣವನ್ನು ಅಂಗಡಿ ಮನೆತನದ ಹಿರಿಯರಾದ ತಾಯಿ ಶಿವಗಂಗಮ್ಮ ಬಸವರಾಜ ಅಂಗಡಿ ನೆರವೇರಿಸಿದರು. ವಚನ ಪ್ರಾರ್ಥನೆಯನ್ನು ಗಿರಿಜಾ ಹಿರೇಮಠ ಮಾಡಿದರು. ಖ್ಯಾತ ನ್ಯಾಯವಾದಿ ಎಸ್. ಎಸ್. ಶೆಟ್ಟರ ವಚನಗಳನ್ನು ಓದುವ ಮೂಲಕ ಉದ್ಘಾಟಿಸಿ ಮಾತುಗಳನ್ನು ಆಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದರವರು ಮಾತನಾಡುತ್ತಾ, ಈ ಮಣ್ಣಿನಲ್ಲಿ ಜನಿಸಿದ ಬಸವಾದಿ ಶರಣರು ನೀಡಿದ ಲಿಂಗಾಯತ ಧರ್ಮ, ವಚನ ಸಾಹಿತ್ಯ ದೊಡ್ಡದು. ಆ ಕೊಡುಗೆ ಹಿರಿಯದಾಗಿದೆ ಎಂದರು.
ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಎಂ.ಬಿ. ಲಿಂಗಧಾಳ ಅವರು ನೀಡಿದ ಬಸವಣ್ಣನವರ ಭಾವಚಿತ್ರವುಳ್ಳ ಫೋಟೋ ಹಾಗೂ ರಮಜಾನ್ ದರ್ಗಾರವರ ‘ಬಸವಣ್ಣ ಯಾಕೆ ಬೇಕು’ ಎಂಬ ಗ್ರಂಥವನ್ನು ವಚನ ಶ್ರಾವಣ ಆಯೋಜನೆ ಮಾಡಿದ ಅಂಗಡಿ ಬಂಧುಗಳಿಗೆ ನೀಡಿದರು.

ವಚನ ಚಿಂತಕರಿಗೆ ಗಿರಿಜಕ್ಕ ಧರ್ಮರೆಡ್ಡಿಯವರು ರಚಿಸಿದಂತಹ ‘ಶರಣರು ಕಂಡ ಅನಾದಿ ಬಸವಣ್ಣ’ ಪುಸ್ತಕವನ್ನು ನೀಡಿ ಗೌರವಿಸಿದರು. ಸ್ವಾಗತ ಮಂಜುಳಾ ಅಕ್ಕಿ, ನಿರೂಪಣೆ ಪ್ರಕಾಶ ಅಸುಂಡಿ ನೆರವೇರಿಸಿದರು.
ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸುರೇಶ ಅಂಗಡಿ ನೆರವೇರಿಸಿದರು. ಶರಣು ಸಮರ್ಪಣೆ ಗೌರಕ್ಕ ಬಡಿಗಣ್ಣನವರು ಮಾಡಿದರು.
ಬಸವಾಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗಿಗಳಾಗಿದ್ದರು. ಅಂಗಡಿ ಬಂಧುಗಳು ಪ್ರಸಾದ ದಾಸೋಹ ವ್ಯವಸ್ಥೆ ಮಾಡಿದ್ದರು.

ಬರಗುಂಡಿಯವರ ಮಾತು ಬಹಳ ಮಾರ್ಮಿಕವಾಗಿ ನುಡಿದರು