ಚನ್ನಬಸವಣ್ಣನವರ ವಚನ ನಿರ್ವಚನ: ಬಯಸದೇ ಬಂದದು ಲಿಂಗಭೋಗ

ಬಸವ ಮೀಡಿಯಾ
ಬಸವ ಮೀಡಿಯಾ

ಗುಳೇದಗುಡ್ಡ :

ಬಸವ ಕೇಂದ್ರದ ವತಿಯಿಂದ ಶನಿವಾರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ದಿಗಂಬರಪ್ಪ ಷಣ್ಮುಖಪ್ಪ ಮೇದಾರ ಇವರ ಮನೆಯಲ್ಲಿ ನಡೆಯಿತು. ಅಂದು ಚಿಂತನೆಗಾಗಿ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಈ ಕೆಳಗಿನ ವಚನವನ್ನು ಆಯ್ದುಕೊಳ್ಳಲಾಗಿತ್ತು .

ಬಯಸಿ ಬಂದುದು ಅಂಗಭೋಗ

ಬಯಸದೇ ಬಂದದು ಲಿಂಗಭೋಗ.

ಅಂಗಭೋಗ ಅನರ್ಪಿತ ; ಲಿಂಗಭೋಗ ಪ್ರಸಾದ;

ಬೇಕೆಂಬುದು ಕಾಯಗುಣ ಬೇಡೆಂಬುದು ವೈರಾಗ್ಯ;

ಬೇಕೆಂಬುದು ಅಲ್ಲ ; ಬೇಡೆಂಬುದು ಅಲ್ಲ

ಈ ಉಭಯವನತಿಗಳೆದು ಭೋಗಿಸಬಲ್ಲಡೆˌ

ಕೂಡಲಚೆನ್ನಸಂಗ ನಿಮ್ಮ ಪ್ರಸಾದಿ ಎಂಬೆ.

ಪ್ರಾರಂಭದಲ್ಲಿ ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನ ಕರ್ತೃ ಚೆನ್ನಬಸವಣ್ಣನವರನ್ನು ಪರಿಚಯಿಸುತ್ತ, ಅವಿರಳಜ್ಞಾನಿ ಚನ್ನಬಸವಣ್ಣನವರು ಶರಣ ಸಂದೋಹದಲ್ಲಿಯೇ ಪ್ರಸಿದ್ಧಿ ಪಡೆದವರು. ಅವರ ಜ್ಞಾನಕ್ಕೆ ಅವರ ವಯಸ್ಸು ಗಣನೆಗೆ ಬರಲಿಲ್ಲ.

ಸ್ವತಃ ಬಸವಣ್ಣನವರೇ ಚನ್ನಬಸವಣ್ಣನವರು ಕುರಿತು ಕೊಂಡಾಡಿದ್ದಾರೆ, ಚನ್ನಬಸವಣ್ಣನವರು ವಚನಗಳನ್ನು ಷಟಸ್ಥಲಕ್ಕನುಗೊಳಿಸಿˌ ಷಡುಸ್ಥಲಜ್ಞಾನಿ ಎನಿಸಿಕೊಂಡರು.

ಅವರು ಈ ವಚನದಲ್ಲಿ “ಮನುಷ್ಯನ ಮುಂದೆ ಬೇಕುಗಳ ಪಟ್ಟಿಯೇ ಇದೆ. ಬೇಕು ಎಂಬುದು ಒಂದು ವ್ಯಸನವಿದ್ದಂತೆ. ಅದೇ ರೀತಿ ಬೇಡ ಎಂಬುದು ಇನ್ನೊಂದು ವ್ಯಸನ. ಆಸೆ ದುರಾಸೆಗಳನ್ನು ಸಂಕೇತಿಸುತ್ತವೆ. ಆದರೆ ಶರಣರಿಗೆ ಆಸೆ ಇದ್ದಿರಬಹುದಾದರೂ ದುರಾಸೆ ಇದ್ದಿರಲಿಲ್ಲ.”

“ಇಂದ್ರಿಯಗಳ ನಿಗ್ರಹ ಮಾಡಿದೆ ಎನ್ನದೆ, ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸ್ವೀಕರಿಸಬೇಕು. ಅಂದರೆ ಬದುಕು ಹಸನಾಗುತ್ತದೆ” ಎಂದು ಹೇಳಿದರು.

ಜವಳಿ ವ್ಯಾಪಾರಿಗಳಾದ ಅನುಭವಿ ಮಹಾಂತೇಶ ಸಿಂದಗಿಯವರು, ಈ ವಚನವನ್ನು ಅರ್ಥೈಸುತ್ತ ಪಂಚಾಚಾರ, ಷಟಸ್ಥಲ ಮತ್ತು ಅಷ್ಟಾವರಣಗಳು ಶರಣಧರ್ಮದ ಮುಖ್ಯ ತತ್ವಗಳು.

“ಮೂಲವಸ್ತು ಒಂದೇ ಇದ್ದು ಅಂಗಲಿಂಗವೆಂಬರಡಾಗಿ ವ್ಯಕ್ತವಾಯಿತು. ಹೀಗಾಗಿ ಶರಣರು ಭೋಗಿಸುವಲ್ಲಿ ಅಂಗಲಿಂಗ ಭೋಗಗಳು ಪ್ರತ್ಯೇಕವಾಗಿ ಕಂಡಂತೆ ಆದರೂ ಈ ಭೋಗಗಳಲ್ಲಿ ವ್ಯತ್ಯಾಸಗಳಿಲ್ಲ.  ಭಾವದಲ್ಲಲ್ಲದೆ ನನಗೆ ಬಂದಿರುವುದನ್ನು ಸಮಭಾವದಿಂದ ಸ್ವೀಕರಿಸಿದರೆ ಅದೇ ಪ್ರಸಾದವಾಗುತ್ತದೆ”.

“ನಾವು ಸ್ವೀಕರಿಸುವ ಆಹಾರವನ್ನು ಮೌನದಲ್ಲಿ ಉಣ್ಣದೆ ತುತ್ತಿಗೊಮ್ಮೆ ಶಿವ ಶಿವಾ ಎನ್ನುತ್ತಾ ಸ್ವೀಕರಿಸಿದರೆ. ಅದು ಪ್ರಸಾದವಾಗಿ ಪರಿವರ್ತಿತವಾಗುತ್ತದೆ.  ಸ್ವೀಕರಿಸುವ ಪ್ರತಿಯೊಂದು ವಸ್ತು ಅಂಗಕ್ಕೆ ಮಾತ್ರ ಅರ್ಪಿತವಾಗದೆ ಲಿಂಗಕ್ಕೆ ಅರ್ಪಿತವಾಗಬೇಕು ಎಂಬುದು ಶರಣರ ನಿಲುವಾಗಿತ್ತು” ಎಂದು ಪ್ರತಿಪಾದಿಸಿದರು.

ವಚನ ಚಿಂತನೆಯ ಸಮಾರೋಪವನ್ನು ಮಾಡಿದ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು, “ಚನ್ನಬಸವಣ್ಣನವರು ಈ ವಚನದಲ್ಲಿ ಪ್ರಸಾದ ತತ್ವವನ್ನು ಹೇಳುತ್ತಾ ಅಂಗಭೋಗ ಲಿಂಗಭೋಗ ಹಾಗೂ ಅರ್ಪಿತ ಅನರ್ಪಿತಗಳ ಕುರಿತು ವಿವರಿಸುತ್ತ ಪ್ರಸಾದಿ ಸ್ಥಲದ ವಿವರವನ್ನು ನೀಡಿದ್ದಾರೆ.”

“ತನುತ್ರಯಗಳನ್ನು  ಹೊಂದಿದ ಶರಣ ಲಿಂಗತ್ರಯ ಸಂಪನ್ನ ನಾಗಿರಬೇಕು. ಲೋಕದ ಮನುಜರ ಹಾಗೆ ತನುವಿನ ಕ್ಷಣಿಕ ಸುಖಕ್ಕೆ ಇಂದ್ರಿಯಗಳ ದಾಸನಾಗಬಾರದು. ಬೇಕು ಎಂಬುದು ತನುವಿನ ಸಹಜ ಗುಣ .ಇದೇ ಅಂಗಭೋಗ ಇದಕ್ಕೆ ಈಡಾಗಿ ದುರಾಸೆಗೆ ಒಳಗಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾನೆ. ಹಾಗೆಯೇ ಬೇಡ ಎನ್ನುವುದು ವೈರಾಗ್ಯದ ಲಕ್ಷಣ.”

ಬೇಡ ಎಂಬುದರಲ್ಲಿ ಕೃರ್ತ್ರಿಮ ಇರುತ್ತದೆ. ಬೇಡ ಎಂಬಲ್ಲಿಯೂ ಶರೀರದ ಗುಣವೇ ಅಳವಟ್ಟಿರುತ್ತದೆ. ಹೀಗಾಗಿ ಬೇಕೆಂಬುದು ತನುವಿನ ಗುಣಗಳು. ಇವುಗಳು ಅನರ್ಪಿತವಾಗುತ್ತವೆ.  ಕಾರಣ ಇಲ್ಲಿ ನಾನು ನನ್ನದು ಎಂಬ ಮೋಹ ಮಮಕಾರಗಳಿವೆ. ಇದನ್ನು ಹೊರತುಪಡಿಸಿ ಬೇಕು ಬೇಡ ಎನ್ನದೆ ತನ್ನೆಡೆಗೆ ಬಂದುದನ್ನು ಶಿವನ ಕೊಡುಗೆ ಎಂದು ಭಾವಿಸಿದರೆ ಅದು ಪ್ರಸಾದವಾಗುತ್ತದೆ”.

“ಬೇಕು ಬೇಡ ಎಂಬಲ್ಲಿ ತನುವಿನ ಆಸೆ ವ್ಯಕ್ತವಾಗಿ ಅದು ಪದಾರ್ಥವೆನ್ನಿಸಿದರೆˌ ಬಂದಿದ್ದೆಲ್ಲವೂ ಪರಶಿವನ ಕೊಡುಗೆ ಎಂದು ಸ್ವೀಕರಿಸಿದಲ್ಲಿ, ಪ್ರಸನ್ನತೆಯ ಭಾವದಲ್ಲಿ ಸ್ವೀಕರಿಸಿದರೆ ಅದು ಪ್ರಸಾದವಾಗುತ್ತದೆ. ಸಾಮಾನ್ಯವಾಗಿ ನಾವು ಭೋಗಿಸುವ ಪದಾರ್ಥಗಳನ್ನು ಆಹಾರಕ್ಕೆ ಮಾತ್ರ ಅನ್ವಯಿಸಿ ಅದನ್ನು ಪ್ರಸಾದವಾಗಬೇಕು ಎನ್ನುತ್ತೇವೆ.  ಇದು ಕೇವಲ ಆಹಾರಕ್ಕೆ ಮಾತ್ರ ಸೀಮಿತವಲ್ಲ ಪಂಚೇಂದ್ರಿಯಗಳು ಭೋಗಿಸುವ ಎಲ್ಲ ವಿಷಯ ವಾಸನೆಗೂ ಅನ್ವಯಿಸಬೇಕು”.

“ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮಗಳ ಮೂಲಕ ಸ್ವೀಕರಿಸುವ ಮುನ್ನ ಅಲ್ಲೆಲ್ಲ ಸ್ಥಾಪಿತವಾದ ಗುರುಲಿಂಗ ಆಚಾರಲಿಂಗ ಶಿವಲಿಂಗ ಇತ್ಯಾದಿಗಳಿಗೆ ಸಮರ್ಪಣೆಯಾಗಿ ಶುದ್ದಿಯಾಗಿ ಮರಳಿ ಪ್ರಸಾದವನ್ನಾಗಿ ಸ್ವೀಕರಿಸಿದರೆ ಅಂಗಭೋಗವು ಲಿಂಗಭೋಗವಾಗುತ್ತದೆ.  ಆಗ ಬೇಕು ಬೇಡಗಳನ್ನು ಮೀರಿ ಎಲ್ಲವೂ ಮಹಾಲಿಂಗದ ಸ್ವತ್ತು, ಅಷ್ಟೇ ಏಕೆ ಸ್ವೀಕರಿಸುವ ಪದಾರ್ಥಗಳು ಅವುಗಳನ್ನು ಭೋಗಿಸುವ ಇಂದ್ರಿಯಗಳು ಸಹಿತ ಶರೀರವು ಪ್ರಸಾದವಾಗಬೇಕು ಎನ್ನುವುದು ಚನ್ನಬಸವಣ್ಣನವರ ವಿಚಾರ. ಇದನ್ನು ಆಗು ಮಾಡಿಕೊಂಡವನೇ ಶರಣರಾಗುತ್ತಾನೆ ; ಪ್ರಸಾದಿ ಆಗುತ್ತಾನೆ “ಎಂದು ಬರಗುಂಡಿಯವರು ತಿಳಿಸಿದರು .

ಮಹಾಮನೆ ಕಾರ್ಯಕ್ರಮದ ಆರಂಭದಲ್ಲಿ ಶ್ರೀದೇವಿ ಶೇಖಾ ಅವರು ವಚನ ಪ್ರಾರ್ಥನೆ ಮಾಡಿದರು. ಮುರುಗೇಶ ಶೇಖಾ ಅವರು ಕಾರ್ಯಕ್ರಮ ನಿರೂಪಿಸಿ ಶರಣು ಸಮರ್ಪಣೆಗೆೈದರು. ಇದಕ್ಕೂ ಮುನ್ನ ಶರಣ ದಿಗಂಬರಪ್ಪ ಮೇದಾರ ಅವರು ಬಿದಿರಿನಲ್ಲಿ ತಯಾರಿಸಿದ ತೇರು(ರಥ) ಬಂಡಿ ಮರ ಪುಟ್ಟಿಗಳನ್ನು ಪ್ರದರ್ಶಿಸಿದರು.

ಇವುಗಳನ್ನು ನೋಡಿದ ಎಲ್ಲ ಶರಣರಿಗೂ ಸಂತೋಷ ತಂದಿತು. ಅವರ ಕರಕುಶಲ ಕಲೆಗೆ ಎಲ್ಲರೂ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸ,  ಬಸಲಿಂಗಯ್ಯ ಕಂಬಾಳಿಮಠ, ಮಹಾಲಿಂಗಪ್ಪ ಕರನಂದಿ, ಈಶ್ವರಪ್ಪ ಮೇದಾರ, ಬಸವರಾಜ ಖಂಡಿ, ದಾನಪ್ಪ ಬಂಡಿ, ಶರಣೆಯರಾದ ದಾಕ್ಷಾಯಣಿ ತೆಗ್ಗಿ, ಸುರೇಖಾ ಗೆದ್ದಲಮರಿ, ಶಕುಂತಲಾ ಮೇದಾರ ಮೊದಲಾದವರು ಉಪಸ್ಥಿತರಿದ್ದರು.

ಹಾಗೆಯೇ ಗುಲ್ಬರ್ಗದ ಪ್ರೊ. ಸಿ.ಎಸ್. ಮಂಗಳೂರು, ಬೆಂಗಳೂರಿನ ಕೃಷ್ಣಪ್ಪ ಶಿರೂರ, ಕೃಷ್ಣಾಜಿ ಮಹೇಂದ್ರಕರ್ ಮೊದಲಾದವರು ಆನ್ಲೈನ್ ಮೂಲಕ ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *