ಬುದ್ದನಿಗೆ ಬಂದ ಗತಿ ಬಸವಣ್ಣನಿಗೆ ಬಾರದಿರಲಿ ಭಾಗ 2

ನಮ್ಮ ಮನೆಯ ಮೂರು ಶೂನ್ಯಗಳು:  ‘ಗ್ರಂಥ ಶೂನ್ಯ’

ಬೆಂಗಳೂರು 

೨೦೨೫ರ ಫೆಬ್ರವರಿ ೨೭ರ ರಾತ್ರಿ, ಬುದ್ಧಗಯಾ. ಬುದ್ಧನಿಗೆ ಅರಿವು ಮೂಡಿದ ನೆಲದಲ್ಲಿ ಉಪವಾಸ ಕೂತಿದ್ದ ಬೌದ್ಧ ಭಿಕ್ಷುಗಳನ್ನು ಪೊಲೀಸರು ದೇವಾಲಯದ ಆವರಣದಿಂದ ಹೊರಗೆ ಸಾಗಿಸಿದರು. 

ಅವರು ಕೇಳಿದ್ದು ಇಷ್ಟೇ, ನಮ್ಮ ಮಂದಿರದ ಆಡಳಿತ ನಮಗೆ ಕೊಡಿ. 

ಎರಡೂವರೆ ಸಾವಿರ ವರ್ಷದ ಧರ್ಮ ತನ್ನದೇ ಮನೆಯ ಬಾಗಿಲಲ್ಲಿ ಅರ್ಜಿ ಹಿಡಿದು ನಿಂತಿದೆ.

ಇದು ಹೇಗಾಯಿತು? 

ಬುದ್ಧನನ್ನು ಯಾರೂ ಬಯ್ಯಲಿಲ್ಲ. ವಿಷ್ಣುವಿನ ಅವತಾರ ಎಂದು ಕೈಮುಗಿದರು. ಬುದ್ಧ ವೇದ ಬೇಡ, ಯಜ್ಞ ಬೇಡ ಎಂದದ್ದಕ್ಕೆ ಹೊಸ ಅರ್ಥ ಬಂತು. ಅದು ದುಷ್ಟರನ್ನು ಮರುಳು ಮಾಡಲು ದೇವರು ತೊಟ್ಟ ವೇಷ ಅಂತೆ! ಮಾತು ಉಳಿಯಿತು, ಹಲ್ಲು ಉದುರಿತು. 

ಶತಮಾನಗಳ ಕಾಲ ಬುದ್ಧಗಯಾ ಶೈವ ಮಹಂತರ ಕೈಯಲ್ಲಿತ್ತು. ೧೯೪೯ರ ಕಾಯ್ದೆಯ ನಂತರವೂ ಆಡಳಿತ ಸಮಿತಿಯಲ್ಲಿ ನಾಲ್ಕು ಹಿಂದೂ, ನಾಲ್ಕು ಬೌದ್ಧ ಸದಸ್ಯರು, ಅಧ್ಯಕ್ಷರು ಜಿಲ್ಲಾಧಿಕಾರಿ.

ಬುದ್ಧನಿಗೆ ಆದದ್ದು ಬಸವಣ್ಣನಿಗೂ ಆಗಬೇಕೆ? ಈಗ ನಮ್ಮ ಮನೆಯ ಕಡೆ ನೋಡಿ. 

ಬಸವಣ್ಣನನ್ನೂ ಇಂದು ಯಾರೂ ಬಯ್ಯುತ್ತಿಲ್ಲ. ಕುಂಭಮೇಳದ ವೇದಿಕೆಯಲ್ಲಿ ಶರಣರ ಹೆಸರು. ಪ್ರವಚನಗಳಲ್ಲಿ “ಬಸವ ಶೈವ” ಎಂಬ ಹೊಸ ಪದ. 

ಜೀರ್ಣೋದ್ಧಾರವಾದ ಕೆಲವು ಗುಡಿಗಳಲ್ಲಿ ಶರಣರ ಮೂರ್ತಿಗೆ ಜನಿವಾರ. ಬಯ್ದವನನ್ನು ನಾವು ಕೂಡಲೇ ಗುರುತಿಸುತ್ತೇವೆ. ಹೊಗಳಿದವನಿಗೆ ಶಾಲು ಹೊದಿಸಿ ವೇದಿಕೆಗೆ ಕರೆಯುತ್ತೇವೆ. 

“ಬೌದ್ಧ ವೈಷ್ಣವ” ಅಂದರೆ ನಗುತ್ತೀರಿ. “ಬಸವ ಶೈವ” ಅಂದಾಗ ಯಾಕೆ ಚಪ್ಪಾಳೆ?

ವರ್ಷಗಳಿಂದ ನಾವು “ಲಿಂಗಾಯತ ಧರ್ಮದ ಮೇಲೆ ದಾಳಿ” ಎಂದು ಕೂಗುತ್ತಿದ್ದೇವೆ. ನಾನೂ ಕೂಗಿದ್ದೇನೆ. ಇವತ್ತು ಸ್ವಲ್ಪ ಕಹಿ ಮಾತು ಹೇಳಲೇಬೇಕು. 

ಯಾರೂ ನಮ್ಮ ಬಾಗಿಲು ಒಡೆದಿಲ್ಲ. ನಮ್ಮ ಮನೆಯ ಗೋಡೆಯಲ್ಲಿ ಮೂರು ಶೂನ್ಯಗಳಿವೆ. ಗ್ರಂಥದ ಶೂನ್ಯ, ಪೀಠದ ಶೂನ್ಯ, ನೆನಪಿನ ಶೂನ್ಯ. ಹೊಗಳಿಕೆಯ ವೇಷದಲ್ಲಿ ಬರುವವರು ನುಸುಳುತ್ತಿರುವುದು ಅಲ್ಲಿಂದಲೇ. 

ಈ ಭಾಗದಲ್ಲಿ ಮೊದಲನೆಯದು – ಗ್ರಂಥ ಶೂನ್ಯ

ಸಿಖ್ಖರನ್ನು ನೋಡಿ. ೧೬೦೪ರಲ್ಲಿ ಗುರು ಅರ್ಜನ್ ದೇವರು ಆದಿ ಗ್ರಂಥ ಜೋಡಿಸಿದರು. ೧೭೦೮ರಲ್ಲಿ ಗುರು ಗೋಬಿಂದ ಸಿಂಗರು ಇನ್ನು ಮುಂದೆ ಗ್ರಂಥವೇ ಗುರು ಎಂದರು. ಆ ದಿನದಿಂದ ಯಾರೂ ಅದಕ್ಕೆ ಒಂದು ಸಾಲು ಸೇರಿಸುವಂತಿಲ್ಲ, ತೆಗೆಯುವಂತಿಲ್ಲ. ವಿವಾದ ಬಂದಾಗ ಎಲ್ಲರೂ ಅದೇ ಗ್ರಂಥದತ್ತ ತಿರುಗುತ್ತಾರೆ.

ನಮ್ಮ ಬಳಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ವಚನಗಳಿವೆ. ಹದಿನೈದು ಸಂಪುಟಗಳ ಸಮಗ್ರ ವಚನ ಸಂಪುಟ ಇದೆ. ಆದರೆ ಇದೇ ನಮ್ಮ ಪ್ರಮಾಣ ಎಂದು ಮುದ್ರೆ ಒತ್ತಿದ ಒಂದು ಗ್ರಂಥ ಇಲ್ಲ. ನಮ್ಮದು ಬಾಗಿಲಿಲ್ಲದ ಉಗ್ರಾಣ. ಯಾರು ಬೇಕಾದರೂ ಬಂದು ತಮಗೆ ಬೇಕಾದ ವಚನ ಆರಿಸಿ, ತಮ್ಮ ಚೌಕಟ್ಟು ಹಾಕಿ, ಹೊಸ ಹೆಸರಿಟ್ಟು ಹಂಚಬಹುದು.

ಈ ಆಟ ಶುರುಮಾಡಿದ್ದು ಹೊರಗಿನವರಲ್ಲ. ಬಸವಣ್ಣ ಲಿಂಗೈಕ್ಯರಾಗಿ ನೂರು ವರ್ಷ ತುಂಬುವ ಮುಂಚೆಯೇ ಹರಿಹರನ ರಗಳೆ ಅವರನ್ನು ಪವಾಡಪುರುಷನನ್ನಾಗಿಸಿತ್ತು. ತೆಲುಗಿನಲ್ಲಿ ಪಾಲ್ಕುರಿಕೆ ಸೋಮನಾಥ ಅವರನ್ನು ಶಿವಗಣದ ಅವತಾರ ಮಾಡಿದ. 

ಆಮೇಲೆ ನಮ್ಮವರೇ ಶೂನ್ಯಸಂಪಾದನೆಯನ್ನು ನಾಲ್ಕು ಬಾರಿ, ನಾಲ್ಕು ಬಗೆಯಲ್ಲಿ ಜೋಡಿಸಿದರು. ಅವರೆಲ್ಲ ಭಕ್ತರೇ. 

ಮನೆಯ ಆಸ್ತಿ ಪಾಲಾಗುವಾಗ ಪಂಚಾಯ್ತಿಯಲ್ಲಿ ಹಿರಿಯರು ಕೇಳುವ ಮೊದಲ ಪ್ರಶ್ನೆ, “ಪತ್ರ ಎಲ್ಲಿದೆ?” ಅಜ್ಜ ಬಾಯಲ್ಲಿ ಹೇಳಿದ್ದು ಕೋರ್ಟಿನಲ್ಲಿ ನಡೆಯುವುದಿಲ್ಲ. ಪತ್ರ ಇಲ್ಲದ ಹೊಲದಲ್ಲಿ ಮೊದಲು ಬೇಲಿ ಹಾಕಿದವನೇ ಯಜಮಾನ.

ತೆರೆದ ಉಗ್ರಾಣದಿಂದ ಮೊದಲು ಕಾಣೆಯಾಗುವುದು ಯಾವ ವಚನ ಗೊತ್ತೇ? ಅತಿ ಕಹಿಯಾದದ್ದು. ಜಯಂತಿಯ ವೇದಿಕೆಗಳಲ್ಲಿ ಇದು ಕೇಳಿಸುವುದು ಅಪರೂಪ.

“ವೇದಕ್ಕೆ ಒರೆಯ ಕಟ್ಟುವೆ, 

ಶಾಸ್ತ್ರಕ್ಕೆ ನಿಗಳವನಿಕ್ಕುವೆ,

ತರ್ಕದ ಬೆನ್ನ ಬಾರನೆತ್ತುವೆ, 

ಆಗಮದ ಮೂಗ ಕೊಯಿವೆ, ನೋಡಯ್ಯಾ.

ಮಹಾದಾನಿ ಕೂಡಲಸಂಗಮದೇವಾ,

ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.”

ಆಗಮದ ಮೂಗು ಕೊಯ್ಯುತ್ತೇನೆ ಎಂದವನನ್ನು ಶೈವ ಎಂಬ ಪೆಟ್ಟಿಗೆಯೊಳಗೆ ಹೇಗೆ ತುರುಕುತ್ತೀರಿ? ಉಗ್ರಾಣ ತೆರೆದಿದ್ದರೆ ಕಷ್ಟವೇನಿಲ್ಲ. 

ಈ ವಚನವನ್ನು ಬಿಟ್ಟು ಉಳಿದದ್ದನ್ನು ಆರಿಸಿಕೊಂಡರಾಯಿತು. ಪರಿಹಾರ ಏನು? ಇಪ್ಪತ್ತು ಸಾವಿರದ ಉಗ್ರಾಣ ತೆರೆದೇ ಇರಲಿ. ಅದರೊಳಗಿಂದ ೧೦೦೮ ವಚನಗಳ ಒಂದು ಪ್ರಮಾಣ ಸಂಹಿತೆಯನ್ನು ವಿದ್ವಾಂಸರು ಕೂತು ಆರಿಸಲಿ, ಪಾಠ ನಿಗದಿ ಮಾಡಲಿ, ಸಾರ್ವಜನಿಕವಾಗಿ ಘೋಷಿಸಲಿ. ಇಂಥ ಕಹಿ ವಚನಗಳು ಮೊದಲ ಪುಟದಲ್ಲೇ ಇರಲಿ. 

ವಚನ ಪರಂಪರೆ ತೆರೆದದ್ದು, ಅದನ್ನು ಮುಚ್ಚುವುದು ತಪ್ಪು ಎನ್ನುವವರಿದ್ದಾರೆ. ಉಗ್ರಾಣದ ನಡುವೆ ಒಂದು ತಿಜೋರಿ ಇಟ್ಟರೆ ಉಗ್ರಾಣ ಮುಚ್ಚುವುದಿಲ್ಲ. ನಾವು ಬೀಗ ಹಾಕದಿದ್ದರೆ ಬೇರೆಯವರು ತಮ್ಮ ಬೀಗ ಹಾಕುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *