‘ಒಡಲ ಪೋಷಣೆ ಮಾಡುವಾಗ ವಿಷಯ ಸುಖಿಗಳಾಗಿರದೆ ಪ್ರಸಾದ ಸುಖಿಗಳಾಗಿರಬೇಕು’

ಗುಳೇದಗುಡ್ಡ:

ಶಿವಾನಂದ ಅಂಗಡಿಯವರ ಮನೆಯಲ್ಲಿ ಶನಿವಾರ ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಜರುಗಿತು.

ಚಿಂತನೆಗಾಗಿ ವ್ಯೋಮಮೂರುತಿ ಅಲ್ಲಮ ಪ್ರಭುದೇವರ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಎಣ್ಣೆ ಬೇರೆ ಬತ್ತಿ ಬೇರೆ ಎರಡೂ ಕೂಡಿ ಸೊಡರಾಯಿತ್ತು
ಪುಣ್ಯ ಬೇರೆ ಪಾಪ ಬೇರೆ ಎರಡೂ ಕೂಡಿ ಒಡಲಾಗಿತ್ತು.
ಮಿಗಬಾರದು ಮಿಗದಿರಬಾರದು,
ಒಡಲಿಚ್ಛೆ ಸಲ್ಲಿಸದೆ ನಿಮಿಷವಿರಬಾರದು
ಕಾಯ ಗುಣವಳಿದು ಮಾಯಾ ಜ್ಯೋತಿ
ವಾಯುವ ಕೂಡದ ಮುನ್ನ ಭಕ್ತಿಯ ಮಾಡಬಲ್ಲಡೆ     
ಆತನೇ ದೇವ ಗುಹೇಶ್ವರ.

ಪ್ರಾರಂಭದಲ್ಲಿ ಉಪನ್ಯಾಸಕರಾದ ಪ್ರೊ. ಶ್ರೀಕಾಂತ ಗಡೇದವರು ಚಿಂತನೆ ಪ್ರಾರಂಭಿಸುತ್ತ, ಎಣ್ಣೆ ಮತ್ತು ಬತ್ತಿಗಳು ಎರಡೂ ಸೇರಿ ಜ್ಯೋತಿಯಾಗುವಂತೆ, ಪಾಪ ಪುಣ್ಯಗಳ ಸಮ್ಮಿಶ್ರಣದ ಫಲವಾಗಿ ಶರೀರವಾಗುವಂತೆ ಈ ಜೀವವು ಶರೀರ ಮತ್ತು ಮಾಯೆಯನ್ನು ಕೂಡಿದೆ. ಇದನ್ನು ಅರಿತು ಆಚರಿಸಿ ನಡೆಯಬೇಕಿದೆ. ಅದನ್ನೇ ಭಕ್ತಿ ಎನ್ನುವುದು. ಈ ಭಕ್ತಿಯಿಂದಾಗಿ ಮಾನವ ದೇವನೇ ಆಗುತ್ತಾನೆ ಅದುವೇ ಬಹು ಪ್ರಮುಖವಾಗಿದೆ ಎಂದು ತಿಳಿಸಿದರು.

ಇದೇ ಆಶಯವನ್ನು ಸಮರ್ಥಿಸುತ್ತ ಮಹಾಲಿಂಗಪ್ಪ ಕರನಂದಿಯವರು, ಶರಣರು ಕಾಯಗುಣವನ್ನು ನೀಗಿಕೊಂಡು ಭಕ್ತಿಯನ್ನು ಮಾಡಬಲ್ಲವರು. ದೇಹ ಅಳಿಯುವ ಮುನ್ನವೇ ಅಂಗಲಿಂಗದ ಸಂಬಂಧವನ್ನ ಅರಿಯಬೇಕು ಶರೀರ ಅಳಿದ ನಂತರ ಮತ್ತೇನಿಲ್ಲ. ಅದು ಇರುವಂತೆಯೇ ನಿಜದ ನೆಲೆಯನ್ನು ಅರಿತರೆ ಆತನೇ ಗುಹೇಶ್ವರನಾಗುತ್ತಾನೆ ಎಂದು ಶ್ರೀಮದ್ ಅಲ್ಲಮರು ಹೇಳಿದ್ದಾರೆ ಎಂದರು.

ಡಾ. ಗಿರೀಶ ನೀಲಕಂಠಮಠ ಅವರು ಚಿಂತನೆಯನ್ನು ಮುಂದುವರೆಯಿಸುತ್ತ, ದೀಪ ಬೆಳಗಲು ಪ್ರಣತೆ ಎಣ್ಣೆ ಬತ್ತಿಗಳು ಬೇಕು. ಮುಖ್ಯವಾಗಿ ಎಣ್ಣೆ ಬತ್ತಿಗಳಿಂದಲೇ ಜ್ಯೋತಿಯೂ ಬೆಳಗುತ್ತದೆ. ಹಾಗೆಯೇ ಪುಣ್ಯ-ಪಾಪಗಳ ಸಮಿಶ್ರಣ ರೂಪದಿಂದಲೇ ಈ ಶರೀರ ಉಂಟಾಗಿದೆ. ಯಾವುದೂ ಅತಿಯಾಗಬಾರದು ದೇಹ ಭಾವ ಅಳಿದು ಹೋಗಬೇಕಾದರೆ ಮನಸ್ಸನ್ನು ನಿಯಂತ್ರಿಸಬೇಕು. ಈ ಮನಸ್ಸನ್ನು ಹಿಡಿತದಲ್ಲಿರಿಸಲು ಕೇವಲ ಶರೀರವನ್ನು ದಂಡಿಸಿದರೆ ಸಾಲದು ಮನದ ಕಾಮನೆಗಳನ್ನು ನಿಯಂತ್ರಿಸಬೇಕು. ಇದು ಭಕ್ತಿಯಿಂದ ಸಾಧ್ಯವಾಗುತ್ತದೆ ದೇವನ ನೆನಹೆಂಬ ಪಾಶದಿಂದ ಮನವನ್ನು ಕಟ್ಟಿದಾಗ ದೇಹ ಬಿಡುವ ಮುನ್ನವೇ ದೇವನಾಗುತ್ತಾನೆ ಎಂದು ಅನೇಕ ದ್ರಷ್ಟಾಂತಗಳ ಮೂಲಕ ತಿಳಿಸಿದರು.

ಎಸ್.ಬಿ. ಬರಗುಂಡಿ ಅವರು ಎಲ್ಲರಿಗೂ ವಿದಿತವಾಗಿರುವಂತೆ ಎಣ್ಣೆ ಬತ್ತಿಗಳಿಂದ ಜ್ಯೋತಿ, ಪುಣ್ಯ ಪಾಪಗಳಿಂದಾಗಿ ದೇಹ ಉಂಟಾಗಿರುವಂತೆ ಶರೀರ ಪ್ರಾಣಗಳಿಂದಾಗಿ ಜೀವಾತ್ಮ ನೆನೆಸಿಕೊಳ್ಳುತ್ತಾನೆ. ಪರಶಿವನ ಅಂಶವೇ ಆಗಿರುವ ತನಗೆ ಎಲ್ಲಿಯವರೆಗೆ ಶರೀರವಿದೆಯೋ ಅಲ್ಲಿಯವರೆಗೆ ಜನನ ಮರಣ ಹಸಿವು ನೀರಡಿಕೆ ಇತ್ಯಾದಿಗಳು ಇರುತ್ತವೆ. ಜೊತೆಗೆ ನಾನು ನನ್ನದೆಂಬ ಮೋಹ ಮಮಕಾರಗಳಿಂದಾಗಿ ಮಾಯಾ ಆವರಣ ಉಂಟಾಗುತ್ತದೆ.

ತನುವನ್ನು ಹೊಂದಿರುವವರೆಗೆ ಅದರಿಚ್ಚೆಯನ್ನು ಸಲ್ಲಿಸುವುದು ಕೂಡ ಮುಖ್ಯವೆ ಆಗುತ್ತದೆ. ಹಸಿವು ನೀರಡಿಕೆಗಳಿಂದ ಮನುಷ್ಯ ಕಂಗೆಡುತ್ತಾನೆ. ಅದನ್ನು ತುಂಬಿಸಲೆಂದೇ ಹೋರಾಡುತ್ತಾನೆ ಇದು ಅತಿ ಆದಾಗ ಕಳವು ಸುಳ್ಳು ಮೊದಲಾದವುಗಳಿಗೆ ಬಲಿಯಾಗುತ್ತಾನೆ.

ಇಂಥ ಒಡಲ ಇಚ್ಛೆಯನ್ನು ಪೂರ್ತಿ ಅಲಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಅದರ ಪೋಷಣೆ ಮಾಡುವಾಗ ನಾವು ವಿಷಯ ಸುಖಿಗಳಾಗಿರದೆ ಪ್ರಸಾದ ಸುಖಿಗಳಾಗಿರಬೇಕು ಈ ಪ್ರಸಾದವು ಕಾಯಕ ದಾಸೋಹದಿಂದ ಸಾಧ್ಯವಾಗುತ್ತದೆ. ಇದು ದೇಹಾಂತ್ಯ ಪೂರ್ವವೇ ಆಗಬೇಕು. ಅರಿವು ಆಚಾರಗಳನ್ನು ಒಂದುಮಾಡಿ ನಡೆದುಕೊಳ್ಳುವುದೇ ಭಕ್ತಿ. ಇಂಥ ಭಕ್ತಿ ಆತನನ್ನು ಐಕ್ಯಸ್ಥಲದವರೆಗೆ ಕರೆದುಕೊಂಡು ಹೋಗಿ ಶಿವನಲ್ಲಿ ಸಮರಸವಾಗಿರಿಸುತ್ತದೆ. ಆಗ ಆತನೇ ದೇವನಾಗಿರುತ್ತಾನೆ ಎಂಬುದನ್ನು ಈ ವಚನ ಬಿಂಬಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮವು ಸಾಮೂಹಿಕ ವಚನ ಪಠಣದೊಂದಿಗೆ ಪ್ರಾರಂಭವಾಯಿತು. ಸ್ವಾಗತ ಹಾಗೂ ಶರಣು ಸಮರ್ಪಣೆಯನ್ನು ಶರಣ ಮುರುಗೇಶ ಶೇಖಾ ಅವರು ನಡೆಸಿಕೊಟ್ಟರು.

ಪುತ್ರಪ್ಪ ಬೀಳಗಿ, ರಾಚಣ್ಣ ಕೆರೂರ, ಬಸಲಿಂಗಯ್ಯ ಕಂಬಾಳಿಮಠ, ರಾಚಪ್ಪ ಯಂಡಿಗೇರಿ, ಬಸವರಾಜ ಖಂಡಿ, ಪಾಂಡಪ್ಪ ಕಳಸಾ, ದಾಕ್ಷಾಯಿಣಿ ತೆಗ್ಗಿ, ಸುಲೋಚನ ಹಿರೇಮಠ, ಗೀತಾ ತಿಪ್ಪಾ ಮೊದಲಾದವರು ಉಪಸ್ಥಿತರಿದ್ದರು.                  

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *