ಬಸವಭಕ್ತರ ಪ್ರತಿಭಟನೆ ರದ್ದುಪಡಿಸಿದ್ದು ಯೋಗ್ಯ ನಿರ್ಣಯವಲ್ಲ

ಲಿಂಗಾಯತ ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ; ಪ್ರತಿಭಟನೆ ಮುಂದುವರೆಯಬೇಕು

ಆಳಂದ

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಜೂನ್ 28 ನಡೆಯಬೇಕಿದ್ದ ಬಸವ ಅನುಯಾಯಿಗಳ ಪ್ರತಿಭಟನಾ ಹೋರಾಟವನ್ನು ರದ್ದುಪಡಿಸಿರುವುದು ಅತ್ಯಂತ ಬೇಸರದ ಸಂಗತಿ.

ಇದು ಯೋಗ್ಯ ನಿರ್ಣಯವಲ್ಲ, ನಿಜಕ್ಕೂ ಖಂಡನೀಯ ಬೆಳವಣಿಗೆ.

ನಾವು ಬಸವಭಕ್ತರು ಕೋರ್ಟಿಗೆ ಹೋಗಿರಲಿಲ್ಲ. ಬಸವಕಲ್ಯಾಣ ತಾಲೂಕಿನ ಆಡಳಿತದ ನಿರ್ಣಯದ ವಿರುದ್ಧ ಕನ್ನೇರಿ ಸ್ವಾಮಿಯ ಬೆಂಬಲಿಗರು ಕೋರ್ಟಿಗೆ ಹೋಗಿದ್ದರು. ಈ ತೀರ್ಪು ಆ ಅರ್ಜಿಯ ವಾದಿ ಪ್ರತಿವಾದಿಗಳಿಗೆ ಅನ್ವಯಿಸುತ್ತದೆ.

ಪ್ರತಿಭಟನೆ ಮಾಡಬೇಡಿ ಎಂದು ಮಾನ್ಯ ನ್ಯಾಯಮೂರ್ತಿಗಳು ಎಲ್ಲಿ ಹೇಳಿದ್ದಾರೆ? ಈ ವಿಷಯದಲ್ಲಿ ನಮ್ಮ ಹೋರಾಟ ಮುಂದುವರೆಯಬೇಕು.

ನಮ್ಮ ಸೈದ್ಧಾಂತಿಕ ವಿರೋಧ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಲು ದೊರೆತಿದ್ದ ಒಳ್ಳೆ ಅವಕಾಶವನ್ನು ಹೋರಾಟದ ಮುಂಚೂಣಿಯಲ್ಲಿದ್ದವರು ಕೈಚೆಲ್ಲಿರುವುದು ವಿಷಾದನೀಯ.

ಬಬಲೇಶ್ವರ, ಬಾಗಲಕೋಟೆ, ಶಹಾಪುರ, ಗದಗ ಮುಂತಾದ ಕಡೆಗಳಲ್ಲೆಲ್ಲಾ ಬಸವಾದಿ ಶರಣರ ಹೆಸರಿನ ದುರ್ಬಳಕೆ ಮಾಡುತ್ತಿರುವ ಈ ಸಮಾವೇಶಗಳ ವಿರುದ್ಧ ಪ್ರತಿಭಟನೆ ಶುರುವಾಗಿತ್ತು.

ಆದರೆ ಈ ಸಮಾವೇಶ ಬಸವಕಲ್ಯಾಣದಲ್ಲಿ ಆಯೋಜಿತವಾದ ಮೇಲೆ ಬಸವ ಅನುಯಾಯಿಗಳ ಆಕ್ರೋಶ ಮತ್ತಷ್ಟು ತೀವ್ರವಾಗಿತ್ತು. ಅವರ ನೋವು, ಸಿಟ್ಟಿಗೆ ಸ್ಪಂದಿಸುವ ಪ್ರತಿಭಟನೆಯನ್ನು ರೂಪಿಸುವಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದವರು ವಿಫಲವಾಗಿರುವುದು ದುರಂತ.

ದೃಢವಾದ ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಸಮುದಾಯಕ್ಕೆ ಇದರಿಂದ ಹಿನ್ನಡೆಯಾಗಿದೆ.

ನ್ಯಾಯಾಲಯವು ಈಗಾಗಲೇ ಕನ್ನೇರಿ ಸ್ವಾಮಿಯ ಮೇಲೆ ನಿರ್ಬಂಧ ಹೇರಿದ್ದರೂ, ಆತ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಕಾನೂನಿನ ಕಟ್ಟುಪಾಡುಗಳನ್ನು ಮೀರಿ ಮತ್ತೆ ತನ್ನ ತುಚ್ಛ ಹೇಳಿಕೆಗಳ ಮೂಲಕ ಸಮಾಜದ ಶಾಂತಿ ಕದಡುವ ಕೆಲಸ ಮುಂದುವರೆಸುತ್ತಿದ್ದಾನೆ.

ಒಂದು ಭವ್ಯ ಪರಂಪರೆಯ ಮಠದ ಪೀಠಾಧ್ಯಕ್ಷರಿಗೆ ಯೋಗ್ಯವಾದ ರೀತಿಯಲ್ಲಿ ಮಾತನಾಡುವುದನ್ನು ಬಿಟ್ಟು, ನಿರಂತರವಾಗಿ ಕೀಳುಮಟ್ಟದ ಮಾತುಗಳನ್ನು ಆಡುವುದೇ ಆತನಿಗೆ ಚಟವಾಗಿದೆ. ​

ಆತನ ಅಸಭ್ಯ ಮತ್ತು ಅಪ್ರಸ್ತುತ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಲು ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ನಾವೆಲ್ಲರೂ ಮತ್ತೊಮ್ಮೆ ಒಗ್ಗೂಡಬೇಕಿದೆ.

ಕೋರ್ಟು ಹಾಕಿರುವ ಕಡಿವಾಣವನ್ನು ಮೀರಿ ಕನ್ನೇರಿ ಸ್ವಾಮಿ ಮತ್ತೆ ಬೊಗಳುವ ಸಾಧ್ಯತೆಯಿದೆ.

ಎಂತಹ ಸವಾಲುಗಳು ಬಂದರೂ, ಆತನ ಹಾದಿತಪ್ಪಿಸುವ ಮಾತುಗಳನ್ನು ಎದುರಿಸಲು ನಾವೆಲ್ಲರೂ ಸನ್ನದ್ಧರಾಗಿರಬೇಕು. ಬಸವ ತತ್ವದ ಹಾದಿಯಲ್ಲಿ ಸಾಗುವ ನಾವು, ಯಾವುದೇ ಅಡೆತಡೆಗಳಿಗೂ ಬಗ್ಗದೆ ನಮ್ಮ ಹೋರಾಟವನ್ನು ಮುಂದುವರಿಸಬೇಕಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
3 Comments
  • ಪೂಜ್ಯರ ಅಳಲಿನಲ್ಲಿ ಅರ್ಥವಿದೆ. ಬಸವಾದಿ ಶರಣರ ಹಿಂದು ಸಮಾವೇಶ ಅನ್ನವುದೇ ಒಂದು ಕುಚೋದ್ಯವಾಗಿದೆ. ಅದನ್ನು ಬಸವಾದಿ ಶರಣರ ಅನುಯಾಯಿಗಳು ಉಗ್ರವಾಗಿ ಪ್ರತಿಭಟಿಸಲೇಬೇಕು.

  • ಹೌದು ಪ್ರತಿಭಟನೆಯನ್ನು ಹಿಂದೆ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ನಮ್ಮ ಹೋರಾಟ ಕನ್ನೇರಿ ಸ್ವಾಮೀಯವರ ಮಾತುಗಳ ಆಚೆಗೂ ಇದೆ. ಅವರು ಲಿಂಗಾಯತರನ್ನು ತಲೆಹಿಡಿದು ಹಿಂದೂ ಧರ್ಮಕ್ಕೆ ತುರುಕಲು ಪ್ರಯತ್ನಿಸುತ್ತಿದ್ದಾರೆ. ಇಂತಹವರನ್ನು ಬಸವಣ್ಣನ ನಾಡಿಗೆ ಬಿಟ್ಟುಕೊಳ್ಳುವುದಿಲ್ಲ ಅನ್ನುವ ಸಂದೇಶ ಕೊಡುವ ಅವಶ್ಯಕತೆ ಇತ್ತು.

  • “ಓಂ ಶ್ರೀ ಗುರು ಬಸವಲಿಂಗಾಯ ನಮಃ” – ಅಜ್ಞಾನದ ಮಂತ್ರವೋ ಅಥವಾ ಅರಿವಿನ ಸಾಕಾರವೋ?

    ಇತ್ತೀಚಿನ ದಿನಗಳಲ್ಲಿ ಕೆಲವು ವಲಯಗಳಲ್ಲಿ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ಮಂತ್ರವನ್ನು ತಿರಸ್ಕರಿಸುವ, ಅದನ್ನು ಅಜ್ಞಾನಿಗಳ ಮಂತ್ರವೆಂದು ಕರೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. ವಚನ ಸಾಹಿತ್ಯದ ಮೌಲ್ಯಗಳನ್ನು ಅರಿತುಕೊಳ್ಳದೇ, ಅದರ ಆಂತರ್ಯವನ್ನು ತಲುಪದೇ ಇಂತಹ ಹೇಳಿಕೆಗಳನ್ನು ಮಾಡುವುದು ಲಿಂಗಾಯತ ಪರಂಪರೆಯ ಮೂಲಭೂತ ಅರ್ಥವನ್ನೇ ತಪ್ಪಾಗಿ ಗ್ರಹಿಸಿರುವುದಕ್ಕೆ ಸಾಕ್ಷಿಯಾಗಿದೆ.
    ಈ ಹೇಳಿಕೆ ನನ್ನಲ್ಲಿ ಆಳವಾದ ಖೇದವನ್ನು ಮೂಡಿಸಿದೆ. ಕೇವಲ ಭಾವನಾತ್ಮಕವಾಗಿ ಉರಿದೇಳದೆ, ಬೌದ್ಧಿಕವಾಗಿ ಹಾಗೂ ಸಾಧಾರವಾಗಿ ಈ ಹೇಳಿಕೆಯ ಹಿಂದಿನ ಟೊಳ್ಳುತನವನ್ನು ನಾವು ವಿಶ್ಲೇಷಿಸಬೇಕಿದೆ.

    ಮುಖ್ಯವಾಗಿ ಪ್ರಶ್ನಿಸುವ ಮನೋಭಾವ ಹೊಂದಿರುವ ನಮ್ಮ ಯುವಜನತೆ, ಇಂತಹ ಮೇಲ್ಮೈಯ ಹೇಳಿಕೆಗಳಿಗೆ ಬಲಿಯಾಗದೆ, ಇದರ ಹಿಂದಿನ ತಾತ್ವಿಕ ಸತ್ಯವನ್ನು ವಚನಗಳ ಬೆಳಕಿನಲ್ಲಿಯೇ ಅರಿಯಬೇಕಾದ ತುರ್ತು ಇಂದಿದೆ. ಬಸವಣ್ಣನವರನ್ನೇ ಉಸಿರಾಗಿಸಿಕೊಂಡು ಬದುಕುವ ಲಿಂಗಾಯತ ಸಮುದಾಯಕ್ಕೆ ಈ ಮಂತ್ರವೇಕೆ ಮುಖ್ಯ? ಇದು ನಿಜಕ್ಕೂ ಅಜ್ಞಾನದ ಸಂಕೇತವೇ?

    ಬಸವಣ್ಣನವರ ವಚನಗಳು ಕೇವಲ ಪದ್ಯಗಳಲ್ಲ, ಅವು ಜೀವನದ ಮಾರ್ಗದರ್ಶನ. ಅವು ದೇವರ ಆರಾಧನೆಯನ್ನು ಹೊರಗಿನ ಆಚಾರ-ವಿಚಾರಗಳಿಗಿಂತ ಒಳಗಿನ ಭಾವನೆಗೆ ಕೊಂಡೊಯ್ಯುತ್ತವೆ. “ಕಾಯಕವೇ ಕೈಲಾಸ” ಎಂದು ಸಾರಿದ ಬಸವಣ್ಣ, ದೇವರನ್ನು ಹೊರಗೆ ಹುಡುಕುವುದನ್ನು ಬಿಟ್ಟು, ನಮ್ಮೊಳಗಿನ ಆತ್ಮತತ್ತ್ವದಲ್ಲಿ ಕಂಡುಕೊಳ್ಳುವಂತೆ ಹೇಳಿದ್ದಾರೆ. ಈ ದೃಷ್ಟಿಕೋನದಲ್ಲಿ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ಮಂತ್ರವನ್ನು ನೋಡಿದರೆ, ಅದು ಅಜ್ಞಾನಿಗಳ ಮಂತ್ರವಲ್ಲ; ಬದಲಿಗೆ ಜ್ಞಾನಕ್ಕೆ ದಾರಿ ತೋರಿಸುವ ಒಂದು ಆಂತರಿಕ ಸ್ಮರಣೆ.

    “ಗುರು-ಲಿಂಗ-ಜಂಗಮ” ತ್ರಿವಿಧ ತತ್ತ್ವವು ಲಿಂಗಾಯತ ಧರ್ಮದ ಆಧಾರಸ್ತಂಭ. ಇಲ್ಲಿ ‘ಗುರು’ ಎಂದರೆ ಜ್ಞಾನವನ್ನು ನೀಡುವವರು, ‘ಲಿಂಗ’ ಎಂದರೆ ಪರಮತತ್ತ್ವದ ಪ್ರತೀಕ, ‘ಜಂಗಮ’ ಎಂದರೆ ಚರಚಿತ್ತದ ಜೀವಂತ ದೈವಿಕತೆಯ ರೂಪ. “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ಮಂತ್ರವು ಈ ಮೂರನ್ನೂ ಒಂದೇ ಭಾವದಲ್ಲಿ ಸಂಕೇತಿಸುತ್ತದೆ. ಬಸವಲಿಂಗ ಎಂಬ ಪದದಲ್ಲಿ ಬಸವಣ್ಣನವರ ಆದರ್ಶ ಮತ್ತು ಲಿಂಗತತ್ತ್ವ ಎರಡೂ ಸಂಯೋಜಿತವಾಗಿವೆ. ಇದನ್ನು ಉಚ್ಚರಿಸುವುದು, ವ್ಯಕ್ತಿಯು ತನ್ನ ಅಹಂಕಾರವನ್ನು ತಗ್ಗಿಸಿ, ಆತ್ಮಜ್ಞಾನದ ದಿಕ್ಕಿನಲ್ಲಿ ಹೆಜ್ಜೆ ಇಡುವ ಒಂದು ಕ್ರಮ.

    ‘ಓಂ’ಕಾರದ ಕುರಿತಾದ ಭ್ರಮೆ ಮತ್ತು ಶರಣರ ನಿಲುವು

    ಈ ಮಂತ್ರವನ್ನು ವಿರೋಧಿಸುವವರ ಮೊದಲ ಆಕ್ಷೇಪ ‘ಓಂ’ ಎಂಬ ಪದದ ಬಗ್ಗೆ. ‘ಓಂ’ ಎಂಬುದು ವೈದಿಕ ಪದ, ಅದು ಶರಣ ಸಂಸ್ಕೃತಿಗೆ ವಿರುದ್ಧವಾದದ್ದು ಎಂಬುದು ಅವರ ವಾದ. ಇದು ಶರಣ ಸಾಹಿತ್ಯದ ವಿಶಾಲತೆಯನ್ನು ಅರಿಯದವರ ಬಾಲಿಶ ವಾದವಷ್ಟೇ. ಶರಣರು ಯಾವುದೇ ಅಕ್ಷರ ಅಥವಾ ಶಬ್ದವನ್ನು ವಿರೋಧಿಸಲಿಲ್ಲ, ಬದಲಾಗಿ ಆ ಶಬ್ದಗಳ ಮೂಲಕ ನಡೆಯುತ್ತಿದ್ದ ಶೋಷಣೆ ಮತ್ತು ಮೌಢ್ಯವನ್ನು ವಿರೋಧಿಸಿದರು.

    ಶರಣರ ದೃಷ್ಟಿಯಲ್ಲಿ ‘ಓಂಕಾರ’ ಎಂದರೆ ಯಾವುದೋ ಯಜ್ಞಕುಂಡದ ಮುಂದೆ ಕೂತು ಉಚ್ಚರಿಸುವ ಕರ್ಮಠ ಶಬ್ದವಲ್ಲ, ಅದು ಸೃಷ್ಟಿಯ ಮೂಲ ನಾದ. ಸ್ವತಃ ಅಲ್ಲಮಪ್ರಭುಗಳು ಮತ್ತು ಚನ್ನಬಸವಣ್ಣನವರು ಓಂಕಾರದ ಮಹತ್ವವನ್ನು ತಮ್ಮ ವಚನಗಳಲ್ಲಿ ಗಹನವಾಗಿ ಬಿಚ್ಚಿಟ್ಟಿದ್ದಾರೆ.

    “ಓಂಕಾರವೆಂಬುದು ನಿರಾಳವಯ್ಯಾ, ಮಕಾರವೆಂಬುದು ಮಹದೈಶ್ವರ್ಯವಯ್ಯಾ…”

    ಎಂದು ಶರಣರು ಪ್ರಣವದ (ಓಂ) ಸ್ವರೂಪವನ್ನು ಲಿಂಗತತ್ವಕ್ಕೆ ಅನ್ವಯಿಸಿದ್ದಾರೆ. ಶರಣರು ಒಪ್ಪಿ, ಅರಗಿಸಿಕೊಂಡು, ಹೊಸ ತಾತ್ವಿಕ ಸ್ಪರ್ಶ ನೀಡಿದ ‘ಓಂ’ಕಾರವನ್ನು ನಾವೇಕೆ ತಿರಸ್ಕರಿಸಬೇಕು? ಪಂಚಾಕ್ಷರಿ (ನಮಃ ಶಿವಾಯ) ಮತ್ತು ಷಡಕ್ಷರಿ (ಓಂ ನಮಃ ಶಿವಾಯ) ಮಂತ್ರಗಳನ್ನು ಶರಣರು ತಮ್ಮದೇ ಆದ ‘ಇಷ್ಟಲಿಂಗ’ದ ಪರಿಕಲ್ಪನೆಗೆ ಒಗ್ಗಿಸಿಕೊಂಡರು. ಹೀಗಿರುವಾಗ ‘ಓಂ’ ಎಂದೊಡನೆ ಅದು ಅಜ್ಞಾನ ಎನ್ನುವುದು ಎಂತಹ ಬೌದ್ಧಿಕ ದಿವಾಳಿತನ!

    ಗುರು ಮತ್ತು ಲಿಂಗದ ಅವಿನಾಭಾವ ಸಂಬಂಧ

    ಲಿಂಗಾಯತ ಧರ್ಮದ ಮೂಲ ಸ್ತಂಭಗಳೇ ಗುರು, ಲಿಂಗ ಮತ್ತು ಜಂಗಮ. ಇಲ್ಲಿ ‘ಗುರು’ ಎಂದರೆ ಕೇವಲ ಅಕ್ಷರ ಕಲಿಸುವವನಲ್ಲ, ಬದಲಾಗಿ ಅರಿವಿನ ಕಣ್ಣು ತೆರೆಸುವವನು. ನಮಗೆಲ್ಲರಿಗೂ ಇಷ್ಟಲಿಂಗವನ್ನು ಕರುಣಿಸಿ, ಜಾತಿ-ವರ್ಣರಹಿತ ಸಮಾನತೆಯ ಪರಿಕಲ್ಪನೆಯನ್ನು ನೀಡಿದವರು ಗುರು ಬಸವಣ್ಣ. ಹಾಗಾಗಿ ಲಿಂಗಾಯತರಿಗೆ ‘ಬಸವ’ ಎನ್ನುವುದು ಕೇವಲ ೧೨ನೇ ಶತಮಾನದ ಒಬ್ಬ ಐತಿಹಾಸಿಕ ವ್ಯಕ್ತಿಯ ಹೆಸರಲ್ಲ, ಅದೊಂದು ‘ಗುರುತ್ವ’ದ ಜೀವಂತ ಸಂಕೇತ.

    ಚನ್ನಬಸವಣ್ಣನವರು ಬಸವಣ್ಣನವರನ್ನು ಕುರಿತು ಹೇಳುವ ಈ ವಚನವನ್ನು ಗಮನಿಸಿ:

    “ಎನ್ನ ಕಾಯದ ಕತ್ತಲೆಯ ಕಳೆದನಯ್ಯಾ ಬಸವಣ್ಣ,
    ಎನ್ನ ಜೀವದ ಜಂಜಡವ ಮಾಣಿಸಿದನಯ್ಯಾ ಬಸವಣ್ಣ,
    ಎನ್ನ ಮನದ ಮೈಲಿಗೆಯ ತೊಳೆದನಯ್ಯಾ ಬಸವಣ್ಣ…”

    ಬಸವಣ್ಣನವರು ನಮ್ಮ ಮನಸ್ಸಿನ ಅಜ್ಞಾನದ ಮೈಲಿಗೆಯನ್ನು ತೊಳೆದ ಮಹಾಗುರು. ಬಸವಣ್ಣನೇ ಗುರು, ಅವನೇ ಕರುಣಿಸಿದ ಇಷ್ಟಲಿಂಗವೇ ನಮಗೆ ಪರಮಪದ. ಹಾಗಾಗಿ “ಶ್ರೀ ಗುರು ಬಸವಲಿಂಗಾಯ ನಮಃ” ಎನ್ನುವಾಗ ನಾವು ಪೂಜಿಸುತ್ತಿರುವುದು ಕೇವಲ ಮಣ್ಣಿನ ದೇಹವನ್ನಲ್ಲ, ಆ ವ್ಯಕ್ತಿ ಪ್ರತಿಪಾದಿಸಿದ ಕಾಯಕ, ದಾಸೋಹ ಮತ್ತು ಕರುಣೆಯೆಂಬ ಮೂರ್ತರೂಪವನ್ನು. ಬಸವಣ್ಣನವರನ್ನು ಗುರುವನ್ನಾಗಿ ಮತ್ತು ಅವರು ನೀಡಿದ ಇಷ್ಟಲಿಂಗವನ್ನು ಸಾಕ್ಷಾತ್ಕಾರದ ಸಾಧನವನ್ನಾಗಿ ಒಪ್ಪಿಕೊಂಡ ಮೇಲೆ, ಅವರನ್ನು ಸ್ಮರಿಸುವ ಈ ಮಂತ್ರ ಅಜ್ಞಾನ ಹೇಗಾದೀತು?

    ಮಂತ್ರವೆಂದರೆ ಮೌಢ್ಯವಲ್ಲ, ಮನಸ್ಸಿನ ಕನ್ನಡಿ

    ಕೆಲವರು ‘ಮಂತ್ರ’ ಎಂಬ ಪದವನ್ನೇ ಶೋಷಣೆಯ ಸಾಧನವೆಂದು ತಪ್ಪಾಗಿ ಭಾವಿಸಿದ್ದಾರೆ. ವಚನಕಾರರು ವಿರೋಧಿಸಿದ್ದು ಮಂತ್ರ-ತಂತ್ರಗಳೆಂಬ ಹೆಸರಿನಲ್ಲಿ ಜನರನ್ನು ಬೆದರಿಸಿ ಶೋಷಿಸುವ ಪುರೋಹಿತಶಾಹಿ ವ್ಯವಸ್ಥೆಯನ್ನು; ಅಂತರಂಗವನ್ನು ಶುದ್ಧಗೊಳಿಸುವ, ಗುರುವಿನ ಸ್ಮರಣೆಯನ್ನು ಜಾಗೃತಗೊಳಿಸುವ ಪ್ರಾರ್ಥನೆಯನ್ನಲ್ಲ.

    ಬಸವಣ್ಣನವರೇ ತಮ್ಮ ವಚನವೊಂದರಲ್ಲಿ ಸ್ಮರಣೆಯ ಮಹತ್ವವನ್ನು ಹೀಗೆ ವಿವರಿಸಿದ್ದಾರೆ:

    “ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ,
    ಮನದಲ್ಲಿ ನಿಮ್ಮ ನೆನಹು ತುಂಬಿ, ಕಿವಿಯಲ್ಲಿ ನಿಮ್ಮ ಕೀರ್ತಿ ತುಂಬಿ…”

    “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬುದು ಲಿಂಗಾಯತರಿಗೆ ಕೇವಲ ಗಿಳಿಪಾಠವಲ್ಲ, ಅದೊಂದು ದೈನಂದಿನ ದೃಢಸಂಕಲ್ಪ. ಬೆಳಗಿನ ಜಾವ ಎದ್ದು, ಎಡಗೈಯಲ್ಲಿ ಇಷ್ಟಲಿಂಗವನ್ನಿಟ್ಟುಕೊಂಡು ಈ ಸಾಲನ್ನು ಉಚ್ಚರಿಸಿದಾಗ, “ನಾನು ಬಸವಣ್ಣನವರ ಸಮಾನತೆಯ ತತ್ವಗಳಿಗೆ ಬದ್ಧನಾಗಿದ್ದೇನೆ, ಜಾತಿ-ಮತಗಳೆಂಬ ಅಜ್ಞಾನದಿಂದ ಹೊರಬಂದಿದ್ದೇನೆ” ಎಂಬ ಎಚ್ಚರ ಮೂಡುತ್ತದೆ.

    ಯಾರು ಈ ಮಂತ್ರವನ್ನು ‘ಅಜ್ಞಾನಿಗಳ ಮಂತ್ರ’ ಎನ್ನುತ್ತಿದ್ದಾರೋ, ಬಹುಶಃ ಅವರಿಗೆ ಅಜ್ಞಾನ ಮತ್ತು ಸುಜ್ಞಾನದ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಅಜ್ಞಾನವೆಂದರೆ ಯಾವುದು? ಮನುಷ್ಯರನ್ನು ಮೇಲು-ಕೀಳು ಎಂದು ವಿಂಗಡಿಸುವುದು ಅಜ್ಞಾನ, ಸ್ತ್ರೀಯರನ್ನು ಕೀಳಾಗಿ ಕಾಣುವುದು ಅಜ್ಞಾನ, ಕಾಯಕವನ್ನು ಕಡೆಗಣಿಸುವುದು ಅಜ್ಞಾನ. ಈ ಎಲ್ಲ ಅಜ್ಞಾನದ ಕತ್ತಲನ್ನು ಹರಿದು ಹಾಕಿದ ಮಹಾಬೆಳಕು ಬಸವಣ್ಣ. ಅಂತಹ ಬೆಳಕಿನ ಹೆಸರನ್ನು ಸ್ಮರಿಸುವುದು ‘ಸುಜ್ಞಾನ’ದ ಪರಮಾವಧಿಯೇ ಹೊರತು, ಅಜ್ಞಾನ ಖಂಡಿತ ಅಲ್ಲ.

    ಯುವಜನತೆ ಮತ್ತು ಅಸ್ಮಿತೆಯ ರಕ್ಷಣೆ

    ಇಂದಿನ ತಾರ್ಕಿಕ ಮತ್ತು ಸಂಶೋಧನಾತ್ಮಕ ಮನೋಭಾವದ ಯುವಜನತೆ ಒಂದು ವಿಚಾರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇಂದು ಲಿಂಗಾಯತ ಸಮುದಾಯವನ್ನು ಒಡೆಯಲು, ಅದರ ತಾತ್ವಿಕ ಬೇರುಗಳನ್ನು ಸಡಿಲಗೊಳಿಸಲು ಅನೇಕ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿವೆ. ಬಸವಣ್ಣನವರನ್ನು ಕೇವಲ ಒಬ್ಬ ‘ಸಮಾಜ ಸುಧಾರಕ’ನ ಮಟ್ಟಕ್ಕೆ ಇಳಿಸಿ, ಅವರ ಆಧ್ಯಾತ್ಮಿಕ ಗುರುತ್ವವನ್ನು ಮರೆಮಾಚುವ ಸೂಕ್ಷ್ಮ ಪ್ರಯತ್ನಗಳು ನಿರಂತರವಾಗಿವೆ. ಈ ಹೇಳಿಕೆಯೂ ಅಂತಹದೇ ಒಂದು ಸಾಂಸ್ಕೃತಿಕ ರಾಜಕಾರಣದ ಭಾಗವಾಗಿರಬಹುದು.

    “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎನ್ನುವುದು ಕೇವಲ ಕೆಲವು ಪದಗಳ ಸಂಯೋಜನೆಯಲ್ಲ; ಅದು ಎಂಟು ನೂರು ವರ್ಷಗಳ ರಕ್ತ, ಬೆವರು, ಮತ್ತು ತ್ಯಾಗದಿಂದ ಕಟ್ಟಿದ ಕಲ್ಯಾಣದ ಕನಸಿನ ಸಂಕೇತ. ಅದು ನಮ್ಮ ತಾತ್ವಿಕ ನಾಯಕನಿಗೆ ನಾವು ಸಲ್ಲಿಸುವ ಕೃತಜ್ಞತೆ ಮತ್ತು ನಮ್ಮ ಸಾಂಸ್ಕೃತಿಕ ಅಸ್ಮಿತೆಯ ಪಾಸ್‌ವರ್ಡ್ (password).

    ಆದ್ದರಿಂದ, ಇಂತಹ ಆಧಾರರಹಿತ ಹಾಗೂ ಅರ್ಧಸತ್ಯದ ಹೇಳಿಕೆಗಳಿಗೆ ನಾವು ವಿಚಲಿತರಾಗುವ ಅಗತ್ಯವಿಲ್ಲ. ಬಸವತತ್ವದ ಅನುಯಾಯಿಗಳಾಗಿ ನಮ್ಮ ಹೆಮ್ಮೆಯ ಮಂತ್ರವನ್ನು ನಾವು ಇನ್ನಷ್ಟು ಗಟ್ಟಿಯಾಗಿ, ಅರ್ಥಪೂರ್ಣವಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಅರಿವೇ ಗುರುವೆಂದು ನಂಬಿದ ನಮಗೆ, ಆ ಅರಿವಿನ ದಾರಿದೀಪವಾದ ಬಸವಣ್ಣನವರ ಸ್ಮರಣೆ ಸದಾ ಕಾಲ ಜಾಗೃತವಾಗಿರಲಿ.

    ಈ ಮಂತ್ರವನ್ನು ನಿಂದಿಸುವುದಕ್ಕಿಂತ, ಅದರ ಹಿಂದಿರುವ ತತ್ತ್ವವನ್ನು ತಿಳಿದುಕೊಳ್ಳುವುದು ಲಿಂಗಾಯತ ಧರ್ಮದ ನಿಜವಾದ ಗೌರವ. ವಚನಗಳ ಬೆಳಕಿನಲ್ಲಿ ನೋಡಿದಾಗ, ಈ ಮಂತ್ರವು ಭಕ್ತಿಯ ಒಂದು ರೂಪ, ಆತ್ಮಸಾಧನೆಯ ಒಂದು ಸಾಧನ, ಮತ್ತು ಬಸವಣ್ಣನವರ ಆದರ್ಶಗಳನ್ನು ನೆನಪಿಸುವ ಒಂದು ಸಂಕೇತ.

    ಬಸವಣ್ಣನವರ ಹೆಸರನ್ನು ಅಳಿಸುವ ಅಥವಾ ಕಡೆಗಣಿಸುವ ಯಾವುದೇ ಪ್ರಯತ್ನವು ಶರಣ ಸಂಸ್ಕೃತಿಯ ಆತ್ಮವನ್ನೇ ಕೊಂದಂತೆ. ನಮ್ಮ ಯುವ ಸಮುದಾಯ ಈ ವೈಚಾರಿಕ ಸ್ಪಷ್ಟತೆಯನ್ನು ಮೈಗೂಡಿಸಿಕೊಂಡು, ಇಂತಹ ಅಪಪ್ರಚಾರಗಳಿಗೆ ತಕ್ಕ ಉತ್ತರ ನೀಡಬೇಕಿದೆ.

    ಶರಣು ಶರಣಾರ್ಥಿಗಳು.

    ಸಕಲಜೀವಾತ್ಮರಿಗೆ ಲೇಸಾಗಲೆಂದು,ಅನ್ನದಾತನಿಗೆ/ಕಾಯಕ ಜೀವಿಗಳಿಗೆ ಜಯವಾಗಲೆಂದು ಪ್ರಾಥಿ೯ಸುತ್ತ, ಬಸವಾದಿ ಶರಣರಿಗೆ ಶರಣಾರ್ಥಿ ಹೇಳುವೆ.

    ವಿನಯ ಶಿರಹಟ್ಟಿಮಠ
    ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ
    ⁨097422 67547

Leave a Reply

Your email address will not be published. Required fields are marked *

ರಾಷ್ಟ್ರೀಯ ಪ್ರಚಾರಕ, ರಾಷ್ಟ್ರೀಯ ವೀರ ಗಣಾಚಾರ ಸಂಘ, ಬೆಂಗಳೂರು