ಹಟ್ಟಿ ಹಳ್ಳಿಗೆ ಮದ್ಯಪಾನ ಸಂಯಮ ಪ್ರಶಸ್ತಿ

ಗಣೇಶ ಅಮೀನಗಡ
ಗಣೇಶ ಅಮೀನಗಡ

ನಾಟಕೋತ್ಸವದಲ್ಲಿಅಲ್ಕೊಹಾಲ್ ವಿರುದ್ಧ ಯುದ್ಧ ಸಾರಲು ಸಲಹೆ

ಸಾಣೇಹಳ್ಳಿ :

ಜೀವನದಲ್ಲಿ ಮದ್ಯವ್ಯಸನದಿಂದ ಮುಕ್ತರಾದವರಿಗೆ ಏನ್ನನ್ನಾದರೂ ಸಾಧಿಸಲು ಸಾಧ್ಯ. ನಾನು ಮದ್ಯಮುಕ್ತನಾದುದರಿಂದ ಈ ಮಂಡಳಿಯ ಅಧ್ಯಕ್ಷನಾಗಿರುವೆ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಹೆಮ್ಮೆಯಿಂದ ಹೇಳಿದರು.

ನಾಟಕೋತ್ಸವ ಅಂಗವಾಗಿ ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮದ್ಯಮುಕ್ತ ಸಮಾಜಕ್ಕೆ ಹೋರಾಡಿದ ಇಲಕಲ್ಲದ ವಿಜಯಮಹಾಂತ ಸ್ವಾಮೀಜಿ, ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಮದ್ಯಪಾನ ಸಂಯಮ ಮಂಡಳಿಯಿಂದ ಪ್ರಶಸ್ತಿ ನೀಡಲಾಗಿದೆ.

ಈ ವರ್ಷ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳಿಗೆ ಕೊಡಲು ಅವರ ಬಳಿ ಹೋಗಿದ್ದೆ. ಯಾವುದೇ ಪ್ರಶಸ್ತಿ ಸ್ವೀಕರಿಸುವುದಿಲ್ಲವೆಂದು ತಮ್ಮ ಗುರುಗಳಿಗೆ ವಚನ ಕೊಟ್ಟಿರುವುದನ್ನು ಸ್ಮರಿಸಿದರು.

ಆದರೆ, ಅವರ ಸಲಹೆ ಮೇರೆಗೆ ಚಿನ್ನದ ಗಣಿಯಿರುವ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದೆ. ಒಂದೂವರೆ ವರ್ಷದಿಂದ ಗ್ರಾಮದ ಮೂವರು ಮಹಿಳೆಯರ ಪ್ರಯತ್ನದಿಂದ ಹಟ್ಟಿ ಮದ್ಯಮುಕ್ತ ಹಳ್ಳಿಯಾಗಿದೆ, ಎಂದರು.

ಹೀಗಾಗಿ ಆಗಸ್ಟ್ 16ರಂದು ಇಲಕಲ್ಲದ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ, ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಹಟ್ಟಿ ಗ್ರಾಮಕ್ಕೆ ಮದ್ಯಪಾನ ಸಂಯಮ ಮಂಡಳಿ ಪ್ರಶಸ್ತಿ ನೀಡಿದೆವು. ಇದರ ಪರಿಣಾಮ ಕೊಪ್ಪಳ ಜಿಲ್ಲೆಯ 20 ಹಳ್ಳಿಗಳು ಮದ್ಯಮುಕ್ತವಾಗಿವೆ ಎಂದು ವಿವರಿಸಿದರು.

ಮಕ್ಕಳಿಗೆ ತಿಳಿವಳಿಕೆ ಮೂಡಿಸಿ

ನಮ್ಮನ್ನು ರಾಕ್ಷಸರನ್ನಾಗಿಸುವ, ನಾಶಗೊಳಿಸುವ ಅಲ್ಕೋಹಾಲ್ ವಿರುದ್ಧ ಯುದ್ಧವನ್ನೇ ಸಾರಬೇಕಿದೆ ಎಂದು ಮನೋವೈದ್ಯರಾದ ಡಾ.ಸಿ.ಆರ್. ಚಂದ್ರಶೇಖರ ಸಲಹೆ ನೀಡಿದರು.

ನಾಟಕೋತ್ಸವ ಅಂಗವಾಗಿ ಅವರು ‘ಮದ್ಯಮುಕ್ತ ನಾಡು’ ಕುರಿತು ಮಾತನಾಡಿದರು.

ಮದ್ಯ ಸೇವನೆಯಿಂದ ಆಗುವ ಹಾನಿಯ ಕುರಿತು ಮಕ್ಕಳಿಗೆ ತಿಳಿವಳಿಕೆ ಮೂಡಿಸಿ. ನಿತ್ಯ ಮಕ್ಕಳ ಮೇಲೆ, ಮೊಮ್ಮಕ್ಕಳ ಮೇಲೆ ಕಣ್ಣಿಡಿ ಎಂದು ಕಿವಿಮಾತು ಹೇಳಿದರು.

ಪ್ರಕೃತಿಯು ನೀಡಿರುವ ದೇಹವನ್ನು ಮತ್ತು ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಳ್ಳುವ ಅಗತ್ಯವಿದೆ. ಆದರೂ ಭಾರತೀಯರ ವಯಸ್ಸು ಸರಾಸರಿ 75. ನಮ್ಮ ಆಯಸ್ಸು ಹೆಚ್ಚಿದೆ.

ನಮ್ಮ ದೇಹವನ್ನು, ಮನಸ್ಸನ್ನು ನಾಶ ಮಾಡುತ್ತದೆ ಅಲ್ಕೋಹಾಲ್. ಮದ್ಯಸೇವನೆಯಿಂದ ಹತ್ತು ನಿಮಿಷ ಮಾತ್ರ ಎಲ್ಲವೂ ಮರೆತುಹೋಗುತ್ತದೆ ನಿಜ. ಗಮನಿಸಿ ರಾಮಾಯಣ- ಮಹಾಭಾರತ ಕಾಲದಿಂದ ಹಿಡಿದು ಸುರಾಪಾನ ಜಾರಿಯಲ್ಲಿದೆ. ಆದರೆ, ಎಲ್ಲ ಮಹಿಮರು, ಸನ್ಯಾಸಿಗಳು, ಸಾಧುಸಂತರು, ಬೋಧಕರು, ಶಿಕ್ಷಕರು ಹೇಳಿದರೂ ಮದ್ಯಸೇವನೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಿಟ್ಟಿಗೆ, ಖುಷಿಗೆ, ಅಸಮಾಧಾನಕ್ಕೆ, ನಷ್ಟವಾದರೂ ಲಾಭವಾದರೂ ಮದ್ಯ ಸೇವಿಸುವವರಿದ್ದಾರೆ. ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಶೇ 10ರಷ್ಟು ಜನರು ನಿತ್ಯ ಮದ್ಯ ಸೇವಿಸುತ್ತಾರೆ. ಅದರಲ್ಲೂ 12–20 ವಯಸ್ಸಿನ ಯುವಕರು ಮದ್ಯಸೇವನೆ, ಸಿಗರೇಟು, ಗಾಂಜಾ ಸೇವಿಸುತ್ತಾರೆ. ಸ್ವಿಗ್ಗಿ, ಜೊಮೆಟೊ ಮೂಲಕ ಸಾಗಾಣಿಕೆ ಆಗುತ್ತಿದೆ. ಹೀಗೆ ನಮ್ಮ ಯುವಜನಾಂಗ ಮದ್ಯ ಸೇವನೆಗೆ, ಸಿಗರೇಟಿಗೆ, ಗಾಂಜಾಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ಒಂಬತ್ತನೆ ತರಗತಿ ಓದುವ ವಿದ್ಯಾರ್ಥಿನಿಯು ಮನೆಯಲ್ಲಿ ಕಳ್ಳತನ ಮಾಡಿ ಡ್ರಗ್ಸ್ ಸೇವನೆಗೆ ಬಲಿಯಾಗುವುದು ಆತಂಕ ಉಂಟು ಮಾಡುತ್ತಿದೆ. ನಿರಂತರವಾಗಿ ಮದ್ಯ ಸೇವನೆಯಿಂದ ಒಂದುಕಾಲು ಕಿಲೊ ತೂಕದ ಮಿದುಳಿನ ಒಂದೆರಡು ನರಕೋಶಗಳು ಸಾಯುತ್ತವೆ. ನರತಂತ್ರಗಳು ನಿಧಾನವಾಗಿ ನಾಶವಾಗುತ್ತವೆ ಎಂದರು.

ಮದ್ಯಪಾನದಿಂದ ರಾಜ್ಯದಲ್ಲಿ ₹ 45–50 ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ, ಅಲ್ಕೊಹಾಲ್ ಚಟವಾದರೆ ಔಷಧಿಯಿಲ್ಲ. ವೈದ್ಯಕೀಯ ರಂಗವು ಎಷ್ಟೇ ಮುಂದುವರೆದಿದ್ದರೂ ಚಟಗಳಿಗೆ ದಾಸರಾಗಿದ್ದಕ್ಕೆ ಚಿಕಿತ್ಸೆ ಕೊಡಬಹುದು. ಆದರೆ ಗುಣಮುಖವಾಗುವುದು ಕಷ್ಟಸಾಧ್ಯ.

ಮನೆಯಲ್ಲಿನ ಪಾತ್ರೆ, ಹೆಂಡತಿಯ ತಾಳಿಯನ್ನು ಮಾರಿ ಮದ್ಯ ಸೇವನೆಗೆ ಧಾವಿಸುತ್ತಾರೆ. ಇದರಿಂದ ಶೇ 30ರಷ್ಟು ಜನರು ಹೃದಾಯಾಘಾತಕ್ಕೆ ಬಲಿಯಾಗಲು ಅಲ್ಕೋಹಾಲ್ ಕಾರಣ. ನಿರಂತರ ಆಲ್ಕೋಹಾಲ್ ಸೇವನೆಯಿಂದ 35–40ನೇ ವಯಸ್ಸಿಗೆ ಮರೆವಿನ ಕಾಯಿಲೆ, ಖಿನ್ನತೆಗೆ ಕಾರಣವಾಗುತ್ತದೆ. ಇದಕ್ಕಾಗಿ ಮದ್ಯ ಸೇವನೆ ಮತ್ತು ಮಾದಕ ಸೇವನೆಯಿಂದ ದೂರವಾಗುವುದೇ ಮದ್ದು ಎಂದು ಎಚ್ಚರಿಸಿದರು.

‌ಚುನಾವಣೆಗೆ ಮದ್ಯ ಹಂಚಿಕೆ ಅನಿವಾರ್ಯ : ಬೆಳ್ಳಿ ಪ್ರಕಾಶ

ನಾನು ಮದ್ಯ ಸೇವಿಸಿಲ್ಲ, ಧೂಮಪಾನ ಮಾಡಿಲ್ಲ. ಜೂಜು ಆಡಲ್ಲ. ಆದರೆ, ಚುನಾವಣೆಗಳಲ್ಲಿ ಮದ್ಯ ಹಂಚದಿದ್ದರೆ ಶೇ 4–5ರಷ್ಟು ಮತಗಳು ಬರುವುದಿಲ್ಲ ಎಂದು ಮಾಜಿ ಶಾಸಕ ಬೆಳ್ಳಿ ಪ್ರಕಾಶ ಹೇಳಿದರು.

2026ರ ನಾಟಕೋತ್ಸವ ಅಂಗವಾಗಿ ಮಂಗಳವಾರ
ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಡಾ.ಸಿ.ಆರ್. ಚಂದ್ರಶೇಖರ್ ಅವರ ‘ಪ್ರೀತಿ, ಮೋಹ, ಮತ್ಸರ, ಕೋಪ ಮತ್ತು ದುಃಖಗಳ…’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅಲ್ಕೊಹಾಲ್ ಇಂದು ಸಾಮಾಜಿಕ ಪಿಡುಗಾಗಿದೆ. ಜನರೇ ಮದ್ಯ ಸೇವನೆಯಿಂದ ಮುಕ್ತರಾಗಬೇಕೆಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾದ ದಾವಣಗೆರೆ ಎಸ್.ಪಿ. ಶೇಖರ್ ಎಚ್. ತೆಕ್ಕಣ್ಣವರ ಮಾತನಾಡಿ, ರಂಗಭೂಮಿ ಮುಖಾಂತರ ಸಮಸಮಾಜ ನಿರ್ಮಿಸಲು ಜೊತೆಗೆ ಎಲ್ಲ ವರ್ಗದವರ ಏಳಿಗೆಗೆ ಸಾಣೇಹಳ್ಳಿಮಠ ಕಾರಣವಾಗಿದೆ ಎಂದು ಶ್ಲಾಘಿಸಿದರು.

ನಮ್ಮ ದೇಶದಲ್ಲಿ ಶೇ 17ರಷ್ಟು 15–20 ವರ್ಷ ವಯಸ್ಸಿನ ಯುವಕರು ಇದ್ದಾರೆ. ಇದರಿಂದ ಹೆಚ್ಚು ಯುವಕರು ನಮ್ಮ ದೇಶದಲ್ಲಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಆದರೆ, ನಮ್ಮ ಯುವಕರ ಇಷ್ಟಾರ್ಥಗಳನ್ನು ಹೆತ್ತವರು ಈಡೇರಿಸಿದರೆ ಸಾಲದು. ಅವರು ಸರಿದಾರಿಯಲ್ಲಿದ್ದಾರೆಯೇ ಎನ್ನುವ ಕುರಿತು ಗಮನಿಸಬೇಕು ಎಂದು ಸಲಹೆ ನೀಡಿದರು.

ಸುವ್ಯಸನಗಳ ದಾಸರಾಗಬೇಕು : ನಾಗಾಭರಣ

ನೆನಪುಗಳ ಜೊತೆಗೆ ಬದುಕಿದ ಹಾಗೆ ವ್ಯಸನಗಳ ಜೊತೆಗೆ ಬದುಕುವುದು ಅನಿವಾರ್ಯವಾಗಿದೆ ಎಂದು ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.

ಇಲ್ಲಿ ನಡೆಯುತ್ತಿರುವ ನಾಟಕೋತ್ಸವದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಒಳ್ಳೆಯ ವ್ಯಸನಗಳನ್ನು ನಿಮ್ಮದಾಗಿಸಿಕೊಳ್ಳಿ ಅಂದರೆ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಿ. ರಂಗಭೂಮಿ ಮನರಂಜನೆಯಲ್ಲ; ಮನೋವಿಕಾಸವಾಗುವುದರ ಜೊತೆಗೆ ವ್ಯಕ್ತಿತ್ವವೂ ವಿಕಾಸವಾಗುತ್ತದೆ. ಇದಕ್ಕಾಗಿ ಕೆಟ್ಟ ವ್ಯಸನಗಳಿಂದ ಮುಕ್ತರಾಗಿ ಮತ್ತು ಸುವ್ಯಸನಗಳ ದಾಸರಾಗಿ ಎಂದು ಸಲಹೆ ನೀಡಿದರು.

ಮದ್ಯಮುಕ್ತ ನಾಡಿಗೆ ಶ್ರಮಿಸಲು ಸಿದ್ಧ; ಸಾಣೇಹಳ್ಳಿ ಶ್ರೀಗಳು

ರಾಜ್ಯದಲ್ಲಿ ಮೂರು ಸಾವಿರ ಮಠಾಧೀಶರು ಇದ್ದೇವೆ. ಪ್ರತಿ ಸ್ವಾಮೀಜಿಯು ತಲಾ ಹತ್ತು ಊರುಗಳನ್ನು ಆಯ್ದುಕೊಂಡು ಶ್ರಮಿಸಿದರೆ ಮದ್ಯಮುಕ್ತ ನಾಡಾಗಲು ಸಾಧ್ಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಾಟಕೋತ್ಸವ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮದ್ಯಮುಕ್ತಕ್ಕೆ ಸಂಬಂಧಿಸಿ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಿರೆಂದು ಅವರಲ್ಲಿ ಭಿನ್ನವಿಸಿಕೊಂಡೆ. ಆದರೆ ಅವರು ಈ ಹಿಂದೆಯೂ ಶ್ರಮಿಸಿದ್ದಾಗಿ ತಿಳಿಸಿದರು. ನಿಜವಾದ ಸಮಸ್ಯೆಯೆಂದರೆ ಸರ್ಕಾರವು ಆದಾಯದ ಮೂಲವೆಂದು ತಿಳಿದು ಮದ್ಯವನ್ನು ನಿಷೇಧಿಸಿಲ್ಲ. ಆದರೆ ಜನರು ಮದ್ಯಮುಕ್ತರಾಗಬೇಕು. ಶಿವಶರಣರ ಹಾಗೆ ಬದುಕಿ ಎಂದು ಕರೆ ನೀಡಿದರು.

ನಮ್ಮ ನಾಟಕೋತ್ಸವದ ಯಶಸ್ಸೆಂದರೆ ಮದ್ಯಮುಕ್ತ ನಾಡಾಗಬೇಕಿದೆ. ನಮ್ಮ ಸಾಣೇಹಳ್ಳಿ ಸುತ್ತಲಿನ ಹತ್ತು ಹಳ್ಳಿಗಳನ್ನು ಆಯ್ದುಕೊಂಡು ಮದ್ಯಮುಕ್ತಗೊಳಿಸಲು ಶ್ರಮಿಸುವೆವು. ಸುತ್ತಲಿನ ಗ್ರಾಮಸ್ಥರು ತಾವೇ ಮುಂದೆ ಬಂದು ಇದೇ ನವೆಂಬರ್ 6ರೊಳಗೆ ಮದ್ಯಮುಕ್ತವಾಗಿದೆ ನಮ್ಮ ಹಳ್ಳಿಯೆಂದು ತಿಳಿಸಲಿ ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *